ನಟ ಗಣೇಶ್‌ಗೆ ಬಹಿರಂಗ ಕ್ಷಮೆ ಕೇಳಿದ ನಿರ್ದೇಶಕ ರಘುರಾಮ್; ಅಷ್ಟಕ್ಕೂ ಏನಾಯ್ತು?
ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಗುರ್ತಿಸಿಕೊಂಡವರು ಡಿ. ಪಿ ರಘುರಾಮ್. 'ಜೋಗಿ' ಸೇರಿ ಕೆಲ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ನಟಿಸಿದ್ದಾರೆ. ಶಿವರಾಜ್‌ಕುಮಾರ್ ನಟನೆಯ 'ಚೆಲುವೆಯೇ ನಿನ್ನೆ ನೋಡಲು' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದೀಗ ದಿಢೀರನೆ ನಟ ಗಣೇಶ್ ಬಳಿ ರಘುರಾಮ್ ಕ್ಷಮೆ ಕೇಳಿದ್ದಾರೆ.
ಗಣೇಶ್ ಹಾಗೂ ರಘುರಾಮ್ ಬಹಳ ಆತ್ಮೀಯ ಸ್ನೇಹಿತರು. ಇಬ್ಬರೂ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದಕ್ಕೂ ಮೊದಲಿನಿಂದರೂ ಒಡನಾಟವಿದೆ. ಗಣೇಶ್ ಕೂಡ ಕಿರುತೆರೆಯಲ್ಲಿ ಮಿಂಚಿ ಬಳಿಕ ಬೆಳ್ಳಿ ತೆರೆಯಲ್ಲಿ ಸಕ್ಸಸ್ ಕಂಡವರು. ರಘುರಾಮ್ ಈಟಿವಿ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡಿದವರು. ಇದೀಗ ತಮ್ಮದೇ ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ತಮ್ಮ ಸಿನಿಮಾ ಬದುಕಿನ ಜೊತೆ ಜೊತೆಗೆ ಕನ್ನಡ ಸಿನಿಮಾ ತಾರೆಯರ ಸಂದರ್ಶನ ಮಾಡುತ್ತಿರುತ್ತಾರೆ.

15 ವರ್ಷಗಳ ಹಿಂದೆ ಶಿವಣ್ಣ ನಟಿಸಿದ್ದ 'ಚೆಲುವೆಯೇ ನಿನ್ನೆ ನೋಡಲು' ಚಿತ್ರಕ್ಕೆ ರಘು ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಪ್ರಪಂಚದ ಏಳು ಅದ್ಭುತಗಳನ್ನು ತೋರಿಸುವ ಸಾಹಸ ಮಾಡಿದ್ದಾರೆ. ಇದೊಂದು ಜರ್ನಿ ಲವ್ ಸ್ಟೋರಿ ಆಗಿತ್ತು. ಎನ್. ಎಂ ಸುರೇಶ್ ನಿರ್ಮಾಣದ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಸಿನಿಮಾ ಗೆದ್ದಾಗ ಎಲ್ಲಾ ಭಿನ್ನಾಭಿಪ್ರಾಯಗಳು ಮುಚ್ಚಿ ಹೋಗುತ್ತವೆ. ಆದರೆ ಸೋತಾಗ ಒಬ್ಬರ ಮೇಲೆ ಒಬ್ಬರೂ ಆರೋಪ ಮಾಡಿ ಮನಸ್ತಾಪ ಮೂಡುತ್ತದೆ. ತಮ್ಮ ಬಗ್ಗೆ ನಿರ್ಮಾಪಕ ಎನ್. ಎಂ ಸುರೇಶ್ ಮಾತನಾಡಿ ಕೆಲ ಮಾತುಗಳಿಗೆ ಬೇಸರಗೊಂಡು ರಘುರಾಮ್ ಸ್ಪಷ್ಟನೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಆ ಬಗ್ಗೆ ಯೂಟ್ಯೂಬ್ ಚಾನಲ್‌ನಲ್ಲಿ ಸರಣಿ ವೀಡಿಯೋಗಳನ್ನು ಮಾಡುತ್ತಿದ್ದಾರೆ.
'ಚೆಲುವೆಯೇ ನಿನ್ನೆ ನೋಡಲು' ಸಿನಿಮಾ ಕಥೆ ಶುರುವಾಗಿದ್ದು ಅದರಲ್ಲಿ ಮೊದಲು ಗಣೇಶ್ ನಟಿಸಬೇಕಿತ್ತು. ರಾಮ್ ಪ್ರಸಾದ್ ನಿರ್ಮಾಣ ಮಾಡಬೇಕಿತ್ತು. ಬಳಿಕ ಗಣೇಶ್ ಬದಲು ಶಿವಣ್ಣ ನಟಿಸುವಂತಾಯಿತು. ರಾಮ್‌ಪ್ರಸಾದ್ ಬದಲು ಎನ್. ಎಂ ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡುವಂತಾಗಿತ್ತು. ಗಣೇಶ್ ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿದ್ದರು. ಆದರೆ ಡೇಟ್ಸ್ ಆಗ ಸಿಗಲಿಲ್ಲ. ಅದೇ ಸಮಯದಲ್ಲಿ ಶಿವಣ್ಣ ಆ ಕಥೆ ಕೇಳಿ ಸಿನಿಮಾ ಶುರುವಾಗಿಬಿಟ್ಟಿತ್ತು. ಅಂದು ಗಣೇಶ್ ಅವರಿಗೆ ಹೇಳದೆಯೇ ಶಿವಣ್ಣ ಜೊತೆ ಸಿನಿಮಾ ಮಾಡಲು ರಘುರಾಮ್ ಮುಂದಾಗಿಬಿಟ್ಟಿದ್ದರು.

ಆತ್ಮೀಯ ಸ್ನೇಹಿತ ಗಣೇಶ್ ಸಿನಿಮಾ ಮಾಡಲು ಒಪ್ಪಿದ್ದರು. ಆದರೆ ಡೇಟ್ಸ್ ಸಮಸ್ಯೆ ಆಗಿತ್ತು. ಅವರು ಬಹಳ ಬ್ಯುಸಿಯಾಗಿದ್ದ ಸಮಯ. ಎರಡ್ಮೂರು ವರ್ಷ ಕಾಲ್‌ಶೀಟ್ ಕೊಡೊಕೆ ಆಗುವುದಿಲ್ಲ ಎನ್ನುವಂತಹ ಪರಿಸ್ಥಿತಿ. ಅಂತಹ ಸಮಯದಲ್ಲಿ ಅದೇ ಕಥೆ ಶಿವಣ್ಣ ಓಕೆ ಮಾಡಿ ಸಿನಿಮಾ ಟೈಟಲ್ ಸಹ ರಿಜಿಸ್ಟರ್ ಮಾಡಿಸಿಬಿಟ್ಟೆವು. ಯಾವುದೇ ಕಾರ್ಯಕ್ರಮದಲ್ಲಿ ಗಣೇಶ್ ಜೊತೆ ಸ್ವತಃ ಶಿವಣ್ಣ ಮಾತನಾಡುತ್ತಾ ರಘುರಾಮ್ ಜೊತೆ ಸಿನಿಮಾ ಮಾಡುವ ವಿಚಾರ ಹೇಳಿದ್ದರು.
ಗಣೇಶ್ ಅಂದು ಬೇಸರಗೊಂಡಿದ್ದರು. ಫೋನ್ ಮಾಡಿ "ಒಳ್ಳೆದಾಗ್ಲಪ್ಪ, ಶಿವಣ್ಣನ ಜೊತೆ ಸಿನಿಮಾ ಮಾಡ್ತಿದ್ದೀಯಂತೆ. ಒಳ್ಳೆಯದಾಗ್ಲಪ್ಪ" ಅಂತ ಗಣೇಶ್ ಸರ್ ಹೇಳಿ ಫೋನ್ ಕಟ್ ಮಾಡಿದ್ರು. ಆ ಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. ಬಹಳ ಸಣ್ಣವನಾಗಿಬಿಟ್ಟೆ. ಆ ಬಳಿಕ ಒಂದೂವರೆ ವರ್ಷ ಇಬ್ಬರೂ ಮಾತನಾಡಲಿಲ್ಲ. ಅವರ ಜಾಗದಲ್ಲಿ ಯಾರೇ ಇದ್ದಿದ್ದರೂ ಅದೇ ರೀತಿ ನಡೀತಿತ್ತು. ಈ ಮೂಲಕ ನಾನು ಗಣೇಶ್ ಅವರ ಕ್ಷಮೆ ಕೇಳುತ್ತೇನೆ. ಈಗಾಗಲೇ ಗಣೇಶ್ ಅವರ ಬಗ್ಗೆ ಸಾಕಷ್ಟು ಬಾರಿ ಕ್ಷಮೆ ಕೇಳಿದ್ದೀನಿ. ಆದರೆ ಈಗ ಎಲ್ಲರ ಮುಂದೆ ಕ್ಷಮೆ ಕೇಳ್ತಿದ್ದೀನಿ ಎಂದು ರಘುರಾಮ್ ಹೇಳಿದ್ದಾರೆ.
ಆ ಘಟನೆ ಬಳಿಕ ನಮ್ಮ ಸ್ನೇಹ ಮತ್ತೆ ಮುಂದುವರೆಯಿತು. ಮತ್ತೆ ಅವರ ಒಂದೆರಡು ಸಿನಿಮಾಗಳಲ್ಲಿ ನನಗೆ ಅವಕಾಶ ಕೊಟ್ಟರು. ಅದನ್ನು ನಾನು ಮರೆಯುವುದಿಲ್ಲ, ಅದಕ್ಕಾಗಿ ಧನ್ಯವಾದ ಎಂದು ನಿರ್ದೇಶಕ ರಘುರಾಮ್ ಹೇಳಿದ್ದಾರೆ.


Click it and Unblock the Notifications











