ಡಾ. ರಾಜ್‌ಗೆ ಡ್ಯೂಪ್ ಆಗಿ ನಟಿಸುತ್ತಿದ್ದ ವ್ಯಕ್ತಿ ಯಾರು? ಥೇಟ್ ಅಣ್ಣಾವ್ರನ್ನು ಹೋಲುತ್ತಿದ್ರಾ?
ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ಡ್ಯೂಪ್‌ಗಳನ್ನು ಬಳಸುವುದು ಗೊತ್ತೇಯಿದೆ. ಆ ನಟನನ್ನೇ ಹೋಲುವು ಅದೇ ಎತ್ತರ, ನಿಲುವು ಇರುವ ವ್ಯಕ್ತಿಗಳನ್ನು ಅದಕ್ಕಾಗಿ ಬಳಸಿಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆಕ್ಷನ್ ಸನ್ನಿವೇಶಗಳಲ್ಲಿ ಹೀಗೆ ಬಾಡಿ ಡಬಲ್ ಅನ್ನು ಹೆಚ್ಚು ಬಳಸಿಕೊಳ್ಳುತ್ತಾರೆ. ಡಾ. ರಾಜ್‌ಕುಮಾರ್ ಸಿನಿಮಾಗಳಲ್ಲಿ ಹೀಗೆ ಕೆಲವೊಮ್ಮೆ ಡ್ಯೂಪ್ ಬಳಸಲಾಗಿತ್ತು.
ಈಗ ತಂತ್ರಜ್ಞಾನ ಹೆಚ್ಚು ಅಭಿವೃದ್ದಿಯಾಗಿದೆ. ಸಿನಿಮಾ ಮೇಕಿಂಗ್ ವೇಳೆ ಒಂದಷ್ಟು ಗಿಮಿಕ್ ಮಾಡಿ ಸಿಜಿ, ಗ್ರಾಫಿಕ್ಸ್ ಬಳಸಿ ಪ್ರೇಕ್ಷಕರನ್ನು ಬೆರುಗುಗೊಳಿಸುತ್ತಾರೆ. ದಶಕಗಳ ಹಿಂದೆ ತಂತ್ರಜ್ಞಾನ ಇಷ್ಟು ಮುಂದುವರೆದಿರಲಿಲ್ಲ. ಆದರೆ ಅಂದಿನ ಕಾಲದ ತಂತ್ರಜ್ಞಾನ ಬಳಸಿ ಪ್ರೇಕ್ಷಕರಿಗೆ ಮಜಾ ಕೊಡುತ್ತಿದ್ದರು. ಅದರಲ್ಲೂ ನಾಯಕ ನಟರನ್ನು ದ್ವಿಪಾತ್ರದಲ್ಲಿ ತ್ರಿಪಾತ್ರದಲ್ಲಿ ತೋರಿಸುವುದು ಸವಾಲಿನ ಕೆಲಸವೇ ಆಗಿತ್ತು. ಅದನ್ನು ನಿಜಕ್ಕೂ ಪ್ರೇಕ್ಷಕರು ಅಚ್ಚರಿಯಿಂದ ನೋಡುತ್ತಿದ್ದರು.

ನಿಜಕ್ಕೂ ಹೀರೊ ಅವಳಿ ಜವಳಿನಾ? ಅಣ್ಣಾವ್ರು ಅವಳಿ ಜವಳಿನಾ? ಥೇಟ್ ಅವರನ್ನೇ ಹೋಲುವ ಸಹೋದರ ಇದ್ದಾರಾ? ಎಂದು ಕೆಲ ಮುಗ್ಧ ಪ್ರೇಕ್ಷಕರು ಭಾವಿಸಿರುವುದು ಉಂಟು. ಡಬಲ್ ಆಕ್ಟಿಂಗ್ ಮಾಡುವಾಗ ಒಬ್ಬರೇ ಎರಡು ಪಾತ್ರ ಮಾಡುತ್ತಿದ್ದರು. ಆದರೆ ರೆಫರೆನ್ಸ್‌ಗಾಗಿ ಡ್ಯೂಪ್ ಕಲಾವಿದರನ್ನು ಬಳಸಿಕೊಳ್ಳಲಾಗುತ್ತಿತ್ತು. ಕೆಲವೊಮ್ಮೆ ಬ್ಯಾಕ್ ಶಾಟ್, ಸೈಟ್ ಶಾಟ್‌ಗಳಲ್ಲಿ ಡ್ಯೂಪ್ ಕಲಾವಿದರು ಕಾಣಿಸಿಕೊಳ್ಳುತ್ತಿದ್ದರು.
ಸಾಹಸ ಕಲಾವಿದರು ನಾಯಕ ನಟರಿಗೆ ಡ್ಯೂಪ್ ಹಾಕುವುದು ಹೆಚ್ಚು. ಅದರಲ್ಲೂ ಆಕ್ಷನ್ ಸನ್ನಿವೇಶಗಳಲ್ಲಿ ಜಿಗಿಯುವುದು, ಪಲ್ಟಿ ಹೊಡೆಯುವುದು, ಬೈಕ್, ಕಾರ್ ಚೇಸ್ ಸನ್ನಿವೇಶಗಳಲ್ಲಿ ಡ್ಯೂಪ್ ಕಲಾವಿದರು ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಕೆಲ ನಟರು ನಟಿಸೋ ಬದಲು ಡ್ಯೂಪ್ ನಟನೇ ಹೆಚ್ಚು ನಟಿಸುತ್ತಾನೆ ಎನ್ನುವ ಅಪಮಾನ ಹೇಳಿಬರುತ್ತದೆ. 'ಕಲ್ಕಿ 2898AD' ಚಿತ್ರದಲ್ಲಿ ಪ್ರಭಾಸ್‌ಗಿಂತ ಜಾಸ್ತಿ ಅವರ ಡ್ಯೂಪ್ ನಟಿಸಿದ್ದರು ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.

ರಜನಿಕಾಂತ್ ನಟನೆಯ 'ಜೈಲರ್- 2' ಚಿತ್ರದ ಪ್ರೋಮೊ ನೋಡಿ ಇದೇ ರೀತಿಯ ಆರೋಪ ಕೇಳಿಬಂದಿತ್ತು. ತಲೈವಾಗೆ ವಯಸ್ಸಾಗಿದೆ. ಅವರು ಇಂತಹ ರಿಸ್ಕಿ ಸನ್ನಿವೇಶದಲ್ಲಿ ನಟಿಸೋಕೆ ಸಾಧ್ಯವಿಲ್ಲ. ಅವರ ಡ್ಯೂಪ್ ಬಳಸಿ ಈ ಪ್ರೋಮೊ ಬಹುತೇಕ ಚಿತ್ರೀಕರಣ ಮಾಡಿದ್ದಾರೆ ಎಂದು ಕೆಲವರು ವ್ಯಂಗ್ಯವಾಡಿದ್ದರು. ಅಣ್ಣಾವ್ರ ಕಾಲದಲ್ಲಿ ಇಂತಹ ಆಕ್ಷನ್ ಸನ್ನಿವೇಶಗಳು ಇರುತ್ತಿರಲಿಲ್ಲ. ಆದರೆ ರೆಫರೆನ್ಸ್ ಶಾಟ್ಸ್‌ಗಳಿವೆ ಮಾತ್ರ ಡ್ಯೂಪ್ ಬಳಸುತ್ತಿದ್ದರು. ಇನ್ನುಳಿದಂತೆ ಎಲ್ಲಾ ಸನ್ನಿವೇಶಗಳಲ್ಲಿ ಡಾ. ರಾಜ್ ನಟಿಸುತ್ತಿದ್ದರು.
'ಒಂದು ಮುತ್ತಿನ ಕಥೆ' ಸಿನಿಮಾ ಚಿತ್ರದ ಚಿತ್ರೀಕರಣದ ವೇಳೆ ಕೆಲ ನಿಮಿಷಗಳ ಕಾಲ ಖುದ್ದು ಅಣ್ಣಾವ್ರು ನೀರಿನ ಆಳದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಆಗ ಅದು ದೊಡ್ಡ ಸುದ್ದಿ ಆಗಿತ್ತು. ಇನ್ನು ಮೊದಲೇ ಹೇಳಿದಂತೆ ರೆಫರೆನ್ಸ್ ಶಾಟ್‌ಗಳನ್ನು ತೆಗೆಯುವಾಗ ಅಣ್ಣಾವ್ರನ್ನು ಹೋಲುವ ವ್ಯಕ್ತಿಯನ್ನು ಬಳಸಿಕೊಳ್ಳುತ್ತಿದ್ದರು. ಅಣ್ಣಾವ್ರ ಸಂಬಂಧಿಕರೇ ಆಗಿದ್ದ ಗಾಜನೂರಿನ ವೆಂಕಟಪ್ಪ ಎಂಬುವವರು ಹೀಗೆ ಅಣ್ಣಾವ್ರ ಡ್ಯೂಪ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಡಾ. ರಾಜ್ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚಿಕ್ಕಣ್ಣ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.
"ಅಣ್ಣಾವ್ರು ನಟಿಸಿದ್ದ ಕವಿರತ್ನ ಕಾಳಿದಾಸ, ಭಕ್ತಪ್ರಹ್ಲಾದ ರೀತಿಯ ಸಿನಿಮಾಗಳಲ್ಲಿ ವೆಂಕಟಪ್ಪ ಎಂಬುವವರನ್ನು ಡ್ಯೂಪ್ ಆಗಿ ಹಾಕಿಕೊಳ್ಳುತ್ತಿದ್ದರು. ಡಬಲ್ ಆಕ್ಟಿಂಗ್ ಸನ್ನಿವೇಶ ಮಾಡುವಾಗ ಎದುರಲ್ಲಿ ರೆಫರೆನ್ಸ್‌ಗೆ ಹಿಂಬದಿ ಶಾಟ್ಸ್ ತೆಗೆಯುವಾಗ ಥೇಟ್ ಅಣ್ಣಾವ್ರ ರೀತಿ ಕಾಸ್ಟ್ಯೂಮ್ಸ್ ಹಾಕಿಸಿ ವೆಂಕಟಪ್ಪ ಅವರನ್ನು ನಿಲ್ಲಿಸುತ್ತಿದ್ದೆವು. ವೆಂಕಟಪ್ಪ ಎಂಬುವವರು ಅಣ್ಣಾವ್ರ ಸಂಬಂಧಿಕರೇ ಆಗಿದ್ದರು" ಎಂದು ಚಿಕ್ಕಣ್ಣ ಹೇಳಿದ್ದಾರೆ.
ಬೇರೆ ಕಲಾವಿದರು ಕೂಡ ಅಣ್ಣಾವ್ರ ಸಿನಿಮಾಗಳಲ್ಲಿ ಡ್ಯೂಪ್ ಹಾಕಿದ್ದರು ಎಂದು ಚಿಕ್ಕಣ್ಣ ನೆನಪಿಸಿಕೊಂಡಿದ್ದಾರೆ. "ಸಾಹಸ ನಿರ್ದೇಶಕ ಶಿವಯ್ಯ ಅವ್ರ ಬಳಿ ಇದ್ದ ಕೆಲ ಫೈಟರ್ಸ್ ಕೂಡ ಅಣ್ಣಾವ್ರ ಡ್ಯೂಪ್ ಆಗಿ ಕಾಣಿಸಿಕೊಳ್ಳುತ್ತಿದ್ದರು. 'ಹಾವಿನ ಹೆಡೆ', 'ನೀ ನನ್ನ ಗೆಲ್ಲಲಾರೆ' ಸಿನಿಮಾಗಳಲ್ಲಿ ಸಾಹಸ ಕಲಾವಿದ ನಂಜುಂಡಿ ಡ್ಯೂಪ್ ಆಗಿದ್ದರು. ಅದಕ್ಕೂ ಮುನ್ನ ತಮಿಳುನಾಡಿನ ಸ್ವಾಮಿ, ಪಳನಿ ಎಂಬುವವರು ಕೂಡ ಡ್ಯೂಪ್ ಆಗಿ ಕೆಲಸ ಮಾಡಿದ್ದರು" ಎಂದು ತಿಳಿಸಿದ್ದಾರೆ.
'ಭಕ್ತ ಪ್ರಹ್ಲಾದ' ಸಿನಿಮಾ ಚಿತ್ರೀಕರಣದಲ್ಲಿ ವೆಂಟಕಪ್ಪ ಅವ್ರರನ್ನು ಸಜೆಷನ್ ಶಾಟ್ಸ್‌ಗೆ ಬಳಸಿಕೊಂಡಿದ್ದೆವು. ಅವರ ನಿಲುವು, ಬಣ್ಣ ಎಲ್ಲವೂ ಅಣ್ಣಾವ್ರ ರೀತಿಯೇ ಇತ್ತು. ಕೆಲವೊಮ್ಮೆ ಅಣ್ಣಾವ್ರ ರೀತಿ ವೆಂಕಟಪ್ಪ ವೇಷ ಹಾಕಿಕೊಂಡು ಸೆಟ್ ಒಳಕ್ಕೆ ಬಂದರೆ ಅಣ್ಣಾವ್ರು ಬಂದು ಎಂದು ನಾವು ಎದ್ದು ನಿಂತು ಗೌರವ ಸೂಚಿಸಲು ಮುಂದಾಗಿಬಿಡುತ್ತಿದ್ದೆವು. ಆಗ ಅವ್ರು ಅಯ್ಯೊ ಚಿಕ್ಕಣ್ಣ, ನಾನು ವೆಂಕಟಪ್ಪ ಎನ್ನುತ್ತಿದ್ದರು. ಅಣ್ಣಾವ್ರಿಗೆ ಡ್ಯೂಪಾ ಎಂದು ಕೆಲ ಅಭಿಮಾನಿಗಳು ರೇಗಿಸಿದ್ದರು. ಆದರೆ ಡ್ಯೂಪ್ ಅಂದರೆ ಆ ಅರ್ಥ ಅಲ್ಲ, ಅವ್ರನ್ನು ಹೀಗೆ ಚಿತ್ರೀಕರಣದಲ್ಲಿ ಬಳಸಿಕೊಳ್ಳುತ್ತೇವೆ ಎಂದು ಅಭಿಮಾನಿಗಳಿಗೆ ಅರ್ಥ ಮಾಡಿಸಿದ್ದೆ" ಚಿಕ್ಕಣ್ಣ ಹೇಳಿದ್ದಾರೆ.
ಆದಿತ್ಯ ಚಿಕ್ಕಣ್ಣ ಕೆಲ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಜಗ್ಗೇಶ್ ನಟನೆಯ 'ಜಗತ್ ಕಿಲಾಡಿ' ಚಿತ್ರ ಕಟ್ಟಿಕೊಟ್ಟಿದ್ದರು. ಅದರಲ್ಲಿ ಜಗ್ಗಣ್ಣ ದ್ವಿಪಾತ್ರದಲ್ಲಿ ನಟಿಸಿದ್ದರು. "ಈಗ ಸಿಜಿ ಬಂದಿರುವುದರಿಂದ ಡ್ಯೂಪ್ ಬೇಕಾಗಿಲ್ಲ. ಆಯಾ ಕಲಾವಿದರನ್ನೇ ಕಾಸ್ಟ್ಯೂಮ್ ಬದಲಿಸಿ 2 ಪಾತ್ರಕ್ಕೆ ಬಳಸಿಕೊಳ್ಳಬಹುದು. ಆಗ ಕೋಮಲ್ ಅವರನ್ನು ಜಗ್ಗೇಶ್ ಅವರಿಗೆ ಡ್ಯೂಪ್ ಹಾಕಲು ಕೇಳಿದ್ದೆವು. ಅವ್ರು ಬೇರೆ ಸಿನಿಮಾದಲ್ಲಿ ಬ್ಯುಸಿ ಇದ್ದರು. ಹಾಗಾಗಿ ಕಾಸ್ಟ್ಯೂಮ್ ಡಿಸೈನರ್ ಸೋಮು ಎಂಬುವವರು ಸೇಮ್ ಜಗ್ಗೇಶ್ ರೀತಿ ಹೈಟು ಪರ್ಸನಾಲಿಟಿ ಇದ್ದರು. ಅವರನ್ನು ಬಳಸಿಕೊಂಡಿದ್ದೆವು" ಎಂದು ಚಿಕ್ಕಣ್ಣ ವಿವರಿಸಿದ್ದಾರೆ.


Click it and Unblock the Notifications











