ಚಿತ್ರರಂಗಕ್ಕೆ ಬಾರದೇ ಭಾರತೀಯ ಸೇನೆಗೆ ಸೇರಿದ್ದ ಈ 22ರ ಹರೆಯದ ಯುವತಿ ಯಾವ ಸ್ಟಾರ್ ಮಗಳು ಗೊತ್ತಾ..?
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಅಪ್ಪ ಮತ್ತು ಅಮ್ಮ ಸ್ಟಾರ್ ಆಗಿದ್ದರೆ ಮುಗಿಯಿತು. ಅವರ ಮಕ್ಕಳು ಮಾತ್ರ ಅಲ್ಲ ಅವರ ಸಂಬಂಧಿಕರೆಲ್ಲ ಚಿತ್ರರಂಗವನ್ನು ಅನಾಯಾಸವಾಗಿ ಪ್ರವೇಶಿಸುತ್ತಾರೆ. ಆದರೆ ಹೀಗೆ ಬಂದ ಅನೇಕರಲ್ಲಿ ಉಳಿಯುವುದು ಬಿಡುವುದು ಅವರಿಗೆ ಬಿಟ್ಟಿದ್ದಾದರೂ ಸದ್ಯ ಬಾಲಿವುಡ್‌ನಲ್ಲಿರುವ ಬಹುತೇಕ ಸ್ಟಾರ್‌ಗಳು ಒಂದು ಕಾಲದಸ್ಟಾರ್ ಕಲಾವಿದರ ಮಕ್ಕಳೇ.
ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಇದಕ್ಕೆ ಅಪವಾದ ಎಂಬಂತೆ ಬದುಕುತ್ತಾರೆ. ತಮ್ಮ ತಂದೆ ತಾಯಿಯ ನೆರಳಿನಾಚೆ ಬಂದು ಬದುಕನ್ನು ರೂಪಿಸಿಕೊಳ್ಳುತ್ತಾರೆ. ತಂದೆ ಮತ್ತು ತಾಯಿಗೆ ಸಂಬಂಧವೇ ಇಲ್ಲದ ಬೇರೆ ಕ್ಷೇತ್ರದಲ್ಲಿ ಗಮನವನ್ನು ಸೆಳೆಯುತ್ತಾರೆ. ಇದಕ್ಕೆ ರವಿಕಿಶನ್ ಅವರ ಮಗಳು ಇಶಿತಾ ಒಂದು ಉದಾಹರಣೆ. ಹೌದು, ಭೋಜಪುರಿ ಚಿತ್ರರಂಗದಲ್ಲಿ ಸ್ಟಾರ್ ಸ್ಥಾನವನ್ನು ಅಲಂಕರಿಸಿ, ಕನ್ನಡದ ಹೆಬ್ಬಲಿ ಸೇರಿ ಅನೇಕ ಭಾಷೆಗಳಲ್ಲಿ ಅಭಿನಯಿಸಿರುವ ರವಿಕಿಶನ್ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಮಿಂಚುತ್ತಿದ್ದಾರೆ. ಇಂಥಾ ರವಿಕಿಶನ್ ಅವರ ನಾಲ್ಕು ಮಕ್ಕಳಲ್ಲಿ ಒಬ್ಬರಾದ ಇಶಿತಾ ಕಳೆದ ವರ್ಷ ಅಗ್ನಿಪಥ್ ಯೋಜನೆಯಡಿ ರಕ್ಷಣಾ ಪಡೆ ಸೇರಿಕೊಂಡಿದ್ದಾರೆ.

ಈ ಕುರಿತು ಕಳೆದ ವರ್ಷ ತಮ್ಮ ಖುಷಿಯನ್ನು ಹಂಚಿಕೊಂಡಿದ್ದ ರವಿಕಿಶನ್ ನನ್ನ ಮಗಳು ತುಂಬಾ ಧೈರ್ಯವಂತೆ, ನಮ್ಮ ದೇಶ ಸೇವೆಗಾಗಿ ಕಳೆದ ಮೂರು ವರ್ಷಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದಳು. ಅದರ ಫಲವಾಗಿ ಆಕೆ ದಿಲ್ಲಿ ಡೈರೆಕ್ಟೊರೇಟ್‌ನ 7 ಗರ್ಲ್ಸ್ ಬೆಟಾಲಿಯನ್‌ನಲ್ಲಿ ಕೆಡೆಟ್ ಆಗಿದ್ದಾಳೆ. ಕರ್ತವ್ಯ ಪಥದಲ್ಲಿನ ಗಣರಾಜ್ಯೋತ್ಸವ ಪೆರೇಡ್‌ಗಾಗಿ ಈ ವಿಪರೀತ ಚಳಿಯಲ್ಲಿ ಮತ್ತು ಗಾಢವಾದ ಮಂಜಿನ ನಡುವೆ ತರಬೇತಿ ಪಡೆಯುತ್ತಿದ್ದಾಳೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಸಂಭ್ರಮಿಸಿದ್ದರು.
ಅಂದ್ಹಾಗೇ 2022ರಲ್ಲಿ ರಕ್ಷಣಾ ಸಚಿವರಾಗಿದ್ದ ರಾಜನಾಥ್ ಸಿಂಗ್ ಅವರು ಅಗ್ನಿಪಥ್ ಯೋಜನೆಯನ್ನು ಘೋಷಿಸಿದ್ದರು. ನಾಲ್ಕು ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಮಾಡಬಹುದೆಂದು ಹೇಳಿದ್ದರು. ನಾಲ್ಕು ವರ್ಷದ ನಂತರ 'ಅಗ್ನಿವೀರ್' ಗೆ ಒಂದು ದೊಡ್ಡ ಮೊತ್ತದ 'ನಿವೃತ್ತಿ' ಪ್ಯಾಕೇಜ್ ಅನ್ನು ಸಹ ಪಾವತಿಸಲಾಗುವುದು ಎಂದು ಹೇಳಿದ್ದರು.ಅದರಂತೆ ಅನೇಕರು ಅಗ್ನಿಪಥ್ ಯೋಜನೆಯಡಿ ದೇಶಸೇವೆ ಮಾಡಲು ಮುಂದಾಗಿದ್ದರು. ಆ ಪೈಕಿ ರವಿಕಿಶನ್ ಅವರ ಮಗಳು ಕೂಡ ಒಬ್ಬರು ಎನ್ನುವುದು ವಿಶೇಷ.
ಇನ್ನುಳಿದಂತೆ ಕಳೆದ ವರ್ಷ ರವಿಕಿಶನ್ ತಮ್ಮ ಮಗಳು ಭಾರತೀಯ ಸೇನೆಗೆ ಸೇವೆ ಸಲ್ಲಿಸುತ್ತಿರುವ ವಿಚಾರ ಹಂಚಿಕೊಂಡಾಗ ಅನೇಕರು ಶುಭ ಕೋರಿದ್ದರು. ಅಗ್ನಿವೀರ್ ಸ್ಕೀಮ್ ಅಡಿಯಲ್ಲಿ ರಕ್ಷಣಾ ಪಡೆಗೆ ಸೇರ್ಪಡೆಯಾಗಿರುವ ವಿಷಯ ತಿಳಿಯಿತು. ಈ ವಿಷಯ ತಿಳಿದು ತುಂಬಾ ಖುಷಿಯಾಯ್ತು. ಲಕ್ಷಾಂತರ ಮಕ್ಕಳಿಗೆ ಇಶಿತಾ ಪ್ರೇರಣೆಯಾಗಿದ್ದಾಳೆ ಎಂದು ಅನುಪಮ್ ಖೇರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ರವಿಕಿಶನ್ ಅವರಿಗೆ ಅಭಿನಂದನೆ ತಿಳಿಸಿದ್ದರು.
ಇವರಲ್ಲದೇ ಹಿರಿಯ ಬಿಜೆಪಿ ನಾಯಕ ಮತ್ತು ಗೋರಖ್‌ಪುರ ಶಾಸಕ ರವಿ ಕಿಶನ್ ಅವರ ಮಗಳು 'ಮಹಿಳಾ ಅಗ್ನಿವೀರ'ಳಾಗುತ್ತಿದ್ದು, ಅಭಿನಂದನೆಗಳು! ಅಗ್ನಿಪಥ್ ಯೋಜನೆ ಅಡಿ ಆಕೆ ಸೈನಿಕಳಾಗಿ ರಕ್ಷಣಾ ಪಡೆ ಸೇರಿಕೊಳ್ಳಲಿದ್ದಾಳೆ. ಮಗಳು ಇತಿಶಾಳ ಸಾಧನೆಯು ದೇಶದಾದ್ಯಂತ ಯುವಜನರಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಶಾಸಕ ದಿನೇಶ್ ಕಾರ್ತಿಕ್ ಶ್ಲಾಘಿಸಿದ್ದರು. ಇನ್ನು ಸೋಶಿಯಲ್ ಮೀಡಿಯಾ ಬಳಕೆದಾರರಲ್ಲಿ ಅನೇಕರು ದೇವರಿಗೆ ಧನ್ಯವಾದಗಳು, ಕಡೇಪಕ್ಷ ಕೆಲವು ನಟರ ಮಕ್ಕಳಾದರೂ ಸಿನಿಮಾ ರಂಗದಲ್ಲಿಯೇ ಇರಬೇಕು ಎಂಬ ಬಯಕೆಯಿಂದ ದೂರ ಇದ್ದಾರಲ್ಲ. ಆಕೆಗೆ ಒಳಿತಾಗಲಿ ಎಂದು ಹಾರೈಸಿದ್ದರು.


Click it and Unblock the Notifications











