ನಯಾ ಪೈಸೆ ಸಂಭಾವನೆ ಇಲ್ಲದೇ ಆ ಕನ್ನಡ ರೀಮೇಕ್‌ನಲ್ಲಿ ನಟಿಸೋಕೆ ತಲೈವಾ ಒಪ್ಪಿದ್ಯಾಕೆ?
ಸೂಪರ್ ಸ್ಟಾರ್ ರಜನಿಕಾಂತ್ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ತಮ್ಮ ಕ್ರೇಜ್ ಹಾಗೂ ಸಿನಿಮಾಗಳ ಕಲೆಕ್ಷನ್‌ಗೆ ತಕ್ಕಂತೆ ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ. ಹಿಂದೆ ತಲೈವಾ ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆದಿರುವ ಬಗ್ಗೆ ವರದಿ ಆಗಿತ್ತು. ನಿರ್ಮಾಪಕರು ಕೂಡ ರಜನಿಕಾಂತ್ ಕೇಳಿದಷ್ಟು ಸಂಬಳ ಕೊಡಲು ಸಿದ್ಧರಿರುತ್ತಾರೆ.
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ರಜನಿಕಾಂತ್ ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದ ಮನೆ ಮಾತಾಗಿದ್ದಾರೆ. ಕೆಲವೊಮ್ಮೆ ನಿರ್ಮಾಪಕರ ಕಷ್ಟ ನೋಡಿ ಸಂಭಾವನೆ ಇಳಿಸಿಕೊಂಡಿರುವುದು, ನಿಧಾನವಾಗಿ ತೆಗೆದುಕೊಂಡಿರುವ ಉದಾಹರಣೆಗಳಿವೆ. ಯಾವುದೇ ಅಡ್ವಾನ್ಸ್ ಪಡೆಯದೇ ಚಿತ್ರದಲ್ಲಿ ನಟಿಸಿರುವುದು, ಲಾಭದಲ್ಲಿ ಶೇರ್ ಪಡೆದಿರುವುದು ಇದೆ. ತಮ್ಮ ಸಿನಿಮಾ ಸೋತಾಗ ವಿತರಕರ ನಷ್ಟ ಭರಿಸಿದ್ದಾರೆ. 'ಲಾಲ್ ಸಲಾಂ' ಚಿತ್ರಕ್ಕಾಗಿ 40 ನಿಮಿಷಗಳ ಪಾತ್ರಕ್ಕೆ 40 ಕೋಟಿ ಸಂಭಾವನೆ ಪಡೆದಿದ್ದಾಗಿ ಸುದ್ದಿ ಆಗಿತ್ತು.

ಸದ್ಯ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ಇನ್ನು ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ಇದೀಗ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟ ಉಪೇಂದ್ರ ಸಹ ನಟಿಸುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದೆ. 'ಜೈಲರ್' ಸಕ್ಸಸ್ ಬಳಿಕ ಈ ಎರಡೂ ಚಿತ್ರಗಳಿಗೆ ತಲೈವಾ ಭಾರೀ ಸಂಭಾವನೆ ಪಡೆದಿದ್ದಾರೆ.
70ರ ದಶಕದ ಕೊನೆಗೆ ರಜನಿಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ 80 ಹಾಗೂ 90ರ ದಶಕದಲ್ಲಿ ಬಹುಬೇಡಿಕೆಯ ನಟರಾಗಿ ಗುರ್ತಿಸಿಕೊಂಡರು. ಖಳನಟನಾಗಿ ಬಂದ ಶಿವಾಜಿ ರಾವ್ ಮುಂದೆ ಹೀರೊ ಆಗಿ ಗೆದ್ದರು. ಭಾರೀ ಕ್ರೇಜ್ ಸಂಪಾದಿಸಿದರು. ಅದ್ಯಾವ ಮಟ್ಟಿಗೆ ಅಂದರೆ ಬಾಲಿವುಡ್ ಮಂದಿ ಕೂಡ ಕರೆದು ಅವಕಾಶ ಕೊಡುವಂತಾಯಿತು.

ರಜನಿಕಾಂತ್ ಸಹಾಯ ಗುಣದ ಬಗ್ಗೆ ಸಾಕಷ್ಟು ಜನ ಮಾತನಾಡಿದ್ದಾರೆ. ಇವತ್ತಿಗೂ ತಲೈವಾ ಸಹಾಯವನ್ನು ನೆನಪಿಸಿಕೊಳ್ಳುವವರು ಇದ್ದಾರೆ. 90ರ ದಶಕದ ಆರಂಭದಲ್ಲಿ ಭಾರೀ ಡಿಮ್ಯಾಂಡ್ ಇದ್ದಾಗ ಯಾವುದೇ ಸಂಭಾವನೆ ಪಡೆಯದೇ ತಲೈವಾ ಒಂದು ಚಿತ್ರದಲ್ಲಿ ನಟಿಸಿದ್ದರು. ಅದು ಕೂಡ ಸಿನಿ ಕಾರ್ಮಿಕರ ಸಹಾಯಕ್ಕಾಗಿ ಇಂತಾದೊಂದು ನಿರ್ಧಾರ ಕೈಗೊಂಡಿದ್ದರು.
ಸಂಭಾವನೆ ಇಲ್ಲದೇ ನಟಿಸಿದ್ದು ಮಾತ್ರವಲ್ಲ, ಚಿತ್ರದ ನಿರ್ಮಾಪಕನಂತೆ ಕಡಿಮೆ ಖರ್ಚಿನಲ್ಲಿ ಸಿನಿಮಾ ನಿರ್ಮಾಣವಾಗಬೇಕು ಎಂದು ಮುತುವರ್ಜಿ ವಹಿಸಿದ್ದರು. ತಾವೇ ಹತ್ತಿರ ನಿಂತು ಸಿನಿಮಾ ಮೇಕಿಂಗ್ ನೋಡಿಕೊಂಡಿದ್ದರು. ಸಾಹಸ ಸನ್ನಿವೇಶವೊಂದರಲ್ಲಿ ಸಹ ನಟ ದೊಡ್ಡ ಗಾಜಿನ ಮೇಲೆ ಬೀಳಬೇಕಿತ್ತಂತೆ. ಆಗ ರಜನಿಕಾಂತ್ ತಡೆದು ಬೇಡ, ಇದರಿಂದ ನಿರ್ಮಾಪಕರಿಗೆ ಹೊರೆ ಆಗುತ್ತದೆ ಎಂದಿದ್ದರಂತೆ.
ಅಂದಹಾಗೆ ರಜನಿಕಾಂತ್ ಹೀಗೆ ಸಂಭಾವನೆ ಇಲ್ಲದೇ ನಟಿಸಿದ ಚಿತ್ರದ ಹೆಸರು 'ಪಾಂಡಿಯನ್'. ಕನ್ನಡದಲ್ಲಿ ಪ್ರಭಾಕರ್ ನಟಿಸಿದ 'ಬಾಂಬೆ ದಾದ' ಚಿತ್ರದ ರೀಮೆಕ್ ಇದಾಗಿತ್ತು. ಎಸ್. ಪಿ ಮುತ್ತುರಾಮನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ರಜನಿಕಾಂತ್ ಹಾಗೂ ಮುತ್ತುರಾಮನ್ ಕಾಂಬಿನೇಷನ್‌ನಲ್ಲಿ 20ಕ್ಕೂ ಅಧಿಕ ಸಿನಿಮಾಗಳು ಬಂದಿದ್ದವು. ಎಲ್ಲಾ ಸಿನಿಮಾಗಳು ಹಿಟ್ ಲಿಸ್ಟ್ ಸೇರಿತ್ತು.
ಮುತ್ತುರಾಮನ್ ಜೊತೆ ಹಲವು ವರ್ಷಗಳಿಂದ ಒಂದಷ್ಟು ತಂತ್ರಜ್ಞರು ಕೆಲಸ ಮಾಡಿದ್ದರು. ಅವರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಮುತ್ತುರಾಮನ್ ಹೋಗಿ ರಜನಿಕಾಂತ್ ಬಳಿ ಕೇಳಿಕೊಂಡಿದ್ದರು. ಆಗ ಹಿಂದು ಮುಂದು ನೋಡದೇ ನೀವೇ ಒಂದು ಸಿನಿಮಾ ನಿರ್ಮಿಸಿ. ನಾನು ಯಾವುದೇ ಸಂಭಾವನೆ ಇಲ್ಲದೇ ನಟಿಸುತ್ತೇನೆ. ಚಿತ್ರದಿಂದ ಬಂಡ ಹಣವನ್ನು ನಿಮ್ಮೊಟ್ಟಿಗೆ ಕೆಲಸ ಮಾಡಿದ ತಂತ್ರಜ್ಞರಿಗೆ ಕೊಡಿ ಎಂದು ರಜನಿಕಾಂತ್ ಸಲಹೆ ನೀಡಿದ್ದರು.
ಕಮ್ಮಿ ಬಜೆಟ್‌ನಲ್ಲಿ ಬಹಳ ಬೇಗ ಮಾಡುವ ಸಿನಿಮಾ ಯಾವುದು ಅಂತ ನೋಡುತ್ತಿದ್ದಾಗ ಕನ್ನಡದ 'ಬಾಂಬೆ ದಾದ' ಚಿತ್ರ ನಿರ್ದೇಶಕರ ಕಣ್ಣಿಗೆ ಬಿದ್ದಿತ್ತು. ಅದೇ ಚಿತ್ರವನ್ನು ರೀಮೆಕ್ ಮಾಡಲು ಮುಂದಾಗಿದ್ದರು. ಪೊಲೀಸ್ ಆಫೀಸರ್ ಪಾತ್ರದಲ್ಲಿ ತಲೈವಾ ನಟಿಸಿದ್ದರು. ಸಿನಿಮಾ ಹಿಟ್ ಆಗಿತ್ತು. ಅದರಿಂದ ಬಂದ ಲಾಭವನ್ನು ನಿರ್ದೇಶಕ ಮುತ್ತುರಾಮನ್ ತಮ್ಮ ತಂತ್ರಜ್ಞರಿಗೆ ಸಮಾನವಾಗಿ ಹಂಚಿದ್ದರು. ಕೆಲವರು ಇದೇ ಹಣದಲ್ಲಿ ಮನೆ ಕಟ್ಟಿಸಿಕೊಂಡಿದ್ದರು.
'ಪಾಂಡಿಯನ್' ರಜನಿಕಾಂತ್ ಕರಿಯರ್‌ನಲ್ಲಿ ಮರೆಯಲಾಗದ ಸಿನಿಮಾ. 4 ವರ್ಷಗಳ ಹಿಂದೆ 'ದರ್ಬಾರ್' ಚಿತ್ರದಲ್ಲಿ ಸೂಪರ್ ಸ್ಟಾರ್ ಖಾಕಿ ತೊಟ್ಟಿದ್ದರು. 'ಪಾಂಡಿಯನ್' ಸಿನಿಮಾ ಬಂದು 27 ವರ್ಷಗಳ ಬಳಿಕ ಇದೇ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದು.


Click it and Unblock the Notifications











