ಮುತ್ತುರಾಜ್ ಹಾಗೂ ಪಾರ್ವತಮ್ಮ ಮದುವೆಯಲ್ಲಿ ಯಾರಿಗೆ ಹೆಚ್ಚು ಮುಯ್ಯಿ ಬಂದಿತ್ತು?
ಡಾ. ರಾಜ್‌ಕುಮಾರ್ ಬರೀ ತಮ್ಮ ಸಿನಿಮಾಗಳಿಂದ ಮಾತ್ರ ಕನ್ನಡಿಗರಿಗೆ ಹತ್ತಿರವಾಗಲಿಲ್ಲ. ತಮ್ಮ ಆದರ್ಶ ಗುಣಗಳಿಂದಲೂ ಮನೆಮಾತಾಗಿದ್ದರು. ನಾಟಕಗಳಲ್ಲಿ ನಟಿಸುತ್ತಿದ್ದ ಮುತ್ತುರಾಜ್ ಬಾಳಿಗೆ ಪಾರ್ವತಮ್ಮ ಅದೃಷ್ಟ ದೇವತೆಯಾಗಿ ಬಂದಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ 'ಬೇಡರ ಕಣಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.
1953, ಜೂನ್ 25 ರಂದು ನಂಜನಗೂಡು ತಾಣಪ್ಪರವರ ಛತ್ರದಲ್ಲಿ ಮುತ್ತುರಾಜ್ ಹಾಗೂ ಪಾರ್ವತಮ್ಮ ಮದುವೆ ನಡೆದಿತ್ತು. ಆಗಿನ್ನು ಅಣ್ಣಾವ್ರು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿರಲಿಲ್ಲ. ಹೆಚ್ಚಿನ ಆದಾಯ ಇರಲಿಲ್ಲ. ಹಾಗಾಗಿ ಸಾಲ ಮಾಡಿ ಮದುವೆ ಮಾಡಿಕೊಂಡಿದ್ದರು. ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ ಬಳಿಕ ಮದುವೆಗೆ ಮಾಡಿದ್ದ ಸಾಲವನ್ನು ತೀರಿಸಿದ್ದರು. ತಮ್ಮ ಮದುವೆ ಸಾಲ, ಮುಯ್ಯಿ, ಸಂಭ್ರಮ ಎಲ್ಲವನ್ನು ಆಪ್ತರಾಗಿದ್ದ ಪ್ರವೀಣ್ ನಾಯಕ್ ಅವರ ಬಗ್ಗೆ ಅಣ್ಣಾವ್ರು ಹಂಚಿಕೊಂಡಿದ್ದರು.

ಛಾಯಾಗ್ರಾಹಕರಾಗಿ ಗುರ್ತಿಸಿಕೊಂಡಿದ್ದ ಪ್ರವೀಣ್ ನಾಯಕ್ ದೊಡ್ಮನೆಗೆ ಬಹಳ ಆಪ್ತರು. ಡಾ. ರಾಜ್‌ಕುಮಾರ್ ಅವರ ಜೊತೆ ಸಾಕಷ್ಟು ಸಮಯ ಕಳೆದಿದ್ದಾರೆ. "ಅಣ್ಣಾವ್ರ ಮಾತುಗಳು" ಹೆಸರಿನಲ್ಲಿ ಪ್ರವೀಣ್ ನಾಯಕ್ ಫೇಸ್‌ಬುಕ್‌ನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರವೀಣ್ ನಾಯಕ್ ಅವರ ಮದುವೆಗೂ ಅಣ್ಣಾವ್ರು, ಪಾರ್ವತಮ್ಮ ದಂಪತಿ ಹಾಜರಾಗಿ ನವ ವಧು-ವರರನ್ನು ಆಶೀರ್ವದಿಸಿದ್ದರು. ಆ ನೆನಪುಗಳನ್ನು ಕೂಡ ಇತ್ತೀಚೆಗೆ ಹಂಚಿಕೊಂಡಿದ್ದಾರೆ.
ಪಾರ್ವತಮ್ಮ ಪುಟ್ಟ ಮಗುವಾಗಿದ್ದಾಗಲೇ ಮುತ್ತುರಾಜ್ ಅವರ ತಂದೆ ಪುಟ್ಟಸ್ವಾಮಯ್ಯನವರು ಇವಳೇ ನನ್ನ ಸೊಸೆ ಎಂದು ಹೇಳಿದ್ದರಂತೆ. ಪಾರ್ವತಮ್ಮ 10ನೇ ತರಗತಿ ಓದುತ್ತಿದ್ದಾಗ ತಾಯಿ ಬೇಗ ಮದುವೆ ಮಾಡಿಕೊಳ್ಳಪ್ಪ ಮುತ್ತುರಾಜು.. ನಿಮ್ಮ ತಂದೆ ಅಂತೂ ನಿನ್ನ ಮದುವೆ ನೋಡೊಕೆ ಆಗ್ಲಿಲ್ಲ. ನಾನು ಇರುವಾಗಲೇ ಮದುವೆ ಆಗಿಬಿಡು ಎಂದಿದ್ದರು. ತಾಯಿ, ತಮ್ಮ, ತಂಗಿಯರು ಸೇರಿ 5 ಜನರಿಗಾಗಿ ದುಡಿಯುವುದೇ ಕಷ್ಟ ಎನ್ನುವ ಸಮಯದಲ್ಲಿ ಮದುವೆ ಮಾಡಿಕೊಂಡರೆ ಹೇಗೆ? ಇನ್ನೊಂದು ಜೀವ ಬಂದರೆ ಜೀವನ ಮತ್ತಷ್ಟು ಕಷ್ಟವಾಗುತ್ತದೆ ಎಂದು ಅಣ್ಣಾವ್ರು ಭಾವಿಸಿದ್ದರಂತೆ. ಆದರೂ ತಾಯಿ ಮಾತಿಗೆ ಕಟ್ಟಿಬಿದ್ದು ಮದುವೆಗೆ ಒಪ್ಪಿಕೊಂಡಿದ್ದರು.
ಮಾವನ ಬಳಿ ಹೋಗಿ ಮದುವೆ ಮಾತುಕತೆ ನಡೆಸಿ ಬಂದ ಅಣ್ಣಾವ್ರು ಮದುವೆ ಖರ್ಚಿಗೆ ಹಣ ಹೊಂದಿಸಲು ಮುಂದಾಗಿದ್ದರು. ಸುಬ್ಬಯ್ಯ ನಾಯ್ಡು ಅವರು 800 ರೂಪಾಯಿ ಸಾಲ ಕೊಡ್ತೀನಿ ಎಂದಾಗ ತಗೊಳ್ಳೋದಾ ಬೇಡ್ವಾ? ಎನ್ನುವ ಗೊಂದಲಕ್ಕೆ ಸಿಲುಕ್ಕಿದ್ದರಂತೆ. ಸಾಲ ಪಡೆಯದೇ ಬೇರೆ ವಿಧಿ ಇರಲಿಲ್ಲ. ಸಂಗಪ್ಪ ಎಂಬುವವರು ತಮ್ಮ ಊರಿನಲ್ಲಿ ನಾಟಕ ಮಾಡಿಸಲು ಮುತ್ತುರಾಜ್ ಅವರಿಂದ ಕೆಲವರಿಗೆ ತರಬೇತಿ ಕೊಡಿಸಿದ್ದರು. ಅದಕ್ಕೆ ಸಂಭಾವನೆಯಾಗಿ 300 ರೂಪಾಯಿ ಕೊಟ್ಟಿದ್ದರು. ಹೀಗೆ ಒಟ್ಟು 1100 ರೂಪಾಯಿ ಖರ್ಚಿನಲ್ಲಿ ಪಾರ್ವತಮ್ಮ ಅವರನ್ನು ಮುತ್ತುರಾಜ್ ಮದುವೆ ಮಾಡಿಕೊಂಡಿದ್ದರು.
ಮದುವೆ ಚಪ್ಪರಕ್ಕೆ ಹಿಂದಿನ ದಿನ ಕೂಡ ಮುತ್ತುರಾಜ್ ನಾಟಕದಲ್ಲಿ ನಟಿಸೋಕೆ ಹೋಗಿದ್ದರು. ಮದುವೆ ಬಳಿಕ ಎರಡೂ ಮನೆಗಳ ಕಡೆ ಯಾರಿಗೆ ಹೆಚ್ಚು ಮುಯ್ಯಿ ಬಂದಿದೆ ಎನ್ನುವ ಕುತೂಹಲ ಮುತ್ತುರಾಜ್ ಅವರಿಗಿತ್ತಂತೆ. ಕೊನೆಗೆ ಲೆಕ್ಕ ಹಾಕಿದಾಗ ಪಾರ್ವತಮ್ಮ ಅವರಿಗೆ 30 ರೂಪಾಯಿ ಹಾಗೂ ಮುತ್ತುರಾಜ್ ಅವರಿಗೆ 40 ರೂಪಾಯಿ ಮುಯ್ಯಿ ಹಣ ಬಂದಿತ್ತಂತೆ. ಮದುವೆಗೆ ಬಂದವರು ವಾಪಸ್ ಮನೆಗೆ ಹೋಗಲು ಆ ಮುಯ್ಯಿ ಹಣದಲ್ಲೇ ಅಣ್ಣಾವ್ರು ಹಣ ಕೊಟ್ಟು ಕಳುಹಿಸಿದ್ದರಂತೆ.
ನಂಜನಗೂಡಿನ ನಾಗಪ್ಪ ಎಂಬುವವರು ಮುತ್ತುರಾಜ್‌ಗೆ ಬಹಳ ಆಪ್ತರಾಗಿದ್ದರು. ಅವರು ಮದುವೆ ಒಂದು ಚಿನ್ನದ ಉಂಗುರವನ್ನು ಮುತ್ತುರಾಜ್ ಕೈಗೆ ತೊಡಿಸಿದ್ದರು. ಮದುವೆಗೆ ಸಿಕ್ಕಿದ್ದ ಅತಿದೊಡ್ಡ ಉಡುಗೊರೆ ಇದು. ಮದುವೆ ಬಳಿಕ 1100 ರೂಪಾಯಿಯಲ್ಲಿ ಕೇವಲ 40 ರೂಪಾಯಿ ಮಾತ್ರ ಮತ್ತುರಾಜ್ ಬಳಿ ಬಾಕಿ ಹಣ ಉಳಿದಿತ್ತು. ಮದುವೆ ಬಳಿಕ ಸುಬ್ಬಯ್ಯನಾಯ್ಡು ಕಂಪನಿಗೆ ಹೋದಾಗ ಅಲ್ಲಿದ್ದವರೆಲ್ಲಾ ಮದುವೆ ಊಟ ಹಾಕಿಸಬೇಕು ಕೇಳುತ್ತಾರೆ. ಖಂಡಿತ ಹಾಕಿಸೋಣ ಎಂದು ಅಡುಗೆ ಭಟ್ಟನ ಬಳಿ ಹೋಗಿ 40 ರೂಪಾಯಿ ಕೊಟ್ಟು ಎಲ್ಲರಿಗೂ ಊಟ ಮಾಡಿ ಬಡಿಸುವಂತೆ ಹೇಳಿದ್ದರಂತೆ. ಅದರಂತೆ ಎಲ್ಲರಿಗೂ ಮದುವೆ ಊಟ ಹಾಕಿಸಿದ್ದರು.
ಮದುವೆ ಬಳಿಕ ಮುತ್ತುರಾಜ್‌ಗೆ 'ಬೇಡರ ಕಣಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಚಿತ್ರಕ್ಕಾಗಿ ಸಂಭಾವನೆಯ ಅಡ್ವಾನ್ಸ್ ರೂಪದಲ್ಲಿ 900 ರೂಪಾಯಿ ಪಡೆದಿದ್ದರು. ಅದರಲ್ಲಿ 600 ರೂಪಾಯಿಯನ್ನು ಸುಬ್ಬಯ್ಯ ನಾಯ್ಡು ಅವರಿಗೆ ಸಾಲ ತೀರಿಸಿದ್ದರು. ಆ ಬಳಿಕ ಇನ್ನುಳಿದ 200 ರೂಪಾಯಿಯನ್ನು ಕೊಟ್ಟು ಸಾಲದಿಂದ ಮುಕ್ತಿ ಪಡೆದಿದ್ದರು. ಈ ವಿಚಾರಗಳನ್ನೆಲ್ಲಾ ಅಣ್ಣಾವ್ರು ತಮ್ಮ ಬಳಿ ಹಂಚಿಕೊಂಡಿದ್ದಾಗಿ ಪ್ರವೀಣ್ ನಾಯಕ್ ವಿವರಿಸಿದ್ದಾರೆ.


Click it and Unblock the Notifications