ಅಂಬರೀಶ್ ಜೊತೆ ಇಸ್ಪೀಟ್ ಆಟದಲ್ಲಿ ಗೆದ್ದು 5 ರೂಪಾಯಿ ವಸೂಲಿ ಮಾಡಿದ್ದ ನಟಿ ಯಾರು?
ಕನ್ನಡ ಚಿತ್ರರಂಗ ಹಾಗೂ ರಾಜಕೀಯರಂಗಕ್ಕೆ ಅಂಬರೀಶ್ ಕೊಡುಗೆ ಮರೆಯೋಕೆ ಸಾಧ್ಯವಿಲ್ಲ. ನೂರಾರು ಸಿನಿಮಾಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ಅಂಬಿ ನಟಿಸಿದ್ದರು. ಆರಂಭದಲ್ಲಿ ವಿಲನ್ ಆಗಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಅಂಬರೀಶ್ ಮುಂದೆ ಹೀರೊ ಆಗಿ ಸಕ್ಸಸ್ ಕಂಡರು. ರೆಬಲ್ ಸ್ಟಾರ್ ಬಿರುದು ಪಡೆದರು. ಎಲ್ಲಕ್ಕಿಂತ ಮುಖ್ಯವಾಗಿ ಅಂಬಿ ಅಂದ್ರೆ ಜಾಲಿ ಜಾಲಿ.
ಅಂಬರೀಶ್ ರೀತಿ ಶೋಕಿ ಮಾಡ್ತಾ ದಿಲ್ದಾರ್ ಲೈಫ್ ಲೀಡ್ ಮಾಡೋಕೆ ಯಾರಿಂದರೂ ಸಾಧ್ಯವಿಲ್ಲ ಎಂದು ಆಪ್ತರು ಹೇಳ್ತಾರೆ. ಇನ್ನು ಅಂಬಿಗಿದ್ದ ಇಸ್ಪೀಟ್, ರೇಸ್, ಗುಂಡಿನ ಅಭ್ಯಾಸದ ಬಗ್ಗೆ ಬಿಡಿಸಿ ಹೇಳಬೇಕಿಲ್ಲ. 'ನಾಗರಹಾವು' ಚಿತ್ರಕ್ಕೆ ಆಡಿಯನ್ ಕೊಡುವ ದಿನ ಕೂಡ ಸ್ನೇಹಿತರ ಜೊತೆ ಅಮರ್‌ನಾಥ್ ಇಸ್ಪೀಟ್ ಆಡುತ್ತಾ ಕೂತಿದ್ದರಂತೆ. ರಾಜೇಂದ್ರ ಸಿಂಗ್ ಬಾಬು ಹೋಗಿ ಕುಡುಕಿ ಆಡಿಷನ್ ಕೊಡುವಂತೆ ಪುಟ್ಟಣ್ಣ ಕಣಗಾಲ್ ಮುಂದೆ ತಂದು ನಿಲ್ಲಿಸಿದ್ದರು.
ಶೂಟಿಂಗ್ ಸೆಟ್‌ನಲ್ಲಿ ಬಿಡುವಿನ ವೇಳೆ ಅಂಬರೀಶ್ ಇಸ್ಪೀಟ್ ಆಡುತ್ತಿದ್ದರು ಎಂದು ಸಾಕಷ್ಟು ಜನ ಹೇಳಿರುವುದನ್ನು ಕೇಳಿದ್ದೇವೆ. ಗೆದ್ದ ಹಣವನ್ನು ಕೆಲವೊಮ್ಮೆ ಯೂನಿಟ್ ಹುಡುಗರಿಗೆ ಹಂಚಿಬಿಡುತ್ತಿದ್ದರು. ಕೆಲವೊಮ್ಮೆ ಶಾಟ್ ರೆಡಿ ಎಂದು ಹೇಳಿದ್ರು ಕೇಳದೇ ಅಂಬಿ ಇಸ್ಪೀಟ್ ಆಟದಲ್ಲಿ ಮಗ್ನರಾಗಿಬಿಡುತ್ತಿದ್ರು ಎಂದು ನಿರ್ದೇಶಕ ಭಾರ್ಗವ ಹೇಳಿರುವುದು ಇದೆ. ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ಅಂಬರೀಶ್ ಕೆಲವೊಮ್ಮೆ ದಬಾಯಿಸಿಬಿಡುತ್ತಿದ್ದರಂತೆ. ಆದರೆ ನಟಿ ವಾಣಿ ಹರಿಶ್ಚಂದ್ರ ಆಟದಲ್ಲಿ ಅಂಬಿಯನ್ನು ಸೋಲಿಗೆ ಹಣ ವಸೂಲಿ ಮಾಡಿದ್ದರಂತೆ.

ಒಂದ್ಕಾಲದಲ್ಲಿ ಪೋಷಕ ನಟಿಯಾಗಿ ವಾಣಿ ಹರಿಶ್ಚಂದ್ರ ಕನ್ನಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ವಾಣಿಶ್ರೀ ಎಂದು ಆಕೆ ಚಿರಪರಿಚಿತ. 'ಓಂ', 'ಸ್ವಸ್ತಿಕ್' ಹಾಗೂ 'ಸ್ಪರ್ಶ' ಸೇರಿ ಹಲವು ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಸಾಕಷ್ಟು ಕಿರುತೆರೆ ಧಾರಾವಾಹಿಯಲ್ಲಿ ಕೂಡ ಮಿಂಚಿದ್ದಾರೆ. ಇತ್ತೀಚೆಗೆ The New Indian Times ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮ್ಮ ಸಿನಿಮಾ ಜರ್ನಿ ಹಾಗೂ ವೈಯಕ್ತಿಕ ಜೀವನದ ಬಗ್ಗೆ ವಾಣಿಶ್ರೀ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಸ್ವತಃ ಮಗಳು ಖುಷಿ ಸಂದರ್ಶನದ ನಡೆಸಿದ್ದರು. ಇದೇ ವೇಳೆ ಅಂಬಿ ವಿಚಾರ ಪ್ರಸ್ತಾಪವಾಗಿತ್ತು.
"ಅಂಬರೀಶ್ ಸರ್ ದುಡ್ಡು ಇಟ್ಟು ಪಂದ್ಯ ಕಟ್ಟದೇ ಕಾರ್ಡ್ಸ್ ಆಡುತ್ತಿರಲಿಲ್ಲ. ನಾನು ದುಡ್ಡು ಇಟ್ಟು ಆಡಲ್ಲ ಎಂದು ಹಠ. ಇಲ್ಲ ನಿನ್ನ ಜೊತೆ ಆಡಲೇಬೇಕು ಎಂದು ಬಲವಂತ ಮಾಡಿ ಆಡಿದ್ರು. ನಾನು ಕಮ್ಮಿ ಪಾಯಿಂಟ್ಸ್ ಲೀಡ್ ಅಲ್ಲಿ ಇದ್ದೆ. ಕೊನೆ ಆಟದಲ್ಲಿ ಗೆಲ್ಲಲೇಬೇಕಿತ್ತು. ವಾಣಿ ಮುಗೀತು ನೋಡು ಎಂದು ಶೋ ಇಟ್ಟುಬಿಟ್ರು. ನೋಡಿದ್ರೆ, ರಾಂಗ್ ಶೋ ಇಟ್ಟಿದ್ರು.. ರಾಂಗ್ ಅಂತ ನಾನು, ಸರಿಯಾಗಿದೆ ಅಂತ ಅವ್ರು ವಾದ ನಡೀತು. ಕೊನೆಗೆ ರಾಂಗ್ ಶೋ ಅನ್ನುವುದು ಗೊತ್ತಾಯ್ತು. 5 ರೂ. ಪಂದ್ಯವಾಗಿ ಇಟ್ಟಿದ್ವಿ. ನನ್ನ ಕೈಲಿ ಯಾರು ದುಡ್ಡು ತಗೊಂಡಿಲ್ಲ, ಅಂತ ಅಂದ್ರು. ನಾನು ವಸೂಲಿ ಮಾಡುವವರೆಗೂ ಬಿಡ್ಲಿಲ್ಲ" ಎಂದು ವಾಣಿಶ್ರೀ ನೆನಪಿಸಿಕೊಂಡಿದ್ದರು.
ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಡರ್ಬಿಗೆ ಹೋದಾಗ ಮೊದಲ ಬಾರಿಗೆ ಅಂಬರೀಶ್ ಅವರು ನನಗೆ 2000 ರೂ. ನೋಟ್ ಕೊಟ್ಟಿದ್ದರು ಎಂದು ವಾಣಿಶ್ರೀ ಇದೇ ಸಂದರ್ಶನದಲ್ಲಿ ಹೇಳಿದ್ದರು. 2016ರ ಡಿಸೆಂಬರ್ 31ರಂದು ಹೋಗಿದ್ವಿ. ಆಗ 500 ರೂ., 1000 ರೂ. ನೋಟ್ ಬ್ಯಾನ್ ಆಗಿತ್ತು. 2000 ರೂ. ನೋಟ್ ಹೊಸದಾಗಿ ಬಂದಿತ್ತು. ಹೊಸ ನೋಟ್ ನೋಡಿದ್ಯಾ? ಇಲ್ಲಿದೆ ನೋಡು ಎಂದು ಒಂದು ಕಂತೆ ತೆಗೆದು ತೋರಿಸಿದ್ರು. ನಮ್ಮ ಏಳೆಂಟು ಜನರಿಗೆ 2000 ರೂ. ಮೊದಲಿಗೆ ಕೊಟ್ರು. ನೋಟ್ ಮೇಲೆ ಸಹಿ ಹಾಕುವಂತೆ ನಾನು ಕೇಳ್ದೆ. ನಾನು ಹಾಕಲ್ಲ ಅಂದ್ರು. ನಾನು ಪಟ್ಟು ಹಿಡಿದು ಪೆನ್ಸಿಲ್ ಅಲ್ಲಿ ಸಹಿ ಮಾಡಿಸಿಕೊಂಡು ತೆಗೆದುಕೊಂಡೆ. ಇವತ್ತಿಗೂ ಆ ನೋಟ್ ಇಟ್ಟುಕೊಂಡಿದ್ದೀನಿ ಎಂದು ವಾಣಿಶ್ರೀ ವಿವರಿಸಿದ್ದಾರೆ.


Click it and Unblock the Notifications