ಪ್ರೀತಿಯ 'ಅಂಬಾರಿ' ನಿರ್ಮಾಣಕ್ಕೆ ಖರ್ಚಾಗಿದ್ದು ಎಷ್ಟು? ಚಿತ್ರ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಲೂಸ್ ಮಾದ ಯೋಗಿ ಹಾಗೂ ಸುಪ್ರೀತಾ ನಟಿಸಿದ 'ಅಂಬಾರಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. 14 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಈ ಮ್ಯೂಸಿಕಲ್ ಲವ್ ಸ್ಟೋರಿಗೆ ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದರು. ಚಪ್ಪಲಿ ಹೊಲಿಯುವ ಯುವಕ ಹಾಗೂ ಶ್ರೀಮಂತರ ಮನೆ ಹುಡುಗಿಯ ನಡುವಿನ ಪ್ರೇಮಕಥೆ ಅದು.
'ದುನಿಯಾ' ಚಿತ್ರದಲ್ಲಿ ಲೂಸ್ ಮಾದ ಆಗಿ ಮಿಂಚಿದ್ದ ಯೋಗಿಶ್ ಗಮನ ಸೆಳೆದಿದ್ದರು. ಬಳಿಕ 'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ಹೀರೊ ಆಗಿದ್ದರು. ಮೊದಲ ಸಿನಿಮಾ ಹಿಟ್ ಬಳಿಕ ಪ್ರೀತಿಯ 'ಅಂಬಾರಿ' ಏರಿ ಮತ್ತೆ ಗೆಲುವಿನ ನಗೆ ಬೀರಿದರು. ನಿರ್ದೇಶಕ ಪಿ. ಎನ್ ಸತ್ಯ ಜೊತೆ ಸಹಾಯಕ ನಿರ್ದೇಶಕರಾಗಿ ಎ. ಪಿ ಅರ್ಜುನ್ ಕೆಲಸ ಮಾಡಿದ್ದರು. 'ತಂಗಿಗಾಗಿ' ಚಿತ್ರಕ್ಕಾಗಿ ಹಾಡುಗಳನ್ನು ಬರೆದರು. ಬಳಿಕ ಸ್ವತಂತ್ರ ನಿರ್ದೇಶಕರಾಗಿ ಪರಿಚಿತರಾದರು.

ಒಮ್ಮೆ ಎ. ಪಿ ಅರ್ಜುನ್ ಬಸ್‌ನಲ್ಲಿ ಎಂ. ಎಸ್ ರಾಮಯ್ಯ ಆಸ್ಪತ್ರೆ ಬಳಿ ಹೋಗುತ್ತಿದ್ದಾಗ ನೋಡಿದ ಒಂದು ದೃಶ್ಯ 'ಅಂಬಾರಿ' ಚಿತ್ರಕ್ಕೆ ಸ್ಫೂರ್ತಿ ಆಗಿತ್ತು. ಯುವತಿಯೊಬ್ಬಳು ತಲೆಗೆ ವೇಲ್ ಸುತ್ತಿಕೊಂಡು ರಸ್ತೆ ಬದಿಯಲ್ಲಿ ಚಪ್ಪಲಿ ಹೊಲೆಸುತ್ತಿದ್ದಳು, ಒಬ್ಬ ಯುವಕ ತಲೆ ಎಣ್ಣೆ ಹಾಕಿಕೊಂಡು ಚಪ್ಪಲಿ ಹೊಲೆದು ಕೊಡುತ್ತಿದ್ದ ಫ್ರೇಮ್ ನನ್ನ ತಲೆಯಲ್ಲಿ ಕೂತು ಇಡೀ ಕಥೆಗೆ ಪ್ರೇರಣೆ ಆಯಿತು ಎಂದು ನಿರ್ದೇಶಕರು ವಿವರಿಸಿದ್ದಾರೆ.
ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸ್ಪೀಡ್ ನ್ಯೂಸ್ ಕನ್ನಡ ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ತಮ್ಮ ಸಿನಿಜರ್ನಿ ನೆನಪಿಸಿಕೊಂಡಿದ್ದಾರೆ. 'ಅಂಬಾರಿ' ಚಿತ್ರದ ಮೇಕಿಂಗ್ ಬಗ್ಗೆಯೂ ಮಾತನಾಡಿದ್ದಾರೆ. ಯೋಗಿಗೆ ಚಿತ್ರದ ನಾಯಕನ ಪಾತ್ರ ಸೂಕ್ತವಾಗಿರುತ್ತದೆ ಎಂದು ಅನ್ನಿಸಿ ಅವರ ಮನೆಗೆ ಹೋಗಿ ಕಥೆ ಹೇಳಿದ್ದೆ. ಕಥೆ ಮೆಚ್ಚಿ ಸಿನಿಮಾ ಮಾಡಲು ಒಪ್ಪಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಯೋಗಿ ತಂದೆ ಸಿದ್ಧರಾಜು ಅವರು ಕಥೆ ಬಹಳ ಇಷ್ಟ ಆಗಿ ಸಿನಿಮಾ ಮಾಡೋಣ ಅಂದರು. ರಂಗನಾಥ್ ನಾಯ್ಡು ಹಾಗೂ ಸಿದ್ಧರಾಜು ಇಬ್ಬರೂ ಸೇರಿ ಸಿನಿಮಾ ನಿರ್ಮಿಸಿದರು. ಚಿತ್ರಕ್ಕೆ ಅವತ್ತಿನ ಕಾಲಕ್ಕೆ 2 ಕೋಟಿ 40 ಲಕ್ಷ ರೂ. ಬಜೆಟ್ ಆಗಿತ್ತು. ಬೆಂಗಳೂರಿನಿಂದ ತಾಜ್ ಮಹಲ್‌ವರೆಗೆ ಸಾಗುವ ಕಥೆ ಅದು. ಹಾಗಾಗಿ ಹೆಚ್ಚು ಖರ್ಚಾಗಿತ್ತು.
ನೆಲಮಂಗಲದಿಂದ ಆಗ್ರಾವರೆಗೂ ನಾವು ನಾಲ್ಕೈದು ಗಾಡಿಗಳಲ್ಲಿ ರಸ್ತೆ ಮಾರ್ಗವಾಗಿ ಪಯಣ ಬೆಳೆಸಿದ್ದೆವು. ಎಲ್ಲೆಲ್ಲಿ ಲೊಕೇಶನ್ ಚೆನ್ನಾಗಿದೆ ಎನ್ನಿಸುತ್ತೋ ಅಲ್ಲಿ ಗಾಡಿ ನಿಲ್ಲಿಸಿ ಚಿತ್ರೀಕರಣ ನಡೆಸುತ್ತಿದ್ದೆವು. ಹೀಗೆ 19 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೆವು. ಸಿನಿಮಾ ತೆರೆಕಂಡಾಗ ನಿಧಾನವಾಗಿ ಪ್ರೇಕ್ಷಕರನ್ನು ಆಕರ್ಷಿಸಿತು ಎಂದಿದ್ದಾರೆ.
ಜಯಣ್ಣ ಸಿನಿಮಾ ವಿತರಣೆ ಹಕ್ಕು ಕೊಂಡುಕೊಂಡಿದ್ದರು. ಒಂದು ವಾರ ಎಂದುಕೊಂಡಿದ್ದ ಸಿನಿಮಾ ಬಳಿಕ 3 ವಾರ, 50 ದಿನ, 100 ದಿನ ಕೊನೆಗೆ 150 ದಿನಗಳ ಪ್ರದರ್ಶನ ಕಂಡಿತ್ತು. ಕಲೆಕ್ಷನ್ ಅಂದ್ರೆ ನಾವು ಹಾಕಿದ ಬಜೆಟ್‌ಗಿಂತ 3ರಷ್ಟು ಮೊತ್ತ ವಾಪಸ್ ಬಂದಿತ್ತು ಎಂದು ಎ. ಪಿ ಅರ್ಜುನ್ ಹೇಳಿದ್ದಾರೆ.
ಸತ್ಯ ಹೆಗಡೆ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ 'ಅಂಬಾರಿ' ಚಿತ್ರಕ್ಕಿತ್ತು. ಯೋಗಿ ಹಾಗೂ ಸುಪ್ರೀತಾ ಜೊತೆಗೆ ರಂಗಾಯಣ ರಘು, ಕಿಶೋರಿ ಬಲ್ಲಾಳ್, ಅರುಣ ಬಾಲರಾಜ್ ಚಿತ್ರದ ತಾರಾಗಣದಲ್ಲಿದ್ದರು. ಚಿತ್ರದಲ್ಲಿ ನಾಯಕ ಧನಂಜಯ್(ಯೋಗಿ) ಹಾಗೂ ನಾಯಕಿ ಸರಸ್ವತಿ(ಸುಪ್ರೀತಾ) ಜೋಡಿಯ ಪ್ರೀತಿ ಸೋತರೂ ಸಿನಿಮಾ ಗೆದ್ದಿತ್ತು.


Click it and Unblock the Notifications










