ವಿಲನ್ ಅಂದ್ರೆ ಅಣ್ಣಾವ್ರಿಗೆ ಅಷ್ಟು ಇಷ್ಟ ಯಾಕೆ? ಡಾ. ರಾಜ್ ವಿಲನ್ ಆಗಿ ನಟಿಸಿದ್ದ ಏಕೈಕ ಸಿನಿಮಾ ಯಾವ್ದು?
ಆಡು ಮುಟ್ಟಿದ ಸೊಪ್ಪಿಲ್ಲ, ಅಣ್ಣಾವ್ರು ಮಾಡದ ಪಾತ್ರಗಳಿಲ್ಲ, ಈ ಮಾತು ಕ್ಲೀಷೆ ಅನಿಸಬಹುದು. ಆದರೆ ಇದು ಸರ್ವಕಾಲಕ್ಕೂ ಸತ್ಯವಾದ ಮಾತು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನೂರಾರು ಪಾತ್ರಗಳಲ್ಲಿ ನಟಿಸಿ ಡಾ. ರಾಜ್ ಮೋಡಿ ಮಾಡಿದ್ದರು. ದ್ವಿಪಾತ್ರ, ತ್ರಿಪಾತ್ರಗಳಲ್ಲಿ ಕೂಡ ನಟಿಸಿ ಜಾದೂ ಮಾಡಿದ್ದರು. ಅಣ್ಣಾವ್ರ ರೀತಿ ವಿಭಿನ್ನ ಶೈಲಿಯ ಸಿನಿಮಾಗಳಲ್ಲಿ ನಟಿಸಿ ಗೆದ್ದ ಮತ್ತೊಬ್ಬ ನಟ ಇಲ್ಲ ಅಂದ್ರೆ ತಪ್ಪಾಗಲ್ಲ.
ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಭಕ್ತಿ ಪ್ರಧಾನ, ಬಾಂಡ್ ಹೀಗೆ ನಾನಾ ರೀತಿಯ ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ವಿಜೃಂಭಿಸಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದರೂ ಬಹಳ ಸಹಜ ನಟನೆ ಅವರದ್ದು. ಓವರ್ ಆಕ್ಟಿಂಗ್ ಇರುತ್ತಿರಲಿಲ್ಲ. ಆ ಪಾತ್ರವೇ ತಾವಾಗಿ ಜೀವಿಸುತ್ತಿದ್ದರು. ಎನ್‌ಟಿಆರ್, ಎಎನ್‌ಆರ್, ಅಮಿತಾಬ್ ಬಚ್ಚನ್, ಶಿವಾಜಿ ಗಣೇಶನ್‌ರಂತಹ ದಿಗ್ಗಜ ನಟರೇ ಅಣ್ಣಾವ್ರ ಅಭಿಮಾನಿಗಳಾಗಿದ್ದರು.

ನಟಸಾರ್ವಭೌಮ ಡಾ. ರಾಜ್‌ಕುಮಾರ್ ಹೀಗೆ ನೂರಾರು ಪಾತ್ರಗಳನ್ನು ಮಾಡಿದ್ದರೂ ಸರ್ವಜ್ಞನ ಪಾತ್ರ ಮಾಡುವುದು ಅವರಿಗೆ ನಿಜಕ್ಕೂ ಸವಾಲಾಗಿತ್ತಂತೆ. ಈ ವಿಚಾರವನ್ನು ಖುದ್ದು ಅಣ್ಣಾವ್ರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಹೆಚ್ಚು ಅಬ್ಬರ ಇಲ್ಲದೇ ಒಬ್ಬ ಸಂತನ ರೀತಿ ನಟಿಸುವುದು ಅವರಿಗೆ ಕಷ್ಟವಾಗಿತ್ತಂತೆ. ಅಂದಹಾಗೆ ಡಾ. ರಾಜ್ ನೆಗೆಟಿವ್ ಶೇಡ್ ಇದ್ದ ಪಾತ್ರಗಳಲ್ಲಿ ಕೂಡ ನಟಿಸಿದ್ದಾರೆ. ಅಣ್ಣನಾಗಿ, ತಮ್ಮನಾಗಿ, ಪತಿಯಾಗಿ, ಭಕ್ತನಾಗಿ, ಕಳ್ಳನಾಗಿ, ಪೊಲೀಸ್ ಅಧಿಕಾರಿಯಾಗಿ, ರಾಜನಾಗಿ, ಕವಿಯಾಗಿ, ಶ್ರೀಕೃಷ್ಣನಾಗಿ, ಶ್ರೀರಾಮನಾಗಿ, ಅಸುರನಾಗಿ, ಸಿಐಡಿ ಆಗಿ ನಾನಾ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದರು. 'ಲಗ್ನಪತ್ರಿಕೆ' ರೀತಿಯ ಸಂಪೂರ್ಣ ಹಾಸ್ಯಪ್ರಧಾನ ಚಿತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಹೆಣ್ಣಿನ ವೇಷದಲ್ಲಿ ಕೂಡ ತೆರೆಮೇಲೆ ಬಂದಿದ್ದರು.
ಹೀಗೆ ನೂರಾರು ಸಿನಿಮಾಗಳಲ್ಲಿ, ತರಹೇವಾರಿ ಪಾತ್ರಗಳಲ್ಲಿ ನಟಿಸಿದರೂ ಅಣ್ಣಾವ್ರಿಗೆ ವಿಲನ್ ಪಾತ್ರ ಅಂದ್ರೆ ಬಹಳ ಇಷ್ಟವಂತೆ. ನೆಗೆಟಿವ್ ಶೇಡ್ ಪಾತ್ರಗಳಲ್ಲಿ ಮುತ್ತುರಾಜ್ ನಟಿಸಿರುವುದು ಗೊತ್ತೇಯಿದೆ. ಆದರೆ ವಿಲನ್ ಆಗಿ ಒಂದೇ ಒಂದು ಚಿತ್ರದಲ್ಲಿ ಅಬ್ಬರಿಸಿದ್ದರು. ವಿಲನ್ ಅಂದಾಕ್ಷಣ 'ಭಕ್ತ ಪ್ರಹ್ಲಾದ' ಚಿತ್ರದ ಹಿರಣ್ಯಕಶಿಪು ಪಾತ್ರ ಎಂದು ಬಹಳಷ್ಟು ಜನ ಅಂದುಕೊಳ್ಳಬಹುದು. ಆದರೆ ಅದು ಸಂಪೂರ್ಣ ವಿಲನ್ ಪಾತ್ರ ಎನ್ನಲು ಸಾಧ್ಯವಿಲ್ಲ. ಅದು ಹಿಂದೂ ಪುರಾಣಗಳಲ್ಲಿ ಬರುವ ರಾಕ್ಷಸರ ರಾಜನ ಕಥೆ. ಪ್ರತಿನಾಯಕನಾಗಿ ಇಡೀ ಸಿನಿಮಾ ಆವರಿಸಿಕೊಂಂಡಿದ್ದರು. ಆದರೆ 'ಸತಿಶಕ್ತಿ' ಚಿತ್ರದಲ್ಲಿ ಮಂತ್ರವಾದಿಯಾಗಿ ಸಂಪೂರ್ಣ ವಿಲನ್ ಪಾತ್ರದಲ್ಲಿ ಅಣ್ಣಾವ್ರು ಅಬ್ಬರಿಸಿದ್ದರು.

1963ರಲ್ಲಿ 'ಸತಿಶಕ್ತಿ' ಸಿನಿಮಾ ತೆರೆಗೆ ಬಂದಿತ್ತು. ಕಣಗಲ್ ಪ್ರಭಾಕರ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ರಕ್ತಾಕ್ಷ, ವಿರೂಪಾಕ್ಷ ಆಗಿ ಡಾ. ರಾಜ್ ದ್ವಿಪಾತ್ರದಲ್ಲಿ ನಟಿಸಿದ್ದರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಈ ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ವಿಲನ್ ಪಾತ್ರಗಳಂದ್ರೆ ಅಣ್ಣಾವ್ರಿಗೆ ಬಹಳ ಇಷ್ಟವಾಗಿತ್ತು. ಕಾರಣ ಇಡೀ ಕಥೆಯಲ್ಲಿ ವಿಲನ್ ಆಗಿರುವ ಆತ ಕೊನೆಗೆ ಒಳ್ಳೆಯವನಾಗಿ ಬದಲಾಗುತ್ತಾನೆ. ಹೀಗೆ ಮನಪರಿವರ್ತನೆ ಆಗುವ ಅಂಶವನ್ನು ಡಾ. ರಾಜ್‌ಕುಮಾರ್ ಇಷ್ಟಪಡುತ್ತಿದ್ದರು. ಹಾಗಾಗಿ ವಿಲನ್ ಪಾತ್ರ ಎಂದರೆ ವಿಶೇಷ ಆಸಕ್ತಿ ಅವರಿಗೆ ಇರುತ್ತಿತ್ತು. ಮೊದಲಿಗೆ ಈ ಚಿತ್ರದಲ್ಲಿ ರಕ್ತಾಕ್ಷ ಎಂಬ ವಿಲನ್ ಪಾತ್ರ ಬೇರೆಯವರು ಮಾಡಬೇಕಿತ್ತಂತೆ. ಕಾರಣಾಂತರಗಳಿಂದ ಅಣ್ಣಾವ್ರೇ ಆ ಪಾತ್ರವನ್ನು ಮಾಡುವಂತಾಗಿತ್ತು. ಮಂತ್ರವಾದಿಯಾಗಿ ಅವರು ಬೀಜಾಕ್ಷರಗಳನ್ನು ಹೇಳಿರುವ ಪರಿ ಮರೆಯೋಕೆ ಸಾಧ್ಯವಿಲ್ಲ.
ಅವತ್ತಿನ ಕಾಲಕ್ಕೆ 8 ಲಕ್ಷ ರೂ. ಬಜೆಟ್‌ನಲ್ಲಿ 'ಸತಿಶಕ್ತಿ' ಚಿತ್ರ ನಿರ್ಮಾಣವಾಗಿತ್ತು.'ಸತಿಶಕ್ತಿ' ಚಿತ್ರದ ಚಿತ್ರೀಕರಣದ ವೇಳೆ ಅಣ್ಣಾವ್ರು ಹಾಗೂ ಪುಟ್ಟಣ್ಣ ಕಣಗಾಲ್ ಮಧ್ಯೆ ಮನಸ್ತಾಪವಾಗಿತ್ತು. ಸನ್ನಿವೇಶವೊಂದರಲ್ಲಿ ಎರಡ್ಮೂರು ಟೇಕ್ ಮಾಡಿದ್ರು ಸರಿಯಾಗಿ ಬರುತ್ತಿರಲಿಲ್ಲವಂತೆ. ಆಗ ಸಹ ನಿರ್ದೇಶಕರಾಗಿದ್ದ ಪುಟ್ಟಣ್ಣ, "ಈ ರೀತಿ ಅಲ್ಲ, ಆ ರೀತಿ ಮಾಡಬೇಕಿತ್ತು" ಅಂದಿದ್ರಂತೆ. ಕೂಡಲೇ ಅಣ್ಣಾವ್ರು ಒಮ್ಮೆ ನೀವೇ ಮಾಡಿ ತೋರಿಸಿ ಯಾವ ರೀತಿ, ನಾನು ನೋಡಿ ಮಾಡ್ತೀನಿ" ಎಂದು ಉತ್ತರಿಸಿದ್ದರಂತೆ. ಕೂಡಲೇ "ನಾನು ನಟಿಸಿ ತೋರಿಸುವಂತಿದ್ದರೆ ನಾನ್ಯಾಕೆ ನಿರ್ದೇಶಕನಾಗ್ತಿದ್ದೆ.. ನಾನು ನಿರ್ದೇಶಕ, ನೀನು ನಟ, ನೀನು ನಟಿಸಬೇಕು" ಎಂದುಬಿಟ್ಟಿದ್ರಂತೆ.. ನಟಿಸೋಕೆ ಬಂದ್ರೆ ತಾನೇ ನಿರ್ದೇಶಕರು, ಇಲ್ಲದಿದ್ರೆ ಹೇಗೆ ನಿರ್ದೇಶಕರಾಗ್ತೀರಾ ಎಂದು ಅಣ್ಣಾವ್ರು ಹೇಳಿ ಸುಮ್ಮನಾಗಿದ್ರಂತೆ..
ಕೊಂಚ ಸಮಯದ ಬಳಿಕ ಅಣ್ಣಾವ್ರು ಪಶ್ಚಾತಾಪಪಟ್ಟಿದ್ದರಂತೆ.. ಚಿತ್ರದ ಮತ್ತೊಬ್ಬ ಸಹ ನಿರ್ದೇಶಕ ಕೆ. ಎಸ್. ಎಲ್ ಸ್ವಾಮಿ ಬಳಿ ಈ ಬಗ್ಗೆ ಮಾತನಾಡಿದ್ದರಂತೆ.. "ನಾನು ಆ ಮಾತು ನಾನು ಹೇಳಬಾರದಿತ್ತು. ನಿರ್ದೇಶಕರು ರೀ-ಟೇಕ್ ಕೇಳಿದಾಗ ನಾವು ಪದೇ ಪದೆ ನಟಿಸಿ ತೋರಿಸಬೇಕು.. ತಪ್ಪು ನನ್ನದೇ" ಎಂದು ಅಣ್ಣಾವ್ರು ಹೇಳಿಕೊಂಡಿದ್ದಾಗಿ ನಿರ್ದೇಶಕ ಕೆ. ಎಸ್. ಎಲ್ ಸ್ವಾಮಿ ಹೇಳಿದ್ದರು.


Click it and Unblock the Notifications











