ನೀವು ನೋಡಲೇಬೇಕಾದ ಮುತ್ತುರಾಜನ 10 ಮುತ್ತಿನಂಥ ಸಿನಿಮಾಗಳು
ಅಣ್ಣಾವ್ರ ಹುಟ್ಟುಹಬ್ಬದಂದು ಅಭಿಮಾನಿಗಳು ಅವರನ್ನು ಸ್ಮರಿಸುತ್ತಿದ್ದಾರೆ. ಡಾ. ರಾಜ್‌ಕುಮಾರ್ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಎಲ್ಲಾ ಸಿನಿಮಾಗಳು ಗೆದ್ದಿವೆ. ಭಾರತೀಯ ಚಿತ್ರರಂಗದಲ್ಲಿ ಮುತ್ತುರಾಜನಷ್ಟು ಸಿನಿಮಾ ಸಕ್ಸಸ್ ರೇಟ್ ಹೊಂದಿರುವಂತಹ ನಟ ಮತ್ತೊಬ್ಬರಿಲ್ಲ. ಯಾವುದೇ ಪಾತ್ರ ಆದರೂ ಅವರು ಲೀಲಾಜಾಲವಾಗಿ ನಟಿಸುತ್ತಿದ್ದರು. ರಂಗಭೂಮಿಯ ಹಿನ್ನಲೆ ಡಾ. ರಾಜ್ ಸಹಜ ಅಭಿನಯಕ್ಕೆ ಕಾರಣವಾಗಿತ್ತು.
ಭಾಷೆಯ ಮೇಲಿನ ಮುತ್ತುರಾಜನ ಹಿಡಿತ, ಭಾವಾಭಿನಯ ನಿಕಕ್ಕೂ ಅದ್ಭುತ. ಅಣ್ಣನಾಗಿ ಅಪ್ಪನಾಗಿ ಗಂಡನಾಗಿ ತಮ್ಮನಾಗಿ ತಾತನಾಗಿ ಕೃಷ್ಣನಾಗಿ ಬಭ್ರುವಾಹನಾಗಿ ಬೇಡನಾಗಿ ಅರ್ಜುನನಾಗಿ ಮಯೂರನಾಗಿ ಸತ್ಯಹರಿಶ್ಚಂದ್ರನಾಗಿ ಪೊಲೀಸ್ ಆಗಿ ಕೂಲಿಯಾಗಿ ಮಾಲಿಯಾಗಿ ರೈತನಾಗಿ ಪತ್ತೇದಾರಿಯಾಗಿ ಫಾರೆಸ್ಟ್ ಆಫಿಸರ್ ಕುರಿಗಾಯಿ ಹೀಗೆ ಎಲ್ಲಾ ತರಹದ ಪಾತ್ರಗಳಲ್ಲೂ ನಟಿಸಿ ಡಾ. ರಾಜ್‌ಕುಮಾರ್ ಯಶಸ್ವಿ ಆಗಿದ್ದರು. ಯಾವುದೇ ಪಾತ್ರವಾದರೂ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಒಬ್ಬ ಪರಿಪೂರ್ಣ ನಟ ಡಾ. ರಾಜ್‌ಕುಮಾರ್.

ಕಥೆಗಳ ಆಯ್ಕೆ ವಿಚಾರದಲ್ಲೂ ಅಣ್ಣಾವ್ರ ಜಾಗ್ರತೆ ವಹಿಸುತ್ತಿದ್ದರು. ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವಂತಹ ಪಾತ್ರಗಳು, ಸನ್ನಿವೇಶಗಳು ಅವರ ಸಿನಿಮಾಗಳಲ್ಲಿ ಇರುತ್ತಿರಲಿಲ್ಲ. ಕಥೆಗಳ ಆಯ್ಕೆ ವಿಚಾರದಲ್ಲಿ ಸಹೋದರ ವರದಪ್ಪ, ಪತ್ನಿ ಪಾರ್ವತಮ್ಮ ರಾಜ್‌ಕುಮಾರ್, ಸ್ನೇಹಿತ ಚಿ. ಉದಯ್ ಶಂಕರ್ ಬೆಂಬಲವಾಗಿ ನಿಲ್ಲುತ್ತಿದ್ದರು. ಮುತ್ತುರಾಜನ ಎಲ್ಲಾ ಸಿನಿಮಾಗಳನ್ನು ನೋಡಲೇಬೇಕು. ಅಣ್ಣವ್ರ ಅದ್ಭುತ ಸಿನಿಮಾಗಳು ಯಾವುದೇ ಎಂದು ಪಟ್ಟಿ ಮಾಡುವುದು ಕಷ್ಟ. ಆದರೂ ಈ 10 ಸಿನಿಮಾಗಳನ್ನು ಮಿಸ್ ಮಾಡುವಂತೆಯೇ ಇಲ್ಲ.
1. ಬೇಡರ ಕಣ್ಣಪ್ಪ
ಡಾ. ರಾಜ್‌ಕುಮಾರ್‌ಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿದ ಸಿನಿಮಾ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಶಿವಸಾನ್ನಿಧ್ಯವನ್ನು ಪಡೆದ ಬೇಡ ಕಣ್ಣಪ್ಪನ ಕಥೆಯಿದು. ಈ ಸಿನಿಮಾ ಅವತ್ತಿನ ಕಾಲಕ್ಕೆ ಸೂಪರ್ ಹಿಟ್ ಆಗಿ ಅಣ್ಣಾವ್ರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಅಲ್ಲಿಂದ ಮುಂದೆ ಮುತ್ತರಾಜ ಕನ್ನಡ ಚಿತ್ರರಂಗದಲ್ಲಿ ರಾಜನಾಗಿ ಮೆರೆದಿದ್ದು ಗೊತ್ತೇಯಿದೆ.
2. ಬಂಗಾರದ ಮನುಷ್ಯ
ಅಣ್ಣಾವ್ರ ಸಿನಿಮಾಗಳಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವಂತಹ ಸಿನಿಮಾ. ನಗರದಿಂದ ಹಳ್ಳಿಗೆ ಹೋಗಿ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆಯುವ ರಾಜೀವನಾಗಿ ಡಾ. ರಾಜ್‌ಕುಮಾರ್ ಮನೋಜ್ಞ ಅಭಿನಯವನ್ನು ಯಾರು ಮರೆಯೋಕ್ಕೆ ಸಾಧ್ಯವಿಲ್ಲ. ಈ ಸಿನಿಮಾ ಸತತ 2 ವರ್ಷ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಟಿ.ಕೆ ರಾಮಾರಾವ್ ಬರೆದ ಕಾದಂಬರಿ ಆಧರಿಸಿ ಸಿದ್ಧಲಿಂಗಯ್ಯ ಈ ಸಿನಿಮಾ ಕಟ್ಟಿಕೊಟ್ಟಿದ್ದರು. ಈ ಚಿತ್ರದ ಹಾಡುಗಳು ಇಂದಿಗೂ ಜನಜನಿತ.

3. ಕಸ್ತೂರಿ ನಿವಾಸ
ಶಿವಾಜಿ ಗಣೇಶನ್ ರಿಜೆಕ್ಟ್ ಮಾಡಿದ್ದ ಈ ಕಥೆಯಲ್ಲಿ ಡಾ. ರಾಜ್‌ಕುಮಾರ್ ನಟಿಸಿ ಗೆದ್ದರು. ಉದ್ಯಮಿ ರವಿ ಪಾತ್ರದಲ್ಲಿ ಡಾ. ರಾಜ್‌ಕುಮಾರ್ ನಟಿಸಿದ್ದರು. ಕೊಡುಗೈ ದೊರೆ ಉದ್ಯಮಿ, ಭಗ್ನಪ್ರೇಮಿ, ಗೆಳೆಯನಿಗೆ ಸಹಾಯ ಮಾಡಿ ಮುಂದೆ ಆತನಿಂದಲೇ ಮೋಸ ಹೋಗಿ ಏನೆಲ್ಲಾ ಪರಿಪಾಟಲು ಪಡುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿತ್ತು. ಕಸ್ತೂರಿ ನಿವಾಸ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲಾಗಿದ್ದ ಸಿನಿಮಾ.
4. ಬಭ್ರುವಾಹನ
ಕಲಾವಿದರು ದ್ವಿಪಾತ್ರ, ತ್ರಿಪಾತ್ರದಲ್ಲಿ ನಟಿಸಿರೋದನ್ನು ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಡಾ. ರಾಜ್‌ಕುಮಾರ್ ಕೂಡ ಇಂತಹ ಪ್ರಯತ್ನ ಮಾಡಿದ್ದಾರೆ. ಆದರೆ 'ಬಭ್ರುವಾಹನ' ಚಿತ್ರದಲ್ಲಿ ಮಾತ್ರ ದ್ವಿಪಾತ್ರಭಿನಯವನ್ನು ಕನ್ನಡ ಸಿನಿರಸಿಕರು ಎಂದೂ ಮರೆಯುವುದಿಲ್ಲ. ಮಹಾಭಾರತ ಕಾವ್ಯದಲ್ಲಿ ಬರುವ ಒಂದು ಪುಟ್ಟ ಕಥೆಯನ್ನು ಹುಣಸೂರು ಕೃಷ್ಣಮೂರ್ತಿ ಸೊಗಸಾಗಿ ತೆರೆಗೆ ತಂದಿದ್ದರು. ಅರ್ಜುನ ಹಾಗೂ ಬಭ್ರುವಾಹನನ ಪಾತ್ರಗಳಲ್ಲಿ ಅಣ್ಣಾವ್ರು ಜೀವಿಸಿದ್ದರು.
5. ಆಪರೇಷನ್ ಡೈಮಂಡ್ ರಾಕೆಟ್
ಭಾರತೀಯ ಚಿತ್ರರಂಗಕ್ಕೆ ಸಂಪೂರ್ಣ ಜೇಮ್ಸ್ ಬಾಂಡ್ ಶೈಲಿಯ ಸಿನಿಮಾಗಳನ್ನು ಪರಿಚಯಿಸಿದ್ದು ಕನ್ನಡ ಚಿತ್ರರಂಗ. ಅದರಲ್ಲೂ ಡಾ. ರಾಜ್‌ಕುಮಾರ್ ಬಾಂಡ್ ಸರಣಿ ಸಿನಿಮಾಗಳಲ್ಲಿ ನಟಿಸಿ ಜಾದೂ ಮಾಡಿದ್ದರು. 'ಜೇಡರ ಬಲೆ' ಚಿತ್ರದಿಂದ ಪ್ರಾರಂಭವಾಗಿ 4 ಸಿನಿಮಾಗಳಲ್ಲಿ ಈ ಕಥೆ ಮುಂದುವರೆದಿತ್ತು. CID 999 ಸರಣಿಯ ಕೊನೆಯ ಸಿನಿಮಾ 'ಆಪರೇಷನ್ ಡೈಮಂಡ್ ರಾಕೆಟ್'. ಹಿಂದಿನ 3 ಸಿನಿಮಾಗಳು ಬ್ಲಾಕ್ ಅಂಡ್ ವೈಟ್ ಆಗಿದ್ದರೆ ಈ ಸಿನಿಮಾ ಕಲರ್‌ನಲ್ಲಿ ಬಂದಿತ್ತು.

6. ಕವಿರತ್ನ ಕಾಳಿದಾಸ
ಖ್ಯಾತ ಕವಿ ಕಾಳಿದಾಸನ ಕಥೆಯನ್ನು ಆಧರಿಸಿ ರೇಣುಕಾ ಶರ್ಮಾ ಈ ಸಿನಿಮಾವನ್ನು ತೆರೆಗೆ ತಂದಿದ್ದರು. ಜಯಪ್ರದ, ಬಾಲಕೃಷ್ಣ, ಶ್ರೀನಿವಾಸ್ ಮೂರ್ತಿ ಚಿತ್ರದ ತಾರಾಗಣದಲ್ಲಿ ಇದ್ದರು. ಕುರಿಗಾಯಿಯೊಬ್ಬ ಶ್ರೇಷ್ಟ ಕವಿಯಾಗುವ ಕಥೆ ಚಿತ್ರದಲ್ಲಿತ್ತು. ಎಂ. ರಂಗಾರಾವ್ ಸಂಗೀತ ಹಾಗೂ ಚಿ. ಉದಯ್‌ಶಂಕರ್ ಸಾಹಿತ್ಯದ ಈ ಸಿನಿಮಾ ಗೀತೆಗಳು ಎವರ್‌ಗ್ರೀನ್ ಎನ್ನಬಹುದು.
7. ಗಂಧದ ಗುಡಿ
ಅರಣ್ಯ ಸಂಪತ್ತನ್ನು ಉಳಿಸಬೇಕು ಎನ್ನುವ ಸಂದೇಶ ಹೊತ್ತು ಬಂದ 'ಗಂಧದ ಗುಡಿ' ಅಣ್ಣಾವ್ರ ಮತ್ತೊಂದು ಮರೆಯಲಾಗದ ಸಿನಿಮಾ. ವಿಜಯ್ ನಿರ್ದೇಶನದ ಈ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದರು. ಮುಂದೆ ಇದೇ ಕಥೆಯನ್ನು ಮುಂದುವರೆಸಿ 'ಗಂಧದ ಗುಡಿ' ಸಿನಿಮಾ ಬಂದಿತ್ತು. ಇದರಲ್ಲಿ ಶಿವರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದರು. ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಇದೇ ಟೈಟಲ್‌ನಲ್ಲಿ ಡಾಕ್ಯೂಡ್ರಾಮಾ ಸಿನಿಮಾ ಮಾಡಿದ್ದರು.
8. ಸತ್ಯಹರಿಶ್ಚಂದ್ರ
ಇದು ಮತ್ತೊಂದು ಪೌರಾಣಿಕ ಸಿನಿಮಾ. ಈ ಚಿತ್ರದಲ್ಲಿ ರಾಜ ಹರಿಶ್ಚಂದ್ರನಾಗಿ ಅಣ್ಣಾವ್ರ ಬಣ್ಣ ಹಚ್ಚಿದ್ದರು. ಸತ್ಯನಿಷ್ಠೆಗೆ ಹೆಸರುವಾಸಿಯಾದ ಪ್ರಸಿದ್ಧ ರಾಜ ಹರಿಶ್ಚಂದ್ರನ ಕಥೆ ಇದು. ಸತ್ಯವನು ಬಿಟ್ಟು ಬೇರೆ ಏನನ್ನು ಹೇಳದ ಹರಿಶ್ಚಂದ್ರನ ದೇವರುಗಳು ಸತ್ವಪರೀಕ್ಷೆ ಇಟ್ಟರು. ಮಡದಿಯನ್ನು ಮಾಡಿ ಕೊನೆಗೆ ತನ್ನನ್ನು ತಾನು ಮಾಡಿಕೊಂಡು ಸ್ಮಶಾನ ಕಾಯುವ ಕೆಲಸ ಮಾಡುವ ಹರಶ್ಚಂದ್ರನಾಗಿ ಅಣ್ಣಾವ್ರ ಅಭಿನಯ ಮರೆಯೋಕೆ ಸಾಧ್ಯವಿಲ್ಲ.
9. ಸಂಪತ್ತಿಗೆ ಸವಾಲ್
ಬಿ.ಪಿ ದುತ್ತರಗಿ ಬರೆದ 'ಸಾಹುಕಾರ' ನಾಟಕ ಆಧರಿಸಿ ಎ. ವಿ ಶೃಂಗೇರಿ ರಾವ್ 'ಸಂಪತ್ತಿಗೆ ಸವಾಲ್' ಸಿನಿಮಾ ಕಟ್ಟಿಕೊಟ್ಟಿದ್ದರು. ಊರಿನ ಸಾಹುಕಾರ ಸಿದ್ದಪ್ಪ ಹಾಗೂ ರೈತ ವೀರಭದ್ರನ ಎಟು ಎದಿರೇಟಿನ ಕಥೆ ಇದು. ಚಿತ್ರದಲ್ಲಿ ನಾಯಕಿಯಾಗಿ ಮಂಜುಳ ಮುಂಚಿದ್ದರು. ಇದೇ ಚಿತ್ರದ 'ಯಾರೇ ಕೂಗಾಡಲಿ' ಹಿಟ್ ಆಗಿ ಮುಂದೆ ಅಣ್ಣಾವ್ರು ಹಲವು ಗೀತೆಗಳನ್ನು ಹಾಡುವಂತಾಯಿತು. ಕೊನೆಗೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದರು.
10. ಚಲಿಸುವ ಮೋಡಗಳು
ಡಾ. ರಾಜ್‌ಕುಮಾರ್ ನಟನೆಯ ಸೂಪರ್ ಸಿನಿಮಾಗಳಲ್ಲಿ ಇದು ಒಂದು. ಚಿತ್ರದಲ್ಲಿ ವಕೀಲ ಮೋಹನ್ ಪಾತ್ರದಲ್ಲಿ ಅಣ್ಣಾವ್ರು ಮಿಂಚಿದ್ದರು. ಸರಿತಾ, ಅಂಬಿಕಾ, ಮಾಸ್ಟರ್ ಲೋಹಿತ್(ಪುನೀತ್ ರಾಜ್‌ಕುಮಾರ್) ತಾರಾಗಣದಲ್ಲಿ ಇದ್ದರು. ಹುಬ್ಬಳ್ಳಿಯಲ್ಲಿ ಸಿನಿಮಾ 40 ವಾರ ಪ್ರದರ್ಶನ ಕಂಡಿತ್ತು.


Click it and Unblock the Notifications











