ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಡಾ.ರಾಜ್ ಕುಟುಂಬ.!
2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇತ್ತೀಚೆಗಷ್ಟೇ ಪ್ರಕಟವಾಯ್ತು. ಇದರಲ್ಲಿ 'ಅಮ್ಮನ ಮನೆ' ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಅಣ್ಣಾವ್ರ ಮಗ ರಾಘವೇಂದ್ರ ರಾಜ್ ಕುಮಾರ್ ಗೆ 'ಅತ್ಯುತ್ತಮ ನಟ' ಪ್ರಶಸ್ತಿ ಸಿಕ್ಕಿದೆ.
Recommended Video
2004ರಲ್ಲಿ ಬಿಡುಗಡೆ ಆದ 'ಪಕ್ಕದಮನೆ ಹುಡ್ಗಿ' ನಂತರ ಸುದೀರ್ಘ 14 ವರ್ಷಗಳ ಲಾಂಗ್ ಗ್ಯಾಪ್ ಬಳಿಕ ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಬಣ್ಣ ಹಚ್ಚಿದ್ದು 'ಅಮ್ಮನ ಮನೆ' ಚಿತ್ರಕ್ಕಾಗಿ. ತಾಯಿ-ಮಗನ ಅನ್ಯೋನ್ಯ ಅನುಬಂಧ ಸಾರುವ 'ಅಮ್ಮನ ಮನೆ' ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ನೀಡಿದ ಅಭಿನಯಕ್ಕೆ ರಾಜ್ಯ ಪ್ರಶಸ್ತಿಯ ಗರಿ ಲಭಿಸಿದೆ.
ಅಸಲಿಗೆ, 32 ವರ್ಷಗಳ ಸಿನಿ ಜೀವನದಲ್ಲಿ ರಾಘವೇಂದ್ರ ರಾಜ್ ಕುಮಾರ್ ಗೆ ಸಿಕ್ಕಿರುವ ಮೊಟ್ಟ ಮೊದಲ ರಾಜ್ಯ ಪ್ರಶಸ್ತಿ ಇದು. ಈ ಮೂಲಕ ರಾಘಣ್ಣ ಮಾತ್ರ ಅಲ್ಲ, ಡಾ.ರಾಜ್ ಕುಮಾರ್ ಕುಟುಂಬ ಒಂದು ಅಪರೂಪದ ದಾಖಲೆಗೆ ಪಾತ್ರವಾಗಿದೆ. ಮುಂದೆ ಓದಿರಿ...

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ.!
ರಾಘವೇಂದ್ರ ರಾಜ್ ಕುಮಾರ್ ಗೆ ರಾಜ್ಯ ಪ್ರಶಸ್ತಿ ಸಿಕ್ಕಿರುವುದರಿಂದ, ಡಾ.ರಾಜ್ ಕುಟುಂಬದ ಒಟ್ಟು ಆರು ಕಲಾವಿದರು 'ಅತ್ಯುತ್ತಮ ನಟನೆ'ಗಾಗಿ ರಾಜ್ಯ ಪ್ರಶಸ್ತಿ ಪಡೆದಂತಾಗಿದೆ. ಕನ್ನಡದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾವುದೇ ಒಂದು ಕುಟುಂಬದ ಆರು ಜನ 'ಅತ್ಯುತ್ತಮ ನಟನೆ'ಗಾಗಿ ಪ್ರಶಸ್ತಿಗೆ ಭಾಜನರಾದ ಉದಾಹರಣೆಯೇ ಇಲ್ಲ.! ಅಂಥದ್ದೊಂದು ಅಪರೂಪದ ದಾಖಲೆ ಮತ್ತು ಸಾಧನೆಗೆ ಡಾ.ರಾಜಕುಮಾರ್ ಅವರ ಕುಟುಂಬ ಪಾತ್ರವಾಗಿದೆ.

ಒಟ್ಟು ಇಪ್ಪತ್ತು ಪ್ರಶಸ್ತಿಗಳು.!
ಇದರಲ್ಲಿ ಇನ್ನೊಂದು ವಿಶೇಷತೆ ಇದೆ. ಡಾ.ರಾಜ್ ಕುಮಾರ್ ಕುಟುಂಬದ ಆರು ಜನರಿಂದ ಇಲ್ಲಿಯವರೆಗೂ ದಕ್ಕಿರುವ ರಾಜ್ಯ ಪ್ರಶಸ್ತಿಗಳು ಎಷ್ಟು ಗೊತ್ತಾ? ಬರೋಬ್ಬರಿ 20.! ಈ ಪೈಕಿ ಡಾ.ರಾಜಕುಮಾರ್ ಅವರಿಗೆ ದಾಖಲೆಯ ಒಂಬತ್ತು ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅವರಿಗೆ ತಲಾ ನಾಲ್ಕು ಬಾರಿ ಅತ್ಯುತ್ತಮ ನಟ ಪ್ರಶಸ್ತಿಗಳು ಲಭಿಸಿವೆ. ಇನ್ನು ರಾಘವೇಂದ್ರ ರಾಜಕುಮಾರ್, ಪೂರ್ಣಿಮಾ ರಾಜಕುಮಾರ್ ಮತ್ತು ನಿವೇದಿತಾ ಶಿವರಾಜಕುಮಾರ್ ಅವರಿಗೆ ತಲಾ ಒಂದು ಬಾರಿ ಅತ್ಯುತ್ತಮ ನಟನೆಗೆ ಪ್ರಶಸ್ತಿ ಪಡೆದಿದ್ದಾರೆ.

ಡಾ.ರಾಜ್ ಕುಮಾರ್ ಗೆ ಪ್ರಶಸ್ತಿ ತಂದು ಕೊಟ್ಟ ಚಿತ್ರಗಳು
'ಬಂಗಾರದ ಹೂವು', 'ಕುಲಗೌರವ', 'ಭಕ್ತ ಕುಂಬಾರ', 'ಬಬ್ರುವಾಹನ', 'ಹೊಸ ಬೆಳಕು', 'ಹಾಲು ಜೇನು', 'ದೇವತಾ ಮನುಷ್ಯ', 'ಜೀವನ ಚೈತ್ರ' ಮತ್ತು 'ಒಡಹುಟ್ಟಿದವರು' ಚಿತ್ರಗಳಲ್ಲಿನ ನಟನೆಗಾಗಿ ಡಾ.ರಾಜ್ ಕುಮಾರ್ 9 ಬಾರಿ 'ಅತ್ಯುತ್ತಮ ನಟ' ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಶಿವಣ್ಣ ಮತ್ತು ಅಪ್ಪುಗೆ ಅವಾರ್ಡ್ ತಂದುಕೊಟ್ಟ ಚಿತ್ರಗಳು
'ಓಂ', 'ಹೃದಯ ಹೃದಯ', 'ಚಿಗುರಿದ ಕನಸು' ಮತ್ತು 'ಜೋಗಿ' ಚಿತ್ರಗಳಲ್ಲಿ ನಟನೆಗಾಗಿ ಶಿವರಾಜ್ ಕುಮಾರ್ 'ಅತ್ಯುತ್ತಮ ನಟ' ಪ್ರಶಸ್ತಿಗೆ ಭಾಜನರಾಗಿದ್ದರೆ, 'ಮಿಲನ' ಮತ್ತು 'ಜಾಕಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜ್ ಕುಮಾರ್ 'ಅತ್ಯುತ್ತಮ ನಟ' ಅವಾರ್ಡ್ ಪಡೆದಿದ್ದಾರೆ. ಇದೀಗ ರಾಘವೇಂದ್ರ ರಾಜ್ ಕುಮಾರ್ ಗೆ 'ಅಮ್ಮನ ಮನೆ' ಚಿತ್ರದಲ್ಲಿನ ಆಕ್ಟಿಂಗ್ ಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿ ಸಂದಿದೆ.

ಬಾಲನಟ-ಬಾಲನಟಿ ಪ್ರಶಸ್ತಿ
'ಚಲಿಸುವ ಮೋಡಗಳು' ಮತ್ತು 'ಎರಡು ನಕ್ಷತ್ರಗಳು' ಚಿತ್ರದಲ್ಲಿನ ಆಕ್ಟಿಂಗ್ ಗಾಗಿ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದಿದ್ದಾರೆ. ಇನ್ನೂ 'ಪ್ರೇಮದ ಕಾಣಿಕೆ' ಚಿತ್ರಕ್ಕಾಗಿ ಪೂರ್ಣಿಮಾ ರಾಜ್ ಕುಮಾರ್, 'ಅಂಡಮಾನ್' ಚಿತ್ರಕ್ಕಾಗಿ ನಿವೇದಿತಾ ಶಿವರಾಜ್ ಕುಮಾರ್ ಅತ್ಯುತ್ತಮ ಬಾಲನಟಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ರಾಜ್ಯ ಪ್ರಶಸ್ತಿಗಳು ಮಾತ್ರ.!
ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ಡಾ.ರಾಜ್ ಕುಮಾರ್ ಕುಟುಂಬದ ಆರು ಮಂದಿ ಒಟ್ಟು 20 ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇನ್ನೂ ಉತ್ತಮ ಗಾಯನ, ಉತ್ತಮ ಚಿತ್ರ, ಜೀವಮಾನ ಶ್ರೇಷ್ಠ ಸಾಧನೆ ಮುಂತಾದ ವಿಭಾಗಗಳನ್ನು ಸೇರಿಸಿದರೆ ಅಣ್ಣಾವ್ರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಸಿಕ್ಕ ಪ್ರಶಸ್ತಿಗಳ ಲೆಕ್ಕ ಮೂವತ್ತರ ಗಡಿ ದಾಟುತ್ತದೆ. ಇದೂ ಕೂಡ ದಾಖಲೆಯೇ.!


Click it and Unblock the Notifications











