ಒಂದೇ ದೃಶ್ಯ.. ಅಣ್ಣಾವ್ರು, ರಜನಿಕಾಂತ್, ಚಿರಂಜೀವಿ, ಅನಿಲ್ ಕಪೂರ್; ಯಾರು ಬೆಸ್ಟ್?
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಯಾವ ವಿಚಾರ ವೈರಲ್ ಆಗಿ ಚರ್ಚೆ ಹುಟ್ಟಾಕ್ಕುತ್ತೋ ಹೇಳೋಕೆ ಸಾಧ್ಯವಿಲ್ಲ. ಯಾರೋ ಒಬ್ಬರು ಏನೋ ಪೋಸ್ಟ್ ಮಾಡೋದು, ಅದಕ್ಕೆ ಪರ ವಿರೋಧ ಚರ್ಚೆ ಶುರುವಾಗುವುದು ನಡೆಯುತ್ತಲೇ ಇರುತ್ತದೆ. ಇದೀಗ 'X' ವೇದಿಕೆಯಲ್ಲಿ ಸೂಪರ್ ಹಿಟ್ ಸಿನಿಮಾ ದೃಶ್ಯ ಭಾರೀ ಸದ್ದು ಮಾಡ್ತಿದೆ.
ಡಾ. ರಾಜ್‌ಕುಮಾರ್ ನಟನೆಯ 'ಅನುರಾಗ ಅರಳಿತು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಈ ಸಿನಿಮಾ ತೆಲುಗು, ತಮಿಳು, ಹಿಂದಿ, ಸಿಂಹಳಾ, ಒಡಿಯಾ, ಬೆಂಗಾಲಿ ಹಾಗೂ ಬಾಂಗ್ಲಾದೇಶಿ ಬೆಂಗಾಲಿ ಸೇರಿ 7 ಭಾಷೆಗಳಿಗೆ ರೀಮೆಕ್ ಆಗಿತ್ತು. ತೆಲುಗು(ಘರಾನಾ ಮೊಗುಡು) ಚಿರಂಜೀವಿ, ತಮಿಳಿನಲ್ಲಿ(ಮನ್ನನ್) ರಜನಿಕಾಂತ್, ಹಿಂದಿಯಲ್ಲಿ(ಲಾಡ್ಲಾ) ಅನಿಲ್ ಕಪೂರ್ ಹೀರೊ ಆಗಿ ನಟಿಸಿದ್ದರು.

ಹೆಚ್. ಜಿ ರಾಧಾದೇವಿ ಬರೆದ 'ಅನುರಾಗದ ಅಂತಃಪುರ' ಕಾದಂಬರಿ ಆಧರಿಸಿ ಎಂ. ಎಸ್ ರಾಜಶೇಖರ್ ಕನ್ನಡದಲ್ಲಿ ಈ ಸಿನಿಮಾ ಕಟ್ಟಿಕೊಟ್ಟಿದ್ದರು. 1986ರಲ್ಲಿ ತೆರೆಕಂಡ ಈ ಸಿನಿಮಾ 6 ವರ್ಷಗಳ ಬಳಿಕ ತಮಿಳು ಹಾಗೂ ತೆಲುಗಿಗೆ ರೀಮೆಕ್ ಆಗಿತ್ತು. ತೆಲುಗಿನಲ್ಲಿ ಚಿರಂಜೀವಿ ನಟಿಸಿದ್ದ 'ಘರಾನಾ ಮೊಗುಡು' ಹೊಸ ದಾಖಲೆ ಬರೆದಿತ್ತು. ಎಲ್ಲಾ ತೆಲುಗು ಸಿನಿಮಾಗಳ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿತ್ತು. ಇದೇ ಕಾರಣಕ್ಕೆ ಬಳಿಕ ಹಲವು ಭಾಷೆಗಳಿಗೆ ಸಿನಿಮಾ ರೀಮೆಕ್ ಆಗಿತ್ತು.
ಚಿತ್ರದ ಕಥೆ ಸಿಂಪಲ್. ಆದರೆ ಅದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿತ್ತು. ಮೈಸೂರಿನ ಆಶಾ ಸ್ಟೀಲ್ ಫ್ಯಾಕ್ಟರಿಯ ಕಾರ್ಮಿಕ ಶಂಕರ್(ಡಾ. ರಾಜ್‌ಕುಮಾರ್), ತನ್ನ ಉದ್ಯೋಗದಾತನ ದುರಹಂಕಾರಿ ಮಗಳು ಆಶಾದೇವಿ(ಮಾಧವಿ)ಯನ್ನು ಮದುವೆಯಾಗುವಂತಾಗುತ್ತದೆ. ತನಗೆ ಕಂಟಕವಾದ ಶಂಕರನನ್ನು ಮದುವೆಯಾಗಿ ಆತನಿಗೆ ಬುದ್ಧಿ ಕಲಿಸಬೇಕು ಎಂದುಕೊಳ್ಳುತ್ತಾಳೆ. ಮದುವೆಯಾದ ಬಳಿಕ ಶಂಕರ್ ಅವಳಿಗೆ ತನ್ನ ತಪ್ಪಿನ ಅರಿವಾಗುವಂತೆ ಮಾಡಿ ಬುದ್ದಿ ಕಲಿಸುತ್ತಾನೆ.
ಶಂಕರ್ ಪಾತ್ರದಲ್ಲಿ ಅಣ್ಣಾವ್ರ ಅಭಿನಯ ಗಮನ ಸೆಳೆದಿತ್ತು. ಫ್ಯಾಕ್ಟರಿಯಲ್ಲಿ ಅಪಾಯಕ್ಕೆ ಸಿಲುಕುತ್ತಿದ್ದ ಆಶಾಳನ್ನು ಶಂಕರ್ ಕಾಪಾಡುತ್ತಾನೆ. ಆದರೆ ತನ್ನ ಮೈಮುಟ್ಟಲು ಎಷ್ಟು ಕೊಬ್ಬು ಎಂದು ಆತನ ಕೆನ್ನೆಗೆ ಹೊಡೆಯುತ್ತಾಳೆ. ಬಳಿಕ ಆಕೆಯನ್ನು ಹಿಂಬಾಲಿಸಿಕೊಂಡು ಹೋಗುವ ಶಂಕರ್ ಆಫೀಸ್ ಕಚೇರಿ ಒಳಗೆ 4 ಗೋಡೆಗಳ ನಡುವೆ ತಕ್ಕ ಶಾಸ್ತಿ ಮಾಡ್ತಾನೆ. ಸದ್ಯ ಇದೇ ದೃಶ್ಯದ ಬಗ್ಗೆ ಟ್ವಿಟ್ಟರ್‌ನಲ್ಲಿ ಭಾರೀ ಚರ್ಚೆ ನಡೀತಿದೆ. ಈ ದೃಶ್ಯದಲ್ಲಿ ಯಾರ ಚೆನ್ನಾಗಿ ನಟಿಸಿದ್ದಾರೆ ಎಂದು ಪರ, ವಿರೋಧ ಚರ್ಚೆ ಜೋರಾಗಿದೆ.
ತಮಿಳಿನ 'ಮನ್ನನ್' ಚಿತ್ರದಲ್ಲಿ ರಜನಿಕಾಂತ್ ಹಾಗೂ ವಿಜಯಶಾಂತಿ ನಟಿಸಿದ್ದರು. ಈ ದೃಶ್ಯದ ವೀಡಿಯೋವನ್ನು ನೆಟ್ಟಿಗರೊಬ್ಬರು ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲೇ 'ಘರಾನಾ ಮೊಗುಡು' ಚಿತ್ರದ ವೀಡಿಯೋ ಹಾಕಿ ಯಾವುದು ಬೆಸ್ಟ್ ಎನ್ನುವ ಚರ್ಚೆ ಶುರುವಾಗಿದೆ. ಅಷ್ಟರಲ್ಲೇ ಕನ್ನಡ ಸಿನಿರಸಿಕರು ಎರಡೂ ಚಿತ್ರಕ್ಕೆ ಮೂಲವಾದ ಕನ್ನಡದ 'ಅನುರಾಗ ಅರಳಿತು' ಚಿತ್ರದ ವೀಡಿಯೋ ತುಣುಕು ಪೋಸ್ಟ್ ಮಾಡಿ ಅಣ್ಣಾವ್ರ ಮುಂದೆ ಎಲ್ಲರ ನಟನೆ ಸಪ್ಪೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದು ಮುಂದೆ ಭಾರೀ ಚರ್ಚೆ ಹುಟ್ಟಾಕ್ಕಿದೆ.
'ಮನ್ನನ್' ಚಿತ್ರವನ್ನು ಪಿ. ವಾಸು ನಿರ್ದೇಶನ ಮಾಡಿದ್ದರು. ಕೆ. ರಾಘವೇಂದ್ರ ರಾವ್ ನಿರ್ದೇಶನದ 'ಘರಾನಾ ಮೊಗುಡು' ಚಿತ್ರದಲ್ಲಿ ಚಿರಂಜೀವಿ ಜೊತೆ ನಗ್ಮಾ ನಟಿಸಿದ್ದರು. ಈ ಚಿತ್ರ ತೆಲುಗಿನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿರಂಜೀವಿ ಸ್ಟಾರ್‌ಡಮ್ ಹೆಚ್ಚಿಸಿತ್ತು. ಈ ಚಿತ್ರದ ಬೆನ್ನಲ್ಲೇ ಬಂದ 'ಆಪತ್ಪಾಂದವುಡು' ಚಿತ್ರಕ್ಕಾಗಿ ಭಾರೀ ಸಂಭಾವನೆ ಪಡೆದಿದ್ದರು. ಅವತ್ತಿನ ಕಾಲಕ್ಕೆ ಅಮಿತಾಬ್ ಬಚ್ಚನ್ ಮೀರಿಸಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಚಿರಂಜೀವಿ ಎನಿಸಿಕೊಂಡಿದ್ದರು.


Click it and Unblock the Notifications











