ಕುಳ್ಳ ಏಜೆಂಟ್ 000 ಚಿತ್ರಕ್ಕೆ ನಾಯಕನಾಗಿದ್ದೇಕೆ ದ್ವಾರಕೀಶ್ ? ಕೈ ಹಿಡಿದಿದ್ಹೇಗೆ ರವಿಚಂದ್ರನ್ ತಂದೆ..?
ದ್ವಾರಕೀಶ್ ಕೇವಲ ಪ್ರಚಂಡ ಕುಳ್ಳ ಅಷ್ಟೇ ಆಗಿರಲಿಲ್ಲ. ಪ್ರಚಂಡ ಸಾಹಸಿಯೂ ಆಗಿದ್ದರು. ಇದಕ್ಕೆ ಹತ್ತು ಹಲವು ನಿದರ್ಶನ ಕನ್ನಡ ಚಿತ್ರರಂಗದ ಇತಿಹಾಸದಲ್ಲಿವೆ. ಆ ಪೈಕಿ.. ಕುಳ್ಳ ಏಜೆಂಟ್ 000 ಚಿತ್ರದ ಕಥೆ ಕೂಡ ಒಂದು. ನಿರ್ಮಾಪಕನಾಗಿ ಗೆದ್ದ ದ್ವಾರಕೀಶ್ ಈ ಚಿತ್ರಕ್ಕೆ ನಾಯಕನಾಗಿದ್ದೇ ರೋಚಕ
ಹೌದು.. ನಿಮಗೆ ಗೊತ್ತಿರಲಿ, ಮೇಯರ್ ಮುತ್ತಣ್ಣ ಚಿತ್ರದ ನಂತರ, ಡಾ.ರಾಜ್ ಕುಮಾರ್ ಜೊತೆ ಮತ್ತೊಂದು ಸಿನಿಮಾ ಮಾಡಲು ದ್ವಾರಕೀಶ್ ಅಣಿಯಾಗಿದ್ದರು. ಆದರೆ.. ಆ ಕಾಲಕ್ಕೆ ಡಾ.ರಾಜ್ ಕುಮಾರ್ ಅವರ ಕಾಲ್ ಶೀಟ್ ಗಗನ ಕುಸುಮವಾಗಿತ್ತು. ಯಾಕೆಂದರೆ ಡಾ.ರಾಜ್ ಕುಮಾರ್ ಅವರ ಮುಂದೆ, ಸರತಿ ಸಾಲಿನಲ್ಲಿ ನಿರ್ಮಾಪಕರು ನಿಂತಿದ್ದರು. ಈ ಕಾರಣಕ್ಕೆ.. ಮೇಯರ್ ಮುತ್ತಣ್ಣ ಅಂತಹ ಬ್ಲಾಕ್ ಬಸ್ಟರ್ ಚಿತ್ರವನ್ನ ನೀಡಿಯೂ ಎರಡು ವರ್ಷ ಚಿತ್ರ ನಿರ್ಮಾಣವನ್ನ ಮಾಡದ ದ್ವಾರಕೀಶ್, ಒಂದರ್ಥದಲ್ಲಿ ದಿಕ್ಕೆಟ್ಟು ಕುಂತಿದ್ದರು. ಮುಂದೇನು ಮಾಡಬೇಕೆಂದು ಆಲೋಚನೆಯನ್ನೂ ಮಾಡುತ್ತಿದ್ದರು. ಇದೇ ಸಮಯದಲ್ಲಿ ಡಾ.ರಾಜ್ ಕುಮಾರ್ ಜೇಡರ ಬಲೆ ಸಿನಿಮಾವನ್ನ ಮಾಡಿದರು. ಆಪರೇಶನ್ ಡೈಮಂಡ್ ರಾಕೆಟ್ ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಕನ್ನಡದ ಮೊದಲ ಜೇಮ್ಸ್ ಬಾಂಡ್ ಎಂಬ ಹೆಗ್ಗಳಿಕೆಗೆ ಡಾ.ರಾಜ್ ಕುಮಾರ್ ಪಾತ್ರವಾಗಿದ್ದರು.

ಇದೇ ಸಂದರ್ಭದಲ್ಲಿ ತೆರೆಗೆ ಬಂದ ಸಿನಿಮಾ ಆಪರೇಶನ್ ಲವ್ ಬರ್ಡ್ಸ್. ಹಾಲಿವುಡ್‌ನ ಈ ಚಿತ್ರವನ್ನ ಮದ್ರಾಸಿನಲ್ಲಿ ನೋಡಿದ ದ್ವಾರಕೀಶ್ ಅವರಲ್ಲಿ ತಾವ್ಯಾಕೇ ಜೇಮ್ಸ್ ಬಾಂಡ್ ಆಗಬಾರದು ಎನ್ನುವ ಆಲೋಚನೆ ಬಂತು. ಆಗ ಹುಟ್ಟಿದ್ದ ಸಿನಿಮಾನೇ ಕುಳ್ಳ ಏಜೆಂಟ್ 000.
ಇನ್ನೂ.. ಡಾ.ರಾಜ್ ಕುಮಾರ್ ಇಲ್ಲದ ಸಿನಿಮಾವನ್ನ ಜನ ನೋಡಲು ಹಿಂದೇಟು ಹಾಕುತ್ತಿದ್ದ ಕಾಲ ಅದು. ಈ ಕಾರಣಕ್ಕೆ .. ಕುಳ್ಳ ಏಜೆಂಟ್ 000 ಮಾಡಲು ದ್ವಾರಕೀಶ್ ಮಾಡಲು ಮುಂದಾಗಿದ್ದರು ಕೂಡ ಚಿಕ್ಕ ಅಳುಕು ಇದ್ದೇ ಇತ್ತು. ನಾಯಕನನ್ನಾಗಿ ಜನ ಸ್ವೀಕರಿಸುತ್ತಾರಾ ಅನ್ನುವ ಅನುಮಾನ ಇತ್ತು. ಆದರೂ.. ಆಗಿದ್ದಾಗಲೀ.. ಮಾಡಿಯೇ ಬಿಡೋಣ ಎಂದು ತೀರ್ಮಾನವನ್ನ ದ್ವಾರಕೀಶ್ ಮಾಡಿದಾಗ ಕುಳ್ಳ ಏಜೆಂಟ್ 000 ಐಡಿಯಾ ಮೆಚ್ಚಿಕೊಂಡ ಚಂದೂಲಾಲ್ ಜೈನ್ ಸಹ ನಿರ್ಮಾಪಕನ ಸ್ಥಾನಕ್ಕೆ ಬಂದರು. ಇನ್ನೂ ಕೆ.ಎಸ್.ಎಲ್ ಸ್ವಾಮಿ ಚಿತ್ರವನ್ನ ನಾನೇ ನಿರ್ದೇಶನ ಮಾಡ್ತೀನಿ ಎಂದು ಮುಂದೆ ಬಂದರು. ಇದರ ನಡುವೆ ಕನ್ನಡದ ಖ್ಯಾತ ನಿರ್ಮಾಪಕ ವೀರಾಸ್ವಾಮಿ ಅವರು ದ್ವಾರಕೀಶ್ ಅವರಿಗೆ ಆರ್ಥಿಕ ನೆರವನ್ನ ನೀಡಿದರು. ದ್ವಾರಕೀಶ್ ಮೇಲಿನ ನಂಬಿಕೆಯಿಂದ ಆ ಕಾಲಕ್ಕೆ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಯನ್ನ ದ್ವಾರಕೀಶ್ ಕೈಗೆ ಕೊಟ್ಟರು.

ಹೀಗೆ ಒಂದಕ್ಕೊಂದು ಎಲ್ಲ ಕೂಡಿ ಬಂದ ನಂತರ, ತಡ ಮಾಡದ ದ್ವಾರಕೀಶ್, ಆ ಕಾಲದಲ್ಲಿ ತಮಿಳುನಾಡಿನೆಲ್ಲೆಡೆ ಹೆಸರುವಾಸಿಯಾಗಿದ್ದ ಬರಹಗಾರ ಪೂವೈ ಕೃಷ್ಣನ್ ಅವರನ್ನ ಸಂಪರ್ಕಿಸಿದರು. ಕುಳ್ಳ ಏಜೆಂಟ್ 000 ಕಥೆಯನ್ನ ಬರೆಸಿದರು. ಇನ್ನೂ.. ಆಗಲೇ ಹೇಳಿದಂತೆ, ದ್ವಾರಕೀಶ್ ನಾಯಕನ ಪಟ್ಟವನ್ನ ಅಲಂಕರಿಸಲು ಮುಂದಾಗಿದ್ದರು ಕೂಡ, ಹಾಸ್ಯ ಕಲಾವಿದನನ್ನ ಜನ ನಾಯಕನಾಗಿ ಸ್ವೀಕರಿಸದೇ ಇದ್ದರೆ ಎಂಬ ಭಯ ದ್ವಾರಕೀಶ್ ಅವರಲ್ಲಿ ಇದ್ದೇ ಇತ್ತು. ಈ ಭಯವನ್ನ ದೂರ ಮಾಡಿದ್ದು ಬೇರೆ ಯಾರು ಅಲ್ಲ ಬದಲಿಗೆ ಡಾ.ರಾಜ್ ಕುಮಾರ್ ಅನ್ನುವುದು ವಿಶೇಷ.
ಹೌದು, ಡಾ.ರಾಜ್ ಕುಮಾರ್ ಭಾವ ಚಿತ್ರವನ್ನೇ ಟ್ರಂಪ್ ಕಾರ್ಡ್ ಆಗಿ ಕುಳ್ಳ ಏಜೆಂಟ್ 000 ಚಿತ್ರದಲ್ಲಿ ದ್ವಾರಕೀಶ್ ಬಳಿಸಿಕೊಂಡರು. ಗುರು ನಿನ್ನ ಮೇಲೆ ಭಕ್ತಿ.. ಕೊಡು ನನಗೆ ಶಕ್ತಿ.. ಎಂಬ ಡೈಲಾಗ್ ಹೊಡೆದರು. ಖಳನಾಯಕರ ಜೊತೆ ಹೊಡೆದಾಡಿದರು. ದ್ವಾರಕೀಶ್ ಮಾಡಿದ್ದ ಈ ಭಯಂಕರ ಐಡಿಯಾ, ಆ ಕಾಲಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಕುಳ್ಳ ಏಜೆಂಟ್ 000 ಚಿತ್ರ ನೋಡಿ ಕರುನಾಡು ಕೇಕೆ ಹೊಡೆಯಿತು.

ವೀರಾಸ್ವಾಮಿ ಅವರು ದ್ವಾರಕೀಶ್ ಅವರಿಗೆ ನೀಡಿದ್ದ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಯನ್ನ, ಒಂದೇ ವಾರದಲ್ಲಿ ಗಳಿಸಿದ ಕುಳ್ಳ ಏಜೆಂಟ್ 000 ಆ ನಂತರ ತಮಿಳು, ಹಿಂದಿ, ಮಲಯಾಳಂ ಮತ್ತು ತೆಲುಗಿಗೆ ಡಬ್ ಆಯಿತು. ಇನ್ನೂ.. ಈ ಕಾಲದಲ್ಲಿ ಒಂದು ಚಿತ್ರ ಗೆದ್ದ ಮೇಲೆ, ಕಾಲರ್ ಎತ್ತಿ ನ್ಯಾಷನಲ್ ಸ್ಟಾರ್ ಎಂದುಕೊಳ್ಳುವರ ನಡುವೆ, ಆ ಕಾಲದಲ್ಲಿಯೇ ಮುಂಬೈನ ಮೆಟ್ರೋ ಚಿತ್ರಮಂದಿರದ ಮುಂದೆ ದ್ವಾರಕೀಶ್ ಅವರ 75 ಅಡಿ ಕಟೌಟ್ ಎದ್ದು ನಿಂತಿತ್ತು. ಇಷ್ಟೇ ಅಲ್ಲ ಕುಳ್ಳ ಏಜೆಂಟ್ 000 ಚಿತ್ರವನ್ನ ಹಿಂದಿಯಲ್ಲಿ ಡಿಸ್ಟ್ರಿಬ್ಯೂಟ್ ಮಾಡಿದ್ದ ನಟ್ಟೂಲಾಲ್ ಎಂಬ ವಿತರಕರು ದ್ವಾರಕೀಶ್ ಅವರನ್ನ ಓಬೆರಾಯ್ ಹೊಟೇಲ್ ಗೆ ಕರೆದು ದೊಡ್ದದಾದ ಪಾರ್ಟಿಯೊಂದನ್ನೂ ಕೊಟ್ಟಿದ್ದರು.
ಅಲ್ಲಿಂದಾಚೆ.. ನಿರ್ಮಾಪಕನಾಗಿ - ಹಾಸ್ಯ ಕಲಾವಿದನಾಗಿ ಗೆದ್ದಿದ್ದ ದ್ವಾರಕೀಶ್ ನಾಯಕನಾಗಿ ನೆಲೆಯೂರಿದರು. ಕೌ ಬಾಯ್ ಕುಳ್ಳ.. ಕಿಟ್ಟು ಪುಟ್ಟು.. ಹೀಗೆ ಅನೇಕ ಚಿತ್ರಗಳನ್ನ ಮಾಡಿದರು.


Click it and Unblock the Notifications











