ಅಣ್ಣಾವ್ರು, ವಿಷ್ಣು, ಅಂಬಿ ರೀಮೆಕ್ ಚಿತ್ರಗಳು ಯಾವುವು? ಕನ್ನಡದಲ್ಲಿ ಹೆಚ್ಚು ರೀಮೆಕ್ ಮಾಡಿದ್ಯಾರು?
ಸದ್ಯ ಚಿತ್ರರಂಗದಲ್ಲಿ ನಿಂತ್ರೆ ಕುಂತ್ರೆ ಪ್ಯಾನ್ ಇಂಡಿಯಾ ಎನ್ನುವ ಚರ್ಚೆ ನಡೀತಿದೆ. ಸ್ಟಾರ್ ನಟರು ವರ್ಷಕ್ಕೆ 2-3 ಸಿನಿಮಾ ಮಾಡಬೇಕು ಎನ್ನುವ ಕೂಗು ಕೇಳಿಬರುತ್ತಲೇ ಇದೆ. ಆದರೆ ಯಾರು ಇದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮನೆ ಕಟ್ಟೋಕೆ 6 ತಿಂಗಳು ಸಾಕು, ಅರಮನೆ ಕಟ್ಟೋಕೆ ಎರಡ್ಮೂರು ವರ್ಷ ಬೇಕು ಎಂದು ಹೇಳಿಕೊಂಡು ಸುತ್ತಾಡುವವರು ಇದ್ದಾರೆ.
ಒಂದ್ಕಾಲದಲ್ಲಿ ಚಿತ್ರರಂಗದಲ್ಲಿ ರೀಮೆಕ್ ಹಾವಳಿ ಜಾಸ್ತಿ ಇತ್ತು. ಡಾ. ರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರು ಕೂಡ ರೀಮೆಕ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಗೆದ್ದಿದ್ದಾರೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಶುರುವಾಗಿ ಪರಭಾಷಾ ಸಿನಿಮಾಗಳು ಕನ್ನಡಕ್ಕೂ ಡಬ್ ಆಗಿ ಬರಲು ಆರಂಭವಾದ ಬಳಿಕ ರೀಮೆಕ್ ಸಂಖ್ಯೆ ಗಣನೀಯವಾಗಿ ಇಳಿದುಬಿಟ್ಟಿದೆ. ಒಂದಷ್ಟು ರೀಮೆಕ್ ರೈಟ್ಸ್ ನಿರ್ಮಾಪಕರ ಬಳಿ ಇದ್ದರೂ ಸಿನಿಮಾ ಮಾಡಲು ಯಾರು ತಯಾರಿಲ್ಲ.

ರೀಮೆಕ್ ಬಗ್ಗೆ ಒಬ್ಬೊಬ್ಬರು ಒಂದೊಂದು ವಾದವನ್ನು ಮುಂದಿಡುತ್ತಾರೆ. ನಮ್ಮಲ್ಲಿ ಕಥೆಗಳು ಇಲ್ಲವೇ? ಸ್ವಂತ ಕಥೆ ಮಾಡಿ ಸಿನಿಮಾ ಮಾಡಬಹುದಲ್ಲ. ಯಾವುದೋ ಭಾಷೆಯಲ್ಲಿ ಹಿಟ್ ಆಗಿರುವ ಕಥೆ ಕನ್ನಡದಲ್ಲಿ ವರ್ಕ್ ಆಗುತ್ತಾ? ಎನ್ನುವುದು ಕೆಲವರ ವಾದ. ಅದಾಗಲೇ ಗೆದ್ದಿರುವ ಕಥೆ ಆಗಿರುವುದರಿಂದ ರಿಸ್ಕ್ ಕಮ್ಮಿ, ರೀಮೆಕ್ ಮಾಡುವುದು ಕೂಡ ಬಹಳ ಕಷ್ಟ. ಯಾಕಂದರೆ ಜನ ಹೋಲಿಕೆ ಮಾಡಿ ನೋಡುತ್ತಾರೆ. ಆ ಪ್ರಯತ್ನದಲ್ಲಿ ಗೆಲ್ಲುವುದು ಸಾಧಾರಣ ಮಾತಲ್ಲ ಎನ್ನುವ ವಾದವೂ ಇದೆ.
ದಶಕಗಳಿಂದಲೂ ಎಲ್ಲಾ ಭಾಷೆಗಳಲ್ಲಿ ರೀಮೆಕ್ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಬರೀ ಪರಭಾಷಾ ಸಿನಿಮಾಗಳನ್ನು ನೋಡಿ ಕನ್ನಡದಲ್ಲಿ ರೀಮೆಕ್ ಸಿನಿಮಾ ಮಾಡಿಲ್ಲ. ನಮ್ಮ ಕನ್ನಡ ಸಿನಿಮಾಗಳು ಪರಭಾಷೆಗೆ ರೀಮೆಕ್ ಆಗಿರುವುದು ಇದೆ. ಹಾಗೆ ನೋಡಿದರೆ ಡಾ. ರಾಜ್‌ಕುಮಾರ್ ನಟನೆಯ 39 ಸಿನಿಮಾಗಳು 9 ಭಾಷೆಗಳಲ್ಲಿ 62 ಬಾರಿ ರೀಮೆಕ್ ಆಗಿರುವ ದಾಖಲೆ ಇದೆ.
60, 70, 80ರ ದಶಕಗಳಲ್ಲಿ ಕನ್ನಡ ಚಿತ್ರರಂಗ ಕೂಡ ಮದ್ರಾಸ್‌ನಲ್ಲಿ ನೆಲೆಗೊಂಡಿತ್ತು. ಒಂದೇ ಕಥೆಯನ್ನು ಏಕಕಾಲಕ್ಕೆ ಮೂರ್ನಾಲ್ಕು ಭಾಷೆಗಳಲ್ಲಿ ಬೇರೆ ಬೇರೆ ಹೀರೊಗಳ ನಟನೆಯಲ್ಲಿ ಒಟ್ಟಿಗೆ ಸಿನಿಮಾಗಳನ್ನು ಮಾಡಿ ಬಿಡುಗಡೆ ಮಾಡುವ ಪದ್ಧತಿ ಇತ್ತು. 90ರ ದಶಕದ ವೇಳೆಗೆ ಕನ್ನಡ ಚಿತ್ರರಂಗ ಬೆಂಗಳೂರಿನಲ್ಲಿ ನೆಲೆಗೊಂಡಿತ್ತು. 90ರ ದಶಕದಲ್ಲೂ ದೊಡ್ಡ ಸಂಖ್ಯೆಯಲ್ಲಿ ರೀಮೆಕ್ ಸಿನಿಮಾಗಳು ನಿರ್ಮಾಣಗೊಂಡವು. ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ದರ್ಶನ್, ಸುದೀಪ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹೀಗೆ ಎಲ್ಲಾ ನಟರು ರೀಮೆಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕೆಲವೊಮ್ಮೆ ಅಧಿಕೃತವಾಗಿ ರೀಮೆಕ್ ರೈಟ್ಸ್ ತೆಗೆದುಕೊಂಡು ಸಿನಿಮಾ ನಿರ್ಮಿಸಿದರೆ ಕೆಲವೊಮ್ಮೆ ಯಾವುದೇ ಸಿನಿಮಾ ಕಥೆಯಿಂದ ಪ್ರೇರಣೆಗೊಂಡು ಕೊಂಚ ಬದಲಿಸಿ ಸಿನಿಮಾ ಮಾಡಿರುವ ಉದಾಹರಣೆಗಳು ಕೂಡ ಇದೆ. ಕೊನೆಯದಾಗಿ ಪ್ರೇಕ್ಷಕರನ್ನು ರಂಜಿಸಿ, ಬಾಕ್ಸಾಫೀಸ್ ಶೇಕ್ ಮಾಡುವ ಪ್ರಯತ್ನಗಳು ನಡೆಯುತ್ತಾ ಬರುತ್ತಿದೆ. ಆದರೆ ಕಳೆದ ಏಳೆಂಟು ವರ್ಷಗಳಿಂದ ಕನ್ನಡದಲ್ಲಿ ರೀಮೆಕ್ ಸಿನಿಮಾಗಳು ಕಮ್ಮಿ ಆಗಿಬಿಟ್ಟಿದೆ.
ಅಣ್ಣಾವ್ರ ರೀಮೆಕ್ ಚಿತ್ರಗಳು
ನಟಸಾರ್ವಭೌಮ ಡಾ. ರಾಜ್‌ಕುಮಾರ್ 18 ರೀಮೆಕ್ ಸಿನಿಮಾಗಳಲ್ಲಿ ನಟಿಸಿದ್ದರು. ಒಟ್ಟು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಅಣ್ಣಾವ್ರ ರೀಮೆಕ್ ಸಂಖ್ಯೆ ಕಮ್ಮಿ ಎಂದೇ ಹೇಳಬೇಕು. 'ಮಲ್ಲಿ ಮದುವೆ', 'ಅಣ್ಣ ತಂಗಿ', 'ಪ್ರೇಮಮಯಿ', 'ಬೆಂಗಳೂರು ಮೇಲ್', 'ರೌಡಿ ರಂಗಣ್ಣ', 'ಚಿಕ್ಕಮ್ಮ', 'ಬಾಳೇ ಬಂಗಾರ' ಅಣ್ಣಾವ್ರು ನಟಿಸಿದ ಕೆಲ ರೀಮೆಕ್ ಸಿನಿಮಾಗಳು.
52 ರೀಮೆಕ್ ಚಿತ್ರಗಳಲ್ಲಿ ವಿಷ್ಣು
ಸಾಹಸಸಿಂಹ ವಿಷ್ಣುವರ್ಧನ್ ಕೂಡ ಸಾಕಷ್ಟು ರೀಮೆಕ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದರು. 'ಕಿಟ್ಟು ಪುಟ್ಟು', 'ಕರ್ಣ', 'ಅವಳ ಹೆಜ್ಜೆ', 'ಮನೆ ಮನೆ ಕಥೆ', 'ಕೃಷ್ಣ ನೀ ಬೇಗನೆ ಬಾರೋ', 'ಕೋಟಿಗೊಬ್ಬ', 'ದಿಗ್ಗಜರು', 'ಸಿಂಹಾದ್ರಿಯ ಸಿಂಹ', 'ಸೂರ್ಯವಂಶ', 'ಆಪ್ತಮಿತ್ರ' ಹೀಗೆ ಲಿಸ್ಟ್ ಬಹಳ ದೊಡ್ಡದಿದೆ.
ಅಂಬಿ ರೀಮೆಕ್ ಸಿನಿಮಾಗಳು
ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಬಳಿಕ ಆ ಮಟ್ಟಿಗಿನ ಜನಪ್ರಿಯತೆ ಗಳಿಸಿದ ಮತ್ತೊಬ್ಬ ನಟ ಅಂಬರೀಶ್. ರೆಬಲ್ ಪಾತ್ರಗಳ ಮೂಲಕ ಅಂಬಿ ಅಭಿಮಾನಿಗಳ ಮನಗೆದ್ದವರು. 'ರೌಡಿ ಎಂಎಲ್‌ಎ', 'ಗರುಡ ಧ್ವಜ', 'ಮಿಡಿದ ಹೃದಯಗಳು', 'ಅಣ್ಣಾವ್ರು', 'ಗೌಡ್ರು', 'ಅಂಬಿ ನಿಂಗೆ ವಯಸ್ಸಾಯ್ತೋ' ಹೀಗೆ ಸಾಕಷ್ಟು ರೀಮೆಕ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಹೆಚ್ಚು ರೀಮೆಕ್ ಚಿತ್ರಗಳಲ್ಲಿ ರವಿ
ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ರೀಮೆಕ್ ಸಿನಿಮಾಗಳಲ್ಲಿ ನಟಿಸಿದವರು ರವಿಚಂದ್ರನ್. ಬೇರೆ ಭಾಷೆ ಸಿನಿಮಾ ರೈಟ್ಸ್ ತಂದರೂ ಅದನ್ನು ಹೊಸ ರೂಪದಲ್ಲಿ ಕಟ್ಟಿಕೊಟ್ಟು ಗೆದ್ದವರು ಕ್ರೇಜಿಸ್ಟಾರ್. ರೀಮೆಕ್ ಸಿನಿಮಾ ಆಗಿದ್ದರು ಒರಿಜಿನಲ್ ಮ್ಯೂಸಿಕ್‌ನಿಂದ ಇವರ ಸಿನಿಮಾಗಳು ಹೆಚ್ಚು ಹೆಚ್ಚು ಸದ್ದು ಮಾಡುತ್ತಿದ್ದವು. 'ಹಳ್ಳಿಮೇಷ್ಟರು', 'ಚಿಕ್ಕೆಜಮಾನ್ರು', 'ನಾನು ನನ್ನ ಹೆಂಡ್ತೀರು', ಪ್ರೀತ್ಸು ತಪ್ಪೇನಿಲ್ಲ, 'ಕೋದಂಡರಾಮ' ಹೀಗೆ ಲಿಸ್ಟ್ ಬೆಳೆಯುತ್ತಾ ಹೋಗುತ್ತದೆ.
ದರ್ಶನ್- ಸುದೀಪ್ ರೀಮೆಕ್ ಚಿತ್ರಗಳು
ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ದರ್ಶನ್ ಹಾಗೂ ಸುದೀಪ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಅಂದಹಾಗೆ ಸುದೀಪ್ 19 ರೀಮೆಕ್ ಸಿನಿಮಾಗಳಲ್ಲಿ ನಟಿಸಿದರೆ ದರ್ಶನ್ ಅಭಿನಯಿಸಿರುವ 17 ಸಿನಿಮಾಗಳು ರೀಮೆಕ್. ಇನ್ನು ಬೇರೆ ಸಿನಿಮಾಗಳಿಂದ ಪ್ರೇರಣೆಗೊಂಡು ಮಾಡಿದ 5 ಸಿನಿಮಾಗಳಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು.
7 ರೀಮೆಕ್ ಚಿತ್ರಗಳಲ್ಲಿ ಅಪ್ಪು
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ 7 ರೀಮೆಕ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ಅಜಯ್', 'ಮೌರ್ಯ', 'ರಾಮ್', 'ಯಾರೇ ಕೂಗಾಡಲಿ', 'ಹುಡುಗರು', 'ಪವರ್' ಇವು ಅಪ್ಪು ನಟಿಸಿದ ರೀಮೆಕ್ ಚಿತ್ರಗಳು.
ಉಪೇಂದ್ರ 21, ಯಶ್ 2
ರಿಯಲ್ ಸ್ಟಾರ್ ಉಪೇಂದ್ರ ಕೂಡ ಸಾಕಷ್ಟು ರೀಮೆಕ್ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದ ಉಪ್ಪಿ 'ಎ' ಸಿನಿಮಾ ಮಾಡಿ ಹೀರೊ ಆಗಿದ್ದರು. ಬಳಿಕ ನಿರ್ದೇಶನ ಮಾಡುವುದು ಕಮ್ಮಿ ಮಾಡಿದ್ದರು. ಹೀರೊ ಆಗಿ 20 ರೀಮೆಕ್ ಸಿನಿಮಾಗಳಲ್ಲಿ ಉಪ್ಪಿ ಮಿಂಚಿದ್ದಾರೆ. ಇನ್ನು ಯಶ್ ನಟಿಸಿದ 'ಕಿತಾತಕ', 'ರಾಜಾಹುಲಿ' ರೀಮೆಕ್ ಸಿನಿಮಾಗಳು.
ಶಿವಣ್ಣ ರೀಮೆಕ್ ಚಿತ್ರಗಳು
ಕನ್ನಡದಲ್ಲಿ 125ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಶಿವಣ್ಣ ದರ್ಬಾರ್ ನಡೆಸುತ್ತಿದ್ದಾರೆ. ಇವತ್ತಿಗೂ ಬಹುಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಅಂದಹಾಗೆ ಸೆಂಚುರಿ ಸ್ಟಾರ್ 20 ರೀಮೆಕ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 'ಕೋದಂಡ ರಾಮ', 'ಗಲಾಟೆ ಅಳಿಯಂದ್ರು' ಹೀಗೆ ಲಿಸ್ಟ್ ಮುಂದುವರೆಯುತ್ತದೆ.


Click it and Unblock the Notifications











