ಒಲೆಯ ಸುತ್ತಾ ಸುತ್ತುತ್ತಿವೆ ಕೆಲ ಕನ್ನಡ ಸಿನಿಮಾ ಕಥೆಗಳು; ಹೀರೊಗಳ ಕೈಗೆ ಬರ್ತಿದೆ ಸೌಟು
"ಭೀಮಸೇನ ನಳ ಮಹಾರಾಜರು ಗಂಡಸರಲ್ಲವೇ, ನಮ್ಮ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ" ಎಂದು ಅಣ್ಣಾವ್ರು ಬಹಳ ಹಿಂದೆಯೇ ಹಾಡಿದ್ದಾರೆ. ಅಡುಗೆ ಮನೆ ಸ್ತ್ರೀಯರ ಸಾಮ್ರಾಜ್ಯ, ಅಡುಗೆ ಮಾಡೋದು ಹೆಂಗಸರ ಕೆಲಸ ಎನ್ನುವ ಕಾಲವೊಂದಿತ್ತು. ಆದರೆ ಬಹಳ ಹಿಂದಿನಿಂದಲೂ ಪುರುಷರು ಅಡುಗೆ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ತಮ್ಮ ಕೈರುಚಿ ಪ್ರದರ್ಶಿಸುತ್ತಿದ್ದಾರೆ.
ಸಿನಿಮಾಗಳಲ್ಲಿ ಪಾತ್ರ ಪೋಷಣೆ ಎನ್ನುವುದು ಬಹಳ ಮುಖ್ಯ. ಅದರಲ್ಲೂ ನಾಯಕ ಹಾಗೂ ನಾಯಕಿ ಪಾತ್ರಗಳ ಪೋಷಣೆಗೆ ನಿರ್ದೇಶಕರು ಬಹಳ ತಲೆ ಕೆಡಿಸಿಕೊಳ್ಳುತ್ತಾರೆ. ಅದಕ್ಕಾಗಿ ಪೊಲೀಸ್ ಆಫೀಸರ್, ರೌಡಿ, ಫಾರೆಸ್ಟ್ ಆಫೀಸರ್, ಲಾಯರ್, ಕಲೆಕ್ಟರ್ ಹೀಗೆ ನಾನಾ ವಿಷಯಗಳನ್ನು ಆಯ್ದುಕೊಳ್ಳುತ್ತಾರೆ. ಅಂತಹ ಪಾತ್ರಗಳ ಸುತ್ತವೇ ಕಥೆಗಳನ್ನು ಹೆಣೆದು ಸಿನಿಮಾ ಕಟ್ಟುವ ಪ್ರಯತ್ನ ಮಾಡುತ್ತಾರೆ.

ಆಗೊಮ್ಮೆ ಈಗೊಮ್ಮೆ ಅಡುಗೆ ಭಟ್ಟನ ಪಾತ್ರವನ್ನು ನಾಯಕನಿಗೆ ಕೊಟ್ಟಿರುವ ಉದಾಹರಣೆಗಳಿವೆ. ಅದ್ಯಾಕೋ ಇತ್ತೀಚೆಗೆ ಅದು ಹೆಚ್ಚಾಗುತ್ತಿದೆ. ಸ್ಟಾರ್ ನಟರು ಕೂಡ ಇಂತಹ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಬಂದ ಕೆಲ ಸಿನಿಮಾಗಳಲ್ಲಿ ಮಾತ್ರವಲ್ಲ ಮುಂದೆ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳಲ್ಲಿ ಕೂಡ ನಾಯಕ ಅಡುಗೆ ಭಟ್ಟ(ಶೆಫ್) ಆಗಿ ನಟಿಸುತ್ತಿರುವುದನ್ನು ನೋಡಬಹುದು.
'ರಾಬರ್ಟ್' ಚಿತ್ರದಲ್ಲಿ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಈ ಚಿತ್ರದ ಫಸ್ಟ್ ಹಾಫ್ ಕಥೆ ಲಖ್ನೋದಲ್ಲಿ ನಡೆಯುತ್ತದೆ. ಅಲ್ಲಿ ರಾಘವ ಆಗಿ ಹಳೆಯದನ್ನೆಲ್ಲಾ ಮರೆತು 'ರಾಬರ್ಟ್' ಅಡುಗೆ ಕ್ಯಾಟರಿಂಗ್ ನಡೆಸುತ್ತಿರುತ್ತಾನೆ. ಚಿತ್ರದಲ್ಲಿ ದರ್ಶನ್ ಅಡುಗೆ ಭಟ್ಟನಾಗಿ ಸೌಟು ಹಿಡಿದಿದ್ದರು.
ರಾಘವೇಂದ್ರ ಸ್ಟೋರ್ಸ್
ನವರಸ ನಾಯಕ ಜಗ್ಗೇಶ್ ತರಹೇವಾರಿ ಪಾತ್ರಗಳನ್ನು ನಿಬಾಯಿಸಿದ್ದಾರೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಚಿತ್ರದಲ್ಲಿ ಅಡುಗೆ ಭಟ್ಟ ಹಯವದನ ಆಗಿ ಕಾಣಿಸಿಕೊಂಡಿದ್ದಾರೆ. ವಯಸ್ಸು 40 ದಾಟಿದ ಹಯವದನನ ಮದುವೆ, ಸಂಸಾರದ ಸುತ್ತಾ ಕಥೆ ಸಾಗುತ್ತದೆ.

'ಶಾಖಾಹಾರಿ' ಹೋಟೆಲ್ ಸುಬ್ಬಣ್ಣ
ಸದ್ಯ ಓಟಿಟಿಯಲ್ಲಿ ಬಹಳ ಸದ್ದು ಮಾಡುತ್ತಿರುವ ಸಿನಿಮಾ 'ಶಾಖಾಹಾರಿ'. ಚಿತ್ರದಲ್ಲಿ ದುರ್ಗಾ ಪ್ರಸನ್ನ ಹೋಟೆಲ್ ಮಾಲೀಕ ಕಂ ಬಾಣಸಿಗನಾಗಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಸುತ್ತವೇ ಸಿನಿಮಾ ಸಾಗುತ್ತದೆ. 'ಶಾಖಾಹಾರಿ' ಹೋಟೆಲ್ ಸುಬ್ಬಣ್ಣ ಆಕಸ್ಮಿಕವಾಗಿ ಅಪರಾಧ ಮಾಡುವ ಕಥೆ ಚಿತ್ರದಲ್ಲಿದೆ.
'chef ಚಿದಂಬರ' ಅನಿರುದ್ಧ್
ಎಂ. ಆನಂದರಾಜ್ ನಿರ್ದೇಶನದ 'chef ಚಿದಂಬರ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿ ಅನಿರುದ್ಧ್ ಜತ್ಕರ್ ಹೀರೊ ಆಗಿ ನಟಿಸಿದ್ದಾರೆ. ಟೈಟಲ್ ರೋಲ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅನಿರುದ್ದ್ ಅವರು ಈ ಚಿತ್ರದಲ್ಲಿ ಬಾಣಸಿಗನ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.
'No 72, ಶಾಂತಿ ನಿವಾಸ' ಚಿತ್ರದಲ್ಲಿ ನಟ ಸುದೀಪ್ ಅಡುಗೆ ಭಟ್ಟನ ಪಾತ್ರ ಮಾಡಿದ್ದರು. ನಿಜ ಜೀವನದಲ್ಲಿ ಕೂಡ ಕಿಚ್ಚ ಕೈರುಚಿ ಸೂಪರ್ ಎಂದು ಸವಿದವರು ಹೇಳುತ್ತಾರೆ. ಇನ್ನು ಸುದೀಪ್ ಬಹಳ ಇಷ್ಟಪಟ್ಟು ಅಡುಗೆ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ 'ಭೀಮಸೇನ ನಳಮಹಾರಾಜ' ಟೈಟಲ್‌ನಲ್ಲಿ ಸಿನಿಮಾ ಬಂದಿತ್ತು. ಅರವಿಂದ ಅಯ್ಯರ್ ಹೀರೊ ಆಗಿ ನಟಿಸಿದ್ದರು.
ಇತ್ತೀಚೆಗೆ ಬಂದಿದ್ದ 'ಜೂನಿ' ಚಿತ್ರದಲ್ಲಿ ನಾಯಕ ಪಾರ್ಥ ಕೂಡ ಶೆಫ್. ಪೃಥ್ವಿ ಅಂಬರ್ ಈ ಪಾತ್ರದಲ್ಲಿ ನಟಿಸಿದ್ದರು. ಥಿಯೇಟರ್‌ಗಳಲ್ಲಿ ಸಿನಿಮಾ ಗೆಲ್ಲಲಿಲ್ಲ. ಓಟಿಟಿಯಲ್ಲಿ ಕೊಂಚಮಟ್ಟಿಗೆ ಮನ್ನಣೆ ಸಿಕ್ಕಿತ್ತು. ಅದ್ಭುತ ಕೇಕ್ ರೆಸೆಪಿ ಹುಡುಕಾಟ ಮಾಡುವ ಶೆಫ್ ಆಗಿ ಪೃಥ್ವಿ ಕಾಣಿಸಿಕೊಂಡಿದ್ದರು. 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ನಾನ್‌ವೆಜ್ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿರುವ ಯುವಕನಾಗಿ ಮಿಂಚಿದ್ದರು. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.


Click it and Unblock the Notifications











