'ಕಾಟೇರ' ಚಿತ್ರದಿಂದ ಪ್ರೇರಣೆಗೊಂಡು ವ್ಯವಸಾಯ ಆರಂಭಿಸಿದ ಯುವಕರು
ಸಿನಿಮಾ ಅನ್ನೋದು ಬಹಳ ಪರಿಣಾಮಕಾರಿ ಮಾಧ್ಯಮ. ಸಿನಿಮಾಗಳನ್ನು ನೋಡಿ ಸಾಕಷ್ಟು ಜನ ತಮ್ಮ ಜೀವನ ರೂಪಿಸಿಕೊಂಡ ಉದಾಹರಣೆಗಳಿವೆ. ಸಿನಿಮಾಗಳಿಂದ ಪ್ರೇರಣೆಗೊಂಡು ಕೆಲವರು ಸಾಧನೆ ಮಾಡಿರುವುದನ್ನು ಕೇಳಿದ್ದೇವೆ. ಡಾ. ರಾಜ್‌ಕುಮಾರ್ ನಟನೆಯ 'ಬಂಗಾರದ ಮನುಷ್ಯ' ಸಿನಿಮಾ ನೋಡಿದ ಬಳಿಕ ಕೆಲ ಯುವಕರು ಪಟ್ಟಣ ಬಿಟ್ಟು ಹಳ್ಳಿ ಸೇರಿ ವ್ಯವಸಾಯ ಆರಂಭಿಸಿದ್ದರು.
ಸದ್ಯ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಕೂಡ ಇಂಥದ್ದೇ ಚಮತ್ಕಾರ ಮಾಡಿದೆ. ಡಿಸೆಂಬರ್ 29ರಂದು ಬಿಡುಗಡೆಯಾದ ಸಿನಿಮಾ ಸೂಪರ್ ಹಿಟ್ ಆಗಿದೆ. ತರುಣ್ ಸುಧೀರ್ ನಿರ್ದೇಶನ, ದರ್ಶನ್ ನಟನೆ ನೋಡಿ ಸಿನಿರಸಿರಕರು ಮನಸೋತಿದ್ದಾರೆ. ಚಿತ್ರದ ಪ್ರತಿಯೊಂದು ವಿಭಾಗದ ಬಗ್ಗೆ ಮಾತನಾಡುತ್ತಿದ್ದಾರೆ. ಚಿತ್ರದ ಕಥೆ, ಚಿತ್ರಕಥೆಯನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಇದೆಲ್ಲದರ ನಡುವೆ 'ಕಾಟೇರ' ಸಿನಿಮಾ ದರ್ಶನ್ ಅಭಿಮಾನಿಗಳನ್ನು ಕೃಷಿಗೆ ಪ್ರೇರೇಪಿಸಿದೆ.

ಇತ್ತೀಚೆಗೆ ತಿನ್ನುವವರು ಜಾಸ್ತಿ ಆಗಿದ್ದಾರೆ. ಬೆಳೆಯುವವರು ಕಮ್ಮಿ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿರುತ್ತದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ, ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟು ಜನ ನಿಧಾನವಾಗಿ ವ್ಯವಸಾಯದಿಂದ ದೂರಾಗುತ್ತಿದೆ. ಹಳ್ಳಿ ಯುವಕರು ಪಟ್ಟಣ ಸೇರುತ್ತಿದ್ದಾರೆ. ರೈತರು ತಮ್ಮ ವ್ಯವಸಾಯದ ಭೂಮಿಯನ್ನು ಮಾರಿಕೊಳ್ಳುತ್ತಿದ್ದಾರೆ. ರೈತರು ಶತಮಾನಗಳನ್ನು ಸಮಸ್ಯೆ ಎದುರಿಸುತ್ತಲೇ ಇದ್ದಾರೆ.
'ಕಾಟೇರ' ಚಿತ್ರದಲ್ಲಿ ಕೂಡ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿತ್ತು. ಅದರಲ್ಲೂ 70ರ ದಶಕದಲ್ಲಿ ಹಳ್ಳಿಗಳಲ್ಲಿ ರೈತರ ಸ್ಥಿತಿಗತಿ ಹೇಗಿತ್ತು. 'ಉಳುವವನೆ ಭೂಮಿಯ ಒಡೆಯ ಕಾಯ್ದೆ' ತಂದ ಬದಲಾವಣೆ ಏನು? ಎನ್ನುವುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿತ್ತು. ಇದೀಗ 'ಕಾಟೇರ' ಸಿನಿಮಾ ನೋಡಿ ನರಸಿಂಹರಾಜಪುರದ ನಾಲ್ವರು ದರ್ಶನ್ ಅಭಿಮಾನಿಗಳು ಭತ್ತ ಬೆಳೆಯಲು ಆರಂಭಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ನೇತಾಜಿನಗರದ ಅರುಣ್, ಮಂಜು, ಶ್ರೀಕಾಂತ್ ಹಾಗೂ ಸುನೀಲ್ ಎಂಬುವ ನಾಲ್ವರು ಯುವಕರು ರೈತರಾಗುವ ಕನಸು ಕಂಡಿದ್ದಾರೆ. ಡಿ ಬಾಸ್ ಅಭಿಮಾನಿ ಸಂಘದ ಸದಸ್ಯರು ಆಗಿರುವ ಇವರು 'ಕಾಟೇರ' ಸಿನಿಮಾ ನೋಡಿ ಪ್ರಭಾವಿತರಾಗಿ ಮಣಸೂರು ಗ್ರಾಮದಲ್ಲಿ ಕೃಷಿ ಪ್ರಾರಂಭಿಸಿದ್ದಾರೆ. ನೀರಿಲ್ಲದೇ ಒಣಗಿದ್ದ ಮೂರುವರೆ ಎಕರೆ ಜಾಗದಲ್ಲಿ ಉಳುಮೆ ಆರಂಭಿಸಿದ್ದಾರೆ.
ಭದ್ರಾ ಹಿನ್ನೀರಿನಲ್ಲಿ ಸಸಿ ಮಡಿಗಳನ್ನು ಸಿದ್ಧಪಡಿಸಿ, ಭತ್ತದ ಪೈರು ಬೆಳೆಸಿದ್ದಾರೆ. ಭೂಮಿಗೆ ಯಾವುದೇ ನೀರಿನ ಮೂಲ ಇಲ್ಲ. ಹಾಗಾಗಿ ಪಕ್ಕದ ತೋಟದವರಿಂದ ನೀರು ಪಡೆದು ವ್ಯವಸಾಯ ಮಾಡುತ್ತಿದ್ದಾರೆ. ಪೈರು ನಾಟಿ ಮಾಡಲು ಮುಂದಾಗಿದ್ದಾರೆ. ದರ್ಶನ್ ಅಭಿಮಾನಿಗಳ ಈ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾಮಾನ್ಯವಾಗಿ ಸ್ಟಾರ್ ನಟರ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬ ಅಥವಾ ಸಿನಿಮಾ ಬಿಡುಗಡೆ ಆದಾಗ ಬ್ಯಾನರ್ ಕಟ್ಟಿ, ಕೇಕ್, ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ನರಸಿಂಹರಾಜಪುರದ ದರ್ಶನ್ ಅಭಿಮಾನಿಗಳು 'ಕಾಟೇರ' ಸಿನಿಮಾ ನೋಡಿ ವ್ಯವಸಾಯ ಮಾಡಲು ಆರಂಭಿಸಿರುವುದು ವಿಶೇಷ. 4 ಜನ ಅಭಿಮಾನಿಗಳು ಆಟೋ ಚಾಲಕರಾಗಿದ್ದು ಜೊತೆ ಜೊತೆಗೆ ಕೃಷಿ ಮಾಡಲು ಮುಂದಾಗಿದ್ದಾರೆ.
'ಕಾಟೇರ' ಸಿನಿಮಾ ಕಲೆಕ್ಷನ್ ವಿಚಾರಕ್ಕೆ ಬಂದರೆ ಈಗಾಗಲೇ 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಬರೀ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಈ ದಾಖಲೆ ಬರೆದ ಮೊದಲ ಸಿನಿಮಾ ಇದು ಎನ್ನಲಾಗುತ್ತಿದೆ. ಶೀಘ್ರದಲ್ಲೇ ಚಿತ್ರವನ್ನು ತೆಲುಗು, ತಮಿಳಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಸದ್ಯ ದರ್ಶನ್ 'ಡೆವಿಲ್' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಲಿದೆ.


Click it and Unblock the Notifications










