ಅಶೋಕ ಹೊಟೇಲ್ ರೂಮ್ ರಾತ್ರೋ ರಾತ್ರಿ ಖಾಲಿ ಮಾಡಿದ್ದೇಕೆ ಡಾ.ರಾಜ್..? ಆ ನಂತರ ನಿರ್ಮಾಪಕರಿಗೆ ಸಿಕ್ಕಿದ್ದೆಲ್ಲಿ..?
ಡಾ. ರಾಜಕುಮಾರ್ ಅವರು ಶ್ರಮ ಸಂಕಟಗಳಿಲ್ಲದೆ ಎತ್ತರೆತ್ತರಕ್ಕೆ ಬೆಳೆದವರಲ್ಲ.ಸಾಮಾಜಿಕ ಅವಮಾನಗಳನ್ನು ಮೌನದಲ್ಲೇ ಅನುಭವಿಸಿ, ಅರಗಿಸಿ, ಅರಳುತ್ತ ಬಂದವರು. ಅವರು ಕೆರಳಿದ್ದು ಕಡಿಮೆ, ಅರಳಿದ್ದು ಅಧಿಕ. ಇಂತಹ ಡಾ.ರಾಜ್ ಕುಮಾರ್ ಸರಳತೆಯ ಸಾಹುಕಾರ ಕೂಡ ಆಗಿದ್ದರು. ಇದಕ್ಕೆ ಇನ್ನೊಂದು ಉದಾಹರಣೆ ದಾರಿ ತಪ್ಪಿದ ಮಗ ಚಿತ್ರದ ಚಿತ್ರೀಕರಣದ ಸಂದರ್ಭ.
ಹೌದು, ಅಸಲಿಗೆ ಅದು.. ನವೆಂಬರ್ ತಿಂಗಳು. ಕರುನಾಡಿನೆಲ್ಲೆಡೆ ಎಲ್ಲೆಲ್ಲೂ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದ ದಿನಗಳವು. ಇಂತಹ ದಿನಗಳಲ್ಲಿ ರಾಜಕುಮಾರ್ ಅವರು ಸಿಕ್ಕಿದರೆ ಸಾಕು ಸಮಾರಂಭಕ್ಕೆ ಕರೆಯೋಣ ಎಂದು ಕನ್ನಡಾಭಿಮಾನಿಗಳಿಗೆ ಕಾತುರ ಇತ್ತು. ಹೀಗೆ ಸಮಾರಂಭಗಳಿಗೆ ಒಪ್ಪಿಕೊಳ್ಳತೊಡಗಿದರೆ ಚಿತ್ರೀಕರಣಕ್ಕೆ ತೊಂದರೆಯಾದೀತೆಂದು ನಿರ್ಮಾಪಕರಿಗೆ ಆತಂಕ. ರಾಜಕುಮಾರ್ ಅವರಿಗೆ ಮುಂದೆ ಬೇರೊಂದು ಕೆಲಸ ಇದ್ದ ಕಾರಣಕ್ಕೆ ದಾರಿ ತಪ್ಪಿದ ಮಗ ಚಿತ್ರದ ಚಿತ್ರೀಕರಣ ದಾರಿ ತಪ್ಪಬಾರದೆಂದು ರಾಜ್ ಅವರನ್ನು ಒಳಗೊಂಡಂತೆ ಎಲ್ಲರ ಅಪೇಕ್ಷೆ.

ಆದರೆ.. ಅದಕ್ಕೆ ಅಡ್ಡಿಯೊಂದು ಇತ್ತು. ಆ ಅಡ್ಡಿಯೇ ಮನೆಯ ವಿಳಾಸ. ಯಾಕೆಂದರೆ.. ಆಗಿನ್ನೂ ಡಾ.ರಾಜ್ ಬೆಂಗಳೂರಲ್ಲಿ ಮನೆ ಮಾಡಿರಲಿಲ್ಲ. ಈ ಕಾರಣಕ್ಕೆ ಅವರ ಅಚ್ಚು ಮೆಚ್ಚಿನ ಹೈಲ್ಯಾಂಡ್ಸ್ ಹೋಟೆಲ್‌ನಲ್ಲಿ ಡಾ.ರಾಜ್ ಕುಮಾರ್ ಅವರು ತಂಗುತ್ತಿದ್ದರು. ವಿಶೇಷ ಅಂದರೆ ಮಧ್ಯಮ ದರ್ಜೆಯ ಈ ಹೋಟೆಲ್‌ನಲ್ಲಿ ರಾಜ್ ಇಳಿದುಕೊಳ್ಳುತ್ತಾರೆಂಬ ವಿಚಾರ ಆ ಕಾಲದಲ್ಲಿ ಬಹುತೇಕರಿಗೆ ಗೊತ್ತಿತ್ತು. ಹೀಗಾಗಿಯೇ ಅವತ್ತೊಂದು ದಿನ, ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳಿಗೆ ಕರೆಯಲು ಜನರು ಮುತ್ತಿಕೊಳ್ಳುತ್ತಾರೆಂದು ಯೋಚಿಸಿದ ನಿರ್ಮಾಪಕರು ಅವತ್ತು ಪಂಚತಾರಾ ಅಶೋಕ ಹೋಟೆಲ್‌ನಲ್ಲಿ ರೂಮ್ ಮಾಡಿ, ರಾಜಕುಮಾರ್ ಅವರನ್ನು ಅಲ್ಲಿಗೆ ಕರೆದೊಯ್ದರು. ರೂಮಿಗೆ ಬಿಟ್ಟು ವಾಪಸ್ ಬಂದರು.
ಆದರೆ.. ಮಾರನೇ ದಿನ ಅಶೋಕ ಹೋಟೆಲಿಗೆ ಹೋದಾಗ ಆಶ್ಚರ್ಯ ಮತ್ತು ಆತಂಕ ಒಟ್ಟಾಗಿ ಕಾದಿದ್ದವು. ಯಾಕೆಂದರೆ ನಿರ್ಮಾಪಕರು ಅಲ್ಲಿ ಅಂದರೆ ಅಶೋಕ ಹೊಟೇಲ್ಲಿಗೆ ಹೋದಾಗ ರಾಜಕುಮಾರ್ ಅವರು ಅಶೋಕ ಹೋಟೆಲ್‌ನಲ್ಲಿ ಇರಲಿಲ್ಲ! ರಾತ್ರಿಯೇ ರೂಮ್ ಖಾಲಿ ಮಾಡಿದರೆಂದು ಹೋಟೆಲ್‌ನವರು ಹೇಳಿದರು! ನಿರ್ಮಾಪಕರಿಗೆ ಪೇಚಾಟ. ತಮ್ಮ ಕಡೆಯಿಂದ ಏನಾದರೂ ಲೋಪವಾಗಿರಬಹುದೇ ಎಂದು ಚಿಂತಿಸುತ್ತ, ಚಿತ್ರತಂಡದವರು ಇಳಿದುಕೊಂಡಿದ್ದ ಹೈಲ್ಯಾಂಡ್ ಹೋಟೆಲ್‌ಗೆ ಬಂದಾಗ ಅಲ್ಲೊಂದು ಅಚ್ಚರಿ ಮತ್ತು ಆನಂದದ ಕ್ಷಣ ಕಾದಿತ್ತು. ಯಾಕೆಂದರೆ ರಾಜಕುಮಾರ್ ಅವರು ಅಲ್ಲೇ ತಮ್ಮ ಮೊದಲಿನ ರೂಮಲ್ಲೇ ಇದ್ದರು. ಚಿತ್ರೀಕರಣಕ್ಕೆ ಸಿದ್ಧರಾಗಿ ಕೂತಿದ್ದರು.

ರಾಜ್ ಅವರನ್ನ ಅಲ್ಲಿ ಅಂದರೆ ಹೈಲ್ಯಾಂಡ್ ಹೊಟೇಲ್ ನಲ್ಲಿ ನೋಡಿ ಏನಾಯಿತು ಎಂದು ನಿರ್ಮಾಪಕರು ವಿಚಾರಿಸಿದಾಗ ಡಾ.ರಾಜ್ ಕುಮಾರ್ ನೀವೆಲ್ಲ ನನ್ನನ್ನು ಅಶೋಕ ಹೋಟೆಲ್‌ನಲ್ಲಿ ಬಿಟ್ಟು ಹೋದ ಮೇಲೆ ಊಟಕ್ಕೆ ಹೇಳಿದೆ. ಊಟವಾಯಿತು. ಸೈನ್ ಮಾಡಲು ಬಿಲ್ ತಂದರು. ಸೈನ್ ಮಾಡುತ್ತ ಬಿಲ್ ನೋಡಿದೆ. ಅಬ್ಬಾ..! ಒಂದು ಊಟ ಅದೆಷ್ಟು ದುಬಾರಿ! ನಾನು ನಿರ್ಮಾಪಕರಿಗೆ ಇಷ್ಟು ಹೊರೆಯಾಗಬಾರದು ಎನ್ನಿಸಿತು. ನನ್ನ ಹಳೇ ಹೋಟೆಲ್ಲು ಹಳೇ ರೂಮ್ ಸರಿ ಎಂದು, ಕೂಡ್ಲೆ ಆ ರೂಮ್ ಖಾಲಿ ಮಾಡಿ ಇಲ್ಲಿಗೆ ಬಂದೆ ಎಂದು ಬಿಟ್ಟರು ಡಾ.ರಾಜ್ ಕುಮಾರ್ .
ಡಾ. ರಾಜಕುಮಾರ್ ಅವರ ಈ ವಿವರಣೆಯ ಒಳಗೆ ಅವರ ಇಡೀ ವ್ಯಕ್ತಿತ್ವ ಒಂದಾಗಿ ಬೆಸೆದುಕೊಂಡಿದೆ ಅಂದರೆ ಅದು ತಪ್ಪಲ್ಲ.ಡಾ.ರಾಜ್ ಕುಮಾರ್ ಅವರ ಬಗ್ಗೆ ಈ ತರಹದ ಹತ್ತಾರು ಪ್ರಸಂಗ ಮತ್ತು ವಿಶೇಷತೆಗಳು ಡಾ.ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಜನಪದ ನಾಯಕ ಡಾ. ರಾಜ್ ಕುಮಾರ್ ಎಂಬ ಅಮೂಲ್ಯ ಕೃತಿಯಲ್ಲಿವೆ.ಜನ ಪ್ರಕಾಶನ ಈ ಕೃತಿಯನ್ನ ಹೊರತಂದಿದೆ


Click it and Unblock the Notifications










