ನಿಜವಾದ ರೌಡಿಗಳನ್ನು ಸಿನಿಮಾದಲ್ಲಿ ಹಾಕಿಕೊಂಡು ಪ್ರೇಮ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ!
ಮೊತ್ತ ಮೊದಲಿಗೆ ನಿಜ ಜೀವನ ರೌಡಿಗಳನ್ನು ಸಿನಿಮಾದಲ್ಲಿ ಹಾಕಿಕೊಂಡಿದ್ದು ಉಪೇಂದ್ರ. ಅವರ ಓಂ ಸಿನಿಮಾದಲ್ಲಿ ಹಲವಾರು ನಿಜಜೀವನದ ರೌಡಿಗಳು ನಟಿಸಿದ್ದರು. ಸಿನಿಮಾ ಸೂಪರ್, ಡೂಪರ್ ಹಿಟ್ ಆಗಿತ್ತು. ನಂತರ ಇದೇ ಹಾದಿ ತುಳಿದವರು ನಿರ್ದೇಶಕ ಪ್ರೇಮ್. ಅವರು ತಮ್ಮ ಎರಡನೇಯ ಸಿನಿಮಾ 'ಕರಿಯ' ದಲ್ಲಿ ನಿಜ ಜೀವನದ ರೌಡಿಗಳನ್ನು ಸಿನಿಮಾದಲ್ಲಿ ಹಾಕಿಕೊಂಡಿದ್ದರು.
Recommended Video
ನಿಜ ಜೀವನದ ರೌಡಿಗಳನ್ನು ಹಾಕಿಕೊಂಡು ಉಪೇಂದ್ರ ಎದುರಿಸದೇ ಇದ್ದ ಹಲವು ಕಷ್ಟಗಳನ್ನು ಪ್ರೇಮ್ ಅವರು ತಮ್ಮ ಸಿನಿಮಾದಲ್ಲಿ ಅನುಭವಿಸಬೇಕಾಯಿತು. ರೌಡಿಗಳಿಂದಲೇ ಸಿನಿಮಾ ತಡ ಸಹ ಆಯಿತಂತೆ. ಕರಿಯ ಸಿನಿಮಾದಲ್ಲಿ ನಿಜ ಜೀವನದ ರೌಡಿಗಳಿಂದ ಪ್ರೇಮ್ ಅನುಭವಿಸಿದ ಸಂಕಷ್ಟಗಳ ಬಗ್ಗೆ ಅದೇ ಸಿನಿಮಾದಲ್ಲಿ ನಟಿಸಿದ್ದ ಮೈಕೋ ನಾಗರಾಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಿಜವಾದ ರೌಡಿಗಳಿಂದ ನಟನೆ
ಪ್ರೇಮ್ ಅವರು 'ಕರಿಯ'ದಂತಹಾ ಪೂರ್ಣ ರೌಡಿಸಂ ಕತೆಗೆ ನಿಜ ಜೀವನದ ರೌಡಿಗಳೇ ಸೂಕ್ತವೆಂದು ನಿಜ ಜೀವನದಲ್ಲಿ ರೌಡಿಗಳಾಗಿದ್ದವರನ್ನೇ ಹಾಕಿಕೊಂಡರಂತೆ. ಇದಕ್ಕೆ ಮೈಕೋ ನಾಗರಾಜ್ ಸಹ ಕೆಲವು ರೌಡಿಗಳೊಂದಿಗೆ ಮಾತನಾಡಿ ಒಪ್ಪಿಸಿದ್ದರಂತೆ.

ಶೂಟಿಂಗ್ ವೇಳೆ ಪಟ್ಟ ಕಷ್ಟಗಳು
ಆದರೆ ಸಿನಿಮಾ ಚಿತ್ರೀಕರಣ ನಡೆಯುತ್ತಿರುವಾಗಲೇ ಕೆಲವು ರೌಡಿಗಳು ಜೈಲು ಸೇರುಬಿಟ್ಟರಂತೆ. ಮತ್ತೆ ಅವರು ಜೈಲಿನಿಂದ ಹೊರಗೆ ಬರುವವರೆಗೆ ಚಿತ್ರೀಕರಣ ಸಹ ನಿಲ್ಲಿಸಬೇಕಾಗಿ ಬಂತಂತೆ. ಅವರು ಹೊರಗೆ ಬಂದರೆ ಇನ್ನು ಕೆಲವರು ಜೈಲು ಸೇರಿಬಿಡುತ್ತಿದ್ದರಂತೆ.

ಇಬ್ಬರು ರೌಡಿಗಳು ಕೊಲೆಯಾದರು
ಕರಿಯ ಸಿನಿಮಾದಲ್ಲಿ ನಟಿಸಿದ್ದ ಇಬ್ಬರು ರೌಡಿಗಳು ಕೊಲೆಯೇ ಆಗಿ ಹೋದರಂತೆ. ಆ ರೌಡಿಗಳನ್ನೆಲ್ಲಾ ಒಟ್ಟಿಗೆ ಕಲೆ ಹಾಕಿ ನಟಿಸುವಂತೆ ಮಾಡುವುದು ಪ್ರೇಮ್ ಅವರಿಗೆ ಸವಾಲಾಗಿತ್ತಂತೆ. ಆದರೆ ಅದನ್ನು ಯಶಸ್ವಿಯಾಗಿ ಅವರು ನಿಭಾಯಿಸಿದರು.

ಭರ್ಜರಿ ಹಿಟ್ ಆದ ಕರಿಯ ಸಿನಿಮಾ
ಕರಿಯ ಸಿನಿಮಾ ಭರ್ಜರಿ ಹಿಟ್ ಆಯಿತು. ಓಂ ನಂತರ ಬಂದ ಅತ್ಯುತ್ತಮ ರೌಡಿಸಂ ಸಿನಿಮಾ ಎಂಬ ಹೆಸರೂ ಗಳಿಸಿತು. ಮೊದಲ ಹದಿನೈದು ದಿನ ಹೆಚ್ಚು ಜನ ಸಿನಿಮಾಕ್ಕೆ ಬರಲಿಲ್ಲವಂತೆ. ಆದರೆ ಆ ನಂತರ ಸಿನಿಮಾ ಭಾರಿ ದೊಡ್ಡ ಹಿಟ್ ಆಯಿತು. ದರ್ಶನ್ ಅವರು ಸಿನಿಮಾದಲ್ಲಿ ಅದ್ಭುತ ಅಭಿನಯ ನೀಡಿದರು ಎಂದು ಮೈಕೊ ನಾಗರಾಜ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











