twitter
    For Quick Alerts
    ALLOW NOTIFICATIONS  
    For Daily Alerts

    ಬದಲಾದ ಡಬ್ಬಿಂಗ್ ಲೋಕ; ಧ್ವನಿ ಕಲಾವಿದರ ಬದುಕು ಹೇಗಿದೆ?

    |

    ಒಂದು ಕಾಲವಿತ್ತು ಬೇರೆ ಭಾಷೆಯ ಸಿನಿಮಾಗಳು ಮತ್ತು ಧಾರಾವಾಹಿಗಳನ್ನು ಕನ್ನಡಿಗರು ಮೂಲ ಭಾಷೆಯಲ್ಲೇ ನೋಡಿ ಆನಂದಿಸಬೇಕಿತ್ತು. ಆದರೀಗ ಪರಿಸ್ಥಿತಿ ಹಾಗಿಲ್ಲ, ಸಾಕಷ್ಟು ಬದಲಾಗಿದೆ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡದಲ್ಲೇ ನೋಡಬಹುದಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಸಹ ಅಸ್ತು ಎಂದಿದೆ.

    ಡಬ್ಬಿಂಗ್ ವಿರುದ್ಧದ ಹೋರಾಟ ಇಂದು ನಿನ್ನೆಯದಲ್ಲ. ಈಗಲೂ ವಿರೋಧ ಕೇಳಿಬರುತ್ತಿದೆ. ಆದರೆ ಸುಪ್ರೀಂ ಕೋರ್ಟ್ ತೀರ್ಪು ಡಬ್ಬಿಂಗ್ ವಿರುದ್ಧ ಹೋರಾಟಗಾರ ಧ್ವನಿ ಅಡಗಿಸಿದೆ. ಡಬ್ಬಿಂಗ್ ಗೆ ಮುಕ್ತ ಅವಕಾಶ ಸಿಕ್ಕ ಬಳಿಕ ಡಬ್ಬಿಂಗ್ ಲೋಕದಲ್ಲಿ ದೊಡ್ಡ ಬದಲಾವಣೆಯೇ ಆಗಿದೆ. ಕೆಲವೇ ಕೆಲವು ಧ್ವನಿ ಕಲಾವಿದರಿದ್ದ ಡಬ್ಬಿಂಗ್ ಪ್ರಪಂಚದಲ್ಲಿ ಸಾಕಷ್ಟು ಮಂದಿ ಹುಟ್ಟಿಕೊಂಡಿದ್ದಾರೆ. 'ಧ್ವನಿ ಕಲಾವಿದರು' ಮಾತ್ರ ಇದ್ದ ಜಾಗದಲ್ಲಿ ನಟ-ನಟಿಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರದವರು ಸಹ ಧ್ವನಿ ಪರೀಕ್ಷೆಗೆ ಮುಂದಾಗಿದ್ದಾರೆ.

    ಮೊದಲು ಡಬ್ಬಿಂಗ್ ಕಲಾವಿದರು ಎಂದರೆ ಕೇವಲ ಸ್ವಮೇಕ್ ಸಿನಿಮಾಗಳಿಗೆ ಮಾತ್ರ ಧ್ವನಿ ನೀಡುತ್ತ ಇಂಪಾದ ಕಂಠದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೀಗ ಹಾಗಿಲ್ಲ ಬೇರೆ ಭಾಷೆಯ ಸಿನಿಮಾ ಮತ್ತು ಧಾರಾವಾಹಿಗಳಿಗೂ ಧ್ವನಿ ನೀಡುವ ಮೂಲಕ ಡಬ್ಬಿಂಗ್ ಲೋಕದಲ್ಲಿ ಹೊಸ ಬದಲಾವಣೆ ತಂದಿದ್ದಾರೆ. ಇದನ್ನು ಬದಲಾವಣೆ ಎಂದು ಕರೆಯಬಹುದಾ ಅಥವಾ ಬಲವಂತದ ಹೇರಿಕೆ ಎನ್ನಬಹುದಾ ಅಥವಾ ಸ್ವಮೇಕ್ ಗೆ ಎದುರಾದ ಸವಾಲು ಎಂದು ಕರೆಯಬಹುದಾ? ಎಲ್ಲವೂ ಹೌದು. ಈ ಬಗ್ಗೆ ಫಿಲ್ಮಿ ಬೀಟ್ ಕನ್ನಡ ಮತ್ತಷ್ಟು ಆಳಕ್ಕೆ ಇಳಿದು ಗಮನಿಸಿದಾಗ ಒಂದಿಷ್ಟು ಅಂಶಗಳು ಬಹಿರಂಗವಾಗಿದೆ. ಮುಂದೆ ಓದಿ..

    ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದ್ದು ನಿಜ

    ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದ್ದು ನಿಜ

    ಡಬ್ಬಿಂಗ್ ಗೆ ಮುಕ್ತವಾದ ಅವಕಾಶ ಸಿಕ್ಕಿದ ಮೇಲೆ ಸಹಜವಾಗಿ ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಅನೇಕ ಡಬ್ಬಿಂಗ್ ಸಿನಿಮಾಗಳು ಮತ್ತು ಧಾರಾವಾಹಿಗಳು ಕನ್ನಡದಲ್ಲಿ ರಾಜರೋಷವಾಗಿ ಪ್ರಸಾರವಾಗುತ್ತಿವೆ. ಬೇರೆ ಬೇರೆ ಭಾಷೆಯ ಸಿನಿಮಾಗಳು ಕನ್ನಡಿಗರ ಮನೆ ಮನಗಳಿಗೆ ತಲುಪುತ್ತಿವೆ. ಹೀಗಿರುವಾಗ ಸಹಜವಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಡಬ್ಬಿಂಗ್ ಕಲಾವಿದರು ಮಾತ್ರವಲ್ಲದೆ ಸಿನಿಮಾ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡುವ ಅನೇಕರು ಧ್ವನಿ ನೀಡುತ್ತಿದ್ದಾರೆ.

     ಲಾಕ್ ಡೌನ್ ನಂತರದ ಪರಿಸ್ಥಿತಿ ಮತ್ತಷ್ಟು ಬದಲಾಗಿದೆ

    ಲಾಕ್ ಡೌನ್ ನಂತರದ ಪರಿಸ್ಥಿತಿ ಮತ್ತಷ್ಟು ಬದಲಾಗಿದೆ

    ಲಾಕ್ ಡೌನ್ ಬಳಿಕ ಡಬ್ಬಿಂಗ್ ಲೋಕ ಮತ್ತಷ್ಟು ಬದಲಾಗಿದೆ. ಲಾಕ್ ಡೌನ್ ಡಬ್ಬಿಂಗ್ ಕಲಾವಿದರಿಗೆ ಸುವರ್ಣ ಅವಕಾಶ ಎಂದರು ತಪ್ಪಾಗಲ್ಲ. ಈ ಸಮಯದಲ್ಲಿ ಬೇರೆ ಭಾಷೆಯ ಸಿನಿಮಾ ಮತ್ತು ಧಾರಾವಾಹಿಗಳನ್ನು ಕನ್ನಡಕ್ಕೆ ತಂದು ಸುಲಭವಾಗಿ ಡಬ್ ಮಾಡಿ ಪ್ರಸಾರ ಮಾಡುವ ಪ್ರವೃತ್ತಿ ಜಾಸ್ತಿ ಆಯಿತು. ಪ್ರೇಕ್ಷಕರು ಸಹ ಇದನ್ನು ಒಪ್ಪಿಕೊಂಡಿದ್ದಾರೆ. ಲಾಕ್ ಡೌನ್ ಬಳಿಕ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿ ಮತ್ತು ಸಿನಿಮಾಗಳೇ ಹೆಚ್ಚಾಗಿ ರಾರಾಜಿಸುತ್ತಿವೆ. ಕಷ್ಟಪಟ್ಟು ಸಿನಿಮಾ ಮತ್ತು ಧಾರಾವಾಹಿಗಳನ್ನು ಮಾಡುವುದಕ್ಕಿಂತ ಡಬ್ಬಿಂಗ್ ಸರಳ ಮತ್ತು ಸುಲಭ ಸೂತ್ರ ಎನ್ನುವ ನೀತಿಯನ್ನು ಅಳವಡಿಸಿಕೊಂಡು ಬಿಟ್ಟಿವೆ.

     ಕುಗ್ಗಿದ ಗುಣಮಟ್ಟ

    ಕುಗ್ಗಿದ ಗುಣಮಟ್ಟ

    ಡಬ್ಬಿಂಗ್ ಕಲಾವಿದರು ಎಂದರೇ ಕೇವಲ ಧ್ವನಿ ನೀಡುವುದು ಮಾತ್ರವಲ್ಲ. ಧ್ವನಿಯ ಜೊತೆಗೆ ನಟನೆ ಸಹ ಮಾಡಬೇಕಿತ್ತು. ಸ್ವಮೇಕ್ ಸಿನಿಮಾಗಳಿಗೆ ಡಬ್ ಮಾಡುವಾಗ ಭಾಷೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುತ್ತಾ, ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಪಕ್ಕದಲ್ಲೇ ಕುಳಿತು ಹೀಗೆ ಬೇಕು ಎಂದು ಹೇಳಿಮಾಡಿಸುತ್ತಿದ್ದರು. ಆಯಾಯ ಕಲಾವಿದರ ಅಭಿನಯಕ್ಕೆ ತಕ್ಕಹಾಗೆ ಧ್ವನಿ ನೀಡಬೇಕು. ಆದರೆ ಬೇರೆ ಭಾಷೆಯ ಸಿನಿಮಾ ಮತ್ತು ಧಾರಾವಾಹಿಗಳನ್ನು ಡಬ್ ಮಾಡುವಾಗ ಇದೆಲ್ಲ ಇಲ್ಲ. ಈಗ ಅನುವಾದ ಮಾಡಿದ ಸ್ಕ್ರಿಪ್ಟ್ ಗೆ ಧ್ವನಿ ತುಂಬಬೇಕಿದೆ ಅಷ್ಟೆ.

     ತಪ್ಪಿದ ಸಾಹಿತ್ಯ ಮತ್ತು ವಾಕ್ಯಗಳು

    ತಪ್ಪಿದ ಸಾಹಿತ್ಯ ಮತ್ತು ವಾಕ್ಯಗಳು

    ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಹೆಚ್ಚಾಗಿ ವಾಕ್ಯಗಳು ತಪ್ಪಾಗಿರುತ್ತವೆ. ಕನ್ನಡ ಸ್ಪಷ್ಟತೆಯೇ ಇರುವುದಿಲ್ಲ. ಭಾವನೆಯ ಕೊರತೆ ಸಹ ಎದ್ದು ಕಾಣುತ್ತಿದೆ. ಅನುವಾದಕ್ಕಿಂತ ಭಾವಾಂತರ ಮಾಡಬೇಕು ಎಂದು ಅನೇಕರು ಹೇಳುತ್ತಾರೆ. ಆದರೆ ಹಾಗೆ ಆಗುತ್ತಿಲ್ಲ. ಮೊದಮೊದಲು ಈ ರೀತಿಯ ಅನುವಾದಗಳನ್ನು ಕನ್ನಡಿಗರು ವಿರೋಧಿಸುತ್ತಿದ್ದರು, ಡಬ್ಬಿಂಗ್ ಸಿನಿಮಾಗಳನ್ನು ನೋಡಲು ಕಷ್ಟವಾಗುತ್ತಿದೆ ಎನ್ನುತ್ತಿದ್ದರು. ಆದರೀಗ ಅದಕ್ಕೆ ಒಗ್ಗಿಕೊಂಡು ಅದರ ಜೊತೆಯೇ ಸಾಗುತ್ತಿದ್ದಾರೆ.

     ಖ್ಯಾತ ಡಬ್ಬಿಂಗ್ ಕಲಾವಿದೆ ದೀಪಾ ಹೇಳುವುದೇನು?

    ಖ್ಯಾತ ಡಬ್ಬಿಂಗ್ ಕಲಾವಿದೆ ದೀಪಾ ಹೇಳುವುದೇನು?

    ಈ ಬಗ್ಗೆ ಕನ್ನಡ ಖ್ಯಾತ ಡಬ್ಬಿಂಗ್ ಕಲಾವಿದೆ ದೀಪಾ ಅವರು 'ಅಂದು ಜಾಹೀರಾತುಗಳನ್ನು ಕನ್ನಡಕ್ಕೆ ಡಬ್ ಆಗುವ ಸಮಯದಲ್ಲೂ ತುಂಬಾ ತಪ್ಪುಗಳು ಆಗುತ್ತಿತ್ತು. ಎಲ್ಲಿ ಚಿತ್ರೀಕರಣ ಮಾಡುತ್ತಿದ್ದರು ಎನ್ನುವುದೇ ಗೊತ್ತಿರುತ್ತಿರಲ್ಲ. ಅಲ್ಲೆ ಸ್ವಲ್ಪ ಕನ್ನಡ ಬರುವವರ ಬಳಿ ಅನುವಾದ ಮಾಡಿಸುತ್ತಿದ್ದರು. ಅದನ್ನು ಕೇಳಲು ತುಂಬಾ ಕೆಟ್ಟದಾಗಿ ಇರುತ್ತಿತ್ತು. ನಾನು ಯಾವುದೇ ಡಬ್ಬಿಂಗ್ ಧಾರಾವಾಹಿ ಮತ್ತು ಸಿನಿಮಾ ನೋಡಲ್ಲ. ಮನಸ್ಸಿಗೆ ಹತ್ತಿರವಾಗಿದ್ದೇ ಇಲ್ಲ. ನಾನು ಮೂಲ ಭಾಷೆಯಲ್ಲೇ ಸಿನಿಮಾ ನೋಡಲು ಇಷ್ಟ ಪಡುತ್ತೇನೆ' ಎನ್ನುತ್ತಾರೆ.

    ಮುಂದೇನು?

    ಮುಂದೇನು?

    ಸದ್ಯದ ಮಟ್ಟಿಗೆ ಡಬ್ಬಿಂಗ್ ಸಿನಿಮಾ ಮತ್ತು ಧಾರಾವಾಹಿಗಳು ಹೆಚ್ಚಾಗಿ ಬರುತ್ತಿವೆ. ಇದರಿಂದ ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಜಾಸ್ತಿ ಇದೆ. ಆದರೆ ಮುಂದೆಯೂ ಪರಿಸ್ಥಿತಿ ಹೀಗೆ ಇರುತ್ತಾ..? ಎಂದು ಯೋಚಿಸಲು ಸಾಧ್ಯವಿಲ್ಲ. ಯಾಕೆಂದ್ರೆ ಉತ್ತಮ ಗುಣಮಟ್ಟದ ಸ್ವಮೇಕ್ ಸಿನಿಮಾಗಳು ಜಾಸ್ತಿ ಆದರೆ ಡಬ್ಬಿಂಗ್ ಸಿನಿಮಾ ಮತ್ತು ಧಾರಾವಾಹಿಗಳನ್ನು ಪ್ರೇಕ್ಷಕರು ಯಾಕೆ ನೋಡುತ್ತಾರೆ. ಸಹಜವಾಗಿ ಡಬ್ಬಿಂಗ್ ಸಿನಿಮಾಗಳ ಮೇಲಿನ ಆಸಕ್ತಿ ಕಡಿಮೆಯಾಗುತ್ತೆ. ಆಗ ಡಬ್ಬಿಂಗ್ ಕಲಾವಿದರ ಕಥೆ ಏನು ಎನ್ನುವುದು ಪ್ರಶ್ನೆಯಾಗಿದೆ.

    ಈ ಬಗ್ಗೆ ದೀಪ ಅವರನ್ನು ಕೇಳಿದ್ರೆ, ಕಾದುನೋಡಬೇಕು ಎನ್ನುತ್ತಾರೆ. 'ಈಗ ಬಿರುಗಾಳಿ ಬಂದು ಧೂಳ್ ಎದ್ದ ಹಾಗಾಗಿದೆ. ಒಮ್ಮೆ ಎಲ್ಲಾ ಸೆಟಲ್ ಆದಮೇಲೆ ಏನಾಗುತ್ತೆ ನೋಡಬೇಕು. ಆಗ ಈ ಡಬ್ಬಿಂಗ್ ಕಲಾವಿದರು ಎಲ್ಲಾ ಎಲ್ಲಿ ಹೋಗುತ್ತಾರೆ. ನಟನೆಗೆ ವಾಪಸ್ ಹೋಗುತ್ತಾರಾ ಎಂದು ಕಾದು ನೋಡಬೇಕು' ಎಂದು ಹೇಳಿದ್ದಾರೆ.

    English summary
    Huge demand for dubbing artist, here is the detailed information about dubbing artist situation.
    Thursday, February 4, 2021, 16:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X