ಆಡಿಸಿ ನೋಡು..ಬೀಳಿಸಿ ನೋಡು ; ಡಾ.ರಾಜ್ ಕುಮಾರ್ 'ಕಸ್ತೂರಿ ನಿವಾಸ'ಕ್ಕೆ 53ರ ಹರೆಯ
ಕಸ್ತೂರಿ ನಿವಾಸ ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲೊಂದು. ಹತ್ತು ಹಲವು ದಾಖಲೆಯನ್ನ ಆ ಕಾಲಕ್ಕೆ ಬರೆದ ಡಾ.ರಾಜ್ ಕುಮಾರ್ ಅಭಿನಯದ ಈ ಮಹೋನ್ನತ ಚಿತ್ರಕ್ಕೆ ಈಗ 53ರ ಹರೆಯ. ಈ ಹಿನ್ನೆಲೆಯಲ್ಲಿ ಈ ಎವರ್ ಗ್ರೀನ್ ಸೂಪರ್ ಹಿಟ್ ಸಿನಿಮಾದ ಕುರಿತು ವಿಶೇಷ ಮಾಹಿತಿ ಇಲ್ಲಿದೆ.
ಹಾಗೇ ನೋಡಿದರೆ ಕಸ್ತೂರಿ ನಿವಾಸವನ್ನ ಡಾ.ರಾಜ್ ಕುಮಾರ್ ಕ್ಕಿಂತ ಮೊದಲು ತಮಿಳಿನ ಸೂಪರ್ ಸ್ಟಾರ್ ಶಿವಾಜಿ ಗಣೇಶನ್ ಮಾಡಬೇಕಿತ್ತು. ಆದರೆ, ತಮಿಳು ಚಿತ್ರ ಸಾಹಿತಿ ಜಿ.ಬಾಲಸುಬ್ರಮಣ್ಯಂ ಬರೆದಿದ್ದ ಕಥೆ ಶಿವಾಜಿ ಗಣೇಶನ್ ಅವರಿಗೆ ಅದ್ಯಾಕೋ ಇಷ್ಟವಾಗಲೇ ಇಲ್ಲ. ವಿಧಿ ಲಿಖಿತ.. ಆಕಸ್ಮಿಕವಾಗಿ ಕನ್ನಡ ಚಿತ್ರರಂಗದ ಶ್ರೇಷ್ಠ ಜೋಡಿ ದೊರೈ ಭಗವಾನ್ ಕಥೆಯನ್ನ ಕೇಳಿದರು. ಮೆಚ್ಚಿ ಇಲ್ಲಿನ ಪರಿಸರಕ್ಕೆ ಹೊಂದುವಂತೆ ಚಿತ್ರಕಥೆಯನ್ನ ರಚಿಸಿದರು.

ಡಾ.ರಾಜ್ ಕುಮಾರ್ ಕೂಡ ತಮ್ಮನ್ನ ತಾವು ಚಿತ್ರದಲ್ಲಿ ತೋಡಗಿಸಿಕೊಂಡರು. ಚಿ.ಉದಯ್ ಶಂಕರ್ ಸಂಭಾಷಣೆಯ ಜೊತೆ ಸಾಹಿತ್ಯದ ಜವಾಬ್ಧಾರಿಯನ್ನ ವಹಿಸಿಕೊಂಡರು. ಆರ್.ಎನ್.ಜಯಗೋಪಾಲ್, ವಿಜಯ ನಾರಾಸಿಂಹ ಕೂಡ ಚಿ.ಉದಯ್ ಶಂಕರ್ ಅವರ ಜೊತೆ ಹಾಡುಗಳನ್ನ ಬರೆಯಲು ಮುಂದಾದರು. ಚಿಟ್ಟಿ ಬಾಬು ಹಾಗೂ ಎನ್.ಜಿ.ರಾವ್ ಕ್ಯಾಮರಾ ವಿಭಾಗದ ಉಸ್ತುವಾರಿ ವಹಿಸಿಕೊಂಡರು. ಜಯಂತಿ , ಬಾಲಣ್ಣ, ರಾಜಾಶಂಕರ್, ಕೆ.ಎಸ್.ಅಶ್ವಥ್ , ಪುಟಾಣಿಯಾಗಿ ಬೇಬಿ ರಾಣಿ ಚಿತ್ರತಂಡವನ್ನ ಸೇರಿಕೊಂಡರು. ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾದ ಕೆ.ಸಿ.ಎನ್. ಗೌಡ್ರು ಚಿತ್ರಕ್ಕೆ ಬೇಕಿರುವ ಬಂಡವಾಳ ಹೂಡಲು ಮುಂದಾದರು. ಮುಂದಾಗಿದ್ದು ಇತಿಹಾಸ.
ಕೇವಲ ಹತ್ತೊಂಬತ್ತು ದಿನದಲ್ಲಿ ಸಿದ್ಧವಾದ ಕಸ್ತೂರಿ ನಿವಾಸ, ಡಾ.ರಾಜ್ ಕುಮಾರ್ ಹಾಗೂ ಆರತಿ ಅಭಿನಯದ ಮೊದಲ ಸಿನಿಮಾ ಕೂಡ ಹೌದು. ಚಿತ್ರದಲ್ಲಿ ತ್ಯಾಗಮಯಿಯಾಗಿ, ಭಗ್ನ ಪ್ರೇಮಿಯಾಗಿ, ಉದ್ಯಮಿಯಾಗಿ, ಗೆಳೆಯನಾಗಿ ಕಾಣಿಸಿಕೊಂಡ ಡಾ.ರಾಜ್ ಕುಮಾರ್ ಪಾತ್ರವನ್ನಆವಾಹಿಸಿಕೊಂಡು ನಟಿಸಿದ್ದರು. ಆ ಕುರುಚಲು ಗಡ್ಡ.. ಕಪ್ಪು ಕೋಟು ಪ್ಯಾಂಟು.. ಮೆಲ್ಲಗೆ ಹಾರುವ ಕೂದಲು.. ಮುಖದಲ್ಲಿ ಮಾಸದ ನಗೆ.. ಜೀವನದ ಕಷ್ಟಗಳು ಹಿಂಡಿ ಹಿಪ್ಪೆ ಮಾಡುತ್ತಿದ್ದರು ಕಣ್ಣಲ್ಲಿ ಹೊಳಪು .. ಮೊಗದಲ್ಲೂ ನಗು .. ಒಮ್ಮೆಲೇ ಹಾಗೆ ಜೀವನದ ಕಷ್ಟಗಳಿಗೆ ಸೆಟೆದು ನಿಂತಾಗ.. ಕಷ್ಟಗಳು ಸೆಟೆದು ನಮ್ಮಿಂದ ದೂರ ನಿಲ್ಲುತ್ತವೆ ಅನ್ನಿಸುವಷ್ಟರ ಮಟ್ಟಿಗೆ ರವಿ ಪಾತ್ರಕ್ಕೆ ಅಣ್ಣಾವ್ರು ಜೀವವನ್ನ ತುಂಬಿದ್ದರು.

ಚಿತ್ರೀಕರಣ ನಿಲ್ಲಿಸಿ ಎಂದು ಆರ್ಡರ್ ಮಾಡಿದ್ದರು ಕೆ.ಸಿ.ಎನ್ ಗೌಡ್ರು
ನಿಮಗೆ ಗೊತ್ತಿರಲಿ, ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದ ಸಮಯದಲ್ಲಿ, ಶೂಟಿಂಗ್ ನಿಲ್ಲಿಸಿ ಎಂದು ಬಿಟ್ಟಿದ್ದರು. ಯಾಕೆಂದರೆ ಕಪ್ಪು ಬಿಳುಪು ಬದಲು ಕಸ್ತೂರಿ ನಿವಾಸವನ್ನ ವರ್ಣರಂಜಿತವನ್ನಾಗಿಸುವ ಬಯಕೆ ಕೆ.ಸಿ.ಎನ್. ಗೌಡ್ರುಗೆ ಶುರುವಾಗಿತ್ತು. ಆದರೆ ಅದು ಸುಲಭವಾಗಿರಲಿಲ್ಲ. ಯಾಕೆಂದರೆ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತದಲ್ಲಿತ್ತು. ಇನ್ನೂ ಆ ಕಾಲಕ್ಕೆ ಕಲರ್ ಚಿತ್ರಕ್ಕೆ ಅದ್ರದ್ದೇ ಆದ ಖರ್ಚು-ವೆಚ್ಚ ಇತ್ತು. ಈ ಕಾರಣಕ್ಕೆ ದೊರೈ ಹಾಗೂ ಭಗವಾನ್ ಕಪ್ಪು ಬಿಳುಪುದಲ್ಲಿಯೇ ಮುಂದುವರೆಯೋಣ ಎಂಬ ಪಟ್ಟನ್ನೂ ಹಿಡಿದಿದ್ದರು.
ಆದರೆ, ಕೆ.ಸಿ.ಎನ್ ಗೌಡ್ರು ತಾವು ಹಿಡಿದ ಪಟ್ಟನ್ನ ಸಡಿಲಿಸಲಿಲ್ಲ. ಕೊನೆಗೆ ಡಾ.ರಾಜ್ ಕುಮಾರ್ ಅವರ ಬಳಿ ಮೂವರು ತೆರಳಿ ಚರ್ಚೆಯನ್ನ ಮಾಡಿದರು. ಆಗ ಎರಡು ಕಡೆ ವಾದ ವಿವಾದ ಆಲಿಸಿದ ಡಾ.ರಾಜ್ ಕುಮಾರ್, ನೋಡಿ ಯಜಮಾನ್ರೇ. ಮೊದಲೇ ಇದು ಶಿವಾಜಿ ಗಣೇಶನ್ ತಿರಸ್ಕರಿಸಿರುವ ಕಥೆ. ಈ ಕಾರಣಕ್ಕೆ ಸುಮ್ನೆ ಹೆಚ್ಚು ಖರ್ಚು ಮಾಡೋದು ಬೇಡ ಅನ್ಸುತ್ತೆ.

ಈಗ ಏಕಾಏಕಿ ಚಿತ್ರೀಕರಣ ನಿಲ್ಲಿಸಿದರೆ ಇಲ್ಲಿಯವರೆಗೆ ಆದ ಖರ್ಚು, ಶ್ರಮ ಎಲ್ಲವೂ ವ್ಯರ್ಥವಾಗುತ್ತೆ. ಇನ್ನೂ ಕನ್ನಡಿಗರು ಕಪ್ಪು ಬಿಳುಪಾ.. ಕಲರ್ ಸಿನಿಮಾನಾ ಎಂದು ನೋಡುವುದಿಲ್ಲ. ಚಿತ್ರ ಚೆನ್ನಾಗಿದ್ದರೆ ಕನ್ನಡಿಗರು ನೋಡಿಯೇ ನೋಡ್ತಾರೆ ಇಲ್ಲದೇ ಇದ್ದರೆ ಬಿಡ್ತಾರೆ ಈ ಚಿತ್ರವೂ ಅಷ್ಟೇ ! ಸುಮ್ನೆ ದುಡ್ಡು ಹೆಚ್ಚು ಖರ್ಚು ಮಾಡುವುದು ನನಗೆ ಇಷ್ಟ ಇಲ್ಲ ಎಂದರು. ಇನ್ನೇನು ಖುದ್ದು ಡಾ.ರಾಜ್ ಕುಮಾರ್ ಬೇಡ ಎಂದ ಮೇಲೆ ನಿರಾಶಾಭಾವದಿಂದ ಗೌಡರು ಅಲ್ಲಿಂದ ಹೊರ ನಡೆದರು.
ನಿಧಾನಕ್ಕೆ ಪ್ರೇಕ್ಷಕರನ್ನ ಸೆಳೆದ ಸಿನಿಮಾ
ಕಸ್ತೂರಿ ನಿವಾಸ ಚಿತ್ರವನ್ನ ಆರಂಭದಲ್ಲಿಯೇ ಕನ್ನಡಿಗರು ಮುಗಿ ಬಿದ್ದು ನೋಡಲಿಲ್ಲ. ಚಿತ್ರ ತೆರೆಗೆ ಬಂದು 09 ವಾರವಾದರೂ ಜನಸಂದಣಿ ಇರಲಿಲ್ಲ. ಆದರೆ ಆ ನಂತರ ಪ್ರೇಕ್ಷಕರ ಮಹಾಪೂರ ಹರಿದು ಬಂತು. ರಾಜ್ಯದೆಲ್ಲೆಡೆ ದೊಡ್ಡಮಟ್ಟದಲ್ಲಿ ಪ್ರತಿಕ್ರಿಯೆ ಸಿಗಲಾರಂಭಿಸಿತು. ಇದಕ್ಕೆ ಸಾಕ್ಷಿ ಅನ್ನುವಂತೆ ರಾಜ್ಯದ ಹಲವಾರು ಚಿತ್ರಮಂದಿರಗಳಲ್ಲಿ ಚಿತ್ರ 175 ದಿನ ಪೂರೈಸಿದರೆ, 16 ಚಿತ್ರಮಂದಿರಗಳಲ್ಲಿ 100 ವಾರ ಪೂರೈಸಿ ದಾಖಲೆಯನ್ನ ಬರೆಯಿತು.

ತಾವೇ ತಿರಸ್ಕರಿಸಿದ್ದ ಕಥೆಯನ್ನ ಒಪ್ಪಿ ನಟಿಸಿದ ಶಿವಾಜಿ ಗಣೇಶನ್
ಕಸ್ತೂರಿ ನಿವಾಸದ ಅಭೂತಪೂರ್ವ ಗೆಲುವಿನ ನಂತರ, ಹಿಂದೊಮ್ಮೆ ತಾವೇ ತಿರಸ್ಕರಿಸಿದ್ದ ಕಥೆಯನ್ನಮೆಚ್ಚಿ ಶಿವಾಜಿ ಗಣೇಶನ್ ತಮಿಳಿನಲ್ಲಿ ಚಿತ್ರವನ್ನ ರಿಮೇಕ್ ಮಾಡಿದರು. ಹಿಂದಿಯಲ್ಲಿ ಸಂಜೀವ್ ಕುಮಾರ್ ಡಾ.ರಾಜ್ ಕುಮಾರ್ ಅವರ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನವನ್ನ ಶಾಂದಾರ್ ಚಿತ್ರದಲ್ಲಿ ಮಾಡಿದರು.
ತಂದೆಯ ಆಸೆಯನ್ನ ಈಡೇರಿಸಿದ ಪುತ್ರ ಕೆ.ಸಿ.ಎನ್ ಮೋಹನ್
ಕೆ.ಸಿ.ಎನ್ ಗೌಡ್ರು ಕಂಡಿದ್ದ ಕನಸನ್ನ ಅವರ ಕಿರಿಯ ಪುತ್ರ ಕೆ.ಸಿ.ಎನ್ ಮೋಹನ್ ಪೂರ್ಣಗೊಳಿಸಿದರು. ಚಿತ್ರ ತೆರೆಗೆ ಬಂದು 43 ವರ್ಷಗಳ ನಂತರ ಕಸ್ತೂರಿ ನಿವಾಸ ಚಿತ್ರವನ್ನ ಬಣ್ಣದ ಲೇಪನದೊಂದಿಗೆ 2014ರ ನವೆಂಬರ್ 07ರಂದು ತೆರೆಗೆ ತಂದರು. ಹೆಚ್ಚು ಕಡಿಮೆ ಎರಡು ಕೋಟಿಯನ್ನ ಖರ್ಚು ಮಾಡಿ, ಚಿತ್ರವನ್ನ ವರ್ಣರಂಜಿತವನ್ನಾಗಿಸಿ ತಮ್ಮ ತಂದೆಗೆ ಈ ಮೂಲಕ ಗೌರವವನ್ನೂ ಸಲ್ಲಿಸಿದರು. ವಿಶೇಷ ಅಂದರೆ ಕಲರ್ ನಲ್ಲಿ ಬಂದ ಕಸ್ತೂರಿ ನಿವಾಸ ಕೂಡ ದೊಡ್ಡ ಮಟ್ಟದಲ್ಲಿ ಗೆಲುವನ್ನ ಕಂಡಿತ್ತು.
ಕಸ್ತೂರಿ ನಿವಾಸದಲ್ಲಿದ್ದವು ಸೂಪರ್ ಹಿಟ್ ಹಾಡುಗಳು
ಕಸ್ತೂರಿ ನಿವಾಸ'ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು. ವಿಶೇಷ ಅಂದರೆ ಚಿತ್ರದ ಆರಕ್ಕೆ ಆರು ಹಾಡು ಕೂಡ ಸೂಪರ್ ಹಿಟ್. ಅದ್ರಲ್ಲಿಯೂ 53 ವರ್ಷಗಾಳದ ಮೇಲೂ ಚಿತ್ರದಲ್ಲಿನ 'ಆಡಿಸಿ ನೋಡು ಬೀಳಿಸಿ ನೋಡು'.. ಹಾಡು ಸಂಗೀತ ಪ್ರಿಯರ ಮೇಲೆ ತನ್ನ ಹಿಡಿತ ಸಾಧಿಸಿದೆ ಅಂದರೆ ಎಂತಹವರಿಗೆ ಆದರೂ ಅದು ಅಚ್ಚರಿಯ ಸಂಗತಿಯೇ ಸರಿ
ಒಟ್ಟಿನಲ್ಲಿ ಕಪ್ಪು ಬಿಳುಪಿನ ಆ ಕಾಲದಲ್ಲಿ ಜನರ ಮನಸ್ಸು ನಿರ್ಮಲವಾಗಿತ್ತು, ಈ ರೀತಿಯ ಚಿತ್ರ, ನಾಯಕ ಉದಾರಿ, ಧರ್ಮ ನಿಷ್ಠ, ಇಂಥಹ ಉದಾತ್ತ ಪಾತ್ರಗಳಿಂದ ಕೂಡಿದ ನಾಯಕ, ಅಥವಾ ಕಥಾವಸ್ತು ಕಡಿಮೆ ಬರುತ್ತಿದ್ದ ಕಾಲದಲ್ಲಿ ಅಚಾನಕ್ ಈ ಚಿತ್ರ ಬಂದಾಗ ಪ್ರೇಕ್ಷಕರು ಹುಚ್ಚೆದ್ದು ನೋಡಿ ಸಂತಸ ಪಟ್ಟಿದ್ದರು. ಉತ್ತಮ ಸಂಭಾಷಣೆ, ಸಾಹಿತ್ಯ, ಹಾಡುಗಳು, ಅಭಿನಯ, ಕಣ್ಣು ಕೋರೈಸುವ ಬಣ್ಣ ಬಣ್ಣದ ಪಾತ್ರಗಳನ್ನ ಇವತ್ತು ಕೂಡ ಮರೆಯಲು ಸಾಧ್ಯ ಇಲ್ಲ


Click it and Unblock the Notifications











