ಅಣ್ಣಾವ್ರ ವಿರುದ್ಧ ಡಾನ್ ಜಯರಾಜ್‌ನನ್ನು ಎತ್ತಿಕಟ್ಟಿದ್ದರು ಇಬ್ಬರು ನಟರು, ಬಳಿಕ ಏನಾಯ್ತು?
ಒಂದ್ಕಾಲದಲ್ಲಿ ಬೆಂಗಳೂರು ಭೂಗತಲೋಕದ ದೊಡ್ಡ ಹೆಸರು ಡಾನ್ ಜಯರಾಜ್. ದಶಕಗಳ ಹಿಂದೆ ಉದ್ಯಾನನಗರಿಯಲ್ಲಿ ಜಯರಾಜ್ ಹಾಗೂ ಕೊತ್ವಾಲ್ ಗ್ಯಾಂಗ್ ಆರ್ಭಟ ಜೋರಾಗಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಮಾಫಿಯಾವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಜಯರಾಜ್, ಕೊತ್ವಾಲ್ ಹಾಗೂ ಆಯಿಲ್ ಕುಮಾರ ಬಹಳ ಕಸರತ್ತು ನಡೆಸಿದ್ದರು.
ಸಾಕಷ್ಟು ಜನ ಉದ್ಯಮಿಗಳು, ರಾಜಕಾರಣಗಳು ಮಾತ್ರವಲ್ಲ ಸಿನಿಮಾ ನಟರು ಕೂಡ ಭೂಗತಲೋಕವನ್ನು ಬಳಸಿಕೊಳ್ಳುತ್ತಿದ್ದರು. ಅಚ್ಚರಿ ಎಂದರೆ ಒಮ್ಮೆ ಡಾ. ರಾಜ್‌ಕುಮಾರ್ ವಿರುದ್ಧ ಡಾನ್ ಜಯರಾಜ್‌ನನ್ನು ಎತ್ತಿಕಟ್ಟುವ ಪ್ರಯತ್ನ ನಡೆದಿತ್ತು. ಈ ವಿಚಾರವನ್ನು ನಿವೃತ್ತ ಎಸಿಪಿ ಬಿ. ಕೆ ಶಿವರಾಮ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಜನಜಾಗೃತಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದರು.

ಬಿ. ಕೆ ಶಿವರಾಮ್ ಬೆಂಗಳೂರು ಭೂಗತಲೋಕವನ್ನು ಹತ್ತಿರದಿಂದ ಕಂಡವರು. ಅಂದಿನ ಕೆಲ ರೌಡಿಗಳನ್ನು ದಸ್ತಗಿರಿ ಮಾಡಿದ್ದರು. ಡಾನ್ ಜಯರಾಜನ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ವೇಳೆ ಗೊತ್ತಾಗಿದ್ದ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದರು. ಅಣ್ಣಾವ್ರ ಮೇಲೆ ಡಾನ್ ಜಯರಾಜ್ ಗರಂ ಆಗಿದ್ದು ಯಾಕೆ? ಪರಿಣಾಮ ಆತ ಮಾಡಿದ್ದೇನು? ಎನ್ನುವುದನ್ನು ತಿಳಿಸಿದ್ದರು.
ಡಾ. ರಾಜ್‌ಕುಮಾರ್ ಯಶಸ್ಸನ್ನು ಚಿತ್ರರಂಗಕ್ಕೆ ಕೆಲವರು ಸಹಿಸುತ್ತಿರಲಿಲ್ಲ. ಅದೊಂದು ವರ್ಷ ಆಗಾಗ್ಗೆ ಅಣ್ಣಾವ್ರನ್ನು ಹಣಿಯಲು ಪ್ರಯತ್ನಿಸುತ್ತಿದ್ದರು. ಆಗ ಡಾ. ರಾಜ್ ಅಭಿಮಾನಿ ಸಂಘ ಕೂಡ ದೊಡ್ಡದಾಗಿ ಬೆಳೆದಿತ್ತು. 'ಸಂಪತ್ತಿಗೆ ಸವಾಲ್' ಚಿತ್ರದ ಬಿಡುಗಡೆ ವೇಳೆ ಏನೆಲ್ಲಾ ಆಯಿತು? ಆ ಚಿತ್ರದ 'ಯಾರೇ ಕೂಗಾಡಲಿ' ಹಾಡನ್ನು ತೋರಿಸಿ ಹೇಗೆ ಅಣ್ಣಾವ್ರ ವಿರುದ್ಧ ಜಯರಾಜ್ ಗರಂ ಆಗುವಂತೆ ಮಾಡಿದ್ದರು ಎಂದು ಬಿ. ಕೆ ಶಿವರಾಮ್ ಹೇಳಿದ್ದಾರೆ.
'ಸಂಪತ್ತಿಗೆ ಸವಾಲ್' ಸಿನಿಮಾ ಹಿಟ್ ಆಗಿತ್ತು. ಕನ್ನಡದ ಇಬ್ಬರು ನಾಯಕ ನಟರು ಸೇರಿ ಒಂದು ದುಷ್ಟಕೂಟ ರಚಿಸಿಕೊಂಡಿದ್ದರು. ಹೋಗಿ ಎಂ. ಪಿ ಜಯರಾಜ್ ಕಿವಿ ಚುಚ್ಚಲು ಆರಂಭಿಸಿದರು. 'ಯಾರೇ ಕೂಗಾಡಲಿ' ಹಾಡು ನಿನಗೆ ಚಾಲೆಂಜ್ ಮಾಡಿ ಹಾಡಿರುವುದು. ನಿನ್ನಂತಹವರು ಎಷ್ಟೇ ಅಬ್ಬರಿಸಿದರೂ ನನಗೇನು ಆಗಲ್ಲ, ಎಂದು ನಿನ್ನನ್ನು ಹಿಯ್ಯಾಳಿಸಿ ಮಾಡಿರುವ ಹಾಡು, ಈ ಚಿತ್ರ ಹಿಟ್ ಆಗೋಕೆ ಬಿಡಬಾರದು, ಇದು ಗೆದ್ದರೆ ನಿನಗೆ ಅವಮಾನ ಎನ್ನುವಂತೆ ಜಯರಾಜ್ ಮನಸ್ಸಿನಲ್ಲಿ ಇಲ್ಲದ ವಿಷ ಬೀಜ ಬಿತ್ತಿದ್ದರು ಎಂದು ಬಿ. ಕೆ ಶಿವರಾಮ್ ಆ ಘಟನೆ ನೆನಪಿಸಿಕೊಂಡಿದ್ದಾರೆ.
ಆ ಇಬ್ಬರು ನಟರ ಮಾತು ಕೇಳಿ ಎಂಪಿ ಜಯರಾಜ್ ನಿಜ ಎಂದೇ ನಂಬಿದ್ದ. ಬಳಿಕ ತನ್ನ ತಂಡದ ಹುಡುಗರ ಜೊತೆ ಸೇರಿ ಚಿತ್ರಮಂದಿರಗಳಿಗೆ ದಾಳಿ ಮಾಡಿ ರೀಲ್ ಸುಡುವುದು ಎಂದು ತೀರ್ಮಾನಿಸಿದ್ದ. ಆದರೆ ಜಯರಾಜ್ ತಂಡದಲ್ಲೇ ಇದ್ದ ಕೆಲವರು, ಇದು ಕಷ್ಟ, ಹೀಗೆ ಮಾಡಿದರೆ ಅಭಿಮಾನಿಗಳು ತಿರುಗಿ ಬೀಳುತ್ತಾರೆ ಎಂದು ಕಿವಿ ಮಾತು ಹೇಳಿದ್ದರು. ಆಗ ಜಯರಾಜ್ "ಯಾವ ಸರ್ಕಾರ, ಯಾವ ಅಭಿಮಾನಿಗಳು ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ನೋಡೋಣ" ಎಂದಿದ್ದ.
ಪ್ರಭಾತ್, ಭಾರತ್ ಹಾಗೂ ನವರಂಗ್ ಚಿತ್ರಮಂದಿರಗಳಲ್ಲಿ 'ಸಂಪತ್ತಿಗೆ ಸವಾಲ್' ಸಿನಿಮಾ ಪ್ರದರ್ಶನದ ವೇಳೆ ಜಯರಾಜ್ ತಂಡ ನುಗ್ಗಿ ಪರೆದೆಗೆ ಬೆಂಕಿ ಇಟ್ಟಿದ್ದರು. ಈ ಸಂಬಂಧ ದೂರು ಸಹ ದಾಖಲಾಗಿತ್ತು. ಆದರೆ ಯಾರು ಬೆಂಕಿ ಇಟ್ಟರು ಎಂದು ಆಗ ಗೊತ್ತಿರಲಿಲ್ಲ. ನನಗೂ ಬಹಳ ದಿನಗಳ ಬಳಿಕ ಈ ವಿಚಾರ ಗೊತ್ತಾಗಿತ್ತು. ಚಿತ್ರರಂಗದ ಕೆಲವರ ರಾಜಕೀಯದಿಂದ ಈ ಘಟನೆ ನಡೆದಿತ್ತು. ಅಣ್ಣಾವ್ರನ್ನು ಇದರಿಂದ ಕೊಂಚವೂ ಅಲ್ಲಾಡಿಸಲು ಆಗಲಿಲ್ಲ ಎಂದು ನಿವೃತ್ತ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಕನ್ನಡದ ಇಬ್ಬರು ನಟರೇ ಇದಕ್ಕೆಲ್ಲಾ ಮುಖ್ಯ ಕಾರಣ. ಆ ಇಬ್ಬರು ನಟರು ಈಗ ಜೀವಂತವಾಗಿಲ್ಲ, ಇಬ್ಬರು ನಟರು ಅಂದಾಕ್ಷಣ ನೀವು ವಿಷ್ಣುವರ್ಧನ್, ಅಂಬರೀಶ್ ಅಂದುಕೊಳ್ಳಬೇಡಿ. ಅವರಿಬ್ಬರು ಅಲ್ಲವೇ ಅಲ್ಲ ಎಂದು ಆ ಘಟನೆಯನ್ನು ಬಿ. ಕೆ ಶಿವರಾಮ್ ವಿವರವಾಗಿ ಬಿಚ್ಚಿಟ್ಟಿದ್ದರು.


Click it and Unblock the Notifications











