"ಇಂಡಸ್ಟ್ರಿ ನಿಮ್ಮಿಬ್ಬರ ಮೇಲೆ ಕಾಲಿಟ್ಟುಕೊಂಡು ನಿಂತುಬಿಟ್ಟಿದೆ" ಎಂದಿದ್ದರು ಸುದೀಪ್
ನಟ ಸುದೀಪ್ ಹಾಗೂ ದರ್ಶನ್ ಒಂದ್ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿ ಇದ್ದಿದ್ದು ಬಳಿಕ ದೂರಾಗಿದ್ದರು ಎಲ್ಲಾ ಗೊತ್ತೇಯಿದೆ. ಇಬ್ಬರು ಮತ್ತೆ ಒಂದಾಗಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 20 ವರ್ಷಗಳ ಹಿಂದೆ ಒಟ್ಟೊಟ್ಟಿಗೆ ಚಿತ್ರರಂಗಕ್ಕೆ ಬಂದಿದ್ದ ಸುದೀಪ್- ದರ್ಶನ್ ಬಳಿಕ ಕುಚಿಕು ಗೆಳೆಯರಾಗಿದ್ದರು.
ಕನ್ನಡದಲ್ಲಿ ಚಿತ್ರದಲ್ಲಿ ವಿಷ್ಣು-ಅಂಬಿ ಬಳಿಕ ಆ ಮಟ್ಟಿಗೆ ಸ್ಟಾರ್ ನಟರಿಬ್ಬರು ಆಪ್ತ ಸ್ನೇಹಿತರಾಗಿದ್ದು ಇವರಿಬ್ಬರು. ಹೋದಲ್ಲಿ ಬಂದಲ್ಲಿ ಹೆಗಲ ಮೇಲೆ ಕೈಹಾಕಿಕೊಂಡು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ದರ್ಶನ್ ನಟನೆಯ 'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ಸುದೀಪ್ ವಾಯ್ಸ್ ಓವರ್ ಕೊಟ್ಟಿದ್ದರು. ಸುದೀಪ್ ಸಿನಿಮಾ ಕಾರ್ಯಕ್ರಮದಲ್ಲಿ ದರ್ಶನ್ ಸಹ ಭಾಗಿ ಆಗುತ್ತಿದ್ದರು.

'ಸಾರಥಿ' ಸಿನಿಮಾ ಸಮಯದಲ್ಲಿ ನಟ ದರ್ಶನ್ ಜೈಲಿನಲ್ಲಿ ಇದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಆ ಸಿನಿಮಾ ಬಿಡುಗಡೆ ಸಮಯದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಸಹೋದರ ದಿನಕರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಹಾಗಾಗಿ ಅಣ್ಣ-ತಮ್ಮಂದಿಕ ಕಥೆ ಮುಗೀತು ಎಂದೇ ಚಿತ್ರರಂಗದಲ್ಲಿ ಕೆಲವರು ಮಾತನಾಡಿದ್ದರು. ಆದರೆ ಆ ಸಿನಿಮಾ ಬಿಡುಗಡೆ ಆಗಿ ಎಲ್ಲಾ ಲೆಕ್ಕಾಚಾರ ತಲೆ ಕೆಳಗಾಗಿತ್ತು.
ನಿರ್ಮಾಪಕರು ಸಾಲ ಮಾಡಿ 'ಸಾರಥಿ' ನಿರ್ಮಿಸಿ ಸಂಕಷ್ಟಕ್ಕೆ ಸಿಲುಕಿದ್ದರು. ಸಿನಿಮಾ ಬಿಡುಗಡೆ ಮಾಡಲು ಐದಾರು ತಿಂಗಳು ತಡವಾಗಿತ್ತು. ಮತ್ತೊಂದು ಕಡೆ ದರ್ಶನ್ ಜೈಲಿನಲ್ಲಿ ಇದ್ದರು. ಅಂತಹ ಹೊತ್ತಲ್ಲಿ ಸಿನಿಮಾ ರಿಲೀಸ್ ಮಾಡಬೇಕೋ ಬೇಡವೋ ಎನ್ನುವ ಗೊಂದಲ ಒಂದು ಕಡೆ. ಮತ್ತೊಂದು ಕಡೆ ಸಿನಿಮಾ ಬಿಡುಗಡೆ ಆದರೆ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಿರ್ಮಾಪಕರು ಪಟ್ಟು ಹಿಡಿದರು.
'ಸಾರಥಿ' ಸಿನಿಮಾ ಬಿಡುಗಡೆ ಗೊಂದಲದಲ್ಲಿ ಇದ್ದಾಗಲೇ ನಟ ಸುದೀಪ್ ಫೋನ್ ಮಾಡಿ ದಿನಕರ್ ತೂಗುದೀಪ ಅವರಿಗೆ ಧೈರ್ಯ ತುಂಬಿದ್ದರು. ಈ ವಿಚಾರವನ್ನು ನ್ಯೂಸ್‌ಫಸ್ಟ್ ಸಂದರ್ಶನದಲ್ಲಿ ದಿನಕರ್ ನೆನಪಿಕೊಂಡಿದ್ದಾರೆ. ಸುದೀಪ್ ಅಂದು ಏನು ಹೇಳಿದರು ಎನ್ನುವುದನ್ನು ವಿವರಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

"ಸಾರಥಿ ಸಿನಿಮಾ ಬಿಡುಗಡೆಗೆ ಒಂದು ವಾರ ಇದ್ದಾಗ ಸುದೀಪ್ ಸರ್ ಫೋನ್ ಮಾಡಿದ್ದರು. ಜೀವನ ಹೀಗಾಗಿಬಿಡ್ತಲ್ಲ ಎಂದು ನಾನು ಬಹಳ ಕುಗ್ಗಿ ಹೋಗಿದ್ದೆ. ಆ ಸಮಯದಲ್ಲಿ ಸುದೀಪ್ ಸರ್ ಕರೆ ಮಾಡಿದ್ದರು. ನಾನು ಸುದೀಪ್ ಮಾತನಾಡೋದು ಅಂದ್ರು. ಒಂದಷ್ಟು ಹೊತ್ತು ಮಾತನಾಡಿ ಸುದೀಪ್ ಸರ್ ನನಗೆ ಕಾನ್ಫಿಡೆನ್ಸ್ ತುಂಬಿದರು"
"ಅಂದು ಸುದೀಪ್ ಸರ್ ಕೊನೆಗೊಂದು ಮಾತು ಹೇಳಿದರು. ಆ ಮಾತು ಇನ್ನು ನನಗೆ ನೆನಪಿದೆ. ನೋಡು ಇಡೀ ಇಂಡಸ್ಟ್ರಿ ನೀವಿಬ್ಬರು ಅಣ್ಣ-ತಮ್ಮಂದಿರ ಮೇಲೆ ಕಾಲಿಟ್ಟುಕೊಂಡು ನಿಂತುಬಿಟ್ಟಿದೆ ಈಗ. ನೀವಿಬ್ಬರು ಶಕ್ತಿ ತಗೊಂಡು ಎದ್ದು ನಿಂತರೆ ಅವರೆಲ್ಲರೂ ಬ್ಯಾಲೆನ್ಸ್ ತಪ್ಪಿ ಬೀಳ್ತಾರೆ. ನೀವಿಬ್ಬರೇ ನಿಂತಿರ್ತೀರಾ. ಖಂಡಿತ ಒಳ್ಳೆಯದಾಗುತ್ತೆ ಎಂದು ಧೈರ್ಯ ತುಂಬಿದ್ದರು" ಎಂದಿದ್ದಾರೆ.
ಅಂದಾಜು 8.5 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಸಾರಥಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಸಿನಿಮಾ ತೆರೆಕಂಡು ಎರಡು ವಾರಗಳ ಬಳಿಕ ದರ್ಶನ್ ಜೈಲಿನಿಂದ ಹೊರ ಬಂದಿದ್ದರು. ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡು ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದರು. ಬಳಿಕ ದರ್ಶನ್ ಹಿಂತಿರುಗಿ ನೋಡಲೇಯಿಲ್ಲ.
ದಿನಕರ್ ತೂಗುದೀಪ್ ಇವತ್ತಿಗೂ ನಟ ಸುದೀಪ್ ಜೊತೆ ಒಳ್ಳೆ ಒಡನಾಟ ಇಟ್ಟುಕೊಂಡಿದ್ದಾರೆ. ಸುದೀಪ್ ನೇತೃತ್ವದ ಕೆಸಿಸಿ ಕ್ರಿಕೆಟ್ ಟ್ರೂರ್ನಿಯಲ್ಲೂ ಭಾಗವಾಹಿಸುತ್ತಾರೆ. ಸದ್ಯ 'ರಾಯಲ್' ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











