twitter
    For Quick Alerts
    ALLOW NOTIFICATIONS  
    For Daily Alerts

    ಹೊಸಬರ ಚಿತ್ರಗಳು ಇತ್ತ ಥಿಯೇಟರ್ ನಲ್ಲಿ ನಿಲ್ಲುತ್ತಿಲ್ಲ, ಅತ್ತ OTT ಯವರು ಕೇಳುತ್ತಿಲ್ಲ!

    |

    'ಕೆಜಿಎಫ್- 2' ಚಿತ್ರದ ಭರ್ಜರಿ ಯಶಸ್ಸು ಕನ್ನಡ ಸಿನಿಮಾರಂಗದ ದಿಕ್ಕು-ದೆಸೆಯನ್ನು ಬದಲಾಯಿಸಿದೆ. ಪ್ಯಾನ್ ಇಂಡಿಯಾ ಮಾರ್ಕೆಟ್ ನಲ್ಲಿ ಕನ್ನಡ ಸಿನಿಮಾಗಳ ಹವಾ ಕೂಡ ಈಗ ದೊಡ್ಡದಾಗಿದೆ. ಇದೇ ವರ್ಷ ಕನ್ನಡದಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾಗಳು ಹೊರಬರುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಈಗಾಗಲೇ ದೊಡ್ಡಮಟ್ಟದಲ್ಲಿ ಜನಸಾಮಾನ್ಯರನ್ನು ಸೆಳೆಯುವುದರಲ್ಲಿ ಯಶಸ್ಸು ಕಂಡಿದೆ. ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

    ಕನ್ನಡ ಸಿನಿಮಾರಂಗ ದಿನೇ, ದಿನೇ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಕನ್ನಡದಲ್ಲಿ ಕೂಡ ಈಗ ದೊಡ್ಡ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣ ನಡೆಯುತ್ತಿದೆ. ಕನ್ನಡದ ನಟರು ಕೂಡ ಪ್ರಯೋಗಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ನಿರ್ದೇಶಕರು ಕೂಡ ಹೊಸತನದ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ. ಆದರೆ ಕನ್ನಡ ಸಿನಿಮಾ ರಂಗಕ್ಕೆ ಕಾಡುತ್ತಿರುವ ಅತಿ ದೊಡ್ಡ ಭಯ ಸಣ್ಣ ಚಿತ್ರಗಳ ಭವಿಷ್ಯ!

    'ಕೆಜಿಎಫ್‌ 2'ಗೆ ಟಕ್ಕರ್ ಕೊಡುತ್ತಾ 'ಭೂಲ್ ಭುಲಯ್ಯ 2' ಕಲೆಕ್ಷನ್?'ಕೆಜಿಎಫ್‌ 2'ಗೆ ಟಕ್ಕರ್ ಕೊಡುತ್ತಾ 'ಭೂಲ್ ಭುಲಯ್ಯ 2' ಕಲೆಕ್ಷನ್?

    'ಕೆಜಿಎಫ್-2' 1000 ಕೋಟಿ ಕ್ಲಬ್ ಸೇರಿದ ಮೇಲೆ ಹೀಗೆಲ್ಲಾ ಬರಿ ನೂರಾರು ಕೋಟಿಗಳ, ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿದೆ. ಈಗ ಕನ್ನಡ ಸಿನಿಮಾ ರಂಗದಲ್ಲಿ ಯಾರೇ ನೋಡಿದರು 100-200 ಕೋಟಿ ಬಜೆಟ್ ಬಗ್ಗೆ ಮಾತನಾಡುತ್ತಾರೆ. ಹಾಗಂತ ಎಲ್ಲಾ ಚಿತ್ರಗಳ ಮೇಲೆ 100 - 200 ಕೋಟಿ ಬಂಡವಾಳ ಹೂಡಲು ಸಾಧ್ಯವೇ? ಇಷ್ಟಕ್ಕೂ ಎಲ್ಲಾ ಚಿತ್ರಗಳು ಕೆಜಿಎಫ್ ಸರಣಿಯಂತೆ ಯಶಸ್ಸು ಕಾಣಲು ಸಾಧ್ಯವೇ? ಈಗಂತೂ 50ಲಕ್ಷ, 1 ಕೋಟಿ ಸಿನಿಮಾ ಬಗ್ಗೆ ಮಾತನಾಡುವುದೇ ಅವಮಾನ ಅನ್ನುವ ಸ್ಥಿತಿಗೆ ಕನ್ನಡ ಸಿನಿಮಾರಂಗ ಬರುತ್ತಿದೆ. ಹಾಗಂತ ಸಣ್ಣ ಬಜೆಟಿನ ಚಿತ್ರಗಳ ನಿರ್ಮಾಣವನ್ನು ಕಮ್ಮಿಯಾಗಿಲ್ಲ.

    ದೊಡ್ಡ ಚಿತ್ರಗಳು ಸೋತಾಗ ಕೈ ಹಿಡಿದಿರುವುದು ಸಣ್ಣ ಚಿತ್ರಗಳೇ!

    ದೊಡ್ಡ ಚಿತ್ರಗಳು ಸೋತಾಗ ಕೈ ಹಿಡಿದಿರುವುದು ಸಣ್ಣ ಚಿತ್ರಗಳೇ!

    ಸಣ್ಣ ಬಜೆಟ್ ಅಥವಾ ಲೋ ಬಜೆಟ್ ಚಿತ್ರಗಳು ಅಂದಾಗ ಕೆಲವರಲ್ಲಿ ಒಂದು ತರದ ಅಸಹನೆ. ಆದರೆ ಅದೆಷ್ಟೋ ಸಲ ಸೋತು ಮೂಲೆಗುಂಪಾದ ನಿರ್ಮಾಪಕರು, ನಿರ್ದೇಶಕರು ಅಥವಾ ನಟರನ್ನು ಕೈಹಿಡಿದು ನಡೆಸಿರುವುದೇ ಸಣ್ಣ ಬಜೆಟ್ ಚಿತ್ರಗಳು. ಸುಮಾರು 30 ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ಯಾನ್ ಇಂಡಿಯಾ ಸಿನಿಮಾ ಒಂದನ್ನು ಮಾಡಿದರು, ಅದೇ 'ಶಾಂತಿಕ್ರಾಂತಿ'. ಕನ್ನಡದ ಜೊತೆಗೆ ತೆಲುಗು- ತಮಿಳಿನಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಲಾಯಿತು. ತೆಲುಗಿನಲ್ಲಿ ನಾಗಾರ್ಜುನ ತಮಿಳಿನಲ್ಲಿ ರಜನಿಕಾಂತ್ ಪ್ರಮುಖ ಪಾತ್ರಗಳನ್ನು ಮಾಡಿದರು. ಆಗಿನ ಕಾಲಕ್ಕೆ ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಮಾಡಲಾದ ಚಿತ್ರ ಅದಾಗಿತ್ತು.'ಶಾಂತಿ ಕ್ರಾಂತಿ' ಎಲ್ಲಾ ಭಾಷೆಗಳಲ್ಲಿ ಕೂಡ ಡಿಸಾಸ್ಟರ್ ಎನಿಸಿಕೊಂಡಿತು. ರವಿಚಂದ್ರನ್ ಅಕ್ಷರಶಃ ಎಲ್ಲವನ್ನೂ ಕಳೆದುಕೊಂಡಿದ್ದರು. ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸಿದ ಅವರು 'ಶಾಂತಿ ಕ್ರಾಂತಿ' ಎದುರಲ್ಲಿ ನೋಡುವುದಾದರೆ ಒಂದು ಸಣ್ಣ ಬಜೆಟ್ ಚಿತ್ರ ಮಾಡುತ್ತಾರೆ ಅದೇ 'ರಾಮಾಚಾರಿ'. ಚಿತ್ರ ಭರ್ಜರಿ ಗಳಿಕೆಯನ್ನು ಕಾಣುತ್ತದೆ ಮತ್ತು ರವಿಚಂದ್ರನ್ ಅವರು 'ಶಾಂತಿ ಕ್ರಾಂತಿ' ಯಲ್ಲಿ ಕಳೆದುಕೊಂಡ ಅಷ್ಟು ದುಡ್ಡನ್ನು ಅವರಿಗೆ ಮರಳಿಸಿತ್ತು.

    ಸಣ್ಣ ಚಿತ್ರಗಳ ಮೂಲಕವೇ ಕಂಬ್ಯಾಕ್ ಮಾಡಿದ್ದಾರೆ ನಟರು- ನಿರ್ದೇಶಕರು

    ಸಣ್ಣ ಚಿತ್ರಗಳ ಮೂಲಕವೇ ಕಂಬ್ಯಾಕ್ ಮಾಡಿದ್ದಾರೆ ನಟರು- ನಿರ್ದೇಶಕರು

    'ಸ್ಪರ್ಶ' ಸೋಲಿನ ನಂತರ ಸುದೀಪ್ ಮೊರೆಹೋಗಿದ್ದು ಒಂದು ಸಣ್ಣ ರಿಮೇಕ್ ಚಿತ್ರಕ್ಕೆ. ಅದೇ ಸುದೀಪ್ ಅವರ ಸಿನಿ ಬದುಕಿಗೆ ತಿರುವು ನೀಡಿದ 'ಹುಚ್ಚ' ಚಿತ್ರ. 'ಹುಚ್ಚ' ಚಿತ್ರದ ನಂತರವೇ ಸುದೀಪ್ ಸ್ಟಾರ್ ನಟನಾಗಿ ಬೆಳೆದಿದ್ದು.
    ಯೋಗರಾಜ್ ಭಟ್, ಸುದೀಪ್ ಅಂತಹ ಸ್ಟಾರ್ ನಟನ ಜೊತೆ ಮಾಡಿದ 'ರಂಗ ಎಸೆಸೆಲ್ಸಿ' ಚಿತ್ರದ ಸೋಲಿನ ನಂತರ ಸಾಕಷ್ಟು ಸಮಯ ಯಾವುದೇ ಚಿತ್ರ ಕೈಗೆ ಸಿಗಲಿಲ್ಲ. ಅದರ ನಂತರವೇ ಆಗ ಅಷ್ಟೊಂದು ಜನಪ್ರಿಯನಲ್ಲದ ನಟ ಗಣೇಶ್ ಅವರನ್ನು ಮುಖ್ಯಪಾತ್ರದಲ್ಲಿ ಇಟ್ಟು 'ಮುಂಗಾರು ಮಳೆ' ಮಾಡಿದರು. ಮುಂಗಾರು ಮಳೆಯ ನಂತರ ಗಣೇಶ್ ಗೋಲ್ಡನ್ ಸ್ಟಾರ್ ಆದ. ಮುಂದಿನದು ಇತಿಹಾಸ. ಇಂತಹ ಚಿತ್ರಗಳನ್ನು ಸಹ ಪಕ್ಕಕ್ಕಿಟ್ಟು ಕಾಶಿನಾಥ್- ಫಣಿರಾಮಚಂದ್ರ ಅವರ ಚಿತ್ರಗಳ ಕಡೆಗೆ ನಾವು ಗಮನ ಹರಿಸಿದರೆ ದೊಡ್ಡ ಬಜೆಟ್ ಚಿತ್ರಗಳ ಒಂದು ಹಾಡು ಮತ್ತು ಒಂದು ಆಕ್ಷನ್ ದೃಶ್ಯಕ್ಕೆ ಆಗುವ ಹಣದಲ್ಲಿ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ.

    ಸಣ್ಣ ಬಜೆಟ್ ಚಿತ್ರಗಳ ಕಥೆಗಳು ವಿಶೇಷವಾಗಿರುತ್ತದೆ!

    ಸಣ್ಣ ಬಜೆಟ್ ಚಿತ್ರಗಳ ಕಥೆಗಳು ವಿಶೇಷವಾಗಿರುತ್ತದೆ!

    ಲೋ ಬಜೆಟ್ ಚಿತ್ರಗಳು ಅಂತ ಏನು ಕರೆಯುತ್ತಾರೆ, ಅಂತಹ ಚಿತ್ರಗಳು ದೊಡ್ಡ ಯಶಸ್ಸನ್ನು ಕಂಡಾಗ ನಮಗೆ ಮುಖ್ಯವಾಗಿ ಕಾಣುವುದು ಅದರ ಕಂಟೆಂಟ್. ಸಣ್ಣ ಬಜೆಟ್ ಚಿತ್ರಗಳ ನಟರು- ತಾಂತ್ರಿಕ ವರ್ಗ- ನಿರ್ದೇಶಕರು ಎಲ್ಲರೂ ಕೂಡ ಹೊಸಬರೇ ಆಗಿರುತ್ತಾರೆ. ಹೊಸದೊಂದನ್ನು ನೀಡುವ ತುಡಿತ ಅವರಲ್ಲಿ ಇರುತ್ತದೆ. ಇಂತಹ ಚಿತ್ರಗಳು ಯಶಸ್ವಿಯಾಗಿ ಗಮನಸೆಳೆದಾಗ ಅದರಲ್ಲಿ ನಮಗೆ ಕಾಣುವುದು ಒಂದು ಗಟ್ಟಿತನ. ಮಂಡ್ಯದ ಆಡುಭಾಷೆಯಲ್ಲಿ ಮೂಡಿಬಂದ 'ತಿಥಿ' ಕನ್ನಡದ ಅಚ್ಚರಿಯ ಚಿತ್ರಗಳಲ್ಲಿ ಒಂದು. 'ದಿಯಾ' ಚಿತ್ರದ ನಿರ್ದೇಶಕ ಅಶೋಕ್ ನಿರ್ದೇಶನದ ಮೊದಲ ಚಿತ್ರ '6-5=2' ಹಾರರ್ ಚಿತ್ರಗಳಲ್ಲಿ ಹೊಸದೊಂದು ಜಾಡಲ್ಲಿ ನಡೆಯಿತು. ಸೂರಿ ನಿರ್ದೇಶನದ ಮೊದಲ ಚಿತ್ರ 'ದುನಿಯಾ', ಪವನ್ ಕುಮಾರ್ ನಿರ್ದೇಶನದ 'ಲೂಸಿಯಾ', 'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು, 'ಫಸ್ಟ್ ರಾಂಕ್ ರಾಜು' , 'ರಂಗಿತರಂಗ' ಹೀಗೆ ಹೊಸ ಪ್ರಯತ್ನಗಳು ಸಣ್ಣ ಬಜೆಟ್ ನಲ್ಲಿ ತಯಾರಾಗಿದ್ದು. ಈ ಚಿತ್ರಗಳ ನಾಯಕ ನಟರು ಮತ್ತು ನಿರ್ದೇಶಕರು ಕೂಡ ಪ್ರಸ್ತುತ ಕನ್ನಡದ ಟಾಪ್ ನಿರ್ದೇಶಕರು ಮತ್ತು ನಟರ ಸಾಲಿಗೆ ಈಗ ಸೇರಿದ್ದಾರೆ. ಈ ಚಿತ್ರಗಳ ತಾಂತ್ರಿಕ ವರ್ಗ ಈಗ ಕನ್ನಡ ಸಿನಿಮಾರಂಗವನ್ನು ಆಳುತ್ತಿದೆ.

    'ಕೆಜಿಎಫ್- 2' ಚಿತ್ರದ ಬಿಡುಗಡೆಯ ನಂತರ ಏನಾಗಿದೆ?

    'ಕೆಜಿಎಫ್- 2' ಚಿತ್ರದ ಬಿಡುಗಡೆಯ ನಂತರ ಏನಾಗಿದೆ?

    ಇತ್ತೀಚೆಗಷ್ಟೇ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ಅಭಿನಯದ 'ಕೆಜಿಎಫ್- 2' ಚಿತ್ರ ಬಿಡುಗಡೆ ಆಗಿ ಸಾವಿರ ಕೋಟಿಯ ಕ್ಲಬ್ ಸೇರಿದೆ. ಇದರ ನಂತರ ಸಣ್ಣ ಬಜೆಟ್ಟಿನ ಚಿತ್ರಗಳ ಬಿಡುಗಡೆಯನ್ನು ಒಮ್ಮೆ ಅವಲೋಕಿಸಿದರೆ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿವೆ. ಅದರಲ್ಲೂ ವಿಶೇಷವಾಗಿ ಸಣ್ಣ ಬಜೆಟ್ಟಿನ ಮತ್ತು ಹೊಸಬರ ಪ್ರಯತ್ನಗಳು ಸಂಪೂರ್ಣವಾಗಿ ನೆಲಕಚ್ಚಿವೆ. 'ಕೆಜಿಎಫ್- 2' ಚಿತ್ರಕ್ಕೆ ಸಾವಿರಾರು ರೂಪಾಯಿಯನ್ನು ತೆತ್ತು ಸಿನಿಮಾ ನೋಡಿದ ಕನ್ನಡ ಪ್ರೇಕ್ಷಕರು ಇತ್ತೀಚೆಗೆ ಬಿಡುಗಡೆಯಾಗಿರುವ ಇನ್ನಿತರ ಕನ್ನಡ ಚಿತ್ರಗಳನ್ನು ನೋಡಲು ಚಿತ್ರಮಂದಿರಗಳ ಕಡೆಗೆ ಹೋಗುತ್ತಿಲ್ಲ. ಮುಂದಿನ ಅವನ ಆಯ್ಕೆಗಳು ಕೂಡ '777 ಚಾರ್ಲಿ' ಮತ್ತು 'ವಿಕ್ರಾಂತ್ ರೋಣ' ಮಾತ್ರ ಇದ್ದಂತೆ ಕಾಣುತ್ತದೆ. ಹಾಗಾದರೆ ಮುಂದೆ ಕನ್ನಡದಲ್ಲಿ ನಿರ್ಮಾಣವಾಗುವ ಸಣ್ಣ ಬಜೆಟ್ ಚಿತ್ರಗಳ ಕಥೆಯೇನು?

    ಕಳೆದ ವಾರ ಬಿಡುಗಡೆಯಾದ ಯಾವ ಚಿತ್ರವೂ ಗೆಲ್ಲಲಿಲ್ಲ!

    ಕಳೆದ ವಾರ ಬಿಡುಗಡೆಯಾದ ಯಾವ ಚಿತ್ರವೂ ಗೆಲ್ಲಲಿಲ್ಲ!

    ಇತ್ತೀಚಿನ ಕೆಲವು ತಿಂಗಳಿಂದ ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆದಿವೆ. 'ಆರ್ ಆರ್ ಆರ್', 'ಕೆಜಿಎಫ್-2' ಚಿತ್ರಗಳು ದಾಖಲೆಯ ಹಣವನ್ನು ಕೂಡ ಕಂಡಿವೆ. ಪ್ರೇಕ್ಷಕರು ಚಿತ್ರಮಂದಿರಗಳ ಕಡೆಗೆ ಬರುತ್ತಿರುವುದು ಸುಳ್ಳಲ್ಲ. ಆದರೆ ಇದೇ ಪ್ರೇಕ್ಷಕರು ಯಾಕೋ ಲೋ ಬಜೆಟ್ ಅಥವಾ ಹೊಸಬರ ಚಿತ್ರಗಳನ್ನು ನೋಡಲು ಆಸಕ್ತಿ ತೋರಿಸುತ್ತಿಲ್ಲ. ಈ ವರ್ಷ ಯಾವುದೇ ಒಂದು ಹೊಸ ಪ್ರಯೋಗ ಕೂಡ ಕನ್ನಡದಲ್ಲಿ ಗೆದ್ದಿದ್ದಿಲ್ಲ. ಕಳೆದವಾರ ಕನ್ನಡದಲ್ಲಿ 'ಗರುಡ', 'ಪ್ರಾರಂಭ', 'ದಾರಿ ಯಾವುದಯ್ಯ‌ ವೈಕುಂಠಕ್ಕೆ', 'ಸಾರಾ ವಜ್ರ', 'ಕಂಡ್ಹಿಡಿ ನೋಡೋಣಾ', '21 hours', 'ಚಕ್ರಾಧಿಪತಿ', 'ಆ್ಯಂಗರ್', 'ಕಟಿಂಗ್ ಶಾಪ್', 'ಸಕುಟುಂಬ ಸಮೇತ' ಚಿತ್ರಗಳು ಬಿಡುಗಡೆಯಾಗಿದೆ. ಆದರೆ ಪ್ರೇಕ್ಷಕ ಪ್ರಭು ಮಾತ್ರ ಯಾವ ಚಿತ್ರಗಳ ಕಡೆಗೂ ಕೂಡ ಮಖ ಹಾಕಿ ನೋಡಿಲ್ಲ. ಇನ್ನು ಇದೆ ಶುಕ್ರವಾರ (ಮೇ 27) 'ಧೀರನ್',' ವೀಲ್ ಚೇರ್ ರೋಮಿಯೋ', 'ಕಿರಿಕ್ ಶಂಕರ್', 'ಪ್ರೀತ್ಸು' ಚಿತ್ರಗಳು ಚಿತ್ರಮಂದಿರಕ್ಕೆ ಬರುವುದು ಕನ್ಫರ್ಮ್ ಆಗಿದೆ. ಇದರ ಜೊತೆಗೆ ಮತ್ತಷ್ಟು ಚಿತ್ರಗಳು add ಆಗುವ ಸಾಧ್ಯತೆಗಳಿವೆ. ಇಷ್ಟೆಲ್ಲ ಹೊರತಾಗಿ ಕೂಡ ನೋಡಿದರೂ ಕೂಡ ಯಾವುದೇ ಒಂದು ಹೊಸ ಪ್ರಯತ್ನ ಅಥವಾ ಯಶಸ್ಸು ಕಣ್ಣಮುಂದೆ ಕಾಣುತ್ತಿಲ್ಲ.

    ಸ್ಟಾರ್ ಚಿತ್ರಗಳು ಕೂಡ ಸೋತಿವೆ

    ಸ್ಟಾರ್ ಚಿತ್ರಗಳು ಕೂಡ ಸೋತಿವೆ

    2022 ರಲ್ಲಿ ಬಿಡುಗಡೆಯಾಗಿರುವ ಕನ್ನಡ ಸಿನಿಮಾಗಳನ್ನು ಅವಲೋಕಿಸಿದರೆ ಕೇವಲ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಯಶಸ್ಸನ್ನು ಕಂಡಿದೆ. 'ಕೆಜಿಎಫ್-2' all-time ರೆಕಾರ್ಡ್ ಸಿನಿಮಾ ಆಗಿದೆ. ಇನ್ನು ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಚಿತ್ರ ಕೂಡ ದೊಡ್ಡ ಯಶಸ್ಸನ್ನು ಕಂಡಿದೆ. ಇದು ಹೊರತಾಗಿ ಧನಂಜಯ್ ಅಭಿನಯದ 'ಬಡವ ರಾಸ್ಕಲ್' ಮತ್ತು ಡಾರ್ಲಿಂಗ್ ಕೃಷ್ಣ ಅಭಿನಯದ 'ಲವ್ ಮಾಕ್ಟೈಲ್ -2' ಚಿತ್ರಗಳು ಆವರೇಜ್ ಸಿನಿಮಾಗಳು ಎನಿಸಿಕೊಂಡಿವೆ. ಇವುಗಳನ್ನು ಹೊರತಾಗಿ ಮತ್ತೊಂದು ಚಿತ್ರ ಕೂಡ ನಿರೀಕ್ಷೆಗಳ ಮಟ್ಟಕ್ಕೆ ತಲುಪಿಲ್ಲ. ಅಜಯ್ ರಾವ್ 'ಶೋಕಿವಾಲಾ' ದಿಗಂತ್ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ,'ಹುಟ್ಟು ಹಬ್ಬದ ಶುಭಾಶಯಗಳು' ಧನಂಜಯ್ ನಟನೆಯ '21 hours' ಸಿಂಪಲ್ ಸುನಿ ನಿರ್ದೇಶನದಲ್ಲಿ ಶರಣ್ ಅಭಿನಯಿಸಿರುವ 'ಅವತಾರ ಪುರುಷ' ಸೇರಿದಂತೆ ಈ ವರ್ಷ ಬಿಡುಗಡೆಯಾಗಿರುವ ಬಹುತೇಕ ಚಿತ್ರಗಳು ಪ್ರೇಕ್ಷಕರ ನಿರೀಕ್ಷೆಗಳನ್ನು ತಲುಪುವುದರಲ್ಲಿ ವಿಫಲವಾಗಿವೆ. ಸ್ಟಾರ್ ಮುಖಗಳ ಹೊರತಾಗಿ ಕೂಡ ಜನರು ಚಿತ್ರಮಂದಿರಗಳ ಕಡೆಗೆ ಮುಖ ಮಾಡುತ್ತಿಲ್ಲ.

    OTT ಕಂಟೆಂಟ್ ಲ್ಲೂ ಕೂಡ ಹಿಂದೆ...

    OTT ಕಂಟೆಂಟ್ ಲ್ಲೂ ಕೂಡ ಹಿಂದೆ...

    ಒಂದಡೆ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಪ್ರೇಕ್ಷಕರ ಅಭಿರುಚಿಗಳು ಕೂಡ ಬದಲಾಗಿದೆ. ರಾಜ್ಯದಾದ್ಯಂತ ಬಹುತೇಕ ಚಿತ್ರಮಂದಿರಗಳು ಈಗ ಮುಚ್ಚುವ ಹಾದಿಯಲ್ಲಿದೆ. ಮಲ್ಟಿಪ್ಲೆಕ್ಸ್ ಗಳು ಮಾತ್ರ ಈಗ ಉಳಿಯುವಂತಹ ಸಾಧ್ಯತೆಗಳು ಹೆಚ್ಚಾಗುತ್ತದೆ. ಆದರೆ ಹೊಸಬರ ಚಿತ್ರಕ್ಕೆ ಇಲ್ಲಿ ಪ್ರೈಮ್ ಟೈಮ್ ನಲ್ಲಿ ಅವಕಾಶ ಕೊಡುವುದಿಲ್ಲ. ಕೊಡೋದು ಕೂಡ ಒಂದೇ ಶೋ, ಅದು ಕೂಡ ಮಧ್ಯಾಹ್ನದ ಸಮಯದಲ್ಲಿ. ಸಿನಿಮಾಗೆ ಟಾಕ್ ಚೆನ್ನಾಗಿ ಬಂದರೆ ಮಾತ್ರ ಹೆಚ್ಚಿನ ಶೋಗಳು ಸಿಗುತ್ತದೆ. ಇಲ್ಲದೆ ಹೋದರೆ ಮೂರೇ ದಿನಕ್ಕೆ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕುತ್ತಾರೆ. ಇನ್ನೊಂದೆಡೆ ನೇರವಾಗಿ OTTಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುವ ಅವಕಾಶ ಅವಕಾಶವಿದೆ. ಆದರೆ ನೆಟ್ಫ್ಲಿಕ್ಸ್, ಅಮೆಜಾನ್, ಡಿಸ್ನಿ+ ಹಾಟ್ ಸ್ಟಾರ್ ಅಂತಹ ದೊಡ್ಡ ದೊಡ್ಡ OTT ಪ್ಲಾಟ್ಫಾರ್ಮ್ ಗಳಲ್ಲಿ ಕನ್ನಡ ಸಿನಿಮಾಗಳ ದರ್ಶನ ದುರ್ಬಲವಾಗುತ್ತಿದೆ. ಅಮೆಜಾನ್ ತಕ್ಕಮಟ್ಟಿಗೆ ಕನ್ನಡ ಸಿನಿಮಾಗಳಿಗೆ ಅವಕಾಶವನ್ನು ಮಾಡಿಕೊಡುತ್ತಿದೆ ಆದರೆ ನೆಟ್ಫ್ಲಿಕ್ಸ್ ಮತ್ತು ಡಿಸ್ನಿ+ಹಾಟ್ ಸ್ಟಾರ್ ನಂತಹ ಅಂತರರಾಷ್ಟ್ರೀಯ OTT ಫ್ಲಾಟ್ ಫಾರ್ಮ್ ಗಳು ಕನ್ನಡ ಸಿನಿಮಾಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದೆ. ಇತರ ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಕಂಪೇರ್ ಮಾಡಿದರೆ ಕನ್ನಡ ಸಿನಿಮಾಗಳನ್ನು ನೋಡುವಂತಹ ಪ್ರೇಕ್ಷಕರ ಸಂಖ್ಯೆ ತುಂಬಾ ಸೀಮಿತವಾಗಿದೆ. ಇತ್ತೀಚೆನ ದಿನಗಳಲ್ಲಿ ಧನಂಜಯ್ ಅಭಿನಯದ ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿಬಂದ ' ರತ್ನನ್ ಪ್ರಪಂಚ,' 'ಫೋರ್ ವಾಲ್ಸ್','ಅಮೃತ ಅಪಾರ್ಟ್ಮೆಂಟ್ಸ್' ಹೀಗೆ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ OTT ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವದರಲ್ಲಿ ಯಶಸ್ವಿಗೊಂಡಿದೆ.

    ಲೋಕಲ್ OTTಗಳಲ್ಲೇ ಬಿಡುಗಡೆ..

    ಲೋಕಲ್ OTTಗಳಲ್ಲೇ ಬಿಡುಗಡೆ..

    OTT ನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ತೀರಾ ನೀರಸವಾಗಿದೆ. ಹೊಸಬರ ಮತ್ತು ಸಣ್ಣ ಬಜೆಟ್ ಚಿತ್ರಗಳು ಎಲ್ಲೋ ಒಂದು ಕಡೆ ಇತ್ತ ಥಿಯೇಟರ್ ಗಳಿಗೆ ಬರುವ ಸಾಮಾನ್ಯ ಪ್ರೇಕ್ಷಕನಿಗೂ ರುಚಿಸುತ್ತಿಲ್ಲ, ಅತ್ತ OTT ಕಂಟೆಂಟ್ ನೋಡುವಂತಹ ಪ್ರೇಕ್ಷಕರಿಗೂ ಕೂಡ ಹತ್ತಿರ ವಾಗುತ್ತಿಲ್ಲ. ಹೀಗಾಗಿ ಇತ್ತೀಚೆಗೆ ತಲೆಯೆತ್ತಿರುವ ಒಂದಷ್ಟು ಲೋಕಲ್ OTT ಪ್ಲಾಟ್ಫಾರ್ಮ್ ಗಳಲ್ಲಿ ಇಲ್ಲ ಯುಟ್ಯೂಬ್ ಚಾನಲ್ ಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇಲ್ಲಿಯೂ ಕೂಡ ಆಶಾದಾಯಕವಾದ ಫಲಿತಾಂಶ ಕಂಡು ಬರುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಲೋ ಬಜೆಟ್ ಚಿತ್ರಗಳು ಕನ್ನಡದಿಂದ ಸಂಪೂರ್ಣವಾಗಿ ಕಣ್ಮರೆಯಾಗುವಂತಹ ಕಾಲ ಬರಬಹುದು.

    English summary
    Newcomer's films are not standing in the theaters and OTT platforms are not keen in buying them. Most of the recently released newcomer's films fail to register success at the box office.
    Tuesday, May 24, 2022, 15:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X