06ಜನ ಅಕ್ಕ-ತಂಗಿಯರು ಒಬ್ಬ ಸಹೋದರ, ಕತ್ರಿನಾ ಕೈಫ್ ಬದುಕಿನ ಈ ವಿಚಾರ ನಿಮಗೆ ಗೊತ್ತಾ..?
ಕೇವಲ ಗ್ಲ್ಯಾಮರ್ ಮಾತ್ರ ಅಲ್ಲ ಅಭಿನಯದ ಗ್ರಾಮರ್ ಕೂಡ ಗೊತ್ತಿರಬೇಕು ಅನ್ನುವುದನ್ನೂ ಸಾಬೀತು ಮಾಡಿದವರು ಕತ್ರಿನಾ ಕೈಫ್. 1983ರಲ್ಲಿ ಇದೇ ದಿನದಂದು ಅದೆಲ್ಲೋ ಹಾಂಗ್ ಕಾಂಗ್‌ನಲ್ಲಿ ಜನ್ಮ ಪಡೆದು, ಇಲ್ಲಿ ಬೆಳೆದು ನಿಂತ ಕತ್ರಿನಾ ಕೈಫ್ ಬಾಲ್ಯ ಸುಖಕರವಾಗಿರಲಿಲ್ಲ. ಯಾಕೆಂದರೆ ಆಡುವ ವಯಸ್ಸಿನಲ್ಲಿ ತಂದೆ-ತಾಯಿ ಜಗಳ ನೋಡಿಕೊಂಡು ಬಂದವರು ಇವರು. ಹದಿಹರೆಯಕ್ಕೆ ಕಾಲಿಡುವಾಗ ಇವರ ತಂದೆ-ತಾಯಿ ವಿಚ್ಛೇದನ ಪಡೆದು ದೂರವಾದರು. ಹೀಗಾಗಿ ತಂದೆ-ತಾಯಿಯ ಪ್ರೀತಿ ಕತ್ರಿನಾಗೆ ಸಮವಾಗಿ ಸಿಗಲಿಲ್ಲ.
ಇನ್ನೂ ಇವರ ತಂದೆ-ತಾಯಿಗೆ ಕತ್ರಿನಾ ಒಬ್ಳೇ ಮಗಳಲ್ಲ. ಒಂದಲ್ಲಾ-ಎರಡಲ್ಲಾ ಬರೋಬ್ಬರಿ 8 ಜನ ಇವರೊಂದಿಗೆ ರಕ್ತ ಹಂಚಿಕೊಂಡು ಹುಟ್ಟಿದ್ದಾರೆ. ಇದೀಗ ಇವರ ಇಡೀ ಕುಟುಂಬದವರು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಆ ಪೈಕಿ ಕತ್ರಿನಾ ಭಾರತದಲ್ಲಿಯೇ ಬಿಡಾರ ಹೂಡಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ.

ಅಂದ್ಹಾಗೇ ಇವತ್ತು ಅಗಣಿತ ಅಭಿಮಾನಿಗಳನ್ನು ಹೊಂದಿರುವ, ಕೋಟ್ಯಂತರ ರೂಪಾಯಿಯ ಆಸ್ತಿಯನ್ನು ಹೊಂದಿರುವ ಕತ್ರಿನಾ.. ಮಾಡೆಲಿಂಗ್ ನಲ್ಲಿ ಮಿಂಚಲು ಶುರು ಮಾಡಿದ್ದು ಕೇವಲ 14ರ ಪ್ರಾಯದಲ್ಲಿ. 14ರ ಹರೆಯದಲ್ಲಿ ಇರುವಾಗಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಕ್ಯಾಟ್, ಮೊಟ್ಟ ಮೊದಲ ಬಾರಿಗೆ ಜ್ಯುವೆಲ್ಲರಿ ಕ್ಯಾಂಪೇನ್ ಮೂಲಕ ಮಾಡೆಲಿಂಗ್ ಲೋಕದಲ್ಲಿ ಮಿಂಚಲಾರಂಭಿಸಿದರು. ತದ ನಂತರ ಲಂಡನ್ ನಲ್ಲಿ ಮಾಡೆಲಿಂಗ್ ಮುಂದುವರಿಸಿದ ಕತ್ರಿನಾ 'ಲಾ ಸೆನ್ಞ್' ನ ಬ್ರ್ಯಾಂಡ್ ಆದರು.
ಹೀಗೆ ಕ್ಯಾಟ್ ವಾಕ್ ಮಾಡ್ತಾನೇ ಬಣ್ಣದ ಮೋಹ ಬೆಳೆಸಿಕೊಂಡ ಕತ್ರಿನಾ ಕೈಫ್, ಬಿ ಗ್ರೇಡ್ ಸಿನಿಮಾ ಮೂಲಕ ಬಾಲಿವುಡ್ಡಿಗೆ ಬಂದಿದ್ದು ದುರದೃಷ್ಟಕರ. ಗುಲ್ಶನ್ ಗ್ರೋವರ್ ಮತ್ತು ಅಮಿತಾಬ್ ಬಚ್ಚನ್ ಅವರೂ ಇದ್ದ 'ಬೂಮ್'ನಲ್ಲಿ ಕತ್ರಿನಾ ಅವರ ಮುಖದ ಬದಲು ಅವರ ಅಂಗಾಂಗಗಳನ್ನೇ 'ಜೂಮ್' ಮಾಡಿ ಮಾಡಿ ಅನೇಕರು ಆ ಕಾಲಕ್ಕೆ ನೋಡಿದರು. ಇನ್ನೂ ಇವತ್ತು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಕತ್ರಿನಾ ಆ ಕಾಲದಲ್ಲಿಯೇ ಸೌತ್ ಇಂಡಸ್ಟ್ರೀಯಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಅವರ ಜೊತೆ 'ಮಲ್ಲೀಶ್ವರಿ' ಹಾಗೂ 'ಅಲ್ಲರಿ ಪಿಡುಗು' ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದರ ನಡುವೆ ಮಲಯಾಳಂನಲ್ಲೂ ಮಿಂಚುವ ಪ್ರಯತ್ನ ಮಾಡಿದರು.

ದಿಕ್ಕು ದೆಸೆಯಲ್ಲದೇ ಕತ್ರಿನಾ ಕೈಫ್ ಅವರ ಬದುಕು ಸಾಗುತ್ತಿದ್ದ ಸಮಯದಲ್ಲಿಯೇ, ಅದೃಷ್ಟವಶಾತ್ ಸಲ್ಮಾನ್ ಖಾನ್ ಅವರ ಜೊತೆ ಸಾಂಗತ್ಯ ಬೆಳೆಯಿತು. 'ಮೈನೇ ಪ್ಯಾರ್ ಕ್ಯೂಂ ಕೀಯಾ' ಎಂಬ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಜೊತೆ ನಟಿಸಲು ಅವಕಾಶ ಸಿಕ್ತು. ಈ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಕ್ಲಿಕ್ ಆದ ತಕ್ಷಣ ಕ್ಯಾಟ್ ಗೆ ಅಕ್ಷಯ್ ಕುಮಾರ್ ಅವರ ಜೊತೆ ಒಂದೇ ವರ್ಷದಲ್ಲಿ ಎರಡು ಸಿನಿಮಾ ಮಾಡುವ ಯೋಗ ಕೂಡ ಕೂಡಿ ಬಂತು. ಇಲ್ಲಿಂದಾಚೆ ಹಿಂದೆ ತಿರುಗಿ ನೋಡದ ಕತ್ರಿನಾ ಒಂದಾದ ಮೇಲೊಂದು ಸಿನಿಮಾ ಮಾಡಿದರು. ಬಾಲಿವುಡ್‌ನ ಪ್ರಮುಖ ನಾಯಕಿಯಾಗಿ ಕೂಡ ಹೊರ ಹೊಮ್ಮಿದರು.
ಇವತ್ತು ಕತ್ರಿನಾ ಹೆಸರಿಗೆ ಒಂದು ಬೆಲೆ ಇದೆ. ಅವರಲ್ಲಿನ ಕಲೆಗೆ ಬಾಲಿವುಡ್ ಕೂಡ ಪ್ರೋತ್ಸಾಹ ನೀಡುತ್ತಾನೇ ಬಂದಿದೆ. ಇನ್ನೂ ಇದೆಲ್ಲದರ ನಡುವೆ ವಿಕ್ಕಿ ಕೌಶಲ್ ಜೊತೆ ಮದುವೆಯಾದ ಕತ್ರಿನಾ ಗರ್ಭಿಣಿ ಅನ್ನುವ ಅನುಮಾನ ಕೂಡ ಅನೇಕರಲ್ಲಿದೆ. ಆದರೆ ಅದೆಲ್ಲವೂ ಊಹಾಪೋಹ ಎಂದು ಖುದ್ದು ವಿಕ್ಕಿ ಕೌಶಲ್ ಸ್ಪಷ್ಟಪಡಿಸಿದ್ದಾರೆ. ಇಂಥಾ ಕತ್ರಿನಾ ಕೈಫ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.


Click it and Unblock the Notifications











