ಒಂದೇ ಚಿತ್ರದಲ್ಲಿ ಅಣ್ಣಾವ್ರ ಮಗನಾಗಿ ಮೊಮ್ಮಗನಾಗಿ ಮಿಂಚಿದ್ದ ಕ್ರೇಜಿಸ್ಟಾರ್; ಯಾವುದು ಆ ಸಿನಿಮಾ?
ನಟಸಾರ್ವಭೌಮ ಡಾ. ರಾಜ್‌ಕುಮಾರ್ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಅದರಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳು ಇವೆ. ಕಲ್ಯಾಣ್‌ಕುಮಾರ್, ಉದಯ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಹಲವರ ಜೊತೆ ಅಣ್ಣಾವ್ರು ತೆರೆ ಹಂಚಿಕೊಂಡಿದ್ದರು. 'ಗಂಧದಗುಡಿ' ಚಿತ್ರದಲ್ಲಿ ವಿಷ್ಣು ಖಳನಟನಾಗಿ ನಟಿಸಿದ್ದರು.
ಡಾ. ರಾಜ್ ದ್ವಿಪಾತ್ರ ಹಾಗೂ ತ್ರಿಪಾತ್ರಗಳಲ್ಲಿ ಕೂಡ ನಟಿಸಿದ ಉದಾಹರಣೆಯಿದೆ. ಒಂದೇ ಚಿತ್ರದಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಗೆದ್ದಿದ್ದರು. ಇನ್ನು ಅಣ್ಣಾವ್ರ ಕೆಲ ಸಿನಿಮಾಗಳು ಸೋತಿರುವುದು ಇದೆ. ಆದರೆ ಸಕ್ಸಸ್ ರೇಟ್ ಜಾಸ್ತಿ ಇತ್ತು. ಅದೇ ಕಾರಣಕ್ಕೆ ಆ ಕಾಲದ ದಿಗ್ಗಜ ನಟರಿಗಿಂತ ಡಾ. ರಾಜ್ ಪ್ರತ್ಯೇಕವಾಗಿ ನಿಲ್ಲುತ್ತಿದ್ದರು. ಇನ್ನು ನಟನೆ ವಿಚಾರಕ್ಕೆ ಬಂದರೆ ಅಣ್ಣಾವ್ರಿಗೇ ಅವ್ರೇ ಸಾಟಿ.

ಖ್ಯಾತ ನಿರ್ಮಾಪಕ ಎನ್. ವೀರಸ್ವಾಮಿ ಹಾಗೂ ಡಾ. ರಾಜ್‌ಕುಮಾರ್ ನಡುವೆ ಉತ್ತಮ ಒಡನಾಟವಿತ್ತು. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸಿ ಆ ಕಾಲಕ್ಕೆ ವೀರಾಸ್ವಾಮಿ ಹೆಸರು ಮಾಡಿದ್ದರು. ಮುಂದೆ ಅವರ ಪುತ್ರ ರವಿಚಂದ್ರನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ನಿರ್ಮಾಪಕನಾಗಿಯೂ ಗೆದ್ದರು. ಅದ್ಧೂರಿ ಸಿನಿಮಾಗಳನ್ನು ನಿರ್ಮಿಸಿ ಸಾಕಷ್ಟು ಸೋಲು ಗೆಲುವು ಕಂಡರು.
90ರ ದಶಕದಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಿಸಿದವರು ಕ್ರೇಜಿಸ್ಟಾರ್ ರವಿಚಂದ್ರನ್. 'ಶಾಂತಿ ಕ್ರಾಂತಿ' ಎನ್ನುವ ಒಂದೇ ಕಥೆಯಲ್ಲಿ ಬೇರೆ ಚಿತ್ರರಂಗದ ಖ್ಯಾತ ನಟರನ್ನು ಸೇರಿಸಿ 4 ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿ, ನಿರ್ದೇಶಿಸಿ ಕನ್ನಡದಲ್ಲಿ ನಟಿಸುವ ಸಾಹಸ ಮಾಡಿದ್ದರು. ಈ ಹಾದಿಯಲ್ಲಿ ಸೋಲುಂಡರು. ಆ ಬಳಿಕ ಕೂಡ ರವಿಚಂದ್ರನ್ ರಿಸ್ಕ್ ತೆಗೆದುಕೊಂಡು ಚಿತ್ರಗಳನ್ನು ನಿರ್ಮಿಸುವುದು ಬಿಡಲಿಲ್ಲ.
ರವಿಚಂದ್ರನ್ ತಮ್ಮ 'ಪ್ರೇಮಲೋಕ' ಚಿತ್ರದಲ್ಲಿ ವಿಷ್ಣುವರ್ಧನ್, ಅಂಬರೀಶ್, ಟೈಗರ್ ಪ್ರಭಾಕರ್ ಅವರನ್ನು ಅತಿಥಿ ಪಾತ್ರಗಳಲ್ಲಿ ತೋರಿಸಿದ್ದರು. ಸಣ್ಣ ಸಣ್ಣ ಝಲಕ್‌ನಲ್ಲಿ ಇವರೆಲ್ಲಾ ಬಂದು ಹೋಗಿದ್ದರು. ಇನ್ನು ವೀರಸ್ವಾಮಿ ಬಳಿಕ ರವಿಚಂದ್ರನ್ ಕೂಡ ದೊಡ್ಮನೆ ಜೊತೆ ಆತ್ಮೀಯ ಒಡನಾಟ ಮುಂದುವರೆಸಿದರು. ಶಿವಣ್ಣ, ಅಪ್ಪು ನಟಿಸಿದ ಕೆಲ ಸಿನಿಮಾಗಳಿಗೆ ತಮ್ಮ ಅಮೃತಹಸ್ತದಿಂದ ಕ್ರೇಜಿಸ್ಟಾರ್ ಕ್ಲ್ಯಾಪ್ ಮಾಡಿದ್ದಾರೆ.

ಡಾ. ರಾಜ್‌ಕುಮಾರ್ ಜೊತೆ ಕ್ರೇಜಿಸ್ಟಾರ್ ರವಿಚಂದ್ರನ್ ಒಂದು ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು ಎನ್ನುವುದು ನಿಮಗೆ ಗೊತ್ತಾ? ಹೌದು. ಅಣ್ಣಾವ್ರ ಚಿತ್ರದಲ್ಲಿ ರವಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಅದು ಕೂಡ ಬಾಲನಟನಾಗಿ. 'ಕುಲಗೌರವ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ತಂದೆ, ಮಗ ಹಾಗೂ ಮೊಮ್ಮಗನಾಗಿ ತ್ರಿಪಾತ್ರದಲ್ಲಿ ನಟಿಸಿದ್ದರು. ಪೆಕೆಟಿ ಶಿವರಾಮ್ ನಿರ್ದೇಶನದ ಈ ಸಿನಿಮಾ 1971ರಲ್ಲಿ ತೆರೆಗೆ ಬಂದಿತ್ತು.
ಅಂದಹಾಗೆ ಎನ್. ವೀರಾಸ್ವಾಮಿ ನಿರ್ಮಾಣದ ಚೊಚ್ಚಲ ಸಿನಿಮಾ 'ಕುಲಗೌರವ'. ಇದೊಂದು ಫ್ಯಾಮಿಲಿ ಡ್ರಾಮಾ ಸಿನಿಮಾ ಆಗಿತ್ತು. ಚಿತ್ರದಲ್ಲಿ ಅಣ್ಣಾವ್ರು ರಘುನಾಥರಾವ್ ಹಾಗೂ ಅವರ ಮಗ ರವಿ ಜೊತೆಗೆ ಮೊಮ್ಮಗ ಶಂಕರ್ ಹೀಗೆ 3 ಪಾತ್ರಗಳನ್ನು ನಿಭಾಯಿಸಿದ್ದರು. ಅದರಲ್ಲಿ ಶಂಕರನ ಬಾಲ್ಯದ ಪಾತ್ರದಲ್ಲಿ ಬಾಲನಟನಾಗಿ ರವಿಚಂದ್ರನ್ ಬಣ್ಣ ಹಚ್ಚಿದ್ದರು. ಆಗ ಅವರಿಗೆ 10 ವರ್ಷ ವಯಸ್ಸಾಗಿತ್ತು.
'ಕುಲಗೌರವ' ಚಿತ್ರಕ್ಕೂ ಮುನ್ನ 'ಧೂಮಕೇತು' ಚಿತ್ರದಲ್ಲಿ ಮೊದಲಬಾರಿಗೆ ರವಿಚಂದ್ರನ್ ಬಾಲನಟನಾಗಿ ಕಾಣಿಸಿಕೊಂಡಿದ್ದರು. ಹೀಗೆ ಡಾ. ರಾಜ್‌ಕುಮಾರ್ ನಟನೆಯ 2 ಸಿನಿಮಾಗಳಲ್ಲಿ ಚಿಕ್ಕಂದಿನಲ್ಲೇ ರವಿಚಂದ್ರನ್ ಮಿಂಚಿದ್ದರು.


Click it and Unblock the Notifications











