ಡಾ. ರಾಜ್- ಲೀಲಾವತಿ ಜೋಡಿ ಮೋಡಿ: ಅಣ್ಣಾವ್ರ ಜೊತೆ ನಾಯಕಿಯಾಗಿ ತಂಗಿ, ಅತ್ತೆ, ಮಗಳಾಗಿಯೂ ನಟಿಸಿ ಗೆದ್ದ ಲೀಲಾ
ಕನ್ನಡ ಚಿತ್ರರಂಗ ಕಂಡ ಅಪರೂಪದ ಜೋಡಿ ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ. ಅಣ್ಣಾವ್ರ ಜೊತೆ ಲೀಲಾವತಿ ನಾಯಕ-ನಾಯಕಿಯಾಗಿ ಮಾತ್ರವಲ್ಲದೇ ತಂದೆ ಮಗಳಾಗಿ, ಸಹೋದರ ಸಹೋದರಿಯಾಗಿ, ನಾದಿನಿಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ಸೊಸೆಯಾಗಿ ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಪ್ಪು ಬಿಳುಪಿನ ಕಾಲದಲ್ಲೇ ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಜೋಡಿ ಸೂಪರ್ ಹಿಟ್ ಆಗಿತ್ತು. 50 ವರ್ಷಗಳ ಸಿನಿಜೀವನದಲ್ಲಿ ಲೀಲಾವತಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ 400ಕ್ಕೂ ಅಧಿಕ ಕನ್ನಡ ಸಿನಿಮಾಗಳು ಎನ್ನುವುದು ವಿಶೇಷ. ಜ್ಯೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗ ಪ್ರವೇಶಿಸಿದ ಲೀಲಾವತಿ ಮುಂದೆ ಕನ್ನಡ ಚಿತ್ರರಂಗದ ಧ್ರುವತಾರೆಯಾಗಿ ಮೆರೆದರು. ಅದರಲ್ಲೂ ಡಾ. ರಾಜ್ ಹಾಗೂ ಲೀಲಾವತಿ ಜೋಡಿ ಕನ್ನಡ ಸಿನಿರಸಿಕರಿಗೆ ಮೋಡಿ ಮಾಡಿತ್ತು.

ಬರೋಬ್ಬರಿ 46 ಸಿನಿಮಾಗಳಲ್ಲಿ ಅಣ್ಣಾವ್ರು ಮತ್ತು ಲೀಲಾವತಿ ಜೊತೆಯಾಗಿ ನಟಿಸಿದ್ದಾರೆ. 'ರಾಣಿ ಹೊನ್ನಮ್ಮ' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ-ನಾಯಕಿಯಾಗಿ ಇಬ್ಬರು ನಟಿಸಿದ್ದರು. ಬಳಿಕ 'ಕಣ್ತೆರೆದು ನೋಡು', 'ಗಾಳಿ ಗೋಪುರ', 'ಕರುಣೆಯೇ ಕುಟುಂಬದ ಕಣ್ಣು', 'ನಾಗಪೂಜೆ', 'ಕುಲವಧು', 'ಸಿಪಾಯಿ ರಾಮು', 'ಭಕ್ತ ಕುಂಬಾರ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಜೋಡಿ ಪದೇ ಪದೇ ಜೊತೆಯಾಗಿತ್ತು.
ಬಹಳಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಡಾ. ರಾಜ್ ಹಾಗೂ ಲೀಲಾವತಿ ನಡುವೆ ಆತ್ಮೀಯ ಒಡನಾಟವೂ ಇತ್ತು. ಇಬ್ಬರೂ ಮದುವೆ ಕೂಡ ಆಗಿದ್ದಾರೆ ಎನ್ನುವ ಮಾತುಗಳು ಅಂದಿನ ಕಾಲದಲ್ಲಿ ಕೇಳಿಬಂದಿತ್ತು. ಅಣ್ಣಾವ್ರು- ಲೀಲಾವತಿ ಹಿಟ್ ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ದಾಖಲೆ ಬರೆದಿದ್ದಾರೆ.

ಸಾಮಾನ್ಯವಾಗಿ ನಾಯಕ-ನಾಯಕಿಯಾಗಿ ನಟಿಸಿದವರು ಬಳಿಕ ಒಂದೇ ಸಿನಿಮಾದಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ನಟಿಸುವುದು ಕಮ್ಮಿ. ಆದರೆ ನಾಯಕ-ನಾಯಕಿಯಾಗಿ ನಟಿಸಿದ ಬಳಿಕವೂ 'ಭೂದಾನ' ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ತಂದೆ- ಮಗಳಾಗಿ ಬಣ್ಣ ಹಚ್ಚಿದ್ದರು. 'ವಾತ್ಸಲ್ಯ' ಚಿತ್ರದಲ್ಲಿ ಸಹೋದರ ಸಹೋದರಿಯಾಗಿ ಕಾಣಿಸಿಕೊಂಡಿದ್ದರು.
'ಪ್ರೇಮಮಯಿ' ಚಿತ್ರದಲ್ಲಿ ಅತ್ತಿಗೆಯಾಗಿ, 'ಕಲಿತರೂ ಹೆಣ್ಣೇ' ಚಿತ್ರದಲ್ಲಿ ನಾದಿನಿಯಾಗಿ 'ಶ್ರಾವಣಬಂತು' ಚಿತ್ರದಲ್ಲಿ ಸೋದರತ್ತೆಯಾಗಿ ಬಳಿಕ 'ವಸಂತಗೀತ', 'ನಾ ನಿನ್ನ ಮರೆಯಲಾರೆ', 'ಜ್ವಾಲಾಮುಖಿ' ಸಿನಿಮಾಗಳಲ್ಲಿ ಅತ್ತೆಯಾಗಿ ನಟಿಸಿದ್ದರು. 'ಕಿತ್ತೂರು ಚೆನ್ನಮ್ಮ' ಚಿತ್ರದಲ್ಲಿ ಮಾವ- ಸೊಸೆಯಾಗಿಯೂ ಡಾ. ರಾಜ್ ಹಾಗೂ ಲೀಲಾವತಿ ಪ್ರೇಕ್ಷಕರ ಮುಂದೆ ಬಂದಿದ್ದರು.
ತಮ್ಮ ಅದ್ಭುತ ಅಭಿನಯದಿಂದ ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಕನ್ನಡ ಸಿನಿರಸಿಕರನ್ನು ರಂಜಿಸಿದ್ದಾರೆ. ಇವರಿಬ್ಬರು ಒಟ್ಟಿಗೆ ನಟಿಸಿದರೆ ಸಿನಿಮಾ ಹಿಟ್ ಆಗುತ್ತದೆ ಎನ್ನುವ ಮಟ್ಟಿಗೆ ಈ ಜೋಡಿ ಬಗ್ಗೆ ಕ್ರೇಜ್ ಶುರುವಾಗಿತ್ತು. ಅದೇ ಕಾರಣಕ್ಕೆ ನಿರ್ದೇಶಕರು- ನಿರ್ಮಾಪಕರು ಇಬ್ಬರನ್ನೂ ಒಟ್ಟಿಗೆ ಸೇರಿಸಿ ಸಿನಿಮಾ ಮಾಡಲು ಮುಗಿಬಿದ್ದರು. 'ಭಕ್ತ ಕುಂಬಾರ' ಚಿತ್ರದಲ್ಲಿ ಇಬ್ಬರೂ ಜೋಡಿಯಾಗಿ ಕೊನೆ ಬಾರಿಗೆ ನಟಿಸಿದ್ದರು. ಆ ಬಳಿಕ ಲೀಲಾವತಿ ಹೆಚ್ಚು ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು.
ಅಣ್ಣಾವ್ರು, ಲೀಲಾವತಿ ನಟನೆಯ ಸಿನಿಮಾಗಳು ಬೇರೆ ಭಾಷೆಗಳಿಗೆ ಡಬ್ ಆಗುತ್ತಿತ್ತು. ರೀಮೆಕ್ ಆಗಿರುವ ಉದಾಹರಣೆಗಳು ಸಾಕಷ್ಟಿದೆ. 'ಗಾಳಿಗೋಪುರ' ಹಾಗೂ 'ಭೂದಾನ' ಸಿನಿಮಾಗಳಲ್ಲಿ ಕನ್ನಡ ಚಿತ್ರರಂಗದ ಕುಮಾರತ್ರಯರು ಒಟ್ಟಿಗೆ ನಟಿಸಿದ್ದು ವಿಶೇಷ. ಆ ಎರಡೂ ಸಿನಿಮಾದಲ್ಲಿ ಲೀಲಾವತಿ ನಟಿಸಿದ್ದರು. ಅಂದಿನ ಕಾಲದಲ್ಲಿ ಬಹುತೇಕ ಕಲಾವಿದರು ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬರುತ್ತಿದ್ದರು. ಅಣ್ಣಾವ್ರು, ಲೀಲಾವತಿ ಕೂಡ ನಾಟಕರಂಗದಿಂದಲೇ ಸಿನಿಮಾರಂಗಕ್ಕೆ ಬಂದಿದ್ದರು. ಹಾಗಾಗಿ ನಟನೆ ಅವರಿಗೆ ಕರಗತವಾಗಿಬಿಟ್ಟಿತ್ತು. ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ ಬಳಿಕ ಕೂಡ ಡಾ. ರಾಜ್‌ಕುಮಾರ್, ಲೀಲಾವತಿ ನಾಟಕಗಳಲ್ಲಿ ನಟಿಸಿದ್ದು ಇದೆ. ಒಟ್ನಲ್ಲಿ ಇದು ಕನ್ನಡ ಸಿನಿರಸಿಕರು ಎಂದು ಮರೆಯಲಾಗದ ಜೋಡಿ ಎಂದರೆ ತಪ್ಪಾಗಲ್ಲ.


Click it and Unblock the Notifications










