''ನೀಲಿ'' ಚಿತ್ರರಂಗವನ್ನು ತೊರೆದು ಬಂದಿದ್ದೇಕೆ ಸನ್ನಿ ಲಿಯೋನ್...?
ಸನ್ನಿ ಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣವಾದ 'ನೀಲಿ' ನೆರಳು ಏನೇ ಇರಬಹುದು. ಆದರೆ ಇವತ್ತು ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ಅಸ್ತಿತ್ವವನ್ನ ಕಂಡುಕೊಂಡಿದ್ದಾರೆ. ನಟಿಯಾಗಿ ನೆಲೆಯೂರಿದ್ದಾರೆ. ಈ ಎಲ್ಲ ವಿಚಾರ ನಿಮಗೆ ಗೊತ್ತು. ಆದರೆ ಅಸಂಖ್ಯಾತ ಅಭಿಮಾನಿಗಳನ್ನ ಇಂದು ಹೊಂದಿರುವ ಸನ್ನಿ ಲಿಯೋನ್ ನೀಲಿ ಪ್ರಪಂಚದಿಂದ ದೂರವಾಗಿದ್ದೇಕೆ ಎನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ.
ನಿಮಗೆ ಗೊತ್ತಿರಲಿ.. ಸಂಪ್ರದಾಯಸ್ಥ ಸಿಖ್ ಕುಟುಂಬದ ಕರಣ್‌ಜೀತ್ ಕೌರ್ ವೊಹ್ರಾ ಅಲಿಯಾಸ್ ಸನ್ನಿ ಲಿಯೋನ್ ಹುಟ್ಟಿದ್ದು ಕೆನಡಾದಲ್ಲಿ. ಮಗಳು ಪಬ್ಲಿಕ್ ಶಾಲೆಗೆ ಹೋಗುವುದು ಸುರಕ್ಷಿತವಲ್ಲ ಎಂದು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಕ್ಯಾಥೊಲಿಕ್ ಶಾಲೆಗೆ ಸೇರಿಸಿದ್ದರು ಇವರ ಪೋಷಕರು.

ಇನ್ನೂ ಸನ್ನಿ ಸಹ ಎಳವೆಯಲ್ಲಿ ಬಹಳ ಗಟ್ಟಿಗಿತ್ತಿ. ಹುಡುಗರೊಟ್ಟಿಗೆ ಸೇರಿ ಮನೆಯ ಮುಂದೆ ಹಾಕಿ ಆಡ್ತಿದ್ದ ಸನ್ನಿ ಲಿಯೋನ್ ಹರೆಯದ ವಯಸ್ಸಿನಲ್ಲಿಯೇ ಹಣಕ್ಕಾಗಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅದಕ್ಕೂ ಮುನ್ನ ಬೇಕರಿಯೊಂದರಲ್ಲಿ ಕೆಲಸ ಮಾಡಿದರು. ಆ ನಂತರ ಪೆನ್ಶನ್ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಈ ನಡುವೆ ನರ್ಸ್ ಆಗಲು ಶಿಕ್ಷಣ ಸಹ ಪಡೆಯಲು ಆರಂಭಿಸಿದ್ದರು ಸನ್ನಿ.
ತನ್ನ ಓರಗೆಯವರ ಐಶಾರಾಮಿತ್ವ ಸನ್ನಿಗೆ ಇರಲಿಲ್ಲ. ಇದು ಸನ್ನಿಯನ್ನು ಬಹುವಾಗಿ ಕಾಡುತ್ತಿತ್ತು. ಹಣ ಸಂಪಾದಿಸಲು ಹಲವು ಯತ್ನಗಳನ್ನು ಸನ್ನಿ ಮಾಡಿದರು ಆದರೆ ಬೇಕರಿ, ಬಂಕ್‌ಗಳಲ್ಲಿ ಬರುತ್ತಿದ್ದ ಸಂಬಳ ಬಹಳ ಕಡಿಮೆ ಆಗಿತ್ತು. ಸನ್ನಿಯ ಕನಸುಗಳನ್ನು ಪೂರೈಸಿಕೊಳ್ಳಲು ಅದು ಸಾಕಾಗುತ್ತಿರಲಿಲ್ಲ. ಸಾಮಾನ್ಯವಾಗಿ ಕಷ್ಟದ ಪರಿಸ್ಥಿತಿಯಲ್ಲಿದ್ದವರು ಏನನ್ನಾದರೂ ಮಾಡಿ ಕಷ್ಟದಿಂದ ಹೊರಬರಬೇಕೆನ್ನುವ ಹಪ ಹಪಿಯಲ್ಲಿರುತ್ತಾರೆ. ಸನ್ನಿ ಲಿಯೋನ್ ಕೂಡ ಮಾಡಿದ್ದು ಇದನ್ನೇ.

ಗೆಳತಿಯ ಸಹಾಯದಿಂದ ಪೆಂಟ್‌ಹೌಸ್ ಮ್ಯಾಗಜಿನ್‌ನ ಕವರ್ ಪೇಜ್‌ಗಾಗಿ ಗ್ಲಾಮರಸ್ ಆಗಿ ಫೋಸ್ ನೀಡಿದರು ಸನ್ನಿ. ಆ ನಂತರ 2011ರಲ್ಲಿ ಹಸ್ಟ್ಲರ್ ಮ್ಯಾಗಜೀನ್‌ಗೆ ಫೋಸು ನೀಡಿದರು. ಆ ನಂತರ ಇನ್ನೂ ಹಲವು ಮ್ಯಾಗಜೀನ್‌ನ ಮುಖಪುಟಗಳಲ್ಲಿ ಕಾಣಿಸಿಕೊಂಡರು. ಗ್ಲಾಮರಸ್ ಫೊಟೊದಿಂದ ಆರಂಭ ಮಾಡಿ ಅರೆ ಬೆತ್ತಲೆ, ಬೆತ್ತಲೆ ಫೊಟೊಗಳವರೆಗೆ ಬಂದರು ಸನ್ನಿ. ಇದರಿಂದ ಸಾಕಷ್ಟು ಹಣವನ್ನು ಸಹ ಸಂಪಾದಿಸಿದರು.
ಆದರೆ, ಬದುಕಲು ಹಣವೊಂದೇ ಮುಖ್ಯವಲ್ಲ. ಮಾನಸಿಕ ನೆಮ್ಮದಿ ಕೂಡ ಮುಖ್ಯ. ಹೀಗಾಗಿ ಬದುಕು ಒಂದು ಹಂತಕ್ಕೆ ತಲುಪಿದ ನಂತರ ಹಣದ ಹಿಂದೆ ಓಡುವುದನ್ನು ಸನ್ನಿ ಲಿಯೋನ್ ನಿಲ್ಲಿಸಿದರು. ಜೀವನ ಪ್ರೀತಿಯನ್ನು ಅರಸತೊಡಗಿದರು. ನೀಲಿ ಪ್ರಪಂಚದಿಂದ ಹೊರ ಬರುವ ಪ್ರಯತ್ನಕ್ಕೆ ಮುಂದಾದರು. ಸನ್ನಿ ಲಿಯೋನ್ ಅವರ ಈ ನಿರ್ಧಾರವನ್ನು ಅವರ ಗಂಡ ಡೇನಿಯಲ್ ವೆಬರ್ ಕೂಡ ಬೆಂಬಲಿಸಿದರು. ಗಂಡನ ಜತೆ ಮಾತನಾಡಿ ಒಪ್ಪಿಗೆ ಪಡೆದುಕೊಂಡೇ ಸನ್ನಿ ಲಿಯೋನ್ ಬ್ಲೂ ಇಂಡಸ್ಟ್ರೀಯಿಂದ ಹೊರ ಬಂದು ಹೊಸ ಬದುಕಿಗೆ ಅಡಿಪಾಯ ಹಾಕಿದರು. ಇದೇ ಸಮಯದಲ್ಲಿ ಸನ್ನಿ ಲಿಯೋನ್ ಅವರಿಗೆ ಹಿಂದಿಯ ಬಿಗ್ ಬಾಸ್ ಮನೆಯಿಂದ ಆಮಂತ್ರಣ ನೀಡಲಾಯ್ತು. ಬಂದ ಈ ಸುವರ್ಣ ಅವಕಾಶವನ್ನು ಎರಡು ಕೈಯಿಂದ ಬಾಚಿಕೊಂಡ ಸನ್ನಿ ಲಿಯೋನ್, ತಮ್ಮ ಹಳೆಯ ಬದುಕಿಗೆ ಗುಡ್ ಬೈ ಹೇಳಿ ಸೀದಾ ಭಾರತದತ್ತ ಮುಖ ಮಾಡಿದರು.

ಹೀಗೆ ನೀಲಿ ಚಿತ್ರಗಳ ಪ್ರಭೆಯಾಚೆಗೆ ನಾಯಕಿಯಾಗಿ ರೂಪಗೊಂಡ ಸನ್ನಿ ಲಿಯೋನ್ ಅವರಿಗೆ ಆ ನಂತರ ಬಾಲಿವುಡ್ ಸೇರಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಅವಕಾಶಗಳೇ ಹುಡುಕಿ ಬರಲಾರಂಭಿಸಿದವು. ಇವತ್ತು ಈಕೆ ಸುಳಿದಾಡಿದರೂ ದೇಶಾದ್ಯಂತ ಸುದ್ದಿಯಾಗೋದರಿಂದ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಸನ್ನಿಗೆ ಬೇಡಿಕೆ ಇದೆ. ಅದರ ಭರಾಟೆ ಎಂಥಾದ್ದಿದೆಯೆಂದರೆ, ಕೆಲವೊಮ್ಮೆ ಡೇಟು ಹೊಂದಿಸಿಕೊಳ್ಳೋದೇ ಕಷ್ಟವಾಗುವಂಥಾ ವಾತಾವರಣವೂ ಇದೆ. ಇನ್ನೂ.. ಎಲ್ಲೇ ಯಾರೇ ಸಂಕಷ್ಟ ಎಂಬ ವಿಚಾರ ಕಿವಿಗೆ ಬಿದ್ದರೂ ಸಹ ಅಲ್ಲಿ ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ನೆರವಿನ ಹಸ್ತ ಮೊದಲಿರುತ್ತದೆ.
ಇನ್ನು ನಟಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭವಾದ ಮೇಲಂತೂ ಸನ್ನಿಲಿಯೋನ್ ತೆರೆದ ಪುಸ್ತಕದಂತೆ ತನಗಾದ ಎಲ್ಲ ಅನುಭವಗಳನ್ನು ಹಂಚಿಕೊಂಡಿದ್ದು ಇದೆ. ನನ್ನ ಸ್ವ ಇಚ್ಛೆಯಿಂದಲೇ ನಾನು ಪೋರ್ನ್ ಉದ್ಯಮಕ್ಕೆ ಹೋದೆ. ಅದು ನನಗೆ ಉದ್ಯಮವಾಗಿ ಕಂಡಿತು. ಅಲ್ಲಿ ನಾನು ಅವಕಾಶವನ್ನಷ್ಟೆ ನೋಡಿದೆ. ನಾನೊಬ್ಬ ಉದ್ಯಮಶೀಲೆಯಂತೆ ಆ ಅವಕಾಶದ ಬಗ್ಗೆ ಯೋಚಿಸಿದೆ. ನಾನು ಪೋರ್ನ್ ಉದ್ಯಮ ಪ್ರವೇಶ ಮಾಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ ಎಂದು ಸನ್ನಿ ಹೇಳಿದ್ದು ಇದೆ. ಒಟ್ನಲ್ಲಿ ಬದುಕು ಎಷ್ಟರಮಟ್ಟಿಗೆ ಪಾಠಗಳನ್ನು ಕಲಿಸಬಲ್ಲದು ಎಂಬುದಕ್ಕೆ ಸನ್ನಿ ಲಿಯೋನ್ ಬದುಕೇ ಉದಾಹರಣೆ. ನೀವೇನ್ ಅಂತೀರಾ..?


Click it and Unblock the Notifications











