Dinakar Thoogudeepa: "ನವಗ್ರಹ-2 ಚಿತ್ರಕ್ಕೆ ನನ್ನತ್ರ ಕತೆ ರೆಡಿಯಿದೆ.. ಸಿನ್ಮಾ ಯಾವಾಗ ಅಂದ್ರೆ?": ದಿನಕರ್
ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳೆಲ್ಲಾ ಒಟ್ಟಾಗಿ ನಟಿಸಿದ್ದ ಸಿನಿಮಾ 'ನವಗ್ರಹ'. ತಮ್ಮದೇ ಬ್ಯಾನರ್‌ನಲ್ಲಿ ನಟ ದರ್ಶನ್ ಸಿನಿಮಾ ನಿರ್ಮಿಸಿ ನಟಿಸಿದ್ದರು. ಸಹೋದರ ದಿನಕರ್ ತೂಗುದೀಪ ಆಕ್ಷನ್ ಕಟ್ ಹೇಳಿದ್ದರು. ವಿಭಿನ್ನ ಕಥಾಹಂದರದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸಿನಿರಸಿಕರ ಮನಗೆದ್ದಿತ್ತು.
'ನವಗ್ರಹ' ಚಿತ್ರದಲ್ಲಿ ತೂಗುದೀಪ ಶ್ರೀವಾಸ್ ಪುತ್ರ ದರ್ಶನ್, ಸುಧೀರ್ ಪುತ್ರ ನಂದ ಕಿಶೋರ್, ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್, ಲೋಕೇಶ್ ಪುತ್ರ ಸೃಜನ್, ದಿನೇಶ್ ಪುತ್ರ ಗಿರಿ, ಸುಂದರ್ ರಾಜ್ ಅರಸ್ ಪುತ್ರ ನಾಗೇಂದ್ರ ಹಾಗೂ ಕೀರ್ತಿರಾಜ್ ಪುತ್ರ ಧರ್ಮ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಶರ್ಮಿಳಾ ಮಾಂಡ್ರೆ ಹಾಗೂ ವರ್ಷ ಮುಖ್ಯಭೂಮಿಕೆಯಲ್ಲಿದ್ದರು.

ಒಂಭತ್ತು ಜನ ಕ್ರಿಮಿನಲ್‌ಗಳು ಸೇರಿ ಮೈಸೂರು ಅರಮನೆಯ ಅಂಬಾರಿಯನ್ನು ಕದಿಯುವ ಪ್ರಯತ್ನ ಮಾಡ್ತಾರೆ. ಆ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ? ಅನ್ನೋದನ್ನು ದಿನಕರ್ ತೂಗುದೀಪ ತೆರೆಗೆ ತಂದಿದ್ದರು. ವಿ. ಹರಿಕೃಷ್ಣ ಸಂಗೀತ ಹಾಗೂ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಚಿತ್ರಕ್ಕೆ ಪ್ಲಸ್ ಆಗಿತ್ತು. 15 ವರ್ಷಗಳ ಹಿಂದೆ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಂದುಮಟ್ಟಿಗೆ ಸಕ್ಸಸ್ ಕಂಡಿತ್ತು.
ಖಳನಟರ ಮಕ್ಕಳನ್ನೆಲ್ಲಾ ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿದ ದರ್ಶನ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಅಭಿಮಾನಿಗಳು 'ನವಗ್ರಹ' ಸೀಕ್ವೆಲ್ ಕೇಳುತ್ತಲೇ ಇದ್ದಾರೆ. ಈ ಬಗ್ಗೆ ದರ್ಶನ್ ಹಾಗೂ ದಿನಕರ್‌ಗೂ ಸಾಕಷ್ಟು ಪ್ರಶ್ನೆಗಳು ಎದುರಾಗಿದೆ. ಆದರೆ ಸಿನಿಮಾ ಮಾಡುವ ಪ್ರಯತ್ನ ಮಾತ್ರ ಶುರುವಾಗಲಿಲ್ಲ. ಇತ್ತೀಚೆಗೆ ಅಭಿಮಾನಿಯೊಬ್ಬರು ತಮ್ಮದೇ ಕಲ್ಪನೆಯಲ್ಲಿ 'ನವಗ್ರಹ' ಸೀಕ್ವೆಲ್ ಕತೆ ಮಾಡಿ ಆನಿಮೇಷನ್ ಸಿನಿಮಾ ಮಾಡಿದ್ದರು. ಯೂಟ್ಯೂಬ್‌ನಲ್ಲಿ ಅದು ಸಖತ್ ವೈರಲ್ ಆಗಿತ್ತು.
ದರ್ಶನ್ ಅಭಿಮಾನಿಗಳು ಕೂಡ ಈ ಆನಿಮೇಟೆಡ್ 'ನವಗ್ರಹ'-2 ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ನಿರ್ದೇಶಕ ದಿನಕರ್ ತುಗುದೀಪ ಕೂಡ ಇದನ್ನು ನೋಡಿ ಮೆಚ್ಚಿಕೊಂಡಿದ್ದರು. ಇತ್ತೀಚಿಗೆ ದಿನಕರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೇ ಸಮಯದಲ್ಲಿ ನ್ಯಾಷನಲ್ ಟಿವಿ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ದಿನಕರ್ 'ನವಗ್ರಹ'-2 ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

"ನಾನು ಕೂಡ ಆ ವಿಡಿಯೋ ನೋಡಿದೆ. ಯಾರು ಮಾಡಿದ್ರೋ ಗೊತ್ತಿಲ್ಲ. ಐಡಿಯಾ ತುಂಬಾ ಚೆನ್ನಾಗಿದೆ. ತುಂಬಾ ಇನೋವೇಟಿವ್ ಆಗಿ ಮಾಡಿದ್ದಾರೆ. ಆದರೆ ಸದ್ಯಕ್ಕೆ 'ನವಗ್ರಹ-2' ಮಾಡುವ ಪ್ಲ್ಯಾನ್ಸ್ ಇಲ್ಲ. ಮಾಡಿದರೂ ಆ ಸ್ಟೋರಿಲೈನ್ ಇರಲ್ಲ. ನನ್ನ ತಲೆಯಲ್ಲಿ ಬೇರೆ ಸ್ಟೋರಿಲೈನ್ ಇದೆ. ಬಟ್ ಅವರು ಚೆನ್ನಾಗಿ ಮಾಡಿದ್ದಾರೆ. ಪಾರ್ಟ್-2 ಮಾಡಿದ್ರೆ ಹೀಗೆ ಮಾಡ್ಬೋದು ಅಂತ ನನಗೂ ಒಂದು ಐಡಿಯಾ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನೋಡೋಣ" ಎಂದಿದ್ದಾರೆ.
ನಿರ್ದೇಶಕ ದಿನಕರ್ ತೂಗುದೀಪ ಮಾತು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. 'ನವಗ್ರಹ-2' ಸಿನಿಮಾ ಬಂದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರೆ. ದಿನಕರ್ ಮಾತನಾಡಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ದರ್ಶನ್ ಅಭಿಮಾನಿ ಬಸವರಾಜ್ ಎಂಬುವವರು ಆ ರೀತಿ ಕತೆ ಹೆಣೆದು 'ನವಗ್ರಹ-2' ಆನಿಮೇಷನ್ ಸಿನಿಮಾ ಮಾಡಿದ್ದರು.
ಸದ್ಯ ದಿನಕರ್ ಬೇರೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜಯಣ್ಣ ಕಂಬೈನ್ಸ್ ಬ್ಯಾನರ್‌ನಲ್ಲಿ 'ರಾಯಲ್' ಎನ್ನುವ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ವಿರಾಟ್ ಹಾಗೂ ಸಂಜನಾ ಆನಂದ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಇದಕ್ಕು ಮುನ್ನ ಪುನೀತ್ ರಾಜ್‌ಕುಮಾರ್ ನಟನೆಯ ಚಿತ್ರವನ್ನು ದಿನಕರ್ ಪ್ಲ್ಯಾನ್ ಮಾಡಿದ್ದರು. ಕತೆ ಕೂಡ ಹೇಳಿ ಒಪ್ಪಿಸಿದ್ದರು. ಆದರೆ ಸಿನಿಮಾ ಸೆಟ್ಟೇರುವ ಮುನ್ನ ಅಪ್ಪು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು.


Click it and Unblock the Notifications











