ದಸರಾ ದಂಗಲ್: 'ಕಾಟೇರ', 'ಘೋಸ್ಟ್' ಎದುರು ಗುದ್ದಾಡೋಕೆ ಮತ್ತಿಬ್ಬರ ಎಂಟ್ರಿ
ಬಾಲಿವುಡ್ ಬಿಟ್ರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈ ವರ್ಷ ದೊಡ್ಡ ಸಿನಿಮಾಗಳು ಸದ್ದು ಮಾಡಲಿಲ್ಲ. ಸೆಕೆಂಡ್ ಹಾಫ್‌ನಲ್ಲಿ ಬಹುಕೋಟಿ ವೆಚ್ಚದ ಸಿನಿಮಾಗಳು ಥಿಯೇಟರ್‌ಗೆ ಬರ್ತಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾಗಳು ದಸರಾ ಸಂಭ್ರಮದಲ್ಲಿ ಈ ವರ್ಷ ತೆರೆಗೆ ಬರ್ತಿವೆ. ಕನ್ನಡದಲ್ಲಿ ದರ್ಶನ್ ನಟನೆಯ 'ಕಾಟೇರ' ಹಾಗೂ ಶಿವಣ್ಣನ 'ಘೋಷ್ಟ್' ಸಿನಿಮಾಗಳು ತೆರೆಗಪ್ಪಳಿಸುವ ಸಾಧ್ಯತೆಯಿದೆ.
ಕನ್ನಡ ಮಾತ್ರವಲ್ಲ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ದಸರಾ ವೀಕೆಂಡ್ ಮೇಲೆ ಕಣ್ಣಿಟ್ಟಿವೆ. ಸೋಮವಾರ, ಮಂಗಳವಾರ ಹಬ್ಬ ಇರುವುದರಿಂದ ಶುಕ್ರವಾರ ಸಿನಿಮಾ ತೆರೆಕಂಡರೆ ಲಾಂಗ್ ವೀಕೆಂಡ್ ಸಿನಿಮಾ ಕಲೆಕ್ಷನ್‌ಗೆ ಪ್ಲಸ್ ಆಗಲಿದೆ. ಅದೇ ಲೆಕ್ಕಾಚಾರದಲ್ಲಿ ಬಹುನಿರೀಕ್ಷಿತ ಸಿನಿಮಾಗಳನ್ನು ವಿಜಯ ದಶಮಿ ಸಂಭ್ರಮಕ್ಕೆ ತೆರೆಗೆ ತರಲಾಗುತ್ತಿದೆ. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆದರೆ ಬಾಕ್ಸಾಫೀಸ್ ಕ್ಲ್ಯಾಶ್ ಆಗುತ್ತದೆ ಎನ್ನುವ ಆತಂಕ ಇರುತ್ತದೆ. ಹಬ್ಬದ ಸಂಭ್ರಮದಲ್ಲಿ ಎರಡು ಸಿನಿಮಾ ಬಂದರೂ ಜನ ನೋಡ್ತಾರೆ ಎನ್ನುವ ಲೆಕ್ಕಾಚಾರ ಕೂಡ ಇದೆ.

ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ತೆಲುಗು, ತಮಿಳು 4 ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದ್ದವು. 4 ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ದಸರಾ ಸಂಭ್ರಮದಲ್ಲೂ ಇಂತದ್ದೇ ಪೈಪೋಟಿ ನಿರ್ಮಾಣವಾಗುವ ಸುಳಿವು ಸಿಕ್ತಿದೆ. ಈ ಬಾರಿ ರೇಸ್‌ನಲ್ಲಿ ಕನ್ನಡದ 2 ಸಿನಿಮಾಗಳಿವೆ. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ.
4 ದೊಡ್ಡ ಸಿನಿಮಾಗಳು ರಿಲೀಸ್?
ಈಗಾಗಲೇ ದಸರಾ ವೀಕೆಂಡ್ ಟಾರ್ಗೆಟ್ ಮಾಡಿ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದೆ. ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರ ಅಕ್ಟೋಬರ್ 19ಕ್ಕೆ ತೆರೆಗಪ್ಪಳಿಸುತ್ತಿದೆ. ಇದೀಗ ತೆಲುಗಿನಲ್ಲಿ ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಚಿತ್ರವನ್ನು ಅದೇ ದಿನ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಇನ್ನು ಕನ್ನಡದಲ್ಲಿ 'ಕಾಟೇರ', 'ಘೋಸ್ಟ್' ಸಿನಿಮಾ ಸಿದ್ಧವಾಗ್ತಿವೆ.

ನಾಡಹಬ್ಬಕ್ಕೆ 'ಕಾಟೇರ'ನ ಆರ್ಭಟ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ತರುಣ್ ಸುಧೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ಲೆಕ್ಕಾಚಾರ ಇತ್ತು. ಆದರೆ ಅಚ್ಚರಿ ಎನ್ನುವಂತೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ದಸರಾಗೆ ಸಿನಿಮಾ ರಿಲೀಸ್ ಮಾಡುವ ಪ್ರಯತ್ನದಲ್ಲಿದ್ದಾರೆ. ದಸರಾ ವೇಳೆಗೆ ಸಿನಿಮಾ ಸಿದ್ಧಪಡಿಸುವಂತೆ ತಂಡಕ್ಕೆ ಸೂಚಿಸಿದ್ದಾರೆ. ಈ ಚಿತ್ರದಲ್ಲಿ 70ರ ದಶಕದ ಕಥೆಯನ್ನು ಹೇಳಲಾಗ್ತಿದೆ.
ದಸರಾಗೆ 'ಘೋಷ್ಟ್' ರಿಲೀಸ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ 'ಘೋಷ್ಟ್' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಗ್ಯಾಂಗ್‌ಸ್ಟರ್ ಅವತಾರದಲ್ಲಿ ಶಿವಣ್ಣನನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಶ್ರೀನಿ ನಿರ್ದೇಶನದ ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿನಲ್ಲೂ ತೆರೆಗೆ ಬರಲಿದೆ. ದಸರಾಗೆ ಸಿನಿಮಾ ರಿಲೀಸ್ ಮಾಡ್ತೀವಿ ಎಂದು ತಂಡ ಟೀಸರ್‌ನಲ್ಲಿ ಮಾಹಿತಿ ಕೊಟ್ಟಿದೆ.
ಲಿಯೋ Vs ಕೇಸರಿ
ಟಾಲಿವುಡ್‌ನಲ್ಲಿ ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ' ಸಿನಿಮಾ ಭಾರೀ ಸದ್ದು ಮಾಡ್ತಿದೆ. ಕಾಜಲ್ ಅಗರ್ವಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಯ್ಯನ ಸಹೋದರಿಯಾಗಿ ಶ್ರೀಲೀಲಾ ಮಿಂಚಿದ್ದಾರೆ. ಶರತ್ ಕುಮಾರ್, ಅರ್ಜುನ್ ರಾಮ್‌ಪಾಲ್, ಶ್ರೀರಾಮ್ ರೆಡ್ಡಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿಲ್ ರಾವಿಪುಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಸಣ್ಣ ಗ್ಲಿಂಪ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. 'ಲಿಯೋ' ವರ್ಸಸ್ 'ಭಗವಂತ್ ಕೇಸರಿ' ಫೈಟ್ ಅಂತೂ ಪಕ್ಕಾ ಆಗಿದೆ. ಇನ್ನು ರಾಮ್ ಪೋತಿನೇನಿ ನಟನೆಯ 'ಸ್ಕಂದ' ಹಾಗೂ ರವಿತೇಜಾ ನಟನೆಯ 'ಟೈಗರ್ ನಾಗೇಶ್ವರರಾವ್' ಸಿನಿಮಾಗಳು ಅದೇ ವಾರ ರಿಲೀಸ್ ಆಗಲಿವೆ.


Click it and Unblock the Notifications











