ಅಭಿಮಾನಿಗಳ ಮೇಲೆ ಡಾ.ರಾಜ್‌ಗೆ ಇದ್ದ ಪ್ರೀತಿ ಎಂತಹದ್ದು..? ಧ್ರುವತಾರೆ ಚಿತ್ರೀಕರಣದಲ್ಲಿ ಏನಾಯಿತು..?
ಕನ್ನಡ ಚಿತ್ರರಂಗದ ಮಾಸದ ಮುತ್ತು, ಕರ್ನಾಟಕದ ಸಾಂಸ್ಕ್ರತಿಕ ರಾಯಭಾರಿ ವರನಟ ಡಾ.ರಾಜ್ ಕುಮಾರ್ ಅವರನ್ನ ಹೊರತು ಪಡಿಸಿದ ಕನ್ನಡ ಚಿತ್ರರಂಗದ ಇತಿಹಾಸ ಸಮಾಪ್ತಿಯಾಗದು. 52 ವರ್ಷದ ತಮ್ಮ ಸಿನಿ ಬದುಕಿನಲ್ಲಿ ಮುತ್ತುರಾಜ್ ಮಾಡದ ಪಾತ್ರಗಳಿಲ್ಲ. ಶಿವಭಕ್ತ ಬೇಡರ ಕಣ್ಣಪ್ಪ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಜ್, ಕೊನವರೆಗೆ ಅಭಿಮಾನಿ ದೇವರುಗಳ ಭಕ್ತರಾಗಿಯೇ ಉಳಿದು ಬಿಟ್ರು. ಇದಕ್ಕೆ ಇನ್ನೆರಡು ಉದಾಹರಣೆಗಳು ಇಲ್ಲಿವೆ
ಅದು, ಧ್ರುವತಾರೆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ. ಬೆಂಗಳೂರು ಬಳಿ ಒಂದು ಹಳ್ಳಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಮದ್ಯಾಹ್ನದ ಬಿಡುವಿನಲ್ಲಿ ಸಮೀಪದ ಅತಿಥಿ ಗೃಹಕ್ಕೆ ಹೋದ ರಾಜಕುಮಾರ್ ವಿಶ್ರಾಂತಿ ಪಡೆಯುತ್ತಿದ್ದರು. ಅವರನ್ನು ನೋಡಲು ಜನರ ದಂಡು ಬಂತು. ಆದರೆ ಹೊರಗಿದ್ದವರು ಅಣ್ಣಾವ್ರನ್ನು ಈಗ ನೋಡಲು ಸಾಧ್ಯವಿಲ್ಲ ಹೋಗಿ ಎಂದು ಗದರುತ್ತಿದ್ದರು. ಒಳಗೆ ವಿಶ್ರಾಂತಿಯಲ್ಲಿದ್ದ ರಾಜಕುಮಾರ್ ಅವರಿಗೆ ಈ ಮಾತು ಕೇಳಿಸಿತು. ಕೂಡಲೇ ಅವರು ಎದ್ದು ಬಂದರು. ಜನರನ್ನು ಗದರಿಸಬೇಡಿ ಎಂದು ಸಂಬಂಧಪಟ್ಟವರಿಗೆ ತಿಳಿಹೇಳಿದರು. ಜನರೊಂದಿಗೆ ಬೆರೆತರು; ಮಾತನಾಡಿದರು. ಬಿಡುವಿನ ವೇಳೆಯಲ್ಲಿ ಜನರೊಂದಿಗೆ ಕಾಲ ಕಳೆದು ಆ ನಂತರ ಚಿತ್ರೀಕರಣಕ್ಕೆ ಹಾಜರಾದರು ಡಾ.ರಾಜ್ ಕುಮಾರ್

ಇನ್ನು ಅಭಿಮಾನಿ ಜನರ ಬಗ್ಗೆ ರಾಜಕುಮಾರ್ ಅವರಿಗಿದ್ದ ಅಚಲ ನಿಷ್ಠೆ ಮತ್ತು ಅಪರಿಮಿತ ಪ್ರೀತಿಗೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಪ್ರಕರಣವು ಅತ್ಯುತ್ತಮ ಉದಾಹರಣೆ. ರಾಜಕುಮಾರ್ ಅವರು ನೂರು ಚಿತ್ರಗಳ ನಾಯಕರಾಗಿ ನಟಿಸಿದ್ದಕ್ಕೆ ಇದೇ ಮೈಸೂರಿನಲ್ಲಿ ಸಂಭ್ರಮದ ಸಮಾರಂಭ ನಡೆದು ನಟ ಸಾರ್ವಭೌಮ ಎಂಬ ಬಿರುದು ನೀಡಿ ಕೆಲವು ದಿನಗಳಾಗಿದ್ದವು.
ಆಗ ಪ್ರೀಮಿಯರ್ ಸ್ಟುಡಿಯೋದ ಒಂದು ಫ್ಲೋರ್‌ನಲ್ಲಿ ರಾಜಕುಮಾರ್ ಚಿತ್ರೀಕರಣದಲ್ಲಿ ತೊಡಗಿದ್ದರು. ಅನೇಕ ಅಭಿಮಾನಿಗಳು ಇವರನ್ನು ನೋಡಲು ಹೊರಗೆ ಕಾಯುತ್ತ ನಿಂತಿದ್ದರು. ಈ ವಿಷಯ ಗೊತ್ತಾದ ಕೂಡಲೆ ಅವರನ್ನು ಕಾಯಿಸುವುದು ಸರಿಯಲ್ಲವೆಂದು ಭಾವಿಸಿದ ರಾಜಕುಮಾರ್ ಜನರನ್ನು ಸ್ವಲ್ಪಕಾಲ ಒಳಗೆ ಅಂದರೆ ಚಿತ್ರೀಕರಣದ ಫ್ಲೋರ್‌ಗೆ ಬಿಡುವಂತೆ ಹೇಳಿದರು.

ಆದರೆ ಸ್ಟುಡಿಯೋ ಮಾಲೀಕರು ಸುತಾರಾಂ ಒಪ್ಪಲಿಲ್ಲ. ರಾಜಕುಮಾರ್ ಅವರು ಒಂದು ತೀರ್ಮಾನ ಕೈಗೊಂಡರು. ನನ್ನನ್ನು ನೋಡಲು ಬಂದ ಅಭಿಮಾನಿಗಳಿಗೆ ಪ್ರವೇಶವಿಲ್ಲದ ಪ್ರೀಮಿಯರ್ ಸ್ಟುಡಿಯೋವನ್ನು ನಾನು ಪ್ರವೇಶಿಸುವುದಿಲ್ಲ ಎಂದು ಘೋಷಿಸಿದರು. ಹಾಗೇ ನಡೆದುಕೊಂಡರು ಕೂಡ. ಕೆಲವು ಕಾಲಾನಂತರ ಈ ಸಮಸ್ಯೆ ರಾಜಿಯ ಮೂಲಕ ಇತ್ಯರ್ಥವಾಯಿತು. ಅಭಿಮಾನಿ ದೇವರುಗಳಿಗೆ ಸ್ಟುಡಿಯೋ ದಿಡ್ಡಿ ಬಾಗಿಲು ತೆರೆಯಿತು.
ಹೀಗೆ ಡಾ. ರಾಜಕುಮಾರ್ ಅವರು ಜನರಲ್ಲಿ ದೇವರನ್ನು ಕಂಡರು. ಜನರ ಪಾಲಿಗೆ ಡಾ.ರಾಜ್ ಆರಾದ್ಯದೈವರಾದರು. ತಮ್ಮ ಅಭಿನಯದಿಂದ ಅಷ್ಟೇ ಅಲ್ಲದೇ ನಯ-ವಿನಯ-ಸರಳತೆಯಿಂದ ಜನಪದ ನಾಯಕರಾದರು ಡಾ.ರಾಜ್ ಕುಮಾರ್.
ಡಾ. ರಾಜಕುಮಾರ್ ಅವರಿಗೆ ಸಾಮಾನ್ಯರು-ಅಸಾಮಾನ್ಯರು ಎಂಬ ಭೇದಭಾವ ಇರಲಿಲ್ಲ. ಅಭಿಮಾನದಲ್ಲಿ ಅಸಮಾನತೆಗೆ ಅವಕಾಶವೂ ಇರಲಿಲ್ಲ.ಮೇಲಿನ ಈ ಎರಡು ಘಟನೆಗಳೇ ಡಾ.ರಾಜ್ ಕುಮಾರ್ ಅವರಿಗೆ ತಮ್ಮ ಅಭಿಮಾನಿಗಳ ಮೇಲಿದ್ದ ಪ್ರೀತಿಗೆ ಅತ್ಯುತ್ತಮ ಸಾಕ್ಷಿ


Click it and Unblock the Notifications











