ಗ್ಲ್ಯಾಮರ್ ಪ್ರಪಂಚಕ್ಕೆ ಗುಡ್ ಬೈ ಹೇಳಿ, ಆಧ್ಯಾತ್ಮದತ್ತ ವಾಲಿದ ಅಪ್ಪು ಜೊತೆ ತೆರೆ ಹಂಚಿಕೊಂಡಿದ್ದ ನಾಯಕಿ..!
ಬದುಕು ಹೀಗೆ ಎಂದು ಹೇಳಲು ಸಾಧ್ಯ ಇಲ್ಲ. ಯಾವ ಕ್ಷಣದಲ್ಲಾದರೂ ಬದುಕು ಬದಲಾಗಬಹುದು. ಆರಕ್ಕೇರಿದವರು ಮೂರಕ್ಕಿಳಿಯಬಹುದು. ಮೂರಕ್ಕಿಳಿದವರು ಆರಕ್ಕೇರಬಹುದು.
ಇನ್ನೂ ಸುಂದರ ಬದುಕು ತಕ್ಷಣಕ್ಕೆ ಸಿಗುವ ಮಾರುಕಟ್ಟೆಯ ಸರಕಂತೂ ಅಲ್ಲ. ಸುಖ: ಸಂತೋಷ ಇಲ್ಲ ಎಂದು ಸದಾ ಕಾಲ ಕೊರಗುತ್ತಾ ಕುಳಿತರೆ ಸುಂದರ ಬದುಕು ರೂಪಿಸಿಕೊಳ್ಳಲು ಕೂಡ ಸಾಧ್ಯ ಇಲ್ಲ. ಹೀಗಾಗಿಯೇ ಕೆಲವರು ನೆಮ್ಮದಿಯನ್ನ ಅರಸಿ ಪ್ರವಾಸಕ್ಕೆ ಹೋಗ್ತಾರೆ. ಅಲ್ಲಿಯ ಆಹ್ಲಾದಕರ ವಾತಾವರಣದಿಂದ ಹೊಸ ಯೋಜನೆ ರೂಪಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ಸಾಧಕರ ಪುಸ್ತಕಗಳ ಮೊರೆ ಹೋಗಿ ಅದರಿಂದ ಸ್ಫೂರ್ತಿಯನ್ನ ಪಡೆದು ಬದುಕಿನ ಬಂಡಿಯನ್ನ ಸರಿದಾರಿಗೆ ತಂದುಕೊಳ್ಳುತ್ತಾರೆ. ಇನ್ನೂ ಕೆಲವರು ಆಧ್ಯಾತ್ಮದತ್ತ ಮುಖ ಮಾಡುತ್ತಾರೆ. ಇದಕ್ಕೆ ನಿಶಾ ಕೊಠಾರಿ ಸದ್ಯದ ಉದಾಹರಣೆ.

ಹೌದು, ಪ್ರಿಯಾಂಕ ಕೊಠಾರಿ ಅಲಿಯಾಸ್ ನಿಶಾ ಕೊಠಾರಿ .. ಎರಡು ದಶಕದ ಹಿಂದೆ ಪಡ್ಡೆಗಳಿಗೆ ನಶೆ ಏರಿಸಿದ್ದ ನಾಯಕಿ. ರಾಮ್ ಗೋಪಾಲ್ ವರ್ಮಾ ಕ್ಯಾಂಪ್‌ನಲ್ಲಿ ಖಾಯಂ ಆಗಿ ಕಾಣಿಸಿಕೊಳ್ಳುತ್ತಿದ್ದ ಈ ಚೆಲುವೆ ಜೇಮ್ಸ್, ಸರ್ಕಾರ್, ಶಿವ, ಡಾರ್ಲಿಂಗ್, ರಾಮ್ ಗೋಪಾಲ್ ವರ್ಮಾ ಕೀ ಆಗ್, ಚಿತ್ರಗಳ ಮೂಲಕ ಹುಡುಗರಿಗೆ ಹುಚ್ಚು ಹಿಡಿಸಿದ್ದರು. ಇನ್ನೂ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ್ದ ರಾಜ್ ದಿ ಶೋ ಮ್ಯಾನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಬಂದಿದ್ದ ನಿಶಾ ಆ ನಂತರ 'ದಂಡುಪಾಳ್ಯ'ದಲ್ಲಿ ಪಾತ್ರವೊಂದರಲ್ಲಿಯೂ ಮಿಂಚಿದರು.
ಆದರೆ.. ಆ ನಂತರ ತಮಿಳು, ತೆಲುಗು, ಹಿಂದಿ, ಮತ್ತು ಕನ್ನಡ.. ಹೀಗೆ ನಾಲ್ಕು ಭಾಷೆಯಲ್ಲಿ ಬ್ಯುಸಿಯಾಗಿದ್ದ ನಿಶಾ, ಈ ಸ್ಪರ್ಧಾತ್ಮಕ ಯುಗದಲ್ಲಿ ಹಿಂದೆ ಬಿದ್ದರು. ಅವಕಾಶಗಳಿಂದ ವಂಚಿತಗೊಂಡು 2016ರಲ್ಲಿ ಭಾಸ್ಕರ್ ಎಂಬ ವ್ಯಕ್ತಿಯನ್ನು ಮದುವೆಯೂ ಆದರು.

ಇಂಥಾ ನಿಶಾ ಕೊಠಾರಿ ಈಗ ಆಧ್ಯಾತ್ಮದತ್ತ ವಾಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಿಶಾ ಕೊಠಾರಿಯ ಆಧ್ಯಾತ್ಮಿಕ ಚಿಂತನೆಯ ಫೋಟೋಗಳು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಒಂದ್ಕಾಲದಲ್ಲಿ ತನ್ನ ಅಂದ-ಚೆಂದ-ಮೈಮಾಟದಿಂದ ಕಣ್ಮನ ಸೆಳೆಯುತ್ತಿದ್ದ ನಿಶಾ ಕೊಠಾರಿ ಇವರೇನಾ ಎಂಬ ಪ್ರಶ್ನೆಯನ್ನೂ ಕೂಡ ಈ ಫೋಟೋಗಳು ಹುಟ್ಟಿ ಹಾಕಿವೆ.
ಬಿಹಾರದ ಬೋಧಗಯಾದಲ್ಲಿನ ಬೋಧಿವೃಕ್ಷದ ಕೆಳಗೆ ಕುಳಿತ ನಿಶಾ ಕೊಠಾರಿ ಮತ್ತೊಂದು ಕಡೆ ಹಿಮಾಲಯದಲ್ಲಿ ತಪಸ್ಸನ್ನೂ ಮಾಡುತ್ತಿರುವ ಫೋಟೋಗಳನ್ನೂ ಕೂಡ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ನಿಶಾ ಕೊಠಾರಿಯವರ ಈ ಆಧ್ಯಾತ್ಮಿಕ ರೂಪ ಸಾಮಾಜಿಕ ಜಾಲತಾಣದಲ್ಲಿ ಅನೇಕರ ಕಣ್ಣರಳಿಸಿದೆ. ಚಿತ್ರರಂಗದಿಂದ ದೂರವಾದ ನಿಶಾಗೆ ಆಧ್ಯಾತ್ಮದ ಕಡೆ ಒಲವು ಶುರುವಾಗಿದ್ಹೇಗೆ ಎಂಬ ಜಿಜ್ಞಾಸೆ ಅನೇಕರನ್ನ ಕಾಡುತ್ತಿದೆ.

ಇನ್ನೂ ಮದುವೆಯ ಸಮಯದಲ್ಲಿ ಅಂದರೆ 2016ರಲ್ಲಿ ಬಂದ ಬುಲೆಟ್ ರಾಣಿ ಚಿತ್ರವೇ ಕೊನೆ. ಆ ನಂತರ ನಿಶಾ ಕೊಠಾರಿ ಮತ್ತೆ ಮುಖಕ್ಕೆ ಬಣ್ಣ ಹಚ್ಚಿಲ್ಲ. ಆದರೆ ಈಗ ಆಧ್ಯಾತ್ಮದ ಕಡೆ ನಿಶಾ ವಾಲಿದ್ದಾರೆ. ಈ ಕಾರಣಕ್ಕೆ ನಿಶಾ ಇನ್ಮುಂದೆ ಚಿತ್ರರಂಗಕ್ಕೆ ಮತ್ತೆ ಮರಳಿ ಬರುವುದಿಲ್ಲವಾ ಎಂಬ ಚಿಂತೆ ಇವರ ಅಭಿಮಾನಿಗಳಿಗೆ ಈಗ ಕಾಡುತ್ತಿದೆ.


Click it and Unblock the Notifications











