ಅಣ್ಣಾವ್ರ ಆ ಕನಸು ನನಸಾಗಲಿಲ್ಲ.. ವೀರಪ್ಪನ್ ಕಾರಣಕ್ಕೆ ಕೊನೆ ದಿನಗಳಲ್ಲಿ ಕಾಡಿತ್ತು ಅದೊಂದು ಕೊರಗು
200ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ ವರನಟ ಡಾ. ರಾಜ್‌ಕುಮಾರ್ ಕೊನೆ ಕೊನೆಗೆ ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿದ್ದರು. ಸಾಕಷ್ಟು ಜನ ಅಣ್ಣಾವ್ರನ್ನು ಮತ್ತೆ ತೆರೆಮೇಲೆ ತೋರಿಸುವ ಪ್ರಯತ್ನ ಮಾಡಿದ್ದರು. ಆದರೆ ಪ್ರಯೋಜನವಾಗಲಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ರೆ 'ಭಕ್ತ ಅಂಬರೀಷ' ಮುತ್ತುರಾಜ್ ನಟನೆಯ ಕೊನೆಯ ಸಿನಿಮಾ ಆಗಬೇಕಿತ್ತು. ಅದು ಸಾಧ್ಯವಾಗಲೇ ಇಲ್ಲ. ಸಾಂಗ್ ರೆಕಾರ್ಡಿಂಗ್ ಮುಗಿಸಿ ಚಿತ್ರೀಕರಣ ಶುರು ಮಾಡಬೇಕು ಎಂದುಕೊಳ್ಳುವ ವೇಳೆಗೆ ಎಲ್ಲವೂ ವ್ಯರ್ಥವಾಗಿತ್ತು.
ಅಣ್ಣಾವ್ರು ನಟಿಸಬೇಕಿದ್ದ ಕೆಲ ಸಿನಿಮಾಗಳು ಶುರುವಾಗಿ ನಿಂತು ಹೋಗಿತ್ತು. ಅಮೋಘ ವರ್ಷ ನೃಪತುಂಗ ಸೇರಿ ಕೆಲ ಸಿನಿಮಾಗಳು ಬರೀ ಘೋಷಣೆಗೆ ಸೀಮಿತವಾಯಿತು. ಆಡು ಮುಟ್ಟದ ಸೊಪ್ಪಿಲ್ಲ ಮುತ್ತುರಾಜ್ ಮಾಡದ ಪಾತ್ರಗಳಿಲ್ಲ. ಯಾವುದೋ ಪಾತ್ರ ಮಾಡುವ ಕನಸು ಕಂಡಿತ ಅಣ್ಣಾವ್ರಿಗೆ ಇರಲಿಲ್ಲ. 3ನೇ ಕ್ಲಾಸ್ ಓದಿ ನಾಟಕಗಳಲ್ಲಿ ನಟಿಸುತ್ತಿದ್ದ ಮುತ್ತುರಾಜನಿಗೆ ಸಿಕ್ಕಿದ್ದೆಲ್ಲವೂ ಬೋನಸ್. ತಮ್ಮ ಮೇರು ಶಿಖರ ಏರಿದು. ಹಾಗಾಗಿ ನಟಸಾರ್ವಭೌಮನಿಗೆ ಐಹಿಕ ಆಸೆಗಳು ಇರಲಿಲ್ಲ. ಆದರೆ ಹುಟ್ಟೂರಿನಲ್ಲಿ ವ್ಯವಸಾಯ ಮಾಡುವ ಆಸೆ ಡಾ. ರಾಜ್‌ಕುಮಾರ್‌ಗೆ ಇತ್ತು. ಆ ಕನಸಿಗೆ ವೀರಪ್ಪನ್ ಕಲ್ಲು ಹಾಕಿದ್ದ.

'ಬಂಗಾರದ ಮನುಷ್ಯ' ಚಿತ್ರದಲ್ಲಿ ಮಾದರಿ ರೈತ ರಾಜೀವನಾಗಿ ನಟಿಸಿ ಅಣ್ಣಾವ್ರು ಮಾಡಿದ ಮೋಡಿ ಗೊತ್ತೇಯಿದೆ. ನಿಜ ಜೀವನದಲ್ಲಿ ತಮ್ಮ ಕೊನೆಯ ದಿನಗಳನ್ನು ಮಣ್ಣಿನ ಮಗನಾಗಿ ಕಳೆಯಬೇಕು ಎಂದುಕೊಂಡಿದ್ದರು ಡಾ. ರಾಜ್‌ಕುಮಾರ್. ಅದೇ ಕಾರಣಕ್ಕೆ ಹುಟ್ಟೂರು ಗಾಜನೂರಿನಲ್ಲಿ ಮನೆ ಕಟ್ಟಿಸಿ, ಬೋರ್‌ವೆಲ್ ಹಾಕಿಸಿದ್ದರು. ಅಲ್ಲಿ ಭೂಮಿ ಹಸನು ಮಾಡಿ ಉತ್ತಿ ಬಿತ್ತಿ ಬೆಳೆದು ಮಣ್ಣಿನ ಋಣ ತೀರಿಸಬೇಕು ಎಂದು ಅಣ್ಣಾವ್ರ ಮನಸ್ಸು ತುಡಿಯುತ್ತಿತ್ತು.
'ಅನುರಾಗ ಅರಳಿತು' ಸಿನಿಮಾ ವೇಳೆಗೆ ಅಣ್ಣಾವ್ರು ನಟನೆಯಿಂದ ದೂರ ಉಳಿಯಲು ಮನಸ್ಸು ಮಾಡಿದ್ದರು. ಈ ವಿಚಾರವನ್ನು ಸ್ವತಃ ಪುತ್ರಿ ಪೂರ್ಣಿಮಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಆ ಬಳಿಕ ಅಭಿಮಾನಿಗಳು ಹಾಗೂ ಆಪ್ತರ ಒತ್ತಾಯಕ್ಕೆ ಮಣಿದು 10 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಕೊನೆ ಕೊನೆಗೆ ಮಕ್ಕಳು, ಮೊಮ್ಮಕ್ಕಳ ಜೊತೆ ವಿಶ್ರಾಂತ ಜೀವನ ಸಾಗಿಸುತ್ತಿದ್ದರು. ಹುಟ್ಟೂರಿನಲ್ಲಿ ವ್ಯವಸಾಯ ಮಾಡುವ ಕನಸು ಕಾಣುತ್ತಿದ್ದರು.

ಅಣ್ಣಾವ್ರ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಈ ಬಗ್ಗೆ ಮಾತನಾಡಿದ್ದಾರೆ. E - Maaye ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅಣ್ಣಾವ್ರ ಕೊನೆಯ ದಿನಗಳ ಮನಸ್ಥಿತಿ ಹೇಗಿರುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಅಣ್ಣಾವ್ರು ನಿಜ ಜೀವನದಲ್ಲಿ ಬಹಳ ಸರಳವಾಗಿದ್ದರು. ಶಿವಣ್ಣ ಹೇಳಿದಂತೆ ತೆರೆಮೇಲೆ ರಾಜಕುಮಾರನಂತೆ ಮೆರೆದರೂ ನಿಜಜೀವನದಲ್ಲಿ ಮುತ್ತುರಾಜನಾಗಿ ಇದ್ದುಬಿಟ್ಟರು.
ಯಾರೇ ಭೇಟಿಗೆ ಬಂದರೂ ಊರಿನಲ್ಲಿ ಮಳೆ ಆಯ್ತ, ಏನು ಬೆಳೆ ಬೆಳೆದಿದ್ದೀರಾ? ಕೆರೆಯಲ್ಲಿ ನೀರು ಇದ್ಯಾ? ದನ-ಕರುಗಳಿಗೆ ನೀರು, ಮೇವು ಸಿಗುತ್ತಿದ್ಯಾ ಹೀಗೆ ಅಣ್ಣಾವ್ರ ಮಾತಿನ ಲಹರಿ ಹರಿಯುತ್ತಿತ್ತು. ಡಾ. ರಾಜ್‌ಕುಮಾರ್ ಇದ್ದಿದ್ದೇ ಹಾಗೆ. ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದ ಅಣ್ಣಾವ್ರು ಎಲ್ಲೇ ಹೋದರೂ ಜನ ಮುತ್ತಿಕೊಳ್ಳುತ್ತಿದ್ದರು. ಆದರೂ ಆಗಾಗ್ಗೆ ಗಾಜನೂರಿಗೆ ಹೋಗಿ ಬರುತ್ತಿದ್ದರು. ಅಲ್ಲಿನ ಆಲದ ಮರದ ಕೆಳಗೆ ಕೂತು ವಿಶ್ರಾಂತಿ ಪಡೆಯುತ್ತಿದ್ದರು. ಸದಾ ಅವರ ಮನಸ್ಸು ಹುಟ್ಟೂರಿನ ಕಡೆಗೆ ತುಡಿಯುತ್ತಿತ್ತು.
"ಸಿನಿಮಾ ಜೀವನದ ಬಳಿಕ ಗಾಜನೂರಿಗೆ ಹೋಗಿ ರೈತನಾಗಿ ಒಂದಷ್ಟು ದಿನ ಬದುಕಬೇಕು ಎಂದು ಅಣ್ಣಾವ್ರು ಆಸೆಪಟ್ಟಿದ್ದರು. ಅದೇ ಕಾರಣಕ್ಕೆ ಅಲ್ಲಿ ಮನೆ ಕಟ್ಟಿಸಿದ್ರು. ಅವ್ರು ಅಲ್ಲೇ ನೆಲೆಸಲು ಮನಸ್ಸು ಮಾಡಿದ್ರು ಅನ್ನಿಸುತ್ತೆ. ಆದ್ರೆ ವೀರಪ್ಪನ್ ಅಪಹರಣ ಘಟನೆ ಬಳಿಕ ಮತ್ತೆ ಅವ್ರು ಊರಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಅದೊಂದು ಕೊರಗು ಅಣ್ಣಾವ್ರಿಗೆ ಖಂಡಿತ ಇತ್ತು" ಎಂದು ಪ್ರಕಾಶ್ ರಾಜ್ ಮೇಹು ಹೇಳಿದ್ದಾರೆ.


Click it and Unblock the Notifications