ಅರೇ, ಉಪೇಂದ್ರ ನಿರ್ದೇಶನದ 'ಶ್' ಸಿನಿಮಾ ಆ ಚಿತ್ರದ ರೀಮೆಕಾ?
ರಿಯಲ್ ಸ್ಟಾರ್ ಉಪೇಂದ್ರ ಒಂದಕ್ಕಿಂದ ಒಂದು ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ತಮ್ಮ ವಿಭಿನ್ನ ಆಲೋಚನೆಗಳನ್ನು ತೆರೆಮೇಲೆ ತಂದು ಗೆದ್ದಿದ್ದಾರೆ. ಉಪ್ಪಿ ಸಿನಿಮಾ ಸ್ಟೈಲೇ ಬೇರೆ. ಇನ್ನು ಈವರೆಗೆ ಮಾಡಿದ ಚಿತ್ರಗಳೆಲ್ಲಾ ಒಂದಕ್ಕಿಂತ ಒಂದು ಭಿನ್ನ.
ಮೊದಲಿಗೆ 'ತರ್ಲೆ ನನ್ಮಗ' ಚಿತ್ರಕ್ಕೆ ಕಾಮಿಡಿ ಸ್ಟೋರಿ ಹೇಳಿದ್ದರು. ಬಳಿಕ 'ಶ್' ಚಿತ್ರದಲ್ಲಿ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಿ ಪ್ರೇಕ್ಷಕರನ್ನು ಹೆದರಿಸಿದ್ದರು. ಬಳಿಕ 'ಓಂ' ಚಿತ್ರದಲ್ಲಿ ಬೆಂಗಳೂರು ಭೂಗತ ಲೋಕ ತೆರೆಗೆದಿಟ್ಟಿದ್ದರು. ಪೊಲಿಟಿಕಲ್ ಥ್ರಿಲ್ಲರ್ 'ಆಪರೇಷನ್ ಅಂತ' ಕಟ್ಟಿಕೊಟ್ಟು ಗಮನ ಸೆಳೆದರು. 'ಎ' ಚಿತ್ರದಲ್ಲಿ ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಿತ್ತು. 'ಉಪೇಂದ್ರ' ಚಿತ್ರದಲ್ಲೂ ಸೈಕಲಾಜಿಕಲ್ ಡ್ರಾಮಾ ಇತ್ತು.

'ಸ್ವಸ್ತಿಕ್' ಚಿತ್ರದಲ್ಲಿ ಭಯೋತ್ಪಾದನೆ ಎಳೆ ಇತ್ತು. 'ಸೂಪರ್' ಚಿತ್ರದಲ್ಲಿ ಕೂಡ ಪೊಲಿಟಿಕಲ್ ಡ್ರಾಮಾ ಚಿತ್ರಣವಿತ್ತು. 'ಉಪ್ಪಿ'-2 ಚಿತ್ರದಲ್ಲಿ ಕೂಡ ವಿಭಿನ್ನ ಕಥೆಯಿತ್ತು. ಒಟ್ಟಾರೆ ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳನ್ನು ರಿಯಲ್ ಸ್ಟಾರ್ ತೆರೆಗೆ ತಂದಿದ್ದಾರೆ. ಸದ್ಯ 'ಯುಐ' ಚಿತ್ರದಲ್ಲಿ ಮತ್ತೊಂದು ಹೊಸ ಪ್ರಪಂಚವನ್ನೇ ಕಟ್ಟಿಕೊಡಲಿದ್ದಾರೆ. ಉಪೇಂದ್ರ ರೀಮೆಕ್ ಚಿತ್ರಗಳಲ್ಲಿ ನಟಿಸಿದ್ದರೂ ಯಾವುದೇ ರೀಮೆಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿಲ್ಲ.
ಸ್ವಂತ ಕಥೆಗಳನ್ನೇ ಉಪೇಂದ್ರ ತೆರೆಗೆ ತಂದಿದ್ದಾರೆ. ರಿಯಲ್ ಸ್ಟಾರ್ ಸಿನಿಮಾಗಳಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಭಾರತದ ಜನಪ್ರಿಯ ಸಿನಿಮಾ ನಿರ್ದೇಶಕರ ಪಟ್ಟಿಯಲ್ಲಿ ಉಪ್ಪಿ ಸ್ಥಾನಪಡೆದಿದ್ದಾರೆ. ಉಪೇಂದ್ರ ಯಾವುದೇ ಚಿತ್ರ ರೀಮೆಕ್ ಮಾಡಲಿಲ್ಲ ನಿಜ. ಆದರೆ 'ಶ್' ಚಿತ್ರಕ್ಕೆ ಒಂದು ಹಿಂದಿ ಚಿತ್ರದಿಂದ ಪ್ರೇರಣೆಗೊಂಡಿದ್ದರು ಎನ್ನುವ ವಿಚಾರ ಸಾಕಷ್ಟು ಜನರಿಗೆ ಗೊತ್ತಿಲ್ಲ.
1993ರಲ್ಲಿ 'ಶ್' ಸಿನಿಮಾ ತೆರೆಗೆ ಬಂದಿತ್ತು. ಕುಮಾರ್ ಗೋವಿಂದ್ ಹಾಗೂ ಕಾಶಿನಾಥ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು. ಉಪ್ಪಿ ಕೂಡ ಸಣ್ಣ ಝಲಕ್‌ನಲ್ಲಿ ಬಂದು ಹೋಗಿದ್ದರು. ಕುಮಾರ್ ಗೋವಿಂದ್ ಸ್ವತಃ ಈ ಹಾರರ್ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಿದ್ದರು. ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ರಿಯಲ್ ಸ್ಟಾರ್ ಕರಿಯರ್‌ನಲ್ಲಿ ವಿಶೇಷವಾದ ಸಿನಿಮಾ ಎನಿನಿಕೊಂಡಿತ್ತು. ಇವತ್ತಿಗೂ ಕನ್ನಡ ಹಾರರ್ ಸಿನಿಮಾಗಳ ಪಟ್ಟಿಯಲ್ಲಿ 'ಶ್' ಚಿತ್ರಕ್ಕೆ ಮೊದಲ ಸ್ಥಾನ ಸಿಗುತ್ತದೆ.

ಚಿತ್ರತಂಡವೊಂದು ತಮ್ಮ ಹೊಸ ಸಿನಿಮಾ ಚಿತ್ರೀಕರಣಕ್ಕಾಗಿ ಒಂಟಿ ಮನೆ ಎಸ್ಟೇಟ್‌ಗೆ ಹೋಗುವುದು. ಬಳಿಕ ಅಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುವುದು. ಹೆಣಗಳು ಉರುಳುವುದು. ಇದಕ್ಕೆಲ್ಲಾ ಕಾರಣ ದೆವ್ವ ಎಂದು ಪುಕಾರ್ ಆಗುವುದು. ಮುಂದೆ ನಾಯಕ ಕುಮಾರ್ ಆ ರಹಸ್ಯ ಭೇದಿಸುವುದು 'ಶ್' ಚಿತ್ರದ ಕಥೆ. ಹಿಂದಿಯಲ್ಲಿ ಬಂದ 'ಖಾಮೋಶ್' ಚಿತ್ರದ ಕಥೆಗೂ ಕನ್ನಡದ 'ಶ್' ಕಥೆಗೂ ಒಂದಷ್ಟು ಸಾಮ್ಯತೆಯಿದೆ.
ವಿಧು ವಿನೋದ್ ಚೋಪ್ರಾ ನಿರ್ದೇಶನದ 'ಖಾಮೋಶ್' ಸಿನಿಮಾ 1986ರಲ್ಲಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಅಮೋಲ್ ಪಾಲೇಕರ್, ನಸೀರುದ್ದೀನ್ ಶಾ, ಶಬಾನಾ ಅಜ್ಮಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದರು. ಇವತ್ತಿಗೂ ಈ ಸಿನಿಮಾ ಮೆಚ್ಚಿಕೊಂಡವರು ಬಹಳ ಜನ ಇದ್ದಾರೆ. 80ರ ದಶಕದ ಹಾರರ್ ಚಿತ್ರಗಳಲ್ಲಿ 'ಖಾಮೋಶ್' ಚಿತ್ರವನ್ನು ಮರೆಯುವಂತಿಲ್ಲ. ಇದೇ ಚಿತ್ರದಿಂದ ಉಪೇಂದ್ರ ಪ್ರೇರಣೆಗೊಂಡು 'ಶ್' ಸಿನಿಮಾ ಮಾಡಿರುವುದು ಗೊತ್ತಾಗುತ್ತದೆ.
'ಖಾಮೋಶ್' ಚಿತ್ರದಲ್ಲಿ ಕೂಡ ಚಿತ್ರತಂಡವೊಂದು ಕಾಶ್ಮೀರದ ಪಲಹ್‌ಗಾಮ್‌ಗೆ ತೆರಳುತ್ತದೆ. ಬಳಿಕ ಒಂದಷ್ಟು ಚಿತ್ರವಿಚಿತ್ರ ಘಟನೆಗಳು ನಡೆಯುತ್ತದೆ. ಮುಂದೆ ನಸೀರುದ್ದೀನ್ ಶಾ ಅದರ ಮೂಲ ಪತ್ತೆ ಮಾಡುತ್ತಾನೆ. 'ಶ್' ಚಿತ್ರದ ಕೆಲ ದೃಶ್ಯಗಳು 'ಖಾಮೋಶ್' ಚಿತ್ರವನ್ನು ಕಣ್ಮುಂದೆ ತರುವುದು ಸುಳ್ಳಲ್ಲ.
ಅಧಿಕೃತವಾಗಿ 'ಖಾಮೋಶ್' ಚಿತ್ರದ ರೀಮೆಕ್ 'ಶ್' ಎಂದು ಯಾರು ಹೇಳಿಲ್ಲ. ಇಡೀ ಸಿನಿಮಾ ಸೇಮ್ ಟು ಸೇಮ್ ಇಲ್ಲ. ಚಿತ್ರದ ಆರಂಭ, ಆರಂಭದ ನಿರೂಪಣೆ, ಒಂದಷ್ಟು ಸನ್ನಿವೇಶಗಳಲ್ಲಿ ಹೋಲಿಕೆ ಇದೆ. ಮುಂದೆ ಕಥೆ ಬೇರೆ ಬೇರೆ ರೀತಿ ಸಾಗುತ್ತದೆ. ಆದರೆ 'ಶ್' ಚಿತ್ರಕ್ಕೆ 'ಖಾಮೋಶ್' ಸ್ಫೂರ್ತಿ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.


Click it and Unblock the Notifications











