12 Years of Anna Bond; ಅಪ್ಪು-ಸೂರಿ ಜೋಡಿಯ 'ಅಣ್ಣಬಾಂಡ್' ಫಲಿತಾಂಶ ಏನಾಗಿತ್ತು?
ಪುನೀತ್ ರಾಜ್‌ಕುಮಾರ್ ನಟನೆಯ 'ಅಣ್ಣಾಬಾಂಡ್' ಸಿನಿಮಾ 12 ವರ್ಷ ಪೂರೈಸಿದೆ. 2012ರಲ್ಲಿ ಮೇಡೇ ದಿನವೇ ಸಿನಿಮಾ ತೆರೆಗಪ್ಪಳಿಸಿತ್ತು. 'ಜಾಕಿ' ಬಳಿಕ ದುನಿಯಾ ಸೂರಿ ಹಾಗೂ ಅಪ್ಪು ಕಾಂಬಿನೇಷನ್‌ನಲ್ಲಿ ಬಂದಿದ್ದ 2ನೇ ಸಿನಿಮಾ ಇದು. ಪೂರ್ಣಿಮಾ ಎಂಟರ್‌ಪ್ರೈಸರ್ ಬ್ಯಾನರ್‌ನಲ್ಲಿ ಸಿನಿಮಾ ತೆರೆಗಪ್ಪಳಿಸಿತ್ತು.
'ಜಾಕಿ' ಸೂಪರ್ ಹಿಟ್ ಬಳಿಕ ಪುನೀತ್ ನಟನೆಯ 'ಹುಡುಗ್ರು' ಹಾಗೂ 'ಪರಮಾತ್ಮ' ಸಿನಿಮಾಗಳು ಬಂದು ಹೋಗಿದ್ದವು. ಬಳಿಕ ಮತ್ತೆ ಸೂರೊ ಜೊತೆ ಕೈ ಜೋಡಿಸಿದ್ದರು. ಸೆಟ್ಟೇರುವುದಕ್ಕೂ ಮುನ್ನ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಮತ್ತೊಮ್ಮೆ ಪುನೀತ್ ಲೋಕಲ್ ಹುಡುಗ ಬಾಂಡ್ ರವಿ ಆಗಿ ಅಬ್ಬರಿಸಿದ್ದರು. ನಿಧಿ ಸುಬ್ಬಯ್ಯ, ಪ್ರಿಯಾಮಣಿ ನಾಯಕಿಯರಾಗಿ ನಟಿಸಿದ್ದರು.

ಸೂರಿ- ಅಪ್ಪು ಮತ್ತೆ ಒಂದಾಗುತ್ತಾರೆ ಎಂದಾಗಲೇ ಸಿನಿಮಾ ಬಗ್ಗೆ ನಿಲ್ಲಿಲ್ಲದ ಹೈಪ್ ಕ್ರಿಯೇಟ್ ಆಗಿತ್ತು. ಸಾಂಗ್ ಸೂಪರ್ ಹಿಟ್ ಆಗಿತ್ತು. ಸಿಕ್ಸ್‌ಪ್ಯಾಕ್‌ನಲ್ಲಿ ಬಾಂಡ್ ರವಿ ಪೋಸ್ಟರ್‌ಗಳು ವೈರಲ್ ಆಗಿದ್ದವು. ಹರಿಕೃಷ್ಣ ಮ್ಯೂಸಿಕ್, ಯೋಗರಾಜ್ ಭಟ್ ಲಿರಿಕ್ಸ್ ಎಲ್ಲಾ ಸೇರಿ ಮತ್ತಷ್ಟು ಕುತೂಹಲ ಮೂಡಿಸಿತ್ತು. ಆದರೆ ಆ ನಿರೀಕ್ಷೆಯ ಭಾರಕ್ಕೆ ಸಿನಿಮಾ ಕುಸಿದಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಬಾಕ್ಸಾಫೀಸ್‌ನಲ್ಲೂ ಆವರೇಜ್ ಹಿಟ್ ಎನಿಸಿಕೊಂಡಿತ್ತು.
ಅವತ್ತಿನ ಕಾಲಕ್ಕೆ ಬಹಳ ಅದ್ಧೂರಿಯಾಗಿ 'ಅಣ್ಣಾ ಬಾಂಡ್' ಸಿನಿಮಾ ನಿರ್ಮಾಣವಾಗಿತ್ತು. ಹಾಡುಗಳ ಚಿತ್ರೀಕರಣಕ್ಕೆ 2 ಕೋಟಿ ವ್ಯಯಿಸಲಾಗಿತ್ತು. ಅಂದಾಜು 7 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಮೊದಲ ದಿನವೇ 3 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು ಎಂದು ಹೇಳಲಾಗಿತ್ತು. ಒಟ್ಟಾರೆ 12 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿತ್ತು. ಸಿನಿಮಾ ಹುಟ್ಟಾಕ್ಕಿದ್ದ ಕ್ರೇಜ್‌ಗೆ ಅದು ಕಮ್ಮಿ ಎಂದೇ ಹೇಳಬೇಕು.
'ಅಣ್ಣಾಬಾಂಡ್' ಚಿತ್ರದಲ್ಲಿ ಸ್ಕೆಲಿಟನ್ ಬೈಕ್ ಸಖತ್ ವೈರಲ್ ಆಗಿತ್ತು. ಮನುಷ್ಯ ಅಸ್ಥಿಪಂಜರ ಹೋಲುವಂತಹ ಡಿಸೈನ್‌ನಲ್ಲಿ ಒಂದು ಸ್ಪೆಷಲ್ ಬೈಕ್ ಡಿಸೈನ್ ಮಾಡಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಚಿತ್ರತಂಡದ ಪ್ರಯತ್ನಕ್ಕೆ ತಕ್ಕ ಫಲ ಸಿಕ್ಕಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ ಆ ಬೈಕ್ ಕ್ರೇಜ್ ಜೋರಾಗಿತ್ತು. ತೆರೆಮೇಲೆ ಬೈಕ್ ದರ್ಬಾರ್ ಜೋರಾಗಿತ್ತು. ಈ ಬೈಕ್ ಡಿಸೈನ್ ಮಾಡಿದ್ದೇ ಇಂಟ್ರೆಸ್ಟಿಂಗ್ ಸಂಗತಿ.

ಸ್ಕೆಲಿಟನ್ ಬೈಕ್ ತಯಾರಾಗಿದ್ದೇಗೆ?
ಅದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಈ ರೀತಿಯ ಸ್ಪೆಷಲ್ ಡಿಸೈನ್ ಬೈಕ್ ಬಳಸಿದ್ದರು. ಕನ್ನಡದಲ್ಲಿ ವಿಭಿನ್ನ ಪ್ರಯತ್ನ ಎನ್ನಬಹುದು. ಕಂಪ್ಯೂಟರ್‌ನಲ್ಲಿ ಒಮ್ಮೆ ಸೂರಿ ಈ ರೀತಿಯ ಬೈಕ್ ನೋಡಿದ್ದರಂತೆ. ಪಾರ್ಕ್‌ನಲ್ಲಿ ಸುಮ್ಮನೆ ನಿಲ್ಲಿಸಿದ್ದ ಕಲಾಕೃತಿ ಅದಾಗಿತ್ತಂತೆ. ಅರೇ, ನಾವು ಯಾಕೆ ಈ ರೀತಿಯ ಬೈಕ್ ಚಿತ್ರಕ್ಕೆ ಬಳಸಬಾರದು ಎಂದುಕೊಂಡಾಗ ಹುಟ್ಟಿದ ಐಡಿಯಾ ಇದೆ. ಅಪ್ಪು ಝೆನ್ ಮೋಟಾರ್ಸ್‌ನಲ್ಲಿ ಪ್ರಣವ್ ಮತ್ತವರ ತಂಡದವರು ಸೇರಿ ಈ ಬೈಕ್ ಡಿಸೈನ್ ಮಾಡಿದ್ದರು.
ಆ ಬುರುಡೆ ಬೈಕ್ ಏನಾಯ್ತು?
ಅಣ್ಣಾಬಾಂಡ್ ಚಿತ್ರದ ಈ ಈ ಸ್ಕೆಲಿಟನ್ ಬೈಕ್, ಬುರುಡೆ ಬೈಕ್ ಅಂತ ಕೂಡ ಜನಪ್ರಿಯವಾಗಿತ್ತು. ಸಿನಿಮಾ ಬಂದು ಹೋದ ಒಂದೂವರೆ ವರ್ಷದ ಬಳಿಕ ಆ ಬೈಕ್ ಅನ್ನು ಹರಾಜು ಹಾಕಲಾಗಿತ್ತು. ಒಟ್ಟಾರೆ 'ಅಣ್ಣಾ ಬಾಂಡ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡದಿದ್ದರೂ ನಾನಾ ಕಾರಣಗಳಿಂದ ಸುದ್ದಿಯಾಗಿತ್ತು. ಇವತ್ತಿಗೂ ಅಭಿಮಾನಿಗಳು ಈ ಚಿತ್ರವನ್ನು ಮರೆತ್ತಿಲ್ಲ.


Click it and Unblock the Notifications










