1986ರಲ್ಲಿ ಅಣ್ಣಾವ್ರ ಕ್ರೇಜ್ ಹೇಗಿತ್ತು ಗೊತ್ತಾ? ಡಾ. ರಾಜ್ ಸಂಗೀತ ಸಂಜೆ ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಾ!
ಡಾ. ರಾಜ್‌ಕುಮಾರ್. ಕನ್ನಡ ಚಿತ್ರರಂಗ, ನಾಡು ಕಂಡ ಮರೆಯಲಾಗದ ಮಾಣಿಕ್ಯ. ಕನ್ನಡ ಕಣ್ಮಣಿ. ಚಿತ್ರರಂಗಕ್ಕೆ ನಾಡಿಗೆ ಅಣ್ಣಾವ್ರ ಕೊಡುಗೆ ಅಪಾರ. ಬರೀ ನಟನಾಗಿ ಮಾತ್ರವಲ್ಲದೇ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳಿಗೆ ಮುತ್ತುರಾಜ್ ಕೈ ಜೋಡಿಸಿದ್ದರು. ಕನ್ನಡಕ್ಕೊಬ್ಬನೇ ರಾಜಕುಮಾರ ಎನ್ನುವುದನ್ನು ಮರೆಯೋಕೆ ಸಾಧ್ಯವಿಲ್ಲ.
200ಕ್ಕೂ ಅಧಿಕ ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ನಟಿಸಿದ್ದರು. ನೂರಾರು ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರಿಗ ಮೋಡಿ ಮಾಡಿದ್ದರು. ಸದ್ಯ ಅಣ್ಣಾವ್ರ ಎವರ್‌ಗ್ರೀನ್ 'ಮಯೂರ' ಸಿನಿಮಾ ಹೊರ ರೂಪದಲ್ಲಿ ಮರುಬಿಡುಗಡೆ ಆಗಿದೆ. ಪ್ರೇಕ್ಷಕರು ಮತ್ತೆ ತೆರೆಮೇಲೆ ರಾಜಕುಮಾರನನ್ನು ಕಣ್ತುಂಬಿಕೊಂಡು ಖುಷಿಪಡುತ್ತಿದ್ದಾರೆ. ಒಂದು ಕಾಲದಲ್ಲಿ ಅಣ್ಣಾವ್ರ ಕ್ರೇಜ್ ಹೇಗಿತ್ತು ಎನ್ನುವುದನ್ನು ಈಗ ಊಹಿಸಿಕೊಳ್ಳುವುದು ಕೂಡ ಕಷ್ಟ.

ನಗರದ ಒರಾಯನ್ ಮಾಲ್‌ನಲ್ಲಿ ಅಣ್ಣಾವ್ರ 'ಮಯೂರ' ಸಿನಿಮಾ ಮರುಬಿಡುಗಡೆ ಆಗಿ ಪ್ರದರ್ಶನ ಕಾಣುತ್ತಿದೆ. ಸಾಕಷ್ಟು ಜನ ಸಿನಿಮಾ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. 50 ವರ್ಷಗಳ ಹಿಂದೆ ಈ ಐತಿಹಾಸಿಕ ಕಥಾಹಂದರದ ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ಮಯೂರವರ್ಮನಾಗಿ ಅಣ್ಣಾವ್ರ ಅಬ್ಬರಿಸಿದ್ದರು. ಮಂಜುಳ, ಕೆ. ಎಸ್ ಅಶ್ವಥ್, ವಜ್ರಮುನಿ, ಶ್ರೀನಾಥ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
ನಟನಾಗಿ ಮಾತ್ರವಲ್ಲದೇ ಗಾಯಕರಾಗಿಯೂ ಡಾ. ರಾಜ್‌ಕುಮಾರ್ ಸಾಕಷ್ಟು ಕೊಡುಗೆ ನೀಡಿದ್ದಾರೆ. ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಮುತ್ತುರಾಜನಿಗೆ ಗಾಯನ ಕಷ್ಟವಾಗಲಿಲ್ಲ. 'ಸಂಪತ್ತಿಗೆ ಸವಾಲ್' ಸಿನಿಮಾ ಬಳಿಕ ಸಾಕಷ್ಟು ಸಿನಿಮಾಗಳಿಗೆ ಹಾಡು ಹಾಡಿದ್ದರು. ತಮ್ಮ ಸಿನಿಮಾ ಮಾತ್ರವಲ್ಲದೇ ಬೇರೆ ನಟರ ಚಿತ್ರಗಳಿಗೂ ಹಿನ್ನೆಲೆ ಗಾಯಕರಾಗಿ ಗುರ್ತಿಸಿಕೊಂಡಿದ್ದರು.
ಬರೀ ಸಿನಿಮಾಗಳಿಗೆ ಅಷ್ಟೇ ಅಲ್ಲ ಭಕ್ತಿ ಪ್ರಧಾನ ಕ್ಯಾಸೆಟ್‌ಗಳಿಗಾಗಿ ಡಾ. ರಾಜ್ ಹಾಡಿದ್ದರು. ಇನ್ನು ಸಂಗೀತಸಂಜೆ ಕಾರ್ಯಕ್ರಮಗಳಲ್ಲಿ ಅಣ್ಣಾವ್ರು ಹಾಡುತ್ತಿದ್ದರು. 90ರ ದಶಕದಲ್ಲಿ ಕೂಡ ಡಾ. ರಾಜ್ ವೇದಿಕೆಗಳಿಗೆ ಗಾಯನದ ಮೂಲಕ ಕೇಳುಗರನ್ನು ರಂಜಿಸಿದ್ದರು. ಕೆಲವರಿಗೆ ಸಹಾಯಾರ್ಥವಾಗಿ ಸಂಗೀತಸಂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಇದೆ.

1896ರಲ್ಲಿ ಅಣ್ಣಾವ್ರ ಸಂಗೀತಸಂಜೆ ಕಾರ್ಯಕ್ರಮಕ್ಕೆ ಭಾರೀ ಕ್ರೇಜ್ ಇತ್ತು. ಅವತ್ತಿನ ಕಾಲಕ್ಕೆ ಕಾರ್ಯಕ್ರಮದ ಟಿಕೆಟ್ ದರ ಕೇಳಿದರೆ ಎಂಥವರು ಶಾಕ್ ಆಗುತ್ತಾರೆ. 30 ರೂಪಾಯಿಯಿಂದ ಟಿಕೆಟ್ ದರ 200 ರೂಪಾಯಿವರೆಗೂ ಇರುತ್ತಿತ್ತು. 1986ರಲ್ಲಿ 200 ರೂಪಾಯಿ ಅಂದೆ ಇವತ್ತು ಸಾವಿರಾರು ರೂಪಾಯಿಗಳಿಗೆ ಸಮ ಎನ್ನಬಹುದು. ಸಹಾಯಾರ್ಥ ಕಾರ್ಯಕ್ರಮ ಆಗಿದ್ದರಿಂದ ಉಳ್ಳವರು ಭಾರೀ ಮೊತ್ತದ ಟಿಕೆಟ್ ಖರೀದಿಸುತ್ತಿದ್ದರು.
ಮಹಾಯೋಗ ಕ್ಷೇತ್ರ ಕಟ್ಟಡ ಸಹಾಯಾರ್ಥ ನಗರದ ಕಬ್ಬನ್ ಪಾರ್ಕ್‌ನಲ್ಲಿ ಒಮ್ಮೆ ಅಣ್ಣಾವ್ರ ಸಂಗೀತ ಸಂಜೆ ಕಾರ್ಯಕ್ರಮ ನಡೆದಿತ್ತು. 29-11-1986ರಂದು ನಡೆದ ಸಂಗೀತ ಸಂಜೆ ಟಿಕೆಟ್ ದರ 30 ರೂ. 50 ರೂ. 75 ರೂ. 100 ರೂ. 200 ರೂ. ಹೀಗೆ ನಿಗದಿಪಡಿಸಲಾಗಿತ್ತು. ಸದ್ಯ ಅದಕ್ಕೆ ಸಂಬಂಧಿಸಿದ ಜಾಹಿರಾತು ಫೋಟೊವೊಂದು ವೈರಲ್ ಆಗುತ್ತಿದೆ. 40 ವರ್ಷಗಳ ಹಿಂದೆ ಅಣ್ಣಾವ್ರ ಕ್ರೇಜ್ ಹೇಗಿತ್ತು? ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇದೇ ರೀತಿ ಸಹಾಯಾರ್ಥ ಸಾಕಷ್ಟು ಕಾರ್ಯಕ್ರಮಗಳಿಗೆ ಡಾ. ರಾಜ್‌ಕುಮಾರ್ ಭಾಗಿ ಆಗುತ್ತಿದ್ದರು. ಅದರಿಂದ ಬಂದ ಹಣದಲ್ಲಿ ಒಂದು ರೂಪಾಯಿ ಕೂಡ ತೆಗೆದುಕೊಳ್ಳುತ್ತಿರಲಿಲ್ಲ. ಜಾಹೀರಾತುಗಳಲ್ಲಿ ಕೂಡ ಯಾವುದೇ ಹಣ ಪಡೆಯದೇ ನಟಿಸುತ್ತಿದ್ದರು. ನಂದಿನಿ ಹಾಲಿನ ಉತ್ಪನ್ನಗಳ ಜಾಹಿರಾತಿನಲ್ಲಿ ಅಣ್ಣಾವ್ರು ಕಾಣಿಸಿಕೊಂಡಿದ್ದು ಕೂಡ ಇದೇ ಕಾರಣಕ್ಕೆ.


Click it and Unblock the Notifications











