ರಕ್ಷಿತ್ ಶೆಟ್ಟಿ ಅಭಿಮಾನಿ ಜೊತೆ ರಿಷಬ್‌ಗೆ ಲವ್ವಾಗಿತ್ತು; ಶೆಟ್ರ ಬಾಳಲ್ಲಿ 'ಪ್ರಗತಿ' ಬಂದಿದ್ದೇಗೆ?
ನಟ, ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ 'ಕಾಂತಾರ' ಪ್ರೀಕ್ವೆಲ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕುಂದಾಪುರದಲ್ಲಿ ದೊಡ್ಡ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. 'ಕಾಂತಾರ' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಜೊತೆಯಾಗಿದೆ.
'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೂಡ ಕೆಲಸ ಮಾಡಿದ್ದರು. ಈಗಾಗಲೇ ಮಕ್ಕಳ ಸಮೇತ ರಿಷಬ್ ಫ್ಯಾಮಿಲಿ ಕುಂದಾಪುರಕ್ಕೆ ಶಿಫ್ಟ್ ಆಗಿದೆ. ಗಂಡ ಹೆಂಡತಿ ಇಬ್ಬರೂ ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವುದರಿಂದ ಮಕ್ಕಳನ್ನು ಅಲ್ಲೇ ಓದಿಸಲು ಮುಂದಾಗಿದ್ದಾರೆ. ಅಂದಹಾಗೆ ರಿಷಬ್- ಪ್ರತಿ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಮುಂದೆ ಓದಿ.

'ರಿಕ್ಕಿ' ಚಿತ್ರದ ಮೂಲಕ ರಿಷಬ್ ಶೆಟ್ಟಿ ನಿರ್ದೇಶಕರಾಗಿ ಪರಿಚಿತರಾಗಿದ್ದರು. ಆದರೆ ಪ್ರಗತಿ ಮೊದಲು ಭೇಟಿ ಸಮಯದಲ್ಲಿ ಕೂಡ ರಿಷಬ್ ಯಾರು? ಹೆಸರು ಏನು? ಎನ್ನುವುದು ಕೂಡ ಗೊತ್ತಿರಲಿಲ್ಲವಂತೆ. ಕುಂದಾಪುರದ ಮೂಲದ ಪ್ರಗತಿ ಶೆಟ್ಟಿ ಓದಿ ಬೆಳೆದಿದ್ದು ಶಿವಮೊಗ್ಗದಲ್ಲಿ. ಅದಾಗಲೇ 'ಉಳಿದವರು ಕಂಡಂತೆ' ಸಿನಿಮಾ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿಬಿಟ್ಟಿದ್ದರು ಪ್ರಗತಿ ಶೆಟ್ಟಿ.
'ರಿಕ್ಕಿ' ಸಿನಿಮಾ ಬಿಡುಗಡೆಯಾದಾಗ ಸ್ನೇಹಿತರ ಜೊತೆ ಸಿನಿಮಾ ನೋಡಲು ಪ್ರಗತಿ ಶೆಟ್ಟಿ ಚಿತ್ರಮಂದಿರಕ್ಕೆ ಹೋಗಿದ್ದರು. ಅಲ್ಲಿಗೆ ಥಿಯೇಟರ್ ವಿಸಿಟ್‌ಗೆ ಚಿತ್ರತಂಡ ಕೂಡ ಹೊಗಿತ್ತು. ಅಲ್ಲೇ ಮೊದಲ ಬಾರಿಗೆ ರಿಷಬ್- ಪ್ರಗತಿ ಭೇಟಿ ಆಗಿತ್ತು. ಸಿನಿಮಾ ಮುಗಿದ ಬಳಿಕ ರಕ್ಷಿತ್ ಶೆಟ್ಟಿ ಜೊತೆ ಮಾತನಾಡಲು ಫೋಟೊ ಕ್ಲಿಕ್ಕಿಸಿಕೊಳ್ಳಲು ಸಾಕಷ್ಟು ಜನ ಮುಗಿಬಿದ್ದಿದ್ದರು. ರಿಷಬ್ ಪಕ್ಕದಲ್ಲೇ ಸೈಡ್ ಅಲ್ಲಿ ನಿಂತಿದ್ದರು. ಆಗ ಸ್ನೇಹಿತೆಯರು ಇವ್ರು ರಿಷಬ್ ಶೆಟ್ಟಿ, ಈ ಚಿತ್ರದ ನಿರ್ದೇಶಕರು ಎಂದು ಹೇಳಿದ್ದರಂತೆ. ಆಗ ಪ್ರಗತಿ ಹೋಗಿ ಮಾತನಾಡಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.
ರಕ್ಷಿತ್ ಶೆಟ್ಟಿ ಫ್ಯಾನ್ಸ್ ಜೊತೆ ಬ್ಯುಸಿ ಇದ್ದಿದ್ದರಿಂದ ರಿಷಬ್ ಶೆಟ್ಟಿ ಜೊತೆ ಪ್ರಗತಿ ಒಂದೆರಡು ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಕೂಡ ಕುಂದಾಪುರದ ಭಾಗದವರು ಎಂದು ಗೊತ್ತಾಗಿ ಕರಾವಳಿ ಭಾಗದವರು ಬಂದು ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವುದು ಖುಷಿಯಾಗುತ್ತಿದೆ ಎಂದು ಪ್ರಗತಿ ಹೇಳಿದ್ದಾರೆ. ರಿಷಬ್ ಶೆಟ್ಟಿ ಥ್ಯಾಂಕ್ಸ್ ಹೇಳಿ ಹೊರಟಿದ್ದಾರೆ. ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ರಿಷಬ್ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಬಳಿಕ ಆ ಪರಿಚಯ ಪ್ರೀತಿಗೆ ತಿರುಗಿತ್ತು.

ಒಂದೇ ವರ್ಷದಲ್ಲಿ ಪ್ರಪೋಸ್ ಮಾಡಿ ಪ್ರೀತಿಸಿದ ವಿಚಾರ ಮನೆಯಲ್ಲಿ ಪೋಷಕರ ಒಪ್ಪಿಗೆ ಪಡೆದು ರಿಷಬ್- ಪ್ರಗತಿ ಹಸೆಮಣೆ ಏರಿದ್ದರು. ತಮ್ಮ ಜೀವನದಲ್ಲಿ ಪತ್ನಿ ಪ್ರಗತಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ರಿಷಬ್ ಶೆಟ್ಟಿ ಸಾಕಷ್ಟು ಬಾರಿ ಹೇಳಿದ್ದಾರೆ. ಪುನೀತ್ ಸರ್‌ಗೆ ಅಂತ 'ಕಾಂತಾರ' ಕಥೆ ಮಾಡಿದ್ದು. ಆದರೆ ಪ್ರಗತಿ ಪ್ರೋತ್ಸಾಹದಿಂದ ನಾನೇ ಆ ಸಿನಿಮಾ ಮಾಡುವ ಧೈರ್ಯ ಮಾಡಿದೆ ಎಂದು ರಿಷಬ್ ಹೇಳಿದ್ದಾರೆ. ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ಯಬೇಕು ಅಂದಾಗ ಬೆಂಬಲವಾಗಿ ನಿಂತಿದ್ದು ಪ್ರಗತಿ ಎಂದಿದ್ದರು.
ರಿಷಬ್- ಪ್ರಗತಿ ದಂಪತಿಗೆ ಮಗ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಇದ್ದಾರೆ. 'ಕಾಂತಾರ' ಸಕ್ಸಸ್ ಬಳಿಕ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳನ್ನೆಲ್ಲಾ ಪಕ್ಕಕ್ಕಿಟ್ಟು ರಿಷಬ್ ಶೆಟ್ಟಿ ಪ್ರೀಕ್ವೆಲ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಚಾಪ್ಟರ್-1 ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











