ಫ್ರೀಯಾಗಿ ರೀಮೆಕ್ ರೈಟ್ಸ್ ಸಿಕ್ರೂ ಕಿಚ್ಚ ಸುದೀಪ್ ನಟಿಸದೇ ಬಿಟ್ಟ ಚಿತ್ರ ಯಾವ್ದು?
ಒಂದ್ಕಾಲದಲ್ಲಿ ಕನ್ನಡದಲ್ಲಿ ರೀಮೆಕ್ ಸಿನಿಮಾಗಳ ಹಾವಳಿ ಜಾಸ್ತಿ ಇತ್ತು. ಸ್ಟಾರ್ ನಟರೆಲ್ಲಾ ಪರಭಾಷೆಯ ಸೂಪರ್ ಹಿಟ್ ಕಥೆಗಳನ್ನು ಕನ್ನಡದಲ್ಲಿ ಸಿನಿಮಾ ಮಾಡಿ ಗೆಲ್ಲುವ ಪ್ರಯತ್ನ ಮಾಡುತ್ತಿದ್ದರು. ಕೆಲವೊಮ್ಮೆ ಸಕ್ಸಸ್ ಸಿಕ್ಕರೆ ಕೆಲವೊಮ್ಮೆ ಆ ಸಿನಿಮಾಗಳು ಸೋತಿರುವ ಉದಾಹರಣೆಯಿದೆ.
ನಟ ಸುದೀಪ್ ಕೂಡ ಆರಂಭದಲ್ಲಿ ಒಂದಷ್ಟು ರೀಮೆಕ್ ಸಿನಿಮಾಗಳಲ್ಲಿ ನಟಿಸಿದ್ದರು. 'ಹುಚ್ಚ', 'ವಾಲಿ', 'ಆಟೋಗ್ರಾಫ್', 'ಮಾಣಿಕ್ಯ' ಹೀಗೆ ಕೆಲ ಸಿನಿಮಾಗಳು ಕನ್ನಡ ಸಿನಿರಸಿಕರ ಮನ ಗೆದ್ದಿತ್ತು. 20 ವರ್ಷಗಳ ಹಿಂದೆ ಒಂದು ತಮಿಳು ಚಿತ್ರದ ರೀಮೆಕ್ ರೈಟ್ಸ್ ಉಚಿತವಾಗಿ ಸುದೀಪ್ ಅವರಿಗೆ ಸಿಕ್ಕಿತ್ತು. ಆದರೆ ಆ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಚಿರಂಜೀವಿ ಸರ್ಜಾ ನಟಿಸುವಂತಾಯಿತು.

ಸದ್ಯ ಸುದೀಪ್ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದಕ್ಕೂ ಮುನ್ನ 'ಮ್ಯಾಕ್ಸ್' ಚಿತ್ರದಲ್ಲಿ ನಟಿಸಿ ಸುದೀಪ್ ಗೆದ್ದಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸುದೀಪ್ ಕೂಡ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು. 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿದೆ.
ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದಿದ್ದ 'ಮ್ಯಾಕ್ಸ್' ಸಿನಿಮಾ ಪ್ರೇಕ್ಷಕರಿಗೆ ಮ್ಯಾಕ್ಸಿಮಮ್ ಮನರಂಜನೆ ಉಣಬಡಿಸಿತ್ತು. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಸದ್ಯ ಚಿತ್ರದ ಸೀಕ್ವೆಲ್ ಮಾಡುವ ಪ್ರಯತ್ನ ನಡೀತಿದೆ. 'ಮ್ಯಾಕ್ಸ್' ಚಿತ್ರದ ಓಟಿಟಿ, ಸ್ಯಾಟಲೈಟ್ ರೈಟ್ಸ್ ಮಾರಾಟದಿಂದ ಬಂದ ಹಣ ಕಲೈಪುಲಿ ಎಸ್. ತನು ಅವರಿಗೆ ಸಿಕ್ಕಿತ್ತು. ಥ್ರಿಯೇಟ್ರಿಕಲ್ ರೈಟ್ಸ್‌ನಿಂದ ಬಂದಿದ್ದ ಹಣ ಸುದೀಪ್ ಪಾಲಾಗಿದೆ ಎನ್ನುವ ಗುಸುಗುಸು ಗಾಂಧಿನಗರದಲ್ಲಿ ಕೇಳಿಬಂದಿತ್ತು.

'ವಿಕ್ರಾಂತ್ ರೋಣ' ಬಳಿಕ ಸುದೀಪ್ ಕೊಂಚ ಗ್ಯಾಪ್ ತೆಗೆದುಕೊಂಡಿದ್ದರು. ದಿಢೀರನೆ 'ಮ್ಯಾಕ್ಸ್' ಸಿನಿಮಾ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಕಾರಣ ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಅವರು ಕೈ ಜೋಡಿಸಿದ್ದರು. ಅರೇ ಇದ್ದಕ್ಕಿದಂತೆ ತಮಿಳು ನಿರ್ಮಾಪಕರ ಜೊತೆ ಸಿನಿಮಾನಾ? ಇಂತಾದೊಂದು ಬೆಳವಣೆಗೆ ಹೇಗಾಯಿತು? ಎಂದು ಕೆಲವರು ಹುಬ್ಬೇರಿಸಿದ್ದರು.
ಅಂದಹಾಗೆ 20 ವರ್ಷಗಳ ಹಿಂದಿನಿಂದಲೂ ಸುದೀಪ್ ಹಾಗೂ ಕಲೈಪುಲಿ ಎಸ್. ತನು ಅವರ ಒಡನಾಟವಿದೆ. ಈ ವಿಚಾರವನ್ನು ಇತ್ತೀಚೆಗೆ The Whistle ಎಂಬ ತಮಿಳು ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತನು ತಿಳಿಸಿದ್ದಾರೆ. "2004ರಲ್ಲಿ 'ಕಾಕ್ಕಾ ಕಾಕ್ಕಾ' ಚಿತ್ರದ ರೀಮೆಕ್ ರೈಟ್ಸ್ ಕೇಳಲು ಸುದೀಪ್ ಅವ್ರು ನಮ್ಮ ಆಫೀಸ್‌ಗೆ ಬಂದಿದ್ರು" ಎಂದು ನೆನಪಿಸಿಕೊಂಡಿದ್ದಾರೆ.
"ರೀಮೆಕ್ ರೈಟ್ಸ್ ಕೇಳಿದ್ರು. ಎಷ್ಟು ಹಣ ಎಂದಾ ಕೇಳಿದಾಗ ಬೇಡ, ಫ್ರೀಯಾಗಿ ತಗೊಳ್ಳಿ. ಒಬ್ಬ ನಟರಾಗಿ ಇಷ್ಟು ದೂರ ಬಂದಿದ್ದೀರಾ ರೈಟ್ಸ್ ಕೇಳ್ಕೊಂಡು. ನಾನು ಹಣ ಕೇಳಿದರೆ ಚೆನ್ನಾಗಿರಲ್ಲ ಎಂದೆ. ಕೂಡಲೇ ನಮ್ಮ ಸಹಾಯರನ್ನು ಕರೆದು ಹೇಳಿ ರೈಟ್ಸ್ ಬರೆದು ಕೊಟ್ಟುಬಿಟ್ಟೆ. ಇದೆಲ್ಲಾ ನಡೆದು 18 ವರ್ಷಗಳ ಬಳಿಕ 'ಮ್ಯಾಕ್ಸ್' ಕಥೆ ಕೇಳಿ ನನಗೆ ಇಷ್ಟ ಆಗಿ ಸುದೀಪ್ ಅವರಿಗೆ ಹೇಳಿದೆ" ಎಂದು ಕಲೈಪುಲಿ ಎಸ್. ತನು ತಿಳಿಸಿದ್ದಾರೆ.
"ಸುದೀಪ್ ಅವರಿಗೆ ಹೇಳ್ದೆ, ನೀವು 'ವಿಕ್ರಾಂತ್ ರೋಣ' ರೀತಿಯ ದೊಡ್ಡ ಸಿನಿಮಾ ಮಾಡ್ತಿದ್ದೀರಾ. ಇದು 15 ಕೋಟಿ ರೂ. ಸಿನಿಮಾ. ಇಷ್ಟವಾದರೆ ಮಾಡಿ ಎಂದೆ. ಅಯ್ಯೋ ಸರ್, ಎಷ್ಟು ದಿನ ಆಯ್ತು ನಿಮ್ಮ ಜೊತೆ ಸಿನಿಮಾ ಮಾಡೋ ಬಗ್ಗೆ ಮಾತಾಡಿ ನಿರ್ದೇಶಕರನ್ನು ಕಳಿಸಿ ಕಥೆ ಕೇಳ್ತಿನಿ. ಮಾಡೋಣ ಎಂದಿದ್ದರು. ಆಗ ವಿಜಯ್ ಕಾರ್ತಿಕೇಯನ್ ಅವರನ್ನು ಕಳುಹಿಸಿ ಕಥೆ ಹೇಳಿ ಅವ್ರು ಒಪ್ಪಿ ಸಿನಿಮಾ ಮಾಡಿದರು. ಸುದೀಪ್ ಕರಿಯರ್‌ನಲ್ಲೇ 'ಮ್ಯಾಕ್ಸ್' ದೊಡ್ಡ ಹಿಟ್ ಸಿನಿಮಾ" ಎಂದು ವಿವರಿಸಿದ್ದಾರೆ.
'ಕಾಕ್ಕಾ ಕಾಕ್ಕಾ' ರೀಮೆಕ್ ರೈಟ್ಸ್ ಸಿಕ್ಕರೂ ಸುದೀಪ್ ನಟಿಸಲಿಲ್ಲ. ಬದಲಿಗೆ 8 ವರ್ಷಗಳ ಬಳಿಕ ಚಿರಂಜೀವಿ ಸರ್ಜಾ 'ದಂಡಂ ದಶಗುಣಂ' ಹೆಸರಿನಲ್ಲಿ ಆ ಚಿತ್ರ ರೀಮೆಕ್ ಮಾಡುವಂತಾಯಿತು. ಕೆ. ಮಾದೇಶ್ ನಿರ್ದೇಶನದ ಆ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು.


Click it and Unblock the Notifications











