'ಸಾರಥಿ' ರಿಲೀಸ್ ಟೈಮಲ್ಲಿ ಅಣ್ಣ, ಅತ್ತಿಗೆ ಇಷ್ಯು ಆಗೋಯ್ತು.. ಎಲ್ರ ಫ್ಯಾಮಿಲಿಲೀ ಇರೋದೇ, ಇದು ಕೊಂಚ ಜಾಸ್ತಿ ಆಗಿತ್ತು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಕೂಡ ಸಾಕಷ್ಟು ಸಂಕಷ್ಟ ಎದುರಿಸಿದ ದಿನಗಳಿವೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 13 ವರ್ಷಗಳ ಹಿಂದೆ ಜೈಲುವಾಸ ಅನುಭವಿಸುವಂತಾಗಿತ್ತು. ಆದರೆ ಅದನ್ನೆಲ್ಲಾ ಮೀರಿ ಇವತ್ತಿಗೂ ಕನ್ನಡ ಚಿತ್ರರಂಗ ಸ್ಟಾರ್ ನಟನಾಗಿ ಅಬ್ಬರಿಸುತ್ತಿದ್ದಾರೆ.
2011ರಲ್ಲಿ ನಟ ದರ್ಶನ್ ಜೈಲು ಸೇರಿದಾಗ ಅವರ ಸಿನಿಕರಿಯರ್ ಮುಗಿದೇ ಹೋಯಿತು ಎಂದು ಗಾಂಧಿನಗರ ಮಾತನಾಡಿಕೊಂಡಿತ್ತು. ಸಾಕಷ್ಟು ಗೊಂದಲಗಳ ನಡುವೆ ಬಿಡುಗಡೆ ಆಗಿದ್ದ 'ಸಾರಥಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಮತ್ತೆ ಫೀನಿಕ್ಸ್ ರೀತಿ ಎದ್ದು ಬಂದಿದ್ದರು. ಆ ಸಿನಿಮಾ ಬಿಡುಗಡೆ ಸಮಯದಲ್ಲಿ ದರ್ಶನ್ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದರು. ಸಿನಿಮಾ ತೆರೆಕಂಡ 2 ವಾರಗಳ ಬಳಿಕ ದರ್ಶನ್ ಜೈಲಿನಿಂದ ಬಿಡುಗಡೆ ಆಗಿದ್ದರು.

ದರ್ಶನ್ ಸಹೋದರ ದಿನಕರ್ ಸಾರಥಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕೆ. ವಿ ಸತ್ಯಪ್ರಕಾಶ್ ಸಾಲ ಮಾಡಿ ಸಿನಿಮಾ ನಿರ್ಮಾಣ ಮಾಡಿಬಿಟ್ಟಿದ್ದರು. ದರ್ಶನ್ ಜೈಲಿನಲ್ಲಿ ಇರುವಾಗ ಸಿನಿಮಾ ಬಿಡುಗಡೆ ಮಾಡಬೇಕಾ? ಬೇಡ್ವಾ? ಎನ್ನುವ ಗೊಂದಲ ಇತ್ತು. ಆದರೆ ನಿರ್ಮಾಪಕರು ಪಟ್ಟು ಹಿಡಿದು ಸಿನಿಮಾ ತೆರೆಗೆ ತಂದಿದ್ದರು. ಎಲ್ಲರ ನಿರೀಕ್ಷೆ ಹುಸಿಯಾಗಿ ಸಿನಿಮಾ ಗೆದ್ದು ದರ್ಶನ್‌ಗೆ ಚಿತ್ರರಂಗದಲ್ಲಿ ಮರುಜೀವ ಕೊಟ್ಟಿತ್ತು. ನ್ಯೂಸ್‌ಫಸ್ಟ್ ಸಂದರ್ಶನದಲ್ಲಿ ನಿರ್ದೇಶಕ ದಿನಕರ್ 'ಸಾರಥಿ' ಬಿಡುಗಡೆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ಸಾರಥಿ ಸಿನಿಮಾ ರಿಲೀಸ್ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ನಿರ್ಮಾಪಕರು ಫೈನಾನ್ಸ್ ಕ್ಲಿಯರ್ ಮಾಡದೇ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕಿರಲಿಲ್ಲ. ನಾಲ್ಕೂವರೆ ಗಂಟೆ ಸಿನಿಮಾ ಇತ್ತು. ಹಣಕಾಸಿನ ಸಮಸ್ಯೆಯಿಂದ ಸಿನಿಮಾ ರಿಲೀಸ್ ಐದಾರು ತಿಂಗಳು ತಡವಾಯಿತು. ಆ ಸಮಯದಲ್ಲಿ ನಾನು ಎಡಿಟಿಂಗ್ ಟೇಬಲ್‌ನಲ್ಲಿ ಚಿತ್ರವನ್ನು ಟ್ರಿಮ್ ಮಾಡುವ ಕೆಲಸ ಮಾಡುತ್ತಿದ್ದೆ. ಎಲ್ಲಾ ಮುಗಿದು ಸಿನಿಮಾ ರಿಲೀಸ್ ಹೊತ್ತಲ್ಲಿ ದಿಢೀರನೆ ನಮ್ಮ ಲೈಫಲ್ಲಿ ಬಾಂಬ್ ರೀತಿ ದರ್ಶನ್ ಹಾಗೂ ಅತ್ತಿಗೆ ಇಷ್ಯೂ ಆಗೋಗಿತ್ತು" ಎಂದು ನೆನಪಿಸಿಕೊಂಡಿದ್ದಾರೆ.

"ಸೆಪ್ಟೆಂಬರ್ 30ಕ್ಕೆ ಸಿನಿಮಾ ಬಿಡುಗಡೆ ಮಾಡಲೇಬೇಕು ಎಂದು ನಿರ್ಮಾಪಕರು ಫಿಕ್ಸ್ ಆಗಿದ್ದರು. ದರ್ಶನ್ ಅವ್ರು ಆಗ ಜೆಸಿ(judicial custody)ಯಲ್ಲಿ ಇದ್ದಾರೆ. ಹೊರಗೆ ಬಂದ ಮೇಲೆ ಸಿನಿಮಾ ರಿಲೀಸ್ ಮಾಡೋಣ ಎಂದೆ. ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಎಲ್ಲಾ ಇಟ್ಟಿದ್ದೆ. ಮಹಿಳೆಯರು ಹೆಂಗೆ ಪ್ರತಿಕ್ರಿಯಿಸುತ್ತಾರೋ ಎನ್ನುವ ಭಯ ನನಗಿತ್ತು. ಆದರೂ ನಿರ್ಮಾಪಕರು ಒಪ್ಪಲಿಲ್ಲ. ಅದೇ ದಿನ ಬಿಡುಗಡೆ ಮಾಡಿದೆವು. ಸಿನಿಮಾ ಬಂದು ಹಿಟ್ ಆಗಿ ಎಲ್ಲವನ್ನು ಮರೆಸಿಬಿಟ್ಟಿತ್ತು"
"ಒಮ್ಮೆ ಜೈಲಿಗೆ ಹೋದಾಗ ಯಾಕೆ ಇಂತಹ ಹೊತ್ತಲ್ಲಿ ಸಿನಿಮಾ ರಿಲೀಸ್ ಮಾಡ್ತೀರಾ? ತೊಂದರೆ ಆಗುತ್ತದೆ ಎಂದ. ಸಿನಿಮಾ ರಿಲೀಸ್ ಹಿಂದಿನ ದಿನ ನಾನು ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿದ್ದ. ಸಿನಿಮಾ ನಿನಗೆ ಏನು ಅನ್ನಿಸುತ್ತದೆ ಎಂದು ಕೇಳ್ದ. ನಾನು ಈ ಸಿನಿಮಾ ಗೆಲ್ಲದಿದ್ದರೆ ನಾನು ಇನ್ನುಮುಂದೆ ನಿರ್ದೇಶನ ಮಾಡಲ್ಲ ಎಂದಿದ್ದೆ. ಅವನು ಆ ರೀತಿ ಹೇಳಬೇಡ ಅಂದ. ಆ ದಿನ ಬೆಳಗಿನ ಜಾವ 5 ಗಂಟೆವರೆಗೂ ಸಿನಿಮಾ ರಿಲೀಸ್ ಗ್ಯಾರೆಂಟಿ ಇರಲಿಲ್ಲ. ಅಷ್ಟರ ಮಟ್ಟಿಗೆ ಸಮಸ್ಯೆಗಳಿತ್ತು" ಎಂದು ತಿಳಿಸಿದ್ದಾರೆ.
"ಸಾರಥಿ ರಿಲೀಸ್ ಆಗಿ 2 ವಾರಗಳ ಬಳಿ ದರ್ಶನ್ ಜೈಲಿನಿಂದ ಬಿಡುಗಡೆ ಆಗಿ ಬಂದ. 5ನೇ ವಾರ ವಿಜಯಯಾತ್ರೆ ಹೋಗಬೇಕು ಎಂದುಕೊಂಡೆವು. ದರ್ಶನ್‌ಗೆ ಕೊಂಚ ಮುಜುಗರ ಆಗಿತ್ತು. ಈ ರೀತಿ ಆದ್ಮೇಲೆ ಹೇಗೆ ಜನರನ್ನು ಎದುರಿಸುವುದು ಅಂತ. ಆದರೆ ನನಗೆ ಅನ್ನಿಸಿದ್ದು ಅವನು ಜನರ ಮುಂದೆ ಹೋದರೆ ಮತ್ತಷ್ಟು ಕಾನ್ಫಿಡೆನ್ಸ್ ಬರುತ್ತೆ ಅಂತ. ಸಿನ್ಮಾ ಹಿಟ್ ಆದಾಗ್ಲೇ ಜನ ಕ್ಷಮಿಸಿದ್ದಾರೆ ಎಂದು ಗೊತ್ತಾಗಿತ್ತು. ಯಾಕಂದ್ರೆ ಎಲ್ಲರ ಫ್ಯಾಮಿಲಿಯಲ್ಲಿ ಇರೋದೆ. ಇದು ಒಂದು ಹಂತ ಜಾಸ್ತಿ ಆಗಿತ್ತು. ವಿಜಯಯಾತ್ರೆ ವೇಳೆ ಎಲ್ಲೆಡೆ ಹೂವಿನ ಅಭಿಷೇಕ ಮಾಡಿದರು" ಎಂದು ದಿನಕರ್ ವಿವರಿಸಿದ್ದಾರೆ.


Click it and Unblock the Notifications











