ಹಂಪಿ ರಾಜನಾಗಿ ಅಪ್ಪು ನಟಿಸಬೇಕಿದ್ದ ಸಿನಿಮಾ ಯಾಕೆ ನಿಂತು ಹೋಯ್ತು?
ಅಂದುಕೊಂಡಂಗೆ ಸಿನಿಮಾ ಮಾಡಬಹುದು. ಆದರೆ ಅಂದುಕೊಂಡಿದ್ದೆಲ್ಲಾ ಸಿನಿಮಾ ಆಗಿಬಿಡಲ್ಲ. ಅದು ಅಷ್ಟು ಸುಲಭ ಕೂಡ ಅಲ್ಲ. ಎಷ್ಟೋ ಕಥೆಗಳನ್ನು ಸಿನಿಮಾ ಮಾಡಲು ಫಿಲ್ಮ್ ಮೇಕರ್ಸ್ ಪ್ರಯತ್ನ ಪಡುತ್ತಾರೆ. ಆದರೆ ಕೆಲವು ಆರಂಭದಲ್ಲೇ ನಿಂತುಬಿಡುತ್ತದೆ. ಫಿಲ್ಮ್ ಮೇಕರ್ಸ್ ಪಾಲಿಗೆ ಕಥೆವೊಂದು ಸಿನಿಮಾ ರೂಪ ತಳೆದು ತೆರೆಮೇಲೆ ಬರುವುದು ಹೆರಿಗೆಯಾಗಿ ಮಗು ಭೂಮಿಗೆ ಬಂದಂತೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬಾಲ್ಯದಲ್ಲೇ ಚಿತ್ರರಂಗಕ್ಕೆ ಬಂದವರು. ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸಿದವರು. ಅವರನ್ನು ಮತ್ತಷ್ಟು ಅದ್ಭುತ ಪಾತ್ರಗಳನ್ನು ತೋರಿಸುವ ಇರಾದೆ ಫಿಲ್ಮ್ ಮೇಕರ್ಸ್‌ಗೆ ಇತ್ತು. ನೆಚ್ಚಿನ ನಟನನ್ನು ನೂರಾರು ಸಿನಿಮಾಗಳಲ್ಲಿ ನೋಡುವ ಆಸೆ ಅಭಿಮಾನಿಗಳಲ್ಲಿ ಇತ್ತು. ಆದರೆ ಅದಕ್ಕೆಲ್ಲಾ ಜವರಾಯ ತಣ್ಣೀರು ಎರಚಿಬಿಟ್ಟ. ಮಾಡುತ್ತಿದ್ದ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಅಪ್ಪು ಹೊರಟುಬಿಟ್ಟರು.

ಪುನೀತ್ ರಾಜ್‌ಕುಮಾರ್‌ಗೆ ಐತಿಹಾಸಿಕ ಪಾತ್ರಗಳಲ್ಲಿ ನಟಿಸುವ ಆಸೆ ಇತ್ತು. ಕೆಲ ನಿರ್ಮಾಪಕರು, ನಿರ್ದೇಶಕರು ಅಂತಹ ಪ್ರಯತ್ನದಲ್ಲಿದ್ದರು. ಆದರೆ ಅದು ಕೈಗೂಡಲಿಲ್ಲ. ಒಂದು ಚಿತ್ರದ ಕೆಲಸಗಳು ಫೋಟೊಶೂಟ್ ಮಾಡುವವರೆಗೂ ಹೋಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಹಂಪಿಯ ರಾಜನ ಪಾತ್ರದಲ್ಲಿ ಪವರ್ ಸ್ಟಾರ್ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಲೇ ಇಲ್ಲ. ಇಂತಾದೊಂದು ಇಂಟ್ರೆಸ್ಟಿಂಗ್ ಸಂಗತಿ ಇದೀಗ ರಿವೀಲ್ ಆಗಿದೆ.
'ಜೇಮ್ಸ್' ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಸಿನಿಮಾ. ಪವನ್ ಕುಮಾರ್ ನಿರ್ದೇಶನದಲ್ಲಿ 'ದ್ವಿತ್ವ' ಸಿನಿಮಾ ಸೆಟ್ಟೇರಬೇಕಿತ್ತು. ದಿನಕರ್ ತೂಗುದೀಪ್ ಹಾಗೂ ಹೆಬ್ಬುಲಿ ಕೃಷ್ಣ ನಿರ್ದೇಶನದಲ್ಲಿ ಕೂಡ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆದಿತ್ತು. ಇನ್ನು 'ಪೃಥ್ವಿ' ಚಿತ್ರದ ನಿರ್ದೇಶಕ ಜೇಕಬ್ ವರ್ಗೀಸ್ ನಿರ್ದೇಶನದಲ್ಲೂ ಮತ್ತೊಂದು ಸಿನಿಮಾ ಮೂಡಿ ಬರಬೇಕಿತ್ತು. ಅಚ್ಚರಿ ಎಂದರೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕೂಡ ಒಂದು ಸಿನಿಮಾ ಮಾಡುವ ಬಗ್ಗೆ ಅಪ್ಪು ಜೊತೆ ಚರ್ಚಿಸಿದ್ದರು.
'ಅಂತ', 'ಬಂಧನ', 'ಮುತ್ತಿನ ಹಾರ' ರೀತಿಯ ಅದ್ಭುತ ಸಿನಿಮಾಗಳನ್ನು ರಾಜೇಂದ್ರ ಸಿಂಗ್ ಬಾಬು ಕಟ್ಟಿಕೊಟ್ಟಿದ್ದಾರೆ. ಮದಕರಿ ನಾಯಕ ಜೀವನಾಧರಿತ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದರು. ದರ್ಶನ್ ಹೀರೊ ಆಗಿ ಒಂದು ವಾರ ಚಿತ್ರೀಕರಣ ಕೂಡ ಆಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿದೆ. ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡಲು ಚರ್ಚೆ ನಡೆಸಿದ್ದರ ಬಗ್ಗೆ ಸುದ್ದಿಮನೆ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ರಾಜೇಂದ್ರ ಸಿಂಗ್ ಬಾಬು ವಿವರಿಸಿದ್ದಾರೆ.

"ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರದ್ದು ಒಂದು ಕಥೆ. ಪುನೀತ್ ಚಿತ್ರದಲ್ಲಿ ನಟಿಸಬೇಕಿತ್ತು. ಎಲ್ಲಾ ಮಾತುಕತೆ ನಡೆದಿತ್ತು. ಅವರು ಒಪ್ಪಿ ಫೋಟೊ ಶೂಟ್ ಮಾಡಲು ಸಿದ್ಧತೆ ನಡೆದಿತ್ತು. ಅಷ್ಟರಲ್ಲಿ ಅವರು ತೀರಿಹೋದರು. ಅದ್ಭುತ ಕಥೆ. ಒಂದು ಸಿನಿಮಾಗೆ ಹೇಳಿಮಾಡಿಸಿದಂತಹ ಕಥೆ. ಒಂದು ನಾಟಕವಾಗಿ ಅದನ್ನು ಮಾಸ್ತಿ ಬರೆದಿದ್ದಾರೆ" ಎಂದು ಸಿಂಗ್ ಬಾಬು ನೆನಪಿಸಿಕೊಂಡಿದ್ದಾರೆ.
"ಕಥೆಯನ್ನು ಸ್ಕ್ರಿಪ್ಟ್ ಮಾಡಿ ಅಪ್ಪುಗೆ ಕಾಸ್ಟ್ಯೂಮ್ ಡಿಸೈನ್ ಮಾಡಿಸುವ ಹಂತಕ್ಕೆ ಹೋಗಿತ್ತು. ಬಾಂಬೆಗೆ ಹೋಗಿ ಕಂಪ್ಯೂಟರ್‌ನಲ್ಲಿ ಕಾಸ್ಟ್ಯೂಮ್ ಡಿಸೈನ್ ಎಲ್ಲಾ ಆಗಿತ್ತು. ವಿಜಯನಗರದ ಕಾಲದ ಕಥೆ ಎಂದು ಎಲ್ಲಾ ಪ್ಲ್ಯಾನ್ ಮಾಡಿ ತಂದಿದ್ದೆ. ಫೋಟೊ ಶೂಟ್ ಮಾಡಬೇಕಿತ್ತು. ಅದನ್ನೇ ನಮ್ಮ ಬ್ಯಾನರ್‌ನ 100ನೇ ಸಿನಿಮಾ ಮಾಡಬೇಕು ಎನ್ನುವ ಲೆಕ್ಕಾಚಾರ ನಡೀತಿತ್ತು" ಎಂದು ಹಿರಿಯ ನಿರ್ದೇಶಕರು ಹೇಳಿದ್ದಾರೆ.
ವಸುದೇಂದ್ರ ಅವರ ಒಂದು ಕಥೆಯನ್ನು ಸಿನಿಮಾ ಮಾಡುವ ಆಸೆ ಇತ್ತು. 'ತೇಜೋ ತುಂಗಭದ್ರ' ಎನ್ನುವ ಕಥೆ. ಯಾವ 'ಬಾಹುಬಲಿ' ಕೂಡ ಅದರ ಕಾಲ್ ಧೂಳಿಗೂ ಬರಲ್ಲ. ಅಂತಹ ಕಥೆ. ಆದರೆ ಅವರು ಸಿನಿಮಾ ಮಾಡಲು ಒಪ್ಪಲಿಲ್ಲ. ಅದು ಪುಸ್ತಕವಾಗಿಯೇ ಇದ್ದುಬಿಡಲಿ ಎಂದರು. ವಿಜಯನಗರ ಕಾಲದ ಕಥೆ. ಇಂತಹ ಕಥೆಗಳು ನಮ್ಮಲ್ಲೇ ಹೆಚ್ಚು ಇವೆ. ಅದನ್ನು ಫಿಲ್ಮ್ ಮೇಕರ್ಸ್ ಓದಿ ಸಿನಿಮಾ ಮಾಡಬೇಕು ಎಂದು ಸಿಂಗ್ ಬಾಬು ಸಲಹೆ ನೀಡಿದ್ದಾರೆ.


Click it and Unblock the Notifications











