ಬೆಂಗಳೂರಿನ ಎಲ್ಲ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಿದ್ದೇಕೆ ರವಿಚಂದ್ರನ್ ?

ಕನ್ನಡ ಚಿತ್ರರಂಗದಲ್ಲಿ ಕನಸುಗಾರ ಅಂತಲೇ ಹೆಸರುವಾಸಿಯಾದವರು ವಿ.ರವಿಚಂದ್ರನ್. ಎಲ್ಲರೂ ಒಂದೇ ಬಗೆಯ ಚಿತ್ರಗಳನ್ನು ಮಾಡುತ್ತಿದ್ದಾಗ ರವಿಚಂದ್ರನ್ ಬೇರೆಯದ್ದೇ ಶೈಲಿಯ ಚಿತ್ರವನ್ನು ರೂಪಿಸಿ ಅಚ್ಚರಿಗೆ ದೂಡಿದ್ದರು. ಸದಾ ಒಂದಿಲ್ಲೊಂದು ಪ್ರಯೋಗಗಳನ್ನು ಮಾಡುತ್ತಾ, ಹಿಂದೆ ಮುಂದೆ ನೋಡದೆ ಚಿತ್ರಕ್ಕೆ ಹಣವನ್ನು ಹೂಡುತ್ತಾ ಬಂದ ರವಿಚಂದ್ರನ್ ಅದೆಷ್ಟೇ ದೊಡ್ಡ ಸಾಲ ಇದ್ದರು ಕೂಡ ಅಂಜಲಿಲ್ಲ. ಹಿಂದೆ ಸರಿಯಲಿಲ್ಲ.

ಬದಲಿಗೆ ಸಿನಿಮಾನೇ ನನ್ನುಸಿರು ಎಂದು ಸಿನಿಮಾವನ್ನೇ ಬದುಕಾಗಿಸಿಕೊಂಡಿರುವ ರವಿಚಂದ್ರನ್ ಮುನ್ನುಗ್ಗುತ್ತಾ ಬಂದರು. ಇನ್ನು ರವಿಚಂದ್ರನ್ ಕೇವಲ ನಟನಾಗಿ ಹೆಸರು ಮಾಡಿದವರಲ್ಲ. ಕಾಲಕ್ಕೆ ತಕ್ಕಂತೆ ತಾಂತ್ರಿಕವಾಗಿ ಅಪ್‌ ಡೇಟ್ ಆಗುತ್ತಾ ನಿರ್ದೇಶಕರಾಗಿ ಕೂಡ ಗೆದ್ದವರು. ಲಾಭ-ನಷ್ಟದ ಹೊರತಾಗಿ ನಿರ್ಮಾಪಕರಾಗಿ ಕೂಡ ಸೈ ಎನಿಸಿಕೊಂಡವರು. ಸಂಗೀತ ನಿರ್ದೇಶಕರಾಗಿ, ಸಾಹಿತಿಯಾಗಿ, ಸಂಕಲನಕಾರನಾಗಿ, ಗ್ರಾಫಿಕ್ ತಂತ್ರಜ್ಞರಾಗಿ, ಅಷ್ಟೇ ಅಲ್ಲ ತಮ್ಮ ಚಿತ್ರಗಳ ಪೋಸ್ಟರ್‌ಗಳನ್ನು ಕೂಡ ತಾವೇ ವಿನ್ಯಾಸ ಮಾಡಿಕೊಂಡವರು ರವಿಚಂದ್ರನ್.

Dr V Ravichandran recalls booking all the five-star hotels in Bangalore for the Shanti Kranti shoot

ಇಂಥಾ ರವಿಚಂದ್ರನ್ ತಮ್ಮ ಬದುಕಿನ ಮಹತ್ವದ ಚಿತ್ರ ಶಾಂತಿ ಕ್ರಾಂತಿ ಚಿತ್ರವನ್ನು ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ. ಆ ಚಿತ್ರದ ಕುರಿತು ಆಸಕ್ತಿಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುವ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಈ ವಾರ ಸರಿಗಮಪ ಕೂಡ ಸೇರಿಕೊಂಡಿದೆ. ಎರಡು ಕಾರ್ಯಕ್ರಮಗಳ ಮಹಾಸಂಗಮವಾಗಿದೆ. ಈ ಹಿನ್ನೆಲೆ ಶಾಂತಿ ಕ್ರಾಂತಿ ಚಿತ್ರದ ಪ್ರಸಿದ್ಧವಾದ ಹಾಡು ಮಧ್ಯರಾತ್ರಿಲೀ ಹೈವೆ ರಸ್ತೆಲಿ ಹಾಡನ್ನು ಹಾಡಲಾಗಿದೆ.

ಈ ಸಮಯದಲ್ಲಿ ಆ ದಿನಗಳನ್ನು ನೆನಪು ಮಾಡಿಕೊಂಡಿರುವ ರವಿಚಂದ್ರನ್ ಮಧ್ಯರಾತ್ರಿಯಲ್ಲಿ ಹಾಡನ್ನು ಮಧ್ಯರಾತ್ರಿ ಸೆರೆಹಿಡಿಯುವಾಗ ಏನೆಲ್ಲ ಆಯ್ತು, ಎಷ್ಟೆಲ್ಲ ಖರ್ಚು ಆಯ್ತು ಎನ್ನುವುದನ್ನು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ರವಿಚಂದ್ರನ್ ಈ ಹಾಡುಗಳನ್ನೆಲ್ಲ ಕೇಳಿದಾಗ ನನಗಂತೂ ರೋಮಾಂಚನ ಆಗುತ್ತೆ, ಇವತ್ತು ಕೂಡ ಹೇಗೆ ಮಾಡಿದ್ರಿ ಅಂತ ಕೇಳ್ತಾರೆ, ಆದರೆ ನನಗೆ ಇದೆಲ್ಲ ಹೇಗಾಯ್ತು ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ನನ್ನ ಪ್ರಕಾರ ಯಾವುದೇ ದುರಂಹಕಾರವಿಲ್ಲದಿದ್ದಾಗ, ಮುಗ್ದತೆ ಮತ್ತು ಶ್ರೇಷ್ಠತೆ ಸಮಾಗಮವಾದಾಗ ಹೀಗೆ ಆಗುತ್ತೆ ಎಂದು ಹೇಳಬಹುದು ಎಂದಿದ್ದಾರೆ.

ನಮ್ಮಪ್ಪ ಇಲ್ಲದೇ ಹೋಗಿದ್ದರೆ ಈ ಎಲ್ಲ ಕನಸು ಪರದೆ ಮೇಲೆ ಬರಲು ಸಾಧ್ಯವೇ ಆಗುತ್ತಿರಲಿಲ್ಲ ಎಂದಿರುವ ರವಿಚಂದ್ರನ್ ಅವರ ಪ್ರೀತಿ ಮತ್ತು ನಂಬಿಕೆಯಿಂದ ನನ್ನ ಪ್ರಯಾಣ ಶುರುವಾಯ್ತು, ಅವರು ನೀಡಿದ ಪ್ರೀತಿಯಿಂದಲೇ ಇಷ್ಟು ದೂರ ಬಂದಿದ್ದೇನೆ ಎಂದು ಹೇಳಿದ್ದಾರೆ.

ಇನ್ನು, ಮಧ್ಯರಾತ್ರಿಲೀ ಹೈವೇ ರಸ್ತೆಲಿ ಹಾಡಿನ ಕುರಿತು ಮಾತನಾಡಿರುವ ರವಿಚಂದ್ರನ್ ಈ ಹಾಡು 8 ನಿಮಿಷ ಇದೆ ಸಂಪೂರ್ಣ ಹಾಡನ್ನು ಎಂಜಿ ರೋಡ್‌ನಲ್ಲಿಯೇ ಚಿತ್ರೀಕರಣ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಇನ್ನು ಆ ಕಾಲಕ್ಕೆ 5 ಲಕ್ಷ ಖರ್ಚು ಮಾಡಿ ರೋಡ್ ಫುಲ್ ಒದ್ದೆ ಇರಬೇಕು ಅಂತ ನೀರು ಸುರಿಸಿದ್ವಿ, ಈ ಹಾಡನ್ನು 25 ದಿನ ಶೂಟಿಂಗ್ ಮಾಡಿದ್ವಿ, ಒಂದು ಟ್ಯಾಂಕ್ ನೀರು ಕೂಡ ಕಡಿಮೆ ಆಗಬಾರದು, ಅವನು ಏನು ಕೇಳುತ್ತಾನೆ ಅದೆಲ್ಲ ಕೊಡಿ ಅಂತ ಪ್ರೊಡಕ್ಷನ್ ಅವರಿಗೆ ನಮ್ಮಪ್ಪ ಹೇಳಿದ್ದರು ಎಂದಿರುವ ರವಿಚಂದ್ರನ್ ಪ್ರೊಡಕ್ಷನ್ ಖರ್ಚು ಅಂದರೆ ನನಗೆ ಗೊತ್ತಿರಲಿಲ್ಲ, ಇವತ್ತು ಕೂಡ ದುಡ್ಡಿನ ಬೆಲೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಶಾಂತಿ ಕ್ರಾಂತಿ ಚಿತ್ರಕ್ಕೆ 35 ವರ್ಷಗಳ ಹಿಂದೆ ಒಂದು ದಿನದ ಚಿತ್ರೀಕರಣಕ್ಕೆ 8 ಲಕ್ಷ ಖರ್ಚು ಆಗುತ್ತಿತ್ತು ಎಂದಿರುವ ರವಿಚಂದ್ರನ್ ಆ ಕಾಲದಲ್ಲಿ 8-10 ಲಕ್ಷಕ್ಕೆ ಒಂದು ಚಿಕ್ಕ ಬಜೆಟ್‌ನಲ್ಲಿ ಸಿನಿಮಾವನ್ನೇ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಬೆಂಗಳೂರಿನ ಎಲ್ಲ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ರೂಮ್ ಬುಕ್ ಆಗಿರುತ್ತಿದ್ದವು, ಮೂರು ಬರಹಗಾರರು, ಕಲಾವಿದರು, ಅಷ್ಟೊಂದು ಮಕ್ಕಳು, ಡ್ಯಾನ್ಸರ್ಸ್, ನಾಲ್ಕು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣ, ಇವತ್ತು ಅದೆಲ್ಲ ಕಲ್ಪನೆ ಮಾಡಿಕೊಳ್ಳುವುದಕ್ಕೂ ಸಾಧ್ಯ ಇಲ್ಲ ಎಂದು ಕೂಡ ಹೇಳಿದ್ದಾರೆ.

ಇನ್ನು ಅವತ್ತು ಇದ್ದ ಸೌಲಭ್ಯಗಳಲ್ಲಿ 25 ಕ್ಯಾಮರಾ ಇಟ್ಕೊಂಡು ಶಾಂತಿ ಕ್ರಾಂತಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಿದವನು ನಾನು, ಇವತ್ತು ಇರುವ ಟೆಕ್ನಾಲಜಿಯಲ್ಲಿ ಇದೆಲ್ಲ ಓಕೆ ಆದರೆ ಅವತ್ತಿಗೆ ಸಾಧ್ಯವೇ ಇರಲಿಲ್ಲ ಎಂದಿರುವ ರವಿಚಂದ್ರನ್ ಇದನ್ನು ನಾನು ದುರಂಹಕಾರದಿಂದ ಹೇಳುತ್ತಿಲ್ಲ ಆರನೇ ಕ್ಯಾಮರಾದಲ್ಲಿ ಈ ಶಾಟ್ ಇದೆ, 22ನೇ ಕ್ಯಾಮರಾದಲ್ಲಿ ಈ ಶಾಟ್ ಇದೆ, 25ನೇ ಕ್ಯಾಮರಾದಲ್ಲಿ ಈ ಶಾಟ್ ಇದೆ ಎನ್ನುವುದು ನನಗೆ ಮಾತ್ರ ಗೊತ್ತಿತ್ತು ಎಂದು ಹೇಳಿದ್ದಾರೆ.

ಶಾಂತಿ ಕ್ರಾಂತಿ ಈ ಸಿನಿಮಾ ಆರ್ಥಿಕವಾಗಿ ಸೋತಿರಬಹುದು ಆದರೆ ನನಗೆ ಬದುಕಿನಲ್ಲಿ ಬಹುದೊಡ್ಡ ಪಾಠ ಕಲಿಸಿದ ಸಿನಿಮಾ ಇದು ಎಂದಿರುವ ರವಿಚಂದ್ರನ್ ನಾನು ಯಾವಾಗಲೂ ಶಾಂತಿ ಕ್ರಾಂತಿಯನ್ನು ಪ್ರೀತಿ ಮಾಡುತ್ತೇನೆ, ಶಾಂತಿ ಕ್ರಾಂತಿ, ಕಿಂದರಿ ಜೋಗಿ, ಏಕಾಂಗಿ, ಚಿತ್ರಗಳನ್ನು ಪ್ರೀತಿ ಮಾಡಿದಷ್ಟು ನಾನು ಪ್ರೇಮಲೋಕ, ರಣಧೀರ, ಮಲ್ಲ ಚಿತ್ರಗಳನ್ನು ಪ್ರೀತಿಸುವುದಿಲ್ಲ ಎಂದು ಹೇಳಿದ್ದಾರೆ. ಈ ತರಹದ ಚಿತ್ರಗಳು ಹೆಸರು ಮತ್ತು ದುಡ್ಡು ಕೊಟ್ಟಿರಬಹುದು ಆದರೆ ಶಾಂತಿ ಕ್ರಾಂತಿ ರೀತಿಯ ಸಿನಿಮಾಗಳು ನನಗೆ ಪಾಠ ಕಲಿಸಿವೆ, ಜೇಬು ಖಾಲಿಯಾದಾಗ ಪ್ರಪಂಚ ಹೇಗೆ ಎಂದು ನೋಡಿಕೊಂಡು ಬಂದವನು ನಾನು, ಯಾವತ್ತು ನಾನು ಕುಗ್ಗಲಿಲ್ಲ, ಸಮಸ್ಯೆಯ ಜೊತೆ ಮಲಗಿಲ್ಲ, ತೊಂದರೆಗಳಿಂದ ಆಚೆ ಬರುವುದಕ್ಕೆ ತಕ್ಷಣ ನಾನು ಯೋಚನೆ ಮಾಡುತ್ತೇನೆ, ಇದೆಲ್ಲದಕ್ಕೂ ಎನ್ ವೀರಾಸ್ವಾಮಿ ಒಬ್ಬರೇ ಕಾರಣ ಎಂದು ಹೇಳಿದ್ದಾರೆ ರವಿಚಂದ್ರನ್.

ಹೀಗೆ ಶಾಂತಿ ಕ್ರಾಂತಿಯ ಆ ದಿನಗಳನ್ನು ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ನೆನಪು ಮಾಡಿಕೊಂಡಿರುವ ರವಿಚಂದ್ರನ್ ಹಿಂದೆ ಕೂಡ ಅನೇಕ ಬಾರಿ ಶಾಂತಿ ಕ್ರಾಂತಿ ಚಿತ್ರದ ಕುರಿತು ಕೆಲ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಾಂತಿ ಕ್ರಾಂತಿ ಚಿತ್ರದಿಂದ ಆದ ನಷ್ಟ ಮತ್ತು ಕಷ್ಟವನ್ನು ವಿವರಿಸಿದ್ದಾರೆ. ಹಿಂದೊಮ್ಮೆ ಇದೇ ಶಾಂತಿ ಕ್ರಾಂತಿ ಚಿತ್ರದ ಕುರಿತು ಮಾತನಾಡಿದ್ದ ರವಿಚಂದ್ರನ್ ಶಾಂತಿ ಕ್ರಾಂತಿ ಸಿನಿಮಾ ಶುರು ಮಾಡಿ 10 ದಿನ ಆಗಿತ್ತಷ್ಟೆ . ಆಗಲೇ ಎಲ್ಲೋ ಕೈ ತಪ್ಪುತ್ತಿದೆ. ಯಾಕೋ ಸರಿ ಹೋಗುತ್ತಿಲ್ಲ. ದಾರಿ ತಪ್ಪುತ್ತಿದೆ ಅಂತ ನನಗೆ ಗೊತ್ತಾಗಿತ್ತು ಎಂದು ಹೇಳಿದ್ದರು. ಆಗ ನಮ್ಮ ಅಪ್ಪನ ಬಳಿ ಹೋಗಿ ಈ ಸಿನಿಮಾ ಬೇಡ ನಿಲ್ಲಿಸಿಬಿಡೋಣ ಎಂದಿದ್ದೆ ಅವರು ಯಾವತ್ತೂ ಜನರಿಗೆ ಮೋಸ ಮಾಡೋದು ಬೇಡ ನಾಲ್ಕು ಭಾಷೆಯ ಸಿನಿಮಾ ನೀನೆ ಮೊದಲು ಮಾಡುತ್ತಿದ್ದೀಯ, ನಿನ್ನ ನಂಬಿ ರಜನಿಕಾಂತ್ ಡೇಟ್ ಕೊಟ್ಟಿದ್ದಾರೆ. ನಾಗಾರ್ಜುನಾ ಡೇಟ್ ಕೊಟ್ಟಿದ್ದಾರೆ. ಇದು ಈಶ್ವರಿ ಸಂಸ್ಥೆಯ ಪ್ರೆಸ್ಟೀಜ್. ಯಾವುದೇ ಕಾರಣಕ್ಕೂ ನೀನು ಹೆಜ್ಜೆ ಹಿಂದೆ ಹಾಕೋದಿಲ್ಲ ಅಂದರು ಎಂದು ಆ ದಿನ ತಂದೆ ಹೇಳಿದ ಮಾತನ್ನು ನೆನಪು ಮಾಡಿಕೊಂಡಿದ್ದರು.

ಅಂದ್ಹಾಗೇ 1991ರಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಂದ ಶಾಂತಿ ಕ್ರಾಂತಿ ಆ ಕಾಲಕ್ಕೇ ಹತ್ತು ಕೋಟಿಯನ್ನು ನುಂಗಿಹಾಕಿತ್ತು.ಖುದ್ದು ರವಿಚಂದ್ರನ್ ಈ ಮಾತನ್ನು ಹೇಳಿದ್ದರು. ಪ್ರೇಮಲೋಕದ ಬೆನ್ನಲ್ಲಿ ನಿರೀಕ್ಷೆಯ ಭಾರವನ್ನೊತ್ತು ಬಂದ ಈ ಚಿತ್ರ ನಿರೀಕ್ಷೆಗಳನ್ನೆಲ್ಲಾ ಸುಳ್ಳು ಮಾಡಿ ಅಟ್ಟರ್‌ ಫ್ಲಾಪ್ ಆಗಿಬಿಟ್ಟಿತ್ತು. ಶಾಂತಿ ಕ್ರಾಂತಿ ಕನ್ನಡ ಚಿತ್ರರಂಗದ ಕನಸುಗಾರ, ಶೋಮ್ಯಾನ್ ರವಿಚಂದ್ರನ್ ಅವರಿಗೆ ಅದ್ಯಾವ ಪರಿ ಪೆಟ್ಟು ನೀಡಿತ್ತು ಎಂದರೆ, ಹಲವು ವರ್ಷಗಳ ಕಾಲ ರವಿಚಂದ್ರನ್ ಚಿತ್ರ ನಿರ್ಮಾಣವನ್ನೇ ನಿಲ್ಲಿಸಿಬಿಟ್ಟಿದ್ದರು. ಶಾಂತಿ ಕ್ರಾಂತಿಯ ಸೋಳಿನ ನಂತರ ರಾಮಾಚಾರಿಯಾಗಿ ಕನ್ನಡಿಗರ ಹೃದಯ ಗೆದ್ದರು. ಹಳ್ಳಿ ಹೀರೋ ಆಗಿ ಮಿಂಚಿದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X