ನಾಯಕನಾಗಬೇಕೆಂಬ ಕನಸು ಕಂಡಿದ್ದ ಕಂಚಿನ ಕಂಠದ ವಜ್ರಮುನಿ ಪ್ರಚಂಡ ರಾವಣ ಆಗಿದ್ಹೇಗೆ..?
ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ, ಬೆಳ್ಳಿ ತೆರೆಯ ಮೇಲೆ ಧಗಧಗಿಸಿ ಮರೆಯಾದ ಧ್ರುವತಾರೆ ವಜ್ರಮುನಿ. ಮೇ 10- 1944 ರಂದು ಜನಿಸಿದ ವಜ್ರಮುನಿಯವರ ಹುಟ್ಟಿನ ಹೆಸರು ಸದಾನಂದ್ ಸಾಗರ್. ಇವರ ತಂದೆ ವಜ್ರಪ್ಪ. ಕುಟುಂಬ ವಜಮುನೇಶ್ವರನನ್ನು ಪೂಜಿಸುತ್ತಿದ್ದರಿಂದ ಅದೇ ಹೆಸರನ್ನು ಮುಂದೆ ತಮ್ಮ ಮಗನಿಗೂ ಇಟ್ಟಿದ್ದರು.
ಹೆಚ್ಚು ತುಂಟತನ ಮಾಡುತ್ತಲೇ ಬೆಳೆದ ವಜ್ರಮುನಿ, ಓದಿಗಿಂತ ಹೆಚ್ಚು ನಾಟಕಗಳನ್ನು ಪ್ರೀತಿಸಿದ್ರು. ಅವರ ತಂದೆ- ತಾಯಿ, ಮಗ ಓದಿ, ಮುಂದೆ ಬರಲೆಂದು ಕಾಲೇಜಿಗೆ ಸೇರಿಸಿದ್ರೆ, ವಜ್ರಮುನಿಯವರು ಸೇರಿದ್ದು ನಾಟಕ ಮಂಡಳಿಯನ್ನು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಹೋದರ ಕಣಗಾಲ್ ಪ್ರಭಾಕರ ಶಾಸ್ತ್ರಿಯವರು ತಯಾರಿಸುತ್ತಿದ್ದ ಪ್ರಚಂಡ ರಾವಣ ನಾಟಕ ಅವರಿಗೆ ಇನ್ನಿಲ್ಲದ ಹೆಸರನ್ನು ತಂದು ಕೊಟ್ಟಿತ್ತು.ಹಾಗೇ ನೋಡಿದ್ರೆ ಈ ಪಾತ್ರ ಇವರಿಗೆ ಸಿಕ್ಕದ್ದು ಕೂಡ ಪವಾಡವೇ.

ಹೌದು. ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳ ತಂಡಕ್ಕೆ ವಜ್ರಮುನಿಯವರು ಸೇರಿ ಆಗ ಕೆಲಕಾಲವಾಗಿತ್ತಷ್ಟೇ. ಅದೊಮ್ಮೆ , 'ಅವರು ಪ್ರಚಂಡ ರಾವಣ' ನಾಟಕವನ್ನು ತಯಾರಿಸಲು ಮುಂದಾದ್ರು. ಈ ನಾಟಕದಲ್ಲಿ ಪ್ರಮುಖ ಪಾತ್ರ ರಾವಣನದ್ದು. ರಾವಣನ ಪಾತ್ರವನ್ನು ನಿರ್ವಹಿಸಲು , ಹಲವು ಕಡೆಯಿಂದ ಆಗಿನ ಕಾಲದಲ್ಲಿ ಪ್ರಖ್ಯಾತರಾಗಿದ್ದ ಹತ್ತು- ಹಲವು ಜನರನ್ನು ಕರೆಸಲಾಗಿತ್ತು. ಆದ್ರೆ ಅವರು ಯಾರು 'ಪ್ರಚಂಡ ರಾವಣ'ರಾಗಲು ನಮ್ಮಿಂದ ಸಾಧ್ಯವಿಲ್ಲ ಎಂದು ಬಿಟ್ಟರು. ಇದಕ್ಕೆ ಕಾರಣ, ಪ್ರಭಾಕರ್ ಶಾಸ್ತ್ರಿಯವರು ಹೊಸೆದಿದ್ದ ಸಂಭಾಷಣೆ.
ಆದ್ರೆ ಯಾವಾಗ ಯಾರೂ ಈ ಪಾತ್ರವನ್ನು ಮಾಡಲು ಮುಂದಾಗಲಿಲ್ಲವೋ ಆಗಲೇ ಪ್ರಭಾಕರ್ ಶಾಸ್ತ್ರಿಯವರ ಕಣ್ಣು, ವಜ್ರಮುನಿಯವರ ಮೇಲೆ ಬಿತ್ತು. ಈ ಪಾತ್ರ ಮಾಡಲು ನೀನೇ ಸೂಕ್ತ ಎಂದು ಹೇಳಿ, ಪಾತ್ರವನ್ನು ನೀಡಿಯೇ ಬಿಟ್ಟರು. ನಿಮಗೆ ಗೊತ್ತಿರಲಿ ವಜ್ರಮುನಿಯವರು ನಾಯಕರಾಗಬೇಕೆಂದು ಕನಸಿಟ್ಟುಕೊಂಡಿದ್ದವರು. ಆದ್ರೆ ಕಣಗಾಲ್ ರು ನೆಗೆಟಿವ್ ಪಾತ್ರವನ್ನು ನೀಡಿದ್ದರು.

ಏನಾದರೂ ಸರಿಯೇ ಅವಕಾಶ ಸಿಕ್ಕಿತಲ್ಲ ... ಅದೊಂದೇ ಖುಷಿಯ ವಿಚಾರ ವೆಂದು ಭಾವಿಸಿದವರೇ , ಕ್ಷಣ ಯೋಚಿಸದೇ ಬಣ್ಣ ಹಚ್ಚಿಯೇ ಬಿಟ್ಟರು ವಜ್ರಮುನಿ. ಅಲ್ಲಿಗೆ ರಂಗಭೂಮಿಯಲ್ಲಿ ಹೊಸ ಕಲಾವಿದನೊಬ್ಬನ ಜನನವಾಗಿತ್ತು. 'ಪ್ರಚಂಡ ರಾವಣ' ಇನ್ನಿಲ್ಲದಂತೆ ಹೆಸರನ್ನು ತಂದು ಕೊಟ್ಟಿತ್ತು. ಇಂದಿಗೂ ಸಹ ವಜ್ರಮುನಿಯೆಂದ್ರೆ ಸಾಕು! ಪ್ರಚಂಡ ರಾವಣದ ಪಾತ್ರ ಕಣ್ಮುಂದೆ ಬರುತ್ತೆ. ಆ ಮಟ್ಟಿನ ಜನಪ್ರಿಯತೆಯನ್ನು ತಂದುಕೊಟ್ಟಿತು ಆ ನಾಟಕ.
ಇನ್ನೂ ಆಗ ಪ್ರಬಲವಾಗಿದ್ದ ಕಲಾ ವೇದಿಕೆಯೆಂದ್ರೆ, ಅದು ರಂಗಭೂಮಿ... ರಂಗ ಭೂಮಿಯಲ್ಲಿ ಅಕ್ಷರಾಭ್ಯಾಸ ಮಾಡಿದವರಿಗೆ ನಿರಾಯಾಸವಾಗಿ ಬಣ್ಣದ ಲೋಕಕ್ಕೆ ಪ್ರವೇಶಿಸಲು ಹಸಿರು ನಿಶಾನೆ ಸಿಕ್ಕಂತಾಗುತ್ತಿತ್ತು. ವಜ್ರಮುನಿ ಬದುಕಲ್ಲೂ ಹೀಗೆ ಆಗಿತ್ತು. 'ಪ್ರಚಂಡ ರಾವಣ' ದಲ್ಲಿ ವಜ್ರಮುನಿ ಅಬ್ಬರಿಸಿದ್ದ ರೀತಿಗೆ ರಂಗಭೂಮಿ- ಚಿತ್ರರಂಗ ಎರಡು ಬೆರಗುಗಣ್ಣಿನಿಂದ ನೋಡಿತ್ತು. ನಿರ್ದೇಶಕ ದಿಗ್ಗಜ ಪುಟ್ಟಣ್ಣ ಕಣಗಾಲ್ ಕಣ್ಣಿಗೆ , ವಜ್ರಮುನಿಯವರು ಬಿದ್ದದ್ದು ಆಗಲೇ.

ಇವರ ನಟನಾ ಚಾತುರ್ಯಕ್ಕೆ ಸಂಪೂರ್ಣ ಶರಣಾದ ಪುಟ್ಟಣ್ಣ, ಸಾವಿರ ಮೆಟ್ಟಿಲು ಚಿತ್ರಕ್ಕೆ ಆಯ್ಕೆ ಮಾಡಿದ್ರು. ಆದ್ರೆ ಅದು ಕಾರಣಾಂತರಗಳಿಂದ ಸ್ಥಗಿತಗೊಂಡಿತು. ಆದ್ರೇನಂತೆ ಪುಟ್ಟಣ್ಣ ಅವ್ರೇ ನಿರ್ದೇಶಿಸಿದ 'ಮಲ್ಲಮ್ಮನ ಪವಾಡ'ದಲ್ಲಿ ಪ್ರಮುಖ ಪಾತ್ರ ಸಿಕ್ಕಿತು. ಚಿತ್ರರಂಗದ ಪ್ರಯಾಣ ಅಲ್ಲಿಂದ ಆರಂಭವಾಯ್ತು. ಅಲ್ಲಿಂದ ಶರುವಾದ ವಜ್ರಮುನಿಯವರ ಸಿನಿ ಜರ್ನಿ, ಸುಮಾರು 300 ಚಿತ್ರಗಳಿಗೂ ಅಧಿಕ ಸಿನಿಮಾದವರೆಗೂ ಮುಂದುವರೆಯಿತು.


Click it and Unblock the Notifications











