ರಿಷಬ್ ಶೆಟ್ಟಿ ಅವರಿಗಿಂತ ಮೊದಲು ಕನ್ನಡದಲ್ಲಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಯಾರೆಲ್ಲ ಪಡೆದಿದ್ದಾರೆ ಗೊತ್ತಾ..?
ಪ್ರಶಸ್ತಿಗಳು ಬಂದರೆ ಮಾತ್ರ ಚಿತ್ರ ಗೆದ್ದಂತಲ್ಲ. ಚಿತ್ರ ನೋಡಿದ ಪ್ರೇಕ್ಷಕರು ಕೂಡ ಭೇಷ ಎಂದಾಗಲೇ ಅದು ಚಿತ್ರವೊಂದರ ಗೆಲುವು. ಪ್ರಶಸ್ತಿ ಇವತ್ತ್ ಬಂದರೆ ನಾಳೆ ಮರೆತು ಹೋಗುತ್ತೆ. ಆದರೆ ಚಿತ್ರಪ್ರೇಕ್ಷಕರು ಸಿನಿಮಾವನ್ನು ಗೆಲ್ಲಿಸಿದರೆ ಅದು ಮರೆಯಲಾಗದ ನೆನಪು. ಆದರೆ.. ಈ ವಿಚಾರದಲ್ಲಿ ರಿಶಬ್ ಶೆಟ್ಟಿ ನಿಜಕ್ಕೂ ಅದೃಷ್ಟವಂತರು. ಯಾಕೆಂದರೆ ಕಾಂತಾರದಲ್ಲಿನ ಇವರ ಅಭಿನಯಕ್ಕೆ ಆ ಕಡೆ ಇವರಿಗೆ ಜನಮನ್ನಣೆ ಸಿಕ್ತು. ಈ ಕಡೆ ಅತ್ಯುತ್ತಮ ನಟ ಎಂಬ ರಾಷ್ಟ್ರ ಪ್ರಶಸ್ತಿ ಕೂಡ ದಕ್ಕಿತು.
ಸಹಜವಾಗಿ ಅತ್ಯುತ್ತಮ ನಟ ಎಂಬ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ರಿಷಬ್ ಖುಷಿಯಾಗಿದ್ದಾರೆ. ರಿಷಬ್ ಜೊತೆ ಕನ್ನಡದ ಕಲಾವಿದನಿಗೆ ಈ ತರಹದ ಮನ್ನಣೆ ಸಿಕ್ಕಿದ್ದಕ್ಕೆ ಅನೇಕ ಚಿತ್ರಪ್ರೇಮಿಗಳು ಕೂಡ ಖುಷಿಯಾಗಿದ್ದಾರೆ. ಅದು ಸಹಜ ಕೂಡ. ಯಾಕೆಂದರೆ.. ಈ ಹಿಂದೆ ಕನ್ನಡಿಗರೊಬ್ಬರು ಈ ತರಹದ ಕೀರ್ತಿ ಪತಾಕೆ ಹಾರಿಸಿ ವರ್ಷವೇ ಆಗಿತ್ತು.

ಹೌದು, ನಿಮಗೆ ಗೊತ್ತಿರಲಿ, ರಾಷ್ಟ್ರ ಮಟ್ಟದಲ್ಲಿ ಕನ್ನಡದ ಹೀರೋ ಅತ್ಯುತ್ತಮ ನಟ ಎಂಬ ಪ್ರಶಸ್ತಿಯನ್ನು ಸ್ವೀಕರಿಸಿದ್ದು ತುಂಬಾ ಕಡಿಮೆ. ಈ ಹಿಂದೆ 1975ರಲ್ಲಿ ಎಂ.ವಿ.ವಾಸುದೇವ ಈ ಪ್ರಶಸ್ತಿಯನ್ನು ಪಡೆದಿದ್ದರು. ರಾಷ್ಟ್ರೀಯ ಹಂತದಲ್ಲಿ ಕನ್ನಡದ ಬಾವುಟ ಹಾರಿಸಿದ ಮೊದಲ ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಎಂ.ವಿ.ವಾಸುದೇವ ಹೊರತು ಪಡಿಸಿದರೆ ಚಾರು ಹಾಸನ್ ಇಂತಹದ್ದೊಂದು ಸಾಧನೆ ಮಾಡಿದ್ದರು. ತಬರನ ಕಥೆ ಚಿತ್ರಕ್ಕೆ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದರು.
ಆದರೆ.. ಎಂ.ವಿ.ವಾಸುದೇವನ್ ನಂತರ ಈ ಪ್ರಶಸ್ತಿಯನ್ನು ಚಾರು ಹಾಸನ್ ಪಡೆಯಲು ಹತ್ತು ವರ್ಷಗಳೇ ಹಿಡಿದವು. ಚಾರು ಹಾಸನ್ ನಂತರ ಕನ್ನಡಕ್ಕೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಅಕ್ಷರಶಃ ಮರಿಚೀಕೆಯಾಗಿಯೇ ಹೋಯಿತು.

ನಿಜಾ. ಆ ನಂತರ ಡಾ.ರಾಜ್ ಕುಮಾರ್ ರಾಷ್ಟ್ರ ಮಟ್ಟದಲ್ಲಿ ಮಿಂಚಿದರು. ಪ್ರಶಸ್ತಿ ಪಡೆದರು. ಆದರೆ, ಅಣ್ಣಾವ್ರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿದ್ದು ಅವರ ಕಂಠಕ್ಕೆ. ಅತ್ಯುತ್ತಮ ಗಾಯನಕ್ಕೆ. ಈ ಕಾರಣಕ್ಕೆ ಅಭಿನಯದ ವಿಚಾರದಲ್ಲಿ ಕನ್ನಡಕ್ಕೆ ಇನ್ಯಾವಾಗ ರಾಷ್ಟ್ರ ಪ್ರಶಸ್ತಿ ಎಂದು ಎಲ್ಲರು ಕೇಳುವ ಸಂದರ್ಭದಲ್ಲಿ ಆ ಕೊರತೆ ನೀಗಿಸಿದವರು ಸಂಚಾರಿ ವಿಜಯ್.
ಪಾತ್ರ ಯಾವುದೇ ಇರಲಿ ತನ್ನಿಂದ ಆದಷ್ಟು ನ್ಯಾಯ ಒದಗಿಸಬೇಕು ಎಂಬ ಪಾಠದ ಅರಿವಲ್ಲಿ ಅಭಿನಯಿಸುತ್ತಿದ್ದರು ವಿಜಯ್. ಹಾಗೆಯೇ "ನಾನು ಅವನಲ್ಲ.. ಅವಳು" ಚಿತ್ರದಲ್ಲಿ ಭಾವನೆಗಳಿಗೆ ಒತ್ತು ಕೊಡುವ, ಬವಣೆಗಳೇ ತುಂಬಿದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ವಿಜಯ್ ತನ್ನ ಒಳ-ಹೊರ ಮರೆತು ಪಾತ್ರಕ್ಕೆ ಶರಣಾಗಿದ್ದರು. ಪರಕಾಯ ಪ್ರವೇಶ ಮಾಡಿ ಮನೋಜ್ಞವಾಗಿ ಅಭಿನಯಿಸಿದ್ದರು.

ಆ ಪಾತ್ರದ ಪವರ್ ಫುಲ್ ನಟನೆ ಹೇಗಿತ್ತೆಂದರೆ, 2014ರ ಸಾಲಿನಲ್ಲಿ, ದಿಗ್ಗಜ ನಟರನ್ನೇ ಮೀರಿಸಿ ಅತ್ಯುತ್ತಮ ನಟ 'ರಾಷ್ಟ್ರ ಪ್ರಶಸ್ತಿ' ಇವರ ಮುಡಿಗೇರಿತ್ತು. ಖ್ಯಾತನಾಮರಾದ ಆಮೀರ್ ಖಾನ್, ಮುಮ್ಮೊಟ್ಟಿ, ಶಾಹೀದ್ ಕಪೂರ್ ರಂಥ ನಟರುಗಳ ಪೈಪೋಟಿ ಮೀರಿಸಿ, ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿಸಿದ್ದರು ಈ ಸಿನಿ ಸಂಚಾರಿ.
ಇಲ್ಲಿಂದಾಚೆ ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ನಟ ಎಂಬ ರಾಷ್ಟ್ರ ಪ್ರಶಸ್ತಿ ಮತ್ತೊಮ್ಮೆ ಗಗನ ಕುಸುಮವಾಗಿತ್ತು. ಆದರೆ ಈಗ ಆ ಅಂಬರದ ತಾರೆ ರಿಷಬ್ ಶೆಟ್ಟಿ ರೂಪದಲ್ಲಿ ಮತ್ತೊಮ್ಮೆ ಕನ್ನಡ ಚಿತ್ರರಂಗದ ಕೈಗೆ ಎಟುಕಿದೆ. ದೈವ ಎನ್ನುವ ರೂಪಕವನ್ನಿಟ್ಟುಕೊಂಡು ವಾಸ್ತವದ ಚಿತ್ರಣವನ್ನು ತೆರೆದಿಟ್ಟಿದ್ದ ರಿಷಬ್ ಶೆಟ್ಟಿ ಕಸುಬುದಾರಿಕೆಗೆ ನಿಜಕ್ಕೂ ಸಿಗಬೇಕಾದ ಬೆಲೆ ಸಿಕ್ಕಿದೆ. ಕರಾವಳಿಯ ಸಂಸ್ಕೃತಿ ಮತ್ತು ಬದುಕನ್ನು ಎತ್ತಿಹಿಡಿದ ರಿಷಬ್ ಗೆ ಅತ್ಯುತ್ತಮ ನಟ ಎಂಬ ರಾಷ್ಟ್ರ ಪ್ರಶಸ್ತಿ ಕೂಡಾ ಸಿಕ್ಕಿದೆ.


Click it and Unblock the Notifications











