ತಲೈವಾಗೆ ಅಣ್ಣಾವ್ರ ಎದುರು ವಿಲನ್ ಆಗಿ ಅಬ್ಬರಿಸುವ ಅವಕಾಶ ಕೈ ತಪ್ಪಿದ್ದೇಗೆ?
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನಿಕಾಂತ್ ತಮಿಳು ಚಿತ್ರರಂಗದಲ್ಲಿ ಸಕ್ಸಸ್ ಕಂಡರು. ಮುಂದೆ ಅಲ್ಲಿ ವಾಸ್ತವ್ಯ ಹೂಡಿ ತಮಿಳಿಗನೇ ಎನ್ನುವಂತಾಗಿಬಿಟ್ಟರು. ಆದರೆ ಆರಂಭದಲ್ಲಿ ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ನಿಮಗೆ ಗೊತ್ತಾ ಅದೊಂದು ಚಿತ್ರದಲ್ಲಿ ಅಣ್ಣಾವ್ರು ಎದುರು ನಟಿಸುವ ಅವಕಾಶ ಕೂಡ ಸಿಕ್ಕಿತ್ತು. ಆದರೆ ಅದು ಕೈಗೂಡಿರಲಿಲ್ಲ.
ಚಿತ್ರರಂಗಕ್ಕೆ ಬಂದ ಶುರುವಿನಲ್ಲಿ ನೆಗೆಟಿವ್ ಪಾತ್ರಗಳಲ್ಲಿ ರಜನಿಕಾಂತ್ ನಟಿಸಿದ್ದರು. ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಕೋರ್ಸ್ ಮುಗಿಸಿದ ಬಳಿಕ ಶಿವಾಜಿ ಅವಕಾಶ ಕೇಳಿ ಸುತ್ತಾಡುತ್ತಿದ್ದರು. 1975ರಲ್ಲಿ 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ನಟಿಸಿದರು. ಅದೇ ವರ್ಷ ಕನ್ನಡದ ಚಿತ್ರವೊಂದರಲ್ಲಿ ಡಾ. ರಾಜ್‌ಕುಮಾರ್ ಜೊತೆ ನಟಿಸೋ ಅವಕಾಶ ಸಿಕ್ಕಿತ್ತು. ವಜ್ರಮುನಿ ಕಾರಣದಿಂದಲೇ ಸಿಕ್ಕಿದ್ದ ಅವಕಾಶ ಅವರಿಂದಲೇ ಮಿಸ್ ಆಗಿತ್ತು.

'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಅವಕಾಶ ಕೇಳಿ ರಜನಿಕಾಂತ್ ಹೋಗಿದ್ದರು. ಅವಕಾಶ ಸಿಕ್ಕಿರಲಿಲ್ಲ. ಆದರೆ ಅವರ ಫೋಟೊವನ್ನು ದೃಶ್ಯವೊಂದರಲ್ಲಿ ಬಳಸಿಕೊಳ್ಳಲಾಗಿತ್ತು. ಮರುವರ್ಷವೇ ಅಣ್ಣಾವ್ರ ಚಿತ್ರದಲ್ಲಿ ವಿಲನ್ ಆಗಿ ನಟಿಸಲು ರಜನಿಕಾಂತ್ ಆಯ್ಕೆ ಆಗಿಬಿಟ್ಟಿದ್ದರು. ಆದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿತ್ತು.
1977ರಲ್ಲಿ ದೊರೆ- ಭಗವಾನ್ ಜೋಡಿ ನಿರ್ದೇಶನದ 'ಗಿರಿಕನ್ಯೆ' ಚಿತ್ರ ತೆರೆಗೆ ಬಂದಿತ್ತು. ಡಾ. ರಾಜ್ ಜೊತೆ ಜಯಮಾಲಾ ನಾಯಕಿಯಾಗಿ ಮಿಂಚಿದ್ದರು. ವಜ್ರಮುನಿ, ತೂಗುದೀಪ ಶ್ರೀನಿವಾಸ್, ಟೈಗರ್ ಪ್ರಭಾಕರ್ ಈ ಚಿತ್ರದ ತಾರಾಗಣದಲ್ಲಿದ್ದರು. ಆಗ ವಜ್ರಮುನಿ ಬಹಳ ಬ್ಯುಸಿ ಇದ್ದರು. ಹಾಗಾಗಿ ಒಂದು ವೇಳೆ ಡೇಟ್ಸ್ ಕ್ಲ್ಯಾಶ್ ಆದರೆ ಬೇರೊಬ್ಬರನ್ನು ಆಯ್ಕೆ ಮಾಡಲು ನಿರ್ದೇಶಕರು ಮುಂದಾಗಿದ್ದರು. ಆಗ ಶಿವಾಜಿ ಅವರ ಕಣ್ಣಿಗೆ ಬಿದ್ದಿದ್ದರು.

ಒಂದು ವೇಳೆ ವಜ್ರಮುನಿ ಕಾಲ್‌ಶೀಟ್‌ಗೆ ಅಣ್ಣಾವ್ರ ಕಾಲ್‌ಶೀಟ್ ಹೊಂದಿಕೆ ಆಗದೇ ಇದ್ದರೆ ರಜನಿಕಾಂತ್ ಅವರಿಗೆ ಅವಕಾಶ ಕೊಡಲು ತೀರ್ಮಾನಿಸಲಾಗಿತ್ತು. ಆದರೆ ಬೇರೆ ಸಿನಿಮಾ ಕ್ಯಾನ್ಸಲ್ ಆಗಿ ವಜ್ರಮುನಿ ಅವರೇ 'ಗಿರಿಕನ್ಯೆ' ಚಿತ್ರದಲ್ಲಿ ನಟಿಸಿದರು. ಹಾಗಾಗಿ ರಜನಿಕಾಂತ್ ಅವಕಾಶ ವಂಚಿತರಾಗುವಂತಾಗಿತ್ತು. ಬಳಿಕ ವಿಚಾರ ಗೊತ್ತಾಗಿ ರಜನಿಕಾಂತ್ ಅವರ ಜೊತೆ ಅಣ್ಣಾವ್ರು ಮಾತನಾಡಿದ್ದರಂತೆ. ಮುಂದೆ ಅವಕಾಶ ಸಿಕ್ಕರೆ ನಟಿಸೋಣ ಎಂದು ಹೇಳಿ ಕಳುಹಿಸಿದ್ದರಂತೆ.
ರಜನಿಕಾಂತ್ ತಮಿಳು ಚಿತ್ರರಂಗದಲ್ಲಿ ಸಕ್ಸಸ್ ಕಂಡ ಬಳಿಕ ಕನ್ನಡ ಸಿನಿಮಾಗಳಲ್ಲಿ ನಟಿಸಲಿಲ್ಲ. 1981ರಲ್ಲಿ ಬಂದಿದ್ದ 'ಘರ್ಜನೆ' ಕನ್ನಡದಲ್ಲಿ ಅವರ ಕೊನೆಯ ಸಿನಿಮಾ. ಮುಂದೆ ತಮಿಳಿನಲ್ಲಿ ಸೂಪರ್ ಸ್ಟಾರ್ ಪಟ್ಟಕ್ಕೆ ಏರಿಬಿಟ್ಟರು. ಬಹಳ ವರ್ಷಗಳ ಬಳಿಕ ಅಣ್ಣಾವ್ರ ಮನೆಗೆ ರಜನಿಕಾಂತ್ ಭೇಟಿ ನೀಡಿದಾಗ 'ಗಿರಿಕನ್ಯೆ' ಚಿತ್ರದ ವೇಳೆ ನಡೆದ ಘಟನೆಯ ಬಗ್ಗೆ ಇಬ್ಬರೂ ಚರ್ಚಿಸಿದ್ದರು ಎಂದು ಆಪ್ತರು ಹೇಳುತ್ತಾರೆ.
'ಗಿರಿಕನ್ಯೆ' ಸಿನಿಮಾ 25 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಚಿತ್ರದಲ್ಲಿ ಕೇಶವ ಎನ್ನುವ ಪಾತ್ರದಲ್ಲಿ ವಜ್ರಮುನಿ ಅಬ್ಬರಿಸಿದ್ದರು. ರಾಜನ್- ನಾಗೇಂದ್ರ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಒಟ್ಟಾರೆ ಒಂದೇ ಫ್ರೇಮ್‌ನಲ್ಲಿ ಅಣ್ಣಾವ್ರು ಹಾಗೂ ರಜನಿಕಾಂತ್ ಇಬ್ಬರನ್ನು ನೋಡುವ ಅವಕಾಶ ಸಿನಿರಸಿಕರು ಮಿಸ್ ಮಾಡಿಕೊಂಡರು ಎನ್ನಬಹುದು.
ಅಣ್ಣಾವ್ರ ದೊಡ್ಡ ಅಭಿಮಾನಿ ರಜನಿಕಾಂತ್. ಚಿಕ್ಕಂದಿನಿಂದಲೂ ಡಾ. ರಾಜ್ ಸಿನಿಮಾ ನೋಡಿ ಬೆಳೆದವರು. ಒಮ್ಮೆ ಮಾತನಾಡುತ್ತಾ ತಮಿಳಿನ ಶಿವಾಜಿ ಗಣೇಶನ್ ಹಾಗೂ ಎಂಜಿಆರ್ ಇಬ್ಬರೂ ಸೇರಿದರೆ ಒಬ್ಬ ರಾಜ್‌ಕುಮಾರ್ ಎಂದು ಬಣ್ಣಿಸಿದ್ದರು. ಯಾವುದೋ ಸಿನಿಮಾ ಶತದಿನೋತ್ಸವ ಸಂಭ್ರಮದಲ್ಲಿ ಅಣ್ಣಾವ್ರನ್ನು ನೋಡಲು ನಾನು ಹೋಗಿದ್ದೆ. ಆಗ ನನಗೆ 16, 17 ವರ್ಷ ವಯಸ್ಸು. ನಾನು ಅಭಿಮಾನಿ ಆಗಿ ಹೋಗಿ ಅವರನ್ನು ಮುಟ್ಟಿ ಸಂಭ್ರಮಿಸಿದ್ದೆ ಎಂದು ರಜನಿಕಾಂತ್ ವಿವರಿಸಿದ್ದರು.


Click it and Unblock the Notifications











