ಅರೇ.. ದರ್ಶನ್ 'ನವಗ್ರಹ' ಚಿತ್ರಕ್ಕೆ ದಾದಾ ನಟಿಸಿದ ಈ ಸಿನಿಮಾ ಸ್ಫೂರ್ತಿನಾ?
ರಿಮೇಕ್ ಚಿತ್ರಗಳು ಹೊಸದೇನು ಅಲ್ಲ. ಕೆಲವೊಮ್ಮೆ ರೈಟ್ಸ್ ಪಡೆದು ಅದೇ ಕಥೆಯನ್ನು ಫ್ರೇಮ್ ಟು ಫ್ರೇಮ್ ಮತ್ತೊಂದು ಭಾಷೆಯಲ್ಲಿ ಕಟ್ಟಿಕೊಡುತ್ತಾರೆ. ಆದರೆ ಕೆಲವೊಮ್ಮೆ ಯಾವುದೋ ಸಿನಿಮಾ ನೋಡಿ ಅದರಿಂದ ಪ್ರೇರಣೆಗೊಂಡು ಸಿನಿಮಾ ಮಾಡಿರುವುದು ಇದೆ. ಈ ಪ್ರಯತ್ನದಲ್ಲಿ ಗೆದ್ದವರು ಇದ್ದಾರೆ.
ಇವತ್ತಿನ ಸ್ಟಾರ್ ನಟರೆಲ್ಲಾ ಒಂದಲ್ಲ ಒಂದು ರೀಮೆಕ್ ಚಿತ್ರದಲ್ಲಿ ನಟಿಸಿದರವರೇ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಅದಕ್ಕೆ ಬ್ರೇಕ್ ಬಿದ್ದಂತಾಗಿದೆ. ಕನ್ನಡದ ಕೆಲ ಹಿಟ್ ಸಿನಿಮಾಗಳು ರೀಮೆಕ್ ಅಲ್ಲದೇ ಇದ್ದರೂ ಯಾವುದೋ ಭಾಷೆಯ ಚಿತ್ರದಿಂದ ಸ್ಫೂರ್ತಿಗೊಂಡಿವೆ ಅಂದರೆ ನಂಬಲೇಬೇಕು. ಅಚ್ಚರಿ ಎಂದರೆ ದಿನಕರ್ ತೂಗುದೀಪ ನಿರ್ದೇಶನದ 'ನವಗ್ರಹ' ಚಿತ್ರ ಕೂಡ ಕನ್ನಡದ ಒಂದು ಹಳೇ ಚಿತ್ರದಿಂದ ಸ್ಫೂರ್ತಿ ಪಡೆದಿದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಹಾಗಂತ ಇದನ್ನು ರೀಮೆಕ್ ಎನ್ನಲು ಸಾಧ್ಯವಿಲ್ಲ.

ಇತ್ತೀಚೆಗೆ 'ನವಗ್ರಹ' ಸಿನಿಮಾ ರೀ-ರಿಲೀಸ್ ಆಗಿ ಸದ್ದು ಮಾಡಿತ್ತು. 16 ವರ್ಷಗಳ ಹಿಂದೆ ಸ್ವತಃ ದರ್ಶನ್ ಈ ಚಿತ್ರ ನಿರ್ಮಿಸಿ ನಟಿಸಿದ್ದರು. ಕನ್ನಡದ ಖ್ಯಾತ ಖಳನಟರ ಮಕ್ಕಳನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದರು. ತೂಗುದೀಪ ಶ್ರೀನಿವಾಸ್ ಪುತ್ರ ದರ್ಶನ್, ಪ್ರಭಾಕರ್ ಪುತ್ರ ವಿನೋದ್, ಲೋಕೇಶ್ ಪುತ್ರ ಸೃಜನ್, ದಿನೇಶ್ ಪುತ್ರ ಗಿರಿ, ಸುಧೀರ್ ಪುತ್ರ ತರುಣ್ ಹಾಗೂ ಸುಂದರ್ ಕೃಷ್ಣ ಅರಸ್ ಪುತ್ರ ನಾಗೇಂದ್ರ ಹಾಗೂ ಕೀರ್ತಿರಾಜ್ ಪುತ್ರ ಧರ್ಮ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು.
1981ರಲ್ಲಿ ಬಂದಿದ್ದ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಚಿತ್ರವೊಂದು 'ನವಗ್ರಹ' ಚಿತ್ರಕ್ಕೆ ಪ್ರೇರಣೆ ಎಂದರೂ ತಪ್ಪಾಗಲ್ಲ. ಕಥೆಯ ಮೂಲ ತಿರುಳು ಒಂದೇ ರೀತಿ ಇದೆ. ಕೆಲ ಸನ್ನಿವೇಶಗಳ ನಡುವೆ ಸಾಮ್ಯತೆ ಇರುವುದು ಗೊತ್ತಾಗುತ್ತದೆ. ಅಚ್ಚರಿ ಎಂದರೆ ಆ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ಪ್ರಭಾಕರ್, ಸುಧೀರ್, ದಿನೇಶ್ ನಟಿಸಿದ್ದರು ಎನ್ನುವುದು ವಿಶೇಷ. ಇನ್ನು ಪೊಲೀಸ್ ಆಫೀಸರ್ ಪಾತ್ರದಲ್ಲಿ ಅಂಬರೀಶ್ ಮಿಂಚಿದ್ದು ವಿಶೇಷ.
'ನವಗ್ರಹ' ಚಿತ್ರದಲ್ಲಿ ಮೈಸೂರಿ ಅಂಬಾರಿಯನ್ನು ಕದಿಯಲು 9 ಜನರ ತಂಡ ಪ್ರಯತ್ನಿಸುತ್ತದೆ. ತಮ್ಮ ಯೋಜನೆಯಂತೆ ಅಂಬಾರಿ ಕದ್ದು ಸಾಗಿಸುತ್ತಾರೆ. ಆದರೆ ಈ ಹಾದಿಯಲ್ಲೇ 8 ಜನ ಪ್ರಾಣಬಿಟ್ಟು ಕೊನೆಗೆ ಪೊಲೀಸರ ಸಹಾಯದಿಂದ ಅಂಬಾರಿ ಮೈಸೂರು ಅರಮನೆ ಸೇರುತ್ತದೆ. 40 ವರ್ಷಗಳ ಹಿಂದೆ ಬಂದಿದ್ದ ಆ ಚಿತ್ರದಲ್ಲಿ ಕದೀಮರ ತಂಡ ದೇವಸ್ಥಾನದ ವಿಗ್ರಹ ಕದಿಯುತ್ತಾರೆ.

ಅಂದಹಾಗೆ ಆ ಚಿತ್ರದ ಹೆಸರು 'ಮಹಾ ಪ್ರಚಂಡರು'. ಜೋಸೈಮನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಉಪೇಂದ್ರ ಕುಮಾರ್ ಸಂಗೀತ ಚಿತ್ರಕ್ಕಿತ್ತು. ಚಿತ್ರದಲ್ಲಿ 5 ಜನ ಕದೀಮರ ತಂಡದ ನಾಯಕನಾಗಿ ನಟ ವಿಷ್ಣುವರ್ಧನ್ ನಟಿಸಿದ್ದರು. ಚಿತ್ರದಲ್ಲಿ ಧರ್ಮಾಪುರದ ರಾಮನ ವಿಗ್ರಹವನ್ನು ಈ ತಂಡ ಕಳ್ಳತನ ಮಾಡುತ್ತದೆ. ಕಳ್ಳರನ್ನು ಹುಡುಕಲು ಪೊಲೀಸ್ ಆಫೀಸರ್ ಶೇಷಾಚಾರಿ ಆಗಿ ಅಂಬರೀಶ್ ಎಂಟ್ರಿ ಕೊಡುತ್ತಾರೆ.
5 ಜನ ಜೈಲಿನಿಂದ ಬಿಡುಗಡೆ ಆಗಿ ಹೊರಗೆ ಬಂದಿರುವುದು, ವಿಗ್ರಹ ಕದಿಯಲು ಪ್ಲ್ಯಾನ್ ಮಾಡುವುದು, ಮಾರು ವೇಷದಲ್ಲಿ ಹೋಗಿ ದೇವಸ್ಥಾನದಲ್ಲಿ ವಿಗ್ರಹ ಹಾಗೂ ಭದ್ರತೆ ನೋಡಿ ಬರುವುದು, ವಿಗ್ರಹ ಕಳುವಾದ ಬಳಿಕ ಪೊಲೀಸ್ ಅಧಿಕಾರಿ ಬಂದು ದೇವಸ್ಥಾನದಲ್ಲಿ ಪರಿಶೀಲನೆ ನಡೆಸುವ ಸನ್ನಿವೇಶಗಳಲ್ಲಿ ಕೊಂಚ ಸಾಮ್ಯತೆ ಇದೆ.
ಒಟ್ಟಾರೆ 'ನವಗ್ರಹ' ಕೂಡ ಅದ್ಭುತ ಪ್ರಯತ್ನ. ದಿನಕರ್ 'ಮಹಾ ಪ್ರಚಂಡರು' ಚಿತ್ರದಿಂದ ಸ್ಫೂರ್ತಿ ಪಡೆದೇ ಈ ಸಿನಿಮಾ ಮಾಡಿದ್ರಾ? ನಿಜಕ್ಕೂ ಈ ಸಿನಿಮಾ ನೋಡಿದ್ರಾ? ಎನ್ನುವುದು ಗೊತ್ತಿಲ್ಲ. ಆದರೆ ಎರಡೂ ಚಿತ್ರಗಳ ನಡುವಿನ ಸಾಮ್ಯತೆ ಬಗ್ಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿರುತ್ತಾರೆ.


Click it and Unblock the Notifications











