ಆರು ತಿಂಗಳು ಹಸಿವು, ನೋವು ; ಡ್ರೈವರ್ ಕೆಲಸಕ್ಕೆ ಹೋಗಲು ಮುಂದಾಗಿದ್ದರು ವಿಷ್ಣುದಾದಾ, ಆದರೆ...!
ಕನ್ನಡ ಚಿತ್ರರಂಗದ ಯಜಮಾನ ಡಾ. ವಿಷ್ಣುವರ್ಧನ್ ಅವರು ನಡೆದ ಮುಳ್ಳಿನ ಹಾದಿಯ ಕಥೆ ನಿಮಗೆ ಸಂಪೂರ್ಣವಾಗಿ ಗೊತ್ತಿರಲಿಕ್ಕಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಅನುಭವಿಸಿದಷ್ಟು ಕಷ್ಟವನ್ನು ಬಹುಶಃ ಯಾವ ಧ್ರುವತಾರೆಯೂ ಅನುಭವಿಸಿರಲಿಕ್ಕಿಲ್ಲ. ಬದುಕಿನೂದ್ದಕ್ಕೂ ನೋವನ್ನೇ ಉಂಡು.. ಪ್ರೀತಿ ಹಂಚಿ.. ಕನ್ನಡಿಗರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿರುವ ಕನ್ನಡ ಚಿತ್ರರಂಗದ ದಾದಾ ಒಂದ್ಕಾಲದಲ್ಲಿ ಉಪವಾಸ ಇದ್ದರು. ಅದು ಆರು ತಿಂಗಳು ಅಂದ್ರೆ ನೀವು ನಂಬ್ತೀರಾ. ನಂಬಲೇ ಬೇಕು ಯಾಕಂದ್ರೆ ಇದು ಸತ್ಯ.
ಹೌದು, ಅದು 1976 -77ರ ಸಮಯ. ವಿಷ್ಣುವರ್ಧನ್ ಮತ್ತು ಭಾರತಿ ಅವರ ದಾಂಪತ್ಯಕ್ಕೆ ಆಗಷ್ಟೇ ಒಂದು ವರ್ಷ ತುಂಬಿತ್ತು. ಈ ಸಂದರ್ಭದಲ್ಲಿ ಚೆನ್ನೈನಲ್ಲಿದ್ದ ಡಾ.ವಿಷ್ಣುವರ್ಧನ್ ಕೆಲಸ ಇಲ್ಲದೇ ಖಾಲಿ ಕುಳಿತುಕೊಂಡಿದ್ದರು. ದುರಂತ ಅಂದರೆ ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ ಅಂತ ಜಿಮ್ಮಿಗಲ್ಲು ಚಿತ್ರದಲ್ಲಿ ಹಾಡಿದ್ದ ವಿಷ್ಣು ಆ ಚಿತ್ರಕ್ಕೂ ಕೆಲ ವರ್ಷಗಳ ಮುನ್ನ ಹಸಿವಿನಿಂದ ನರಳುತ್ತಿದ್ದರು. ತುತ್ತು ಅನ್ನಕ್ಕೂ ಪರದಾಡಿದ್ದರು. ಆರು ತಿಂಗ್ಳು ಪತ್ನಿ ಭಾರತಿ ಜೊತೆ ಗಂಜಿ ಕುಡಿದೇ ಹೊಟ್ಟೆ ತುಂಬಿಸಿಕೊಂಡಿದ್ದರು.

ನಿಜಾ. ವಿಷ್ಣುವರ್ಧನ್ ಆಗಲೇ ಖ್ಯಾತಿಯ ಶಿಖರಕ್ಕೇರಿದ್ದರು. ನಾಗರಹಾವು ನಂತರ ಗಂಧದ ಗುಡಿ, ಭೂತಯ್ಯನ ಮಗ ಅಯ್ಯು, ಕಳ್ಳ ಕುಳ್ಳ, ಒಂದು ರೂಪ ಎರಡು ಗುಣ, ಕಿಟ್ಟು ಪುಟ್ಟು ಹೀಗೆ ಹಲವು ಚಿತ್ರ ಮತ್ತು ಪಾತ್ರಗಳ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದರು. ಆದರೆ ಅದ್ಯಾರ ಮಸಣಿ ಕಣ್ಣು ಬಿತ್ತೋ, ಅಲ್ಲೀತನ್ಕ ಕೈ ತುಂಬಾ ಕೆಲ್ಸವನ್ನೊಂದಿದ್ದ ವಿಷ್ಣು ಕೈ ಖಾಲಿಯಾಗಿ ಹೋಗಿತ್ತು. ಅವಕಾಶದಿಂದ ವಿಷ್ಣು ವಂಚಿತರಾಗಬೇಕಾಯ್ತು. ವಿಷ್ಣು ಅಕ್ಷರಶ ನಿರುದ್ಯೋಗಿಯಾಗಿ ಹೋಗಿದ್ದರು. ದಿಕ್ಕೆಟ್ಟು ಕುಂತಿದ್ದರು.
ಇನ್ನೂ ಅದಾಗಲೇ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದ ಭಾರತಿ ಅವರು ವಿಷ್ಣುವರ್ಧನ್ ಕೈ ಹಿಡಿದ ಮೇಲೆ ಚಿತ್ರರಂಗದಿಂದ ದೂರವಾಗಿದ್ದದರು. ಮನೆ-ಗಂಡ-ಸಂಸಾರ ಅಂತ ತಮ್ಮನ್ನು ತೋಡಗಿಸಿಕೊಂಡಿದ್ದರು. ಹೀಗಾಗಿ ಜೀವನೋಪಾಯಕ್ಕೆ ಮುಂದೇನು ಅನ್ನುವ ಆಲೋಚನೆಯಲ್ಲಿಯೇ ಇಬ್ಬರು ಆರು ತಿಂಗಳು ಗಂಜಿ ಕುಡಿದು ಹೊಟ್ಟೆ ತುಂಬಿಸಿಕೊಂಡಿದ್ದರು. ಇದೇ ಸಮಯದಲ್ಲಿ ಡ್ರೈವರ್ ಆಗುವ ನಿರ್ಧಾರವನ್ನ ತಗೆದುಕೊಂಡಿದ್ದರು ವಿಷ್ಣುದಾದಾ.

ಹೌದು.. ಅವಕಾಶಗಳಿಲ್ಲದೇ ತುತ್ತು ಅನ್ನಕ್ಕೂ ಪರದಾಡುವಂತಹ ಸಂಧರ್ಭದಲ್ಲಿ ಹತಾಶಗೊಂಡಿದ್ದ ವಿಷ್ಣುವರ್ಧನ್ ಅವರು, ತಾವು ಪ್ರೀತಿಯಿಂದ ಖರೀದಿಸಿದ್ದ ಬೆಂಜ್ ಕಾರನ್ನ ಟ್ರಾವೆಲ್ಸ್ ಗೆ ಬಿಟ್ಟು ತಾವೇ ಡ್ರೈವರ್ ಆಗಿ ಕೆಲಸ ಮಾಡುವ ನಿರ್ಧಾರವನ್ನ ತೆಗೆದುಕೊಂಡಿದ್ದರು. ಭಾರತಿ ಕೂಡಾ ದಿಕ್ಕ ತೋಚದೇ ವಿಷ್ಣು ತೆಗೆದುಕೊಂಡ ನಿರ್ಧಾರಕ್ಕೆ ಸರಿಯೆಂದು ತಲೆ ಅಲ್ಲಾಡಿಸಿದ್ದರು.
ಆದ್ರೆ ಅದೃಷ್ಟ.. ದೈವ ಲೀಲೆ.. ಇನ್ನೇನು ಟ್ರಾವೆಲ್ಸ್ ಗೆ ತಮ್ಮ ಬೆಂಜ್ ಕಾರು ಜೋಡಿಸಿ ವಿಷ್ಣು ಕಾರು ಓಡಿಸ್ಬೇಕು ಅಷ್ಟರಲ್ಲಿಯೇ ಬಿ.ಎಸ್ ಸೋಮಸುಂದರ್ ಹಾಗೂ ಸಂಪತ್ ರಾಜ್ ವಿಷ್ಣು ಮನೆಯ ಬಾಗಿಲು ಬಡೆದಿದ್ದರು. ಭರ್ತಿ ಆರು ತಿಂಗ್ಳು ಖಾಲಿ ಕುಂತಿದ್ದ ವಿಷ್ಣು ಕೈಗೆ ಅಡ್ವಾನ್ಸ್ ಕೊಟ್ಟು
ಹೊಂಬಿಸಲು ಸಿನಿಮಾದಲ್ಲಿ ನೀವೇ ನಟಿಸಬೇಕೆಂದು ಕೇಳಿಕೊಂಡಿದ್ದರು. ಆ ಚಿತ್ರವೇ 'ಹೊಂಬಿಸಿಲು'.

ಅಲ್ಲೀತನ್ಕ.. ವಿಷ್ಣು ಮನಸಿನಲ್ಲಿ ಹುದುಗಿದ್ದ ನೋವೇಲ್ಲ ಇದೊಂದು ಅವಕಾಶ ದೂರ ಮಾಡಿತು. ಎಲ್ಲವನ್ನೂ ಪಕ್ಕಕ್ಕಿಟ್ಟು ಮತ್ತೆ ಬಣ್ಣ ಹಚ್ಚಿದರು. ಹೊಂಬಿಸಿಲು ಸಿನಿಮಾದಲ್ಲಿ ಕಾಣಿಸಿಕೊಂಡರು. ಮುಂದೇ.. ಮತ್ಯಾವತ್ತು ವಿಷ್ಣು ಖಾಲಿ ಕುಳಿತುಕೊಳ್ಳುವ ಪ್ರಸಂಗವೇ ಬರಲಿಲ್ಲ. ಅಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗದ ಯಜಮಾನ ಡಾ.ವಿಷ್ಣುವರ್ಧನ್ ಚಿತ್ರರಂಗದಲ್ಲಿ ಮತ್ತೆ ಬ್ಯುಸಿಯಾದರು.
ಅಂದ್ಹಾಗೇ ಈ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ನಿರ್ದೇಶನದ ಭಾರತಿ ವಿಷ್ಣುವರ್ಧನ್ ಅವರ ಬಾಳೆ ಬಂಗಾರ ಸಾಕ್ಷ್ಯಚಿತ್ರದಲ್ಲಿ, ಖುದ್ದು ಭಾರತಿ ವಿಷ್ಣುವರ್ಧನ್ ಅವರು ತಮ್ಮ ಬದುಕಿನಲ್ಲಿ ತಾವು ಅನುಭವಿಸಿದ ಈ ಆರು ತಿಂಗಳ ನರಕಯಾತನೆ ಬಗ್ಗೆ ಮಾತನಾಡಿದ್ದಾರೆ. ಆ ದಿನಗಳನ್ನು ನೆನೆದಿದ್ದಾರೆ. ಎರಡೂವರೆ ಗಂಟೆಗಳ ಅವಧಿಯಲ್ಲಿ ಭಾರತಿ ಅವರ ಶಾಲೆ, ಕಾಲೇಜು, ಚಲನಚಿತ್ರಗಳು, ಮದುವೆ, ಜೀವನ ಹೋರಾಟಗಳು ಮತ್ತು ಇತರ ವಿಷಯಗಳನ್ನೊಳಗೊಂಡ ಈ ಸಾಕ್ಷ್ಯ ಚಿತ್ರಕ್ಕೆ ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ.


Click it and Unblock the Notifications











