ಡಾ. ರಾಜ್ ಅಂತ್ಯಕ್ರಿಯೆ ವೇಳೆ ತಪ್ಪು ನಡೆದದ್ದು ಎಲ್ಲಿ? ಗಲಾಟೆಯಲ್ಲಿ ಸತ್ತವರೆಷ್ಟು ಜನ?
ಕನ್ನಡ ನಾಡಿನ ಅಸ್ಮಿತೆ, ಸಾಕ್ಷಿಪ್ರಜ್ಞೆ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಇಂದು ನಮ್ಮೊಂದಿಲ್ಲ. ವರನಟ ನಮ್ಮಿಂದ ದೂರವಾಗಿ ವರ್ಷಗಳೇ ಕಳೆದಿದೆ. ಆದರೆ ಅಭಿಮಾನಿಗಳ ಮನದಲ್ಲಿ ಅಣ್ಣಾವ್ರು ಸದಾ ಜೀವಂತ. ದೈಹಿಕವಾಗಿ ಅವರು ನಮ್ಮೊಂದಿಗೆ ಇಲ್ಲದೇ ಇದ್ದರೂ ತಮ್ಮ ಸಿನಿಮಾಗಳು, ವ್ಯಕ್ತಿತ್ವದಿಂದ ಸದಾ ಜೀವಂತವಾಗಿರುತ್ತಾರೆ.
ಡಾ. ರಾಜ್‌ಕುಮಾರ್ ಅಭಿಮಾನಿ ಬಳಗ ಎಷ್ಟು ದೊಡ್ಡದು ಎಂದು ಬಿಡಿಸಿ ಹೇಳುವುದು ಬೇಕಿಲ್ಲ. ಮುತ್ತುರಾಜನಿಗಾಗಿ ಜೀವ ಬಿಡಲು ಸಿದ್ಧರಿರುವ ಅಭಿಮಾನಿಗಳಿದ್ದಾರೆ. ಏಪ್ರಿಲ್ 12, 2006ರಂದು ಅಣ್ಣಾವ್ರು ಇನ್ನಿಲ್ಲ ಎನ್ನುವ ಸುದ್ದಿ ಕೇಳಿದಾಗ ಅಭಿಮಾನಿಗಳ ಹೃದಯ ನುಚ್ಚು ನೂರಾಗಿತ್ತು. ಅಂತ್ಯಕ್ರಿಯೆ ವೇಳೆ ಸಾವಿರಾರು ಜನ ಬೀದಿಗಿಳಿದು ಅಲ್ಲೋಲ ಕಲ್ಲೋಲವಾಗಿತ್ತು. ಅಣ್ಣಾವ್ರ ಪಾರ್ಥೀವ ಶರೀರಕ್ಕೆ ಕುಟುಂಬಸ್ಥರು ಪೂಜೆ ಸಲ್ಲಿಸಿ ಸುಗಮವಾಗಿ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದು ಡಾ. ರಾಜ್ ಅಂತಿಮ ಯಾತ್ರೆ ಹಿಂಸಾಚಾರಕ್ಕೆ ತಿರುಗಿ ಗಲಾಟೆಯಲ್ಲಿ ಅಭಿಮಾನಿಗಳು ಪ್ರಾಣ ಕಳೆದುಕೊಳ್ಳುವಂತಾಗಿತ್ತು.

ಖ್ಯಾತನಾಮರು ನಿಧನರಾದಾಗ ಅಂತ್ಯಕ್ರಿಯೆ ವೇಳೆ ಅಹಿತಕರ ಘಟನೆಗಳು ನಡೆದಿರುವ ಸಾಕಷ್ಟು ಉದಾಹರಣೆಗಳಿದೆ. ಅಣ್ಣಾವ್ರ ಅಂತಿಮ ದರ್ಶನಕ್ಕೆ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರ್ತಾರೆ ಎಂದು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಊಹಿಸುವಲ್ಲಿ ವಿಫಲವಾಗಿತ್ತು. ಸರಿಯಾದ ಭದ್ರತೆ ಇಲ್ಲದೇ ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಭಾರೀ ಗಲಾಟೆಗಳು ನಡೆದಿದ್ದವು. ಮುತ್ತುರಾಜ ಅಭಿಮಾನಿಗಳ ಅಭಿಮಾನ ಹೇಗಿತ್ತು ಎಂದು ಅಂದು ಕಣ್ಣಾರೆ ಕಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.
"ಅಣ್ಣಾವ್ರ ಅಭಿಮಾನಿಗಳ ಅಭಿಮಾನ ಎಂಥದ್ದು ಎಂದು ನಾವು ಬೇರೆ ಬೇರೆ ಸಂದರ್ಭಗಳಲ್ಲಿ ನೋಡಿಕೊಂಡು ಬಂದಿದ್ದೆವು. ಅಣ್ಣಾವ್ರು ನಿಧನರಾದರೆ ಅಭಿಮಾನಿಗಳನ್ನು ನಿಯಂತ್ರಿಸುವುದು ಹೇಗೆ? ಎಂದು ನಾವು ಮಾತನಾಡಿಕೊಂಡಿದ್ದು ಇದೆ. ಅಂತಹ ದಿನ ಬಂಬೇಬಿಡ್ತು. ಅಣ್ಣಾವ್ರಿಗೆ ಹೃದಯಾಘಾತವಾದಾಗ ಎಂ. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಣ್ಣಾವ್ರು ಇನ್ನಿಲ್ಲ ಎನ್ನುವ ಸುದ್ದಿ ಹೊರ ಬೀಳುತ್ತಿದ್ದರು. ಜನ ಗೊಂದಲಗೊಂಡಿದ್ದರು. ಜನ ಏಕಾಏಕಿ ಮನೆಯಿಂದ ಹೊರಗೆ ಬಂದಿದ್ದರು. ರಸ್ತೆಗಳಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಅಂತಿಮ ದರ್ಶನ ಎಲ್ಲಿ, ಅಂತ್ಯಕ್ರಿಯೆ ಎಲ್ಲಿ, ನಾವು ಅಂತಿಮ ದರ್ಶನ ಪಡೆಯಬಹುದಾ? ಎಂದು ಜನ ಗೊಂದಲಕ್ಕೀಡಾಗಿದ್ದರು" ಎಂದು ಎಸ್.ಕೆ. ಉಮೇಶ್ ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ಉಮೇಶ್ "ಅಣ್ಣಾವ್ರ ಪಾರ್ಥೀವ ಶರೀರ ಸದಾಶಿವನಗರಕ್ಕೆ ಬರುವ ವೇಳೆಗೆ ಬೆಂಗಳೂರಿನ ಕೆಲ ರಸ್ತೆಗಳು ಜಾಮ್ ಆಗಿದ್ದವು. ನಾವು ಕೂಡ ಕಾರ್ಪೋರೇಷನ್ ಸರ್ಕಲ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದೆವು. ಕೆ. ಆರ್ ಸರ್ಕಲ್‌ನಿಂದ ನಮ್ಮ ವಾಹನಗಳನ್ನು ಬಿಟ್ಟು ಸದಾಶಿವನಗರಕ್ಕೆ ಓಡಿಕೊಂಡು ಹೋಗಿದ್ದೆವು. ಮನೆ ಮುಂದೆ ಜನಸಾಗರವೇ ಜಮಾಯಿಸಿತ್ತು. ಡಾ. ರಾಜ್ ಮನೆಯ ಸುತ್ತಾಮುತ್ತಲಿನ ಮನೆಗಳ ಮೇಲೆಲ್ಲಾ ಜನ ಹತ್ತಿದ್ದರು. ನಾವು ಪೊಲೀಸ್ ವಾಹನಗಳನ್ನು ತೆಗೆಯಲು ಮುಂದಾದಾಗ ಜನ ರೊಚ್ಚಿಗೆದ್ದರು. ನಮ್ಮನ್ನು ತಡೆಯಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಭಾವಿಸಿ ಗಲಾಟೆ ಶುರು ಮಾಡಿದರು. ಪೊಲೀಸ್ ವಾಹನಗಳ ಮೇಲೆ ಮುಗಿಬಿದ್ದರು. ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಆ ಸನ್ನಿವೇಶ ನನ್ನ ಜೀವನದಲ್ಲಿ ಮತ್ತೆ ನೋಡೊಕೆ ಸಾಧ್ಯವಿಲ್ಲ" ಎಂದಿದ್ದಾರೆ.
"ಗಣ್ಯರ ಅಂತಿಮ ದರ್ಶನಕ್ಕೆ ಬಂದಾಗ ಅವರ ವಾಹನಗಳಿಗೆ ಅನುವು ಮಾಡಿಕೊಂಡಲು ಮುಂದಾದಾಗ ಅಭಿಮಾನಿಗಳು ಮತ್ತಷ್ಟು ರೊಚ್ಚಿಗೆದ್ದರು. ಪೊಲೀಸರು ಏನು ಮಾಡದ ಸ್ಥಿತಿ ನಿರ್ಮಾಣವಾಯಿತು. ಅಷ್ಟರಲ್ಲಾಗಲೇ 70 ಸಾವಿರ ಜನ ಅಲ್ಲಿ ಜಮಾಯಿಸಿದರು. ಸಾಕಷ್ಟು ವಾಹನಗಳನ್ನು ಸುಟ್ಟು ಹಾಕಿದರು. ಕೊನೆಗೆ ಅರಮನೆ ಮೈದಾನಕ್ಕೆ ಅಣ್ಣಾವ್ರ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲು ಅಭಿಮಾನಿಗಳು ಮುಂದಾದರು. ಹರಸಾಹಸಪಟ್ಟು ವಾಹನವನ್ನು ಮರಳಿ ಮನೆಗೆ ತೆಗೆದುಕೊಂಡೆವು. ಅಷ್ಟರಲ್ಲಿ ಪೊಲೀಸರು ಸುಸ್ತಾಗಿದ್ದರು. ಯಾವುದೇ ಸಿದ್ಧತೆ ಇಲ್ಲದೇ ಏಕಕಾಲಕ್ಕೆ ಲಕ್ಷಾಂತರ ಜನರನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆಗೂ ಕಷ್ಟ" ಎಂದು ಉಮೇಶ್ ತಿಳಿಸಿದ್ದಾರೆ.
ಮರುದಿನ ಕಂಠೀರವ ಸ್ಟೇಡಿಯಂನಲ್ಲಿ ಅಣ್ಣಾವ್ರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಗ ಏನು ಸಮಸ್ಯೆ ಆಗಲ್ಲ ಎಂದುಕೊಂಡಿದ್ದೆವು. ಮೊದಲ ದಿನಕ್ಕಿಂತ ಎರಡುಪಟ್ಟು ಜನ ಬರಬಹುದು ಎಂದು ನಿರೀಕ್ಷಿಸಿದ್ದೆವು. ಬಳಿಕ ಏನೆಲ್ಲಾ ಆಯಿತು ಎಂದು ಉಮೇಶ್ ಮೆಲುಕು ಹಾಕಿದ್ದಾರೆ. ಕಂಠೀರವ ಸ್ಟೇಡಿಯಂ ಸುತ್ತಾಮುತ್ತಾ ಬೆಳಗ್ಗೆ 3 ಗಂಟೆಗೆ ಲಕ್ಷಾಂತರ ಜನ ಜಮಾಯಿಸಿದ್ದರು. 50 ಸಾವಿರ ಜನರನ್ನು ಸ್ಟೇಡಿಯಂ ಒಳಗೆ ಕಳುಹಿಸಿ ಕೂರಿಸಲು ಪ್ರಯತ್ನಿಸಿದೆವು. ಅಂತೂ ಇಂತೂ ಪಾರ್ಥೀವ ಶರೀರ ತಂದಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಸಾಕಷ್ಟು ಜನ ಮಹಿಳೆಯರು ಅಣ್ಣಾವ್ರ ಅಂತಿಮ ದರ್ಶನಕ್ಕೆ ಬಂದಿದ್ದರು. ಹಾಗಾಗಿ ಎಲ್ಲರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾಗಿತ್ತು. ಒಮ್ಮೆ ಜನ ಒಳಕ್ಕೆ ನುಗ್ಗಿ ಮತ್ತೆ ಅವರನ್ನು ನಿಯಂತ್ರಿಸಲು ಸಮಸ್ಯೆ ಎದುರಿಸಲಾಯಿತು. ಕೆಲವರು ಪದೇ ಪದೆ ಬಂದು ಅಣ್ಣಾವ್ರ ಅಂತಿಮ ದರ್ಶನಕ್ಕೆ ಬಂದು ಪಜೀತಿ ಆಯಿತು. ಜನ ಕಮ್ಮಿ ಆಗಲಿಲ್ಲ. ಕೆಲ ಸೆಲೆಬ್ರೆಟಿಗಳು, ರಾಜಕಾರಣಿಗಳು ಬಂದು ಅಂತಿಮ ದರ್ಶನ ಪಡೆದು ಹೋದರು. ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲು ಮುಂದಾದೆವು.
ಅಣ್ಣಾವ್ರ ಪಾರ್ಥೀವ ಶರೀರ ತೆಗೆದುಕೊಂಡು ಹೋಗುತ್ತಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಇದ್ದಕ್ಕಿಂದಂತೆ ಜನ ಒಮ್ಮೆ ಸ್ಟೇಡಿಯಂ ಒಳಕ್ಕೆ ನುಗ್ಗಿದರು. ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಆರಂಭಿಸಿದರು. ಟಿಯರ್ ಗ್ಯಾಸ್ ಓಪನ್ ಮಾಡಿದರು. ಪೊಲೀಸರ ಮೇಲೆ ಜನ ದಾಳಿ ಮಾಡಲು ಮುಂದಾದರು. ಸಿದ್ದಲಿಂಗಯ್ಯ ಸರ್ಕಲ್ ಬಳಿ ನಿಲ್ಲಿಸಿದ್ದ ಪೊಲೀಸ್ ವಾಹನದ ಮೇಲೆ ದಾಳಿ ಮಾಡಿದರು. ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಥಳಿಸಿದರು. ಪೊಲೀಸ್ ಸಿಬ್ಬಂದಿ ಒಬ್ಬರು ಜೀವ ಕಳೆದುಕೊಂಡರು. ಅದಕ್ಕೆ ಸಂಬಂಧಿಸಿದ ವಿಷ್ಯುವಲ್ಸ್ ನಮ್ಮ ಬಳಿ ಇದೆ ಎಂದು ಉಮೇಶ್ ವಿವರಿಸಿದ್ದಾರೆ.
ಇಂತಹ ಘಟನೆಗಳು ನಡೆದಾಗ ಎಲ್ಲಾ ಮನಸ್ಥಿತಿಯ ಜನ ಬರುತ್ತಾರೆ. ತಮಗೆ ಏನಾದರೂ ಸಮಸ್ಯೆ ಅಂದಾಗ ಕೆಲವರು ಹುಚ್ಚರಂತೆ ವರ್ತಿಸಲು ಮುಂದಾಗುತ್ತಾರೆ. ಜನ ವಾಹನಗಳನ್ನು ಜಖಂಗೊಳಿಸಿ ಬೆಂಕಿ ಹಂಚಿದ್ದರು. ಆ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪೊಲೀಸ್ ಇಲಾಖೆಗೆ ಅದು ಕೆಟ್ಟ ದಿನ. ಬಳಿಕ ಅಂತಿಮ ಯಾತ್ರೆ ಶುರುವಾಯಿತು. ವಿಂಡ್ಸರ್ ಮ್ಯಾನರ್ ಮೂಲಕ ಕಂಠೀರವ ಸ್ಟುಡಿಯೋಗೆ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲು ನಿರ್ಧರಿಸಲಾಯಿತು ಎಂದು ಅಂತಿಮಯಾತ್ರೆ ಬಗ್ಗೆ ಉಮೇಶ್ ಮಾಹಿತಿ ನೀಡಿದ್ದಾರೆ.
ಅಂತಿಮ ಯಾತ್ರೆ ವೇಳೆಯೂ ಕೆಲವರು ಕಲ್ಲುಗಳನ್ನು ತೋರಿದರು. ಪಾರ್ಥೀವ ಶರೀರ ಕೊಂಡೊಯ್ಯುವ ವೇಳೆಗೆ ಕಂಠೀರವ ಸ್ಟುಡಿಯೋ ಸುತ್ತಾ ಮುತ್ತಾ ಸಾವಿರಾರು ಜನ ಸೇರಿಬಿಟ್ಟಿದ್ದರು. ಅಂತೂ ಇಂತೂ ಅಭಿಮಾನಿಗಳ ನಡುವೆ ಅಂತಿಮ ಕ್ರಿಯೆ ನಡೆಯಬೇಕಿದ್ದ ಜಾಗಕ್ಕೆ ಅಣ್ಣಾವ್ರ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲಾಯಿತು. ಕೆಲ ವಿಐಪಿಗಳು ಅಲ್ಲಿಗೆ ಬರಲು ಆರಂಭಿಸಿದರು. ಅಂತ್ಯಕ್ರಿಯೆ ವಿಧಿ ವಿಧಾನ ಶುರುವಾಗುತ್ತಿದ್ದಂತೆ ಜನ ಒಮ್ಮೆಲೆ ಮತ್ತೆ ನುಗ್ಗಿಬಿಟ್ಟರು. ಏನು ಮಾಡೋಕೆ ಆಗಲಿಲ್ಲ ಎಂದು ಉಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಂತ್ಯಕ್ರಿಯೆ ವೇಳೆಯೂ ಕೆಲವರು ಕಲ್ಲು ಎಸೆದರು. ನಾವು ಚೇರ್‌ಗಳನ್ನು ತಲೆಮೇಲೆ ಇಟ್ಟುಕೊಂಡು ನಮ್ಮನ್ನು ರಕ್ಷಿಸಿಕೊಳ್ಳುವಂತಾಯಿತು. ಆ ಭಾವೋದ್ವೇಗವನ್ನು ತಡೆಯೋಕೆ ಆಗಲಿಲ್ಲ. ಅಭಿಮಾನಿಗಳ ಅಭಿಮಾನ ಅಂಥದ್ದು. ಕುಟುಂಬ ಸದಸ್ಯರು ಸರಿಯಾಗಿ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ. ಅಣ್ಣಾವ್ರ ಅಂತಿಮ ದರ್ಶನ ಸಿಗಲಿಲ್ಲ ಎಂದು ಕೆಲವರು ರೊಚ್ಚಿಗೆದ್ದರು. ಎಲ್ಲಾ ಮುಗಿದ ಬಳಿಕ ಗಲಭೆ ಮಾಡಿದವರ ವಿರುದ್ಧ ಸಾಕಷ್ಟು ಕೇಸ್ ದಾಖಲಾಯಿತು. ಗಲಾಟೆಯ ಫೋಟೊ, ವೀಡಿಯೋ ಆಧರಿಸಿ ಸಾಕಷ್ಟು ಜನರನ್ನು ಬಂಧಿಸಲಾಯಿತು. ವಾಹನಗಳಿಗೆ ಬೆಂಕಿ ಇಟ್ಟಿದ್ದು ಯಾಕೆ, ಗಲಾಟೆ ಮಾಡಿದ್ದು ಯಾಕೆ ಎಂದು ಕೆಲವರನ್ನು ಕೇಳಿದರೆ "ಸರ್ ಹೊಟ್ಟೆ ಉರಿಯುತ್ತದೆ ಸರ್, ಅಣ್ಣಾವ್ರು ಹೋಗಿಬಿಟ್ಟರು, ನೋಡೋಕ್ಕಾಗಲಿಲ್ಲ, ಅದಕ್ಕೆ ಹಾಗೆ ಮಾಡಿದೆ ಎಂದರು. ಅಂದರೆ ಜನರ ಹುಚ್ಚು ಅಭಿಮಾನದಿಂದ ಅಷ್ಟೆಲ್ಲಾ ಆಯಿತು. ಬೇರೆ ಏನು ಕಾರಣ ಇರಲಿಲ್ಲ ಎನ್ನುವುದು ನಮಗೆ ಗೊತ್ತಾಯಿತು ಎಂದು ಉಮೇಶ್ ಇಡೀ ಘಟನೆ ವಿವರಿಸಿದ್ದಾರೆ.


Click it and Unblock the Notifications











