11ನೇ ತರಗತಿಯಲ್ಲಿ ಸೇಲ್ಸ್ ಗರ್ಲ್ ಆಗಿದ್ದ ಐಶ್ವರ್ಯ ಸ್ಟಾರ್ ಹೀರೋಯಿನ್ ಆಗಿದ್ದೇ ರೋಚಕ..!
ಐಶ್ವರ್ಯ ರಾಜೇಶ್ ಕಾಲಿವುಡ್‌ನ ಕಿನ್ನರಿ. ಉತ್ತರಕಾಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಐಶ್ವರ್ಯ ಅವರ ಬಳಿ ಇವತ್ತು ಹಣ..ಸಂಪತ್ತು..ಐಶ್ವರ್ಯ ಇದೆ. ಬದುಕು ಸುಂದರವಾಗಿದೆ. ಆದರೆ ಇದೇ ಐಶ್ವರ್ಯ ಬದುಕು ಹಿಂದೊಮ್ಮೆ ಮುಳ್ಳಿನ ಹಾಸಿಗೆಯಾಗಿತ್ತು ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.
ಹೌದು. ಐಶ್ವರ್ಯ ಅವರದ್ದು ಕೆಳ ಮಧ್ಯಮ ವರ್ಗ. ಕೊಳಗೇರಿಯಂತಿದ್ದ ಜಾಗದಲ್ಲಿ ಇವರ ವಾಸ. ಇನ್ನೂ ತಂದೆ ಅಗಲಿದಾಗ ಐಶ್ವರ್ಯಗೆ ಕೇವಲ 08ರ ಪ್ರಾಯ. ಬಾಲ್ಯದಲ್ಲಿಯೇ ತಂದೆಯ ಪ್ರೀತಿಯಿಂದ ವಂಚಿತರಾದ ಐಶ್ವರ್ಯ ಅವರನ್ನ ಆ ನಂತರ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ್ದು ಅವರ ತಾಯಿ.

ಸೀರೆಯನ್ನ ಖರೀದಿಸಿ ಅದನ್ನ ಮಾರಿ ಅದರಿಂದ ಬಂದ ಹಣದಲ್ಲಿ ಬದುಕಿನ ಬಂಡಿ ಎಳೆಯುತ್ತಿದ್ದ ಐಶ್ವರ್ಯ ಅವರ ತಾಯಿ ಆ ನಂತರ ಎಲ್‍ಐಸಿ ಏಜೆಂಟ್ ಆಗಿಯೂ ಕೂಡ ಕೆಲಸ ಮಾಡಿದರು. ಬದುಕು ಒಂದು ಹಂತಕ್ಕೆ ತಲುಪಿತ್ತು. ಆದರೆ, ಅಷ್ಟರಲ್ಲಿಯೇ ಬರಸಿಡಿಲು ಬಂದೆರಗಿತ್ತು.
ಪ್ರೇಮಪಾಶದಲ್ಲಿ ಸಿಲುಕಿದ್ದ ಐಶ್ವರ್ಯ ಅಣ್ಣ ಉಸಿರು ಚೆಲ್ಲಿ ಮಲಗಿದ್ದ. ಆಗಿನ್ನೂ ಐಶ್ವರ್ಯ ವಯಸ್ಸು ಕೇವಲ 13. ಇವತ್ತು ಕೂಡ ಅಣ್ಣನ ಸಾವು ಐಶ್ವರ್ಯ ಪಾಲಿಗೆ ಬಹುದೊಡ್ಡ ಮಿಸ್ಟರಿಯಾಗಿಯೇ ಉಳಿದಿದೆ. ಅದು ಹತ್ಯೆನಾ..? ಆತ್ಮಹತ್ಯೆನಾ..? ಎಂಬ ಪ್ರಶ್ನೆ ಕಾಡ್ತಾನೇ ಇದೆ.
ಹಿರಿಮಗನನ್ನ ಕಳೆದುಕೊಂಡ ನಂತರವೂ ಧೃತಿಗೆಡದ ಐಶ್ವರ್ಯ ತಾಯಿ ತುಂಬಾನೇ ಕಷ್ಟಪಟ್ಟು, ತಮ್ಮ ಎರಡನೇ ಮಗನನ್ನ ಹೊಟೇಲ್ ಮ್ಯಾನೆಜ್ಮೆಂಟ್ ಕೋರ್ಸ್‌ಗೆ ಸೇರಿಸುತ್ತಾರೆ. ಆ ನಂತರ ಎರಡನೇ ಮಗನಿಗೆ 40.000 ಸಂಬಳದ ಕೆಲಸವೂ ಸಿಗುತ್ತೆ. ಇನ್ನೇನು.. ಕಷ್ಟಕಾರ್ಪಣ್ಯಗಳೆಲ್ಲ ನಿವಾರಣೆಯಾದವು, ಕುಟುಂಬದ ನಿರ್ವಹಣೆಯ ಜವಾಬ್ಧಾರಿಯನ್ನ ಎರಡನೇ ಮಗ ವಹಿಸಿಕೊಳ್ತಾನೇ ಎಂದು ಐಶ್ವರ್ಯ ಅವರ ತಾಯಿ ಅಂದುಕೊಳ್ಳುವಾಗಲೇ ಮತ್ತೊಂದು ಘನಘೋರ ದುರಂತ ನಡೆಯುತ್ತೆ. ಹಿರಿಯಣ್ಣ ಸತ್ತ ಎರಡು ವರ್ಷಕ್ಕೇ ಐಶ್ವರ್ಯ ಅವರ ಕಿರಿಯಣ್ಣನ ಪ್ರಾಣ ಪಕ್ಷಿ ರಸ್ತೆ ಅಪಘಾತದಲ್ಲಿ ಹಾರಿ ಹೋಗುತ್ತೆ.

ಇದೆಲ್ಲದರಿಂದ ಐಶ್ವರ್ಯ ಅವರ ತಾಯಿಗೆ ಆಕಾಶವೇ ಕಳಚಿ ಬಿದ್ದಂತೆ ಆಗುತ್ತೆ. ದೈಹಿಕವಾಗಿ ಬಳಲಿದ್ದ ತಾಯಿ, ಮಾನಸಿಕವಾಗಿ ಕುಗ್ಗಿ ಹೋಗ್ತಾರೆ. ಆಗ ಸಂಸಾರದ ನೊಗ ಹೊತ್ತ ಐಶ್ವರ್ಯ 11ನೇ ತರಗತಿಯಲ್ಲಿದ್ದಾಗ ಕೆಲಸ ಮಾಡಲು ಆರಂಭ ಮಾಡಿದರು. ಚೆನ್ನೈನಲ್ಲಿ ಸೂಪರ್ ಮಾರ್ಕೆಟ್ ವೊಂದರಲ್ಲಿ ಚಾಕೋಲೇಟ್ ಕಂಪೆನಿ ಪ್ರಮೋಷನಲ್ ಇವೆಂಟ್‌ನ ಭಾಗವಾಗಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿದರು. ಈ ಕೆಲಸಕ್ಕೆ ಇವರಿಗೆ ಸಿಗ್ತಿದ್ದಿದ್ದು ತಿಂಗಳಿಗೆ 225 ರೂಪಾಯಿ ಮಾತ್ರ
ಹೀಗೆ ಶುರುವಾದ ಪ್ರಯಾಣ ಆ ನಂತರ 5000ದವರೆಗೆ ಬಂದು ನಿಂತುಕೊಂಡಿತು. ಇದರ ನಡುವೆ ಶಿಕ್ಷಣವನ್ನ ಕೂಡ ಐಶ್ವರ್ಯ ಮುಂದುವರೆಸಿದ್ದರು. ಇದರ ನಡುವೆ ಬಣ್ಣದ ಸೆಳೆತ ಆರಂಭವಾಗಿತ್ತು. ಈ ಕಾರಣಕ್ಕೆ ಧಾರಾವಾಹಿ ಕಡೆ ಮುಖ ಮಾಡಿದರು ಐಶ್ವರ್ಯ. ಆದರೆ. ದಿನವೆಲ್ಲಾ ದುಡಿದರು ಐಶ್ವರ್ಯಗೆ ಆಗ ಸಿಕ್ತಿದ್ದಿದ್ದು 1500 ರೂಪಾಯಿ ಮಾತ್ರ. ಆದರೆ ಆ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಿಗೆ 25000ದವರೆಗೆ ಸಂಭಾವನೆ ನೀಡ್ತಿದ್ದರು. ಇದನ್ನ ಗಮನಿಸಿದ ಐಶ್ವರ್ಯ ಆ ನಂತರ ತಮ್ಮ ತಾಯಿಯ ಅಪ್ಪಣೆ ಪಡೆದು ಚಿತ್ರರಂಗದ ಬಾಗಿಲು ಬಡಿಯಲು ಶುರು ಮಾಡಿದರು.
ಐಶ್ವರ್ಯ ಮಾಡಿದ ಪ್ರಯತ್ನದ ಫಲ ಎಂಬಂತೆ ಅವರ್‌ಗಲಂ ಇವರ್‌ಗಲಂ ಸಿನಿಮಾ ಇವರಿಗೆ ಸಿಕ್ತು. ಚಿತ್ರಮಂದಿರದಲ್ಲಿ ಯಶಸ್ವೀ ಪ್ರದರ್ಶನವನ್ನೂ ಕಂಡಿತ್ತು. ಅಲ್ಲಿಂದಾಚೆ ಹೊಸ ಕನಸು ಚಿಗುರೊಡೆದು ಹೊಸ ಭರವಸೆಯೊಂದಿಗೆ ಚಿತ್ರರಂಗದಲ್ಲಿ ಹೆಜ್ಜೆ ಇಡಲು ಐಶ್ವರ್ಯ ಆರಂಭ ಮಾಡಿದರು. ಆದರೆ.. ಇದು ಬಣ್ಣದ ಲೋಕ. ಅಡಿಗಡಿಗೂ ಅವಮಾನ ಮಾಡುವವರು ಇಲ್ಲಿ ಹೇರಳವಾಗಿ ಸಿಗ್ತಾರೆ. ಇವರೆಲ್ಲ ಐಶ್ವರ್ಯ ಬದುಕಿನಲ್ಲಿಯೂ ಬಂದರು. ಬಣ್ಣ, ಲುಕ್ಸ್, ದೇಹದ ಆಕೃತಿ, ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಅಪಹಾಸ್ಯ ಮಾಡಿ ನಕ್ಕರು.

ಲೈಂಗಿಕ ಕಿರುಕುಳವನ್ನೂ ಕೂಡ ಐಶ್ವರ್ಯ ಎದುರಿಸಬೇಕಾಯಿತು. ನೀನು ಹೀರೋಯಿನ್ ಮೆಟೀರಿಯಲ್ ಇಲ್ಲ ಪೋಷಕ ಪಾತ್ರಕ್ಕೆ ಪ್ರಯತ್ನ ಮಾಡು ಅನ್ನುವ ಮಾತು ಕೂಡ ಕೇಳಿ ಬಂತು
ಆದರೂ ಐಶ್ವರ್ಯ ಕಂಗೆಡಲಿಲ್ಲ. ಅವಮಾನವೇ ಸನ್ಮಾನಕ್ಕೆ ಮೆಟ್ಟಿಲು ಎಂದುಕೊಂಡು ಪ್ರಯತ್ನವನ್ನ ಮುಂದುವರೆಸಿದರು. ಮೂರು ವರ್ಷ ಅವಕಾಶಕ್ಕೆ ಅಲೆದಾಡಿದರು. ಆ ಬಳಿಕ 'ಅಟ್ಟಕತಿ' ಎಂಬ ಸಿನಿಮಾದಲ್ಲಿ ಪುಟ್ಟ ಪಾತ್ರವನ್ನು ನಿರ್ವಹಿಸಿದರು. ಆದರೆ ಆ ಪುಟ್ಟ ಪಾತ್ರದಿಂದ ಐಶ್ವರ್ಯ ಅವರನ್ನ ಜನ ಗುರುತಿಸಲು ಆರಂಭಿಸಿದರು. ಪರಿಣಾಮ ಒಂದೊಂದೆ ಅವಕಾಶ ಇವರನ್ನ ಅರಸಿ ಬಂದವು. ಆ ಪೈಕಿ ಬಂದ ಕಾಕಾ ಮುಟ್ಟೈ ಐಶ್ವರ್ಯ ಅವರ ಬದುಕನ್ನ ಸಂಪೂರ್ಣ ಬದಲಾಯಿಸಿತು.
ಹೀಗೆ ಬದುಕಿನಲ್ಲಿ ಒಂದೊಂದೆ ಮೆಟ್ಟಿಲನ್ನೇರುತ್ತಾ ಬಂದ ಐಶ್ವರ್ಯ ಇಲ್ಲಿಯವರೆಗೆ ಮಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಅನೇಕ ಸಿನಿಮಾ ಮಾಡಿದ್ದಾರೆ. ಡ್ಯಾಡಿ ಚಿತ್ರದ ಮೂಲಕ ಬಾಲಿವುಡ್ ನಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನ ಐಶ್ವರ್ಯ ಮಾಡಿಕೊಂಡಿದ್ದಾರೆ, ಇಂಥ ಐಶ್ವರ್ಯ ರಾಜೇಶ್ ಇದೀಗ ಉತ್ತರಕಾಂಡ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನವನ್ನ ಮಾಡ್ತಿದ್ದಾರೆ. ಬದುಕಿನಲ್ಲಿ ಹತ್ತಾರು ಕಷ್ಟ-ನೋವುಗಳನ್ನ ಎದುರಿಸಿ ಇವತ್ತು ಈ ಸ್ಥಾನಕ್ಕೆ ಬಂದಿರುವ ಐಶ್ವರ್ಯ ರಾಜೇಶ್ ಅವರಿಗೆ ನಿಮ್ಮದು ಒಂದು ಮೆಚ್ಚುಗೆ ಇರಲಿ. ಶುಭಾಶಯ ಇರಲಿ


Click it and Unblock the Notifications











