"ವೀರಪ್ಪನ್ ಬಂಧನದಿಂದ ಅಣ್ಣಾವ್ರ ಬಿಡುಗಡೆಗೆ 50 ಕೋಟಿ ರೂ. ಕೊಟ್ಟಿದ್ದು ಯಾರಂದ್ರೆ?"; ಎ. ಎಂ. ಆರ್ ರಮೇಶ್
25 ವರ್ಷಗಳ ಹಿಂದೆ ಕನ್ನಡ ಕಣ್ಮಣಿ ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. 108 ದಿನಗಳ ಕಾಡಿನಲ್ಲಿ ಅಣ್ಣಾವ್ರು ಉಳಿಯುವಂತಾಗಿತ್ತು. ಬಳಿಕ ಬಿಡುಗಡೆಯಾಗಿ ವಾಪಸ್ ಬಂದಿದ್ದರು. ಅಂದು ಡಾ. ರಾಜ್ ಅವರನ್ನು ಬಿಡುಗಡೆ ಮಾಡಲು ವೀರಪ್ಪನ್ ಹಣದ ಬೇಡಿಕೆ ಇಟ್ಟಿದ್ದ. 20 ಕೋಟಿ ರೂ. ಕೊಟ್ಟು ಅವರನ್ನು ಬಿಡಿಸಿಕೊಂಡು ಬಂದಿದ್ದರು ಎನ್ನುವ ಊಹಾಪೋಹವಿದೆ.
2000ನೇ ಇಸವಿ ಜುಲೈ 30ರಂದು ಭೀಮನ ಅಮಾವಾಸ್ಯೆ ದಿನವೇ ಗಾಜನೂರಿನ ಮನೆಯಿಂದ ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಕರೆದುಕೊಂಡು ಹೋಗಿದ್ದ. ಅಣ್ಣಾವ್ರ ಜೊತೆಗೆ ಅಳಿಯ ಎಸ್. ಎ ಗೋವಿಂದರಾಜ್, ಸಂಬಂಧಿ ನಾಗೇಶ್ ಹಾಗೂ ನಾಗಪ್ಪ ಎಂಬುವವರನ್ನು ವೀರಪ್ಪನ್ ಅಪರಿಹರಿಸಿದ್ದನು. 108 ದಿನಗಳ ಕಾಲ ಆತನ ಜೊತೆ ಅಣ್ಣಾವ್ರು ಕಾಡುಮೇಡು ಅಲೆಯುಂತಾಗಿತ್ತು. ಕೊನೆಗೆ ಸಂಧಾನ ನಡೆದು ಅದೇ ವರ್ಷ ನವೆಂಬರ್ 15ರಂದು ಬಿಡುಗಡೆಯಾಗಿ ಬಂದಿದ್ದರು.

ವೀರಪ್ಪನ್‌ಗೆ ಕೋಟಿ ಕೋಟಿ ಹಣ ಕೊಟ್ಟು ಅಣ್ಣಾವ್ರನ್ನು ಬಿಡಿಸಿಕೊಂಡು ಬರಲಾಗಿತ್ತು ಎಂದು ಕೆಲವರು ಹೇಳುತ್ತಾರೆ. ಆದರೆ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದೇ ವಿಚಾರವಾಗಿ ನಿರ್ದೇಶಕ ಎ. ಎಂ. ರಮೇಶ್ ಮಾತನಾಡಿದ್ದಾರೆ. ಚಿಕ್ಕಂದಿನಿಂದ ಡಾ. ರಾಜ್‌ಕುಮಾರ್ ಸಿನಿಮಾಗಳನ್ನು ನೋಡಿ ಅಭಿಮಾನಿಯಾಗಿ ಅವರನ್ನು ಹತ್ತಿರದಿಂದ ನೋಡಿದವರು ಎ. ಎಂ. ರಮೇಶ್. ಡೈಲಿ ಮಾಧ್ಯಮ ಯೂಟ್ಯೂಬ್ ವಾಹಿನಿ ಸಂದರ್ಶನದಲ್ಲಿ ಅಣ್ಣಾವ್ರ ಕುರಿತು ಸಾಕಷ್ಟು ಸಂಗತಿಗಳನ್ನು ಅವರು ಬಿಚ್ಚಿಟ್ಟಿದ್ದಾರೆ.
ಕಾಡುಗಳ್ಳ ವೀರಪ್ಪನ್ ಕುರಿತು ಎ. ಎಂ. ಆರ್ ರಮೇಶ್ ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು. ಅದಕ್ಕಾಗಿ ಆತನ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದರು. ಆತನ ಪತ್ನಿ ಮುತ್ತುಲಕ್ಷ್ಮಿ ಸೇರಿದಂತೆ ಹಲವರನ್ನು ಭೇಟಿಯಾಗಿ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದರು. 'ವೀರಪ್ಪನ್' ಎಂಬ ವೆಬ್ ಸೀರಿಸ್ ಅನ್ನು ಕೂಡ ಕಟ್ಟಿಕೊಡುತ್ತಿದ್ದಾರೆ. ಅಣ್ಣಾವ್ರ ಬಿಡುಗಡೆಗೆ 20 ಕೋಟಿ ರೂ. ಹಣ ಕೊಟ್ಟಿದ್ದರಂತೆ ಹೌದಾ? ಎನ್ನುವ ಪ್ರಶ್ನೆಗೆ 20 ಕೋಟಿ ರೂ. ಅಲ್ಲ, 50 ಕೋಟಿ ರೂ. ಎಂದು ಎ. ಎಂ. ಆರ್ ರಮೇಶ್ ಹೇಳಿದ್ದಾರೆ.

"ಕಾಫಿ ಡೇ ಸಿದ್ದಾರ್ಥ್, ಡಿ. ಕೆ ಶಿವಕುಮಾರ್, ಆರ್. ವಿ ದೇವರಾಜ್ ಸೇರಿದಂತೆ ಸಾಕಷ್ಟು ಜನ ಹಣ ಕೊಟ್ಟಿದ್ದರು. ಹಣ ಸಂಗ್ರಹಿಸಿ ಅಣ್ಣಾವ್ರನ್ನು ಬಿಡಿಸಿಕೊಂಡು ಬರಲಾಗಿತ್ತು. ಸುಮಾರು ಜನ ತಮ್ಮ ಕೈಲಾದಷ್ಟು ಹಣ ಕೊಟ್ಟಿದ್ದರು. ಸರ್ಕಾರ ಇದಕ್ಕೆಲ್ಲಾ ಹಣ ಕೊಡುವುದಕ್ಕೆ ಸಾಧ್ಯವಿಲ್ಲ. ಕೊಡಲುಬಾರದು. ಸಿದ್ದಾರ್ಥ್ ಅವರು ಹಣ ಹೊಂದಿಸಿದ್ದರು. ರಾಕ್‌ಲೈನ್ ವೆಂಕಟೇಶ್ ಕೂಡ ಹಣ ಕೊಟ್ಟಿದ್ದರು. ಅಣ್ಣಾವ್ರನ್ನು ಹಿಡ್ಕೊಂಡು ಹೋಗಿದ್ದಕ್ಕೆ ಅಷ್ಟು ಹಣ ಕೊಟ್ಟಿದ್ದು. ಇಲ್ಲದಿದ್ದರೆ ಯಾಕೆ ಕೊಡುತ್ತಿದ್ದರು" ಎಂದು ಎ. ಎಂ. ಆರ್ ರಮೇಶ್ ತಿಳಿಸಿದ್ದಾರೆ.
"ಟಿಎನ್‌ಆರ್‌ಟಿ ಹಾಗೂ ಟಿಎನ್‌ಎಲ್‌ಎ ಗ್ಯಾಂಗ್‌ನವರು ವೀರಪ್ಪನ್ ಜೊತೆ ಸೇರಿದ ಮೇಲೆ ಡಾ. ರಾಜ್‌ಕುಮಾರ್ ಅಪಹರಣದ ಪ್ಲ್ಯಾನ್ ಮಾಡಿದ್ದರು. ವೀರಪ್ಪನ್ ಹಣ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಸಮಯಲ್ಲಿ ಈ ಗ್ಯಾಂಗ್‌ನವರು ಹೋಗಿ ಆತನನ್ನು ಹುರಿದುಂಬಿಸಿ ಅಣ್ಣಾವ್ರನ್ನು ಕಿಡ್ನ್ಯಾಪ್ ಮಾಡುವಂತೆ ಮಾಡಿದ್ದರು" ಎಂದು ಎ. ಎಂ. ಆರ್ ರಮೇಶ್ ಹೇಳಿದ್ದಾರೆ.
ಅಣ್ಣಾವ್ರು ಅಪಹರಣವಾಗಿದ್ದ ಆ 108 ಕರಾಳ ದಿನಗಳನ್ನು ಕನ್ನಡಿಗರು ಮರೆಯೋಕೆ ಸಾಧ್ಯವಿಲ್ಲ. ಪ್ರತಿ ದಿನ ಪ್ರತಿ ಕ್ಷಣ ಆತಂಕದಲ್ಲೇ ದಿನದೂಡುವಂತಾಗಿತ್ತು. ಚಿತ್ರರಂಗದ ಚಟುವಟಿಕೆಗಳು ಬಂದ್ ಆಗಿ ಸಂಕಷ್ಟ ಎದುರಾಗಿತ್ತು. ಡಾ. ರಾಜ್ ಕುಟುಂಬಸ್ಥರು, ಆಪ್ತರು ಕಣ್ಣೀರಿನಲ್ಲಿ ಕೈ ತೊಳೆಯುಂತಾಗಿತ್ತು. ಅಭಿಮಾನಿಗಳು ಕೂಡ ಆಘಾತಕ್ಕೆ ಒಳಗಾಗಿದ್ದರು. ಅಂತಿಮವಾಗಿ ಅಣ್ಣಾವ್ರು ಬಿಡುಗಡೆಯಾಗಿ ಬಂದಾಗ ಎಲ್ಲರಲ್ಲಿ ಸಂತಸ ಮನೆ ಮಾಡಿತ್ತು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಎ. ಎಂ. ಆರ್ ರಮೇಶ್ ರಿಯಲಿಸ್ಟಿಕ್ ಸಿನಿಮಾಗಳನ್ನು ಮಾಡಿ ಗೆದ್ದವರು. 'ಸಂತೋಷ' ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಬಳಿಕ 'ಸೈನೆಡ್' ಚಿತ್ರ ಮಾಡಿ ಸದ್ದು ಮಾಡಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಕಥೆಯನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದರು. ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ 'ಮಿಂಚಿನ ಓಟ' ಹಾಗೂ 'ಪೊಲೀಸ್ ಕ್ವಾರ್ಟರ್ಸ್' ಚಿತ್ರಗಳನ್ನು ನಿರ್ದೇಶನ ಮಾಡಿದ್ದರು.
ಕಾಡುಗಳ್ಳ ವೀರಪ್ಪನ್ ದುಷ್ಕೃತ್ಯಗಳ ಸುತ್ತಾ 2013ರಲ್ಲಿ 'ಅಟ್ಟಹಾಸ' ಸಿನಿಮಾ ಕಟ್ಟಿಕೊಟ್ಟಿದ್ದರು. ಚಿತ್ರದಲ್ಲಿ ವೀರಪ್ಪನ್ ಪಾತ್ರವನ್ನು ಕಿಶೋರ್ ನಿಭಾಯಿಸಿದ್ದರು. ಡಿಜಿಪಿ ಕೆ ವಿಜಯ್ ಕುಮಾರ್ ಐಪಿಎಸ್ ಪಾತ್ರದಲ್ಲಿ ಅರ್ಜುನ್ ಸರ್ಜಾ ನಟಿಸಿದ್ದರು. ಇನ್ನು ಅಣ್ಣಾವ್ರ ಪಾತ್ರವನ್ನು ಬಾಲಿವುಡ್ ನಟ ಸುರೇಶ್ ಒಬೆರಾಯ್ ನಿಭಾಯಿಸಿದ್ದರು. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಸಿನಿಮಾ ತೆರೆಕಂಡು ಸದ್ದು ಮಾಡಿತ್ತು.


Click it and Unblock the Notifications











