'ಆಪ್ತಮಿತ್ರ' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಸಾಲ ಕಳೆದು ದ್ವಾರ್ಕಿಗೆ ಉಳಿದಿದ್ದು ಎಷ್ಟು ಕೋಟಿ?
ಕನ್ನಡ ಚಿತ್ರರಂಗದಲ್ಲಿ ಮರೆಯಾಗದ ಸಿನಿಮಾ 'ಆಪ್ತಮಿತ್ರ'. ತಮಿಳು ನಿರ್ದೇಶಕ ಪಿ. ವಾಸು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ದ್ವಾರಕೀಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಸಾಹಸಸಿಂಹ ವಿಷ್ಣುವರ್ಧನ್, ರಮೇಶ್ ಅರವಿಂದ್, ಸೌಂದರ್ಯ ಹಾಗೂ ಪ್ರೇಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
ಗುರುಕಿರಣ್ ಸಂಗೀತದ 'ಆಪ್ತಮಿತ್ರ' ಚಿತ್ರದ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಇದು ನಟಿ ಸೌಂದರ್ಯ ಅವರ ಕೊನೆಯ ಸಿನಿಮಾ ಕೂಡ ಹೌದು. ಮಲಯಾಳಂನ 'ಮಣಿ ಚಿತ್ರತ್ತಾಳ್' ರೀಮೆಕ್ ಆಗಿದ್ದ 'ಆಪ್ತಮಿತ್ರ' ಚಿತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿತ್ತು. 2004, ಆಗಸ್ಟ್ 27ರಂದು ಸಿನಿಮಾ ತೆರೆಗೆ ಬಂದಿತ್ತು.
ಈ ಹಾರರ್ ಕಾಮಿಡಿ ಚಿತ್ರದಲ್ಲಿ ಡಾ. ವಿಜಯ್ ಹಾಗೂ ವಿಜಯ ರಾಜೇಂದ್ರ ಬಹದ್ದೂರ್ ಹೀಗೆ ದ್ವಿಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಅವಿನಾಶ್, ಸತ್ಯಜಿತ್, ಶಿವರಾಂ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಮುಂದೆ ಈ ಚಿತ್ರದ ಮುಂದುವರೆದ ಭಾಗವಾಗಿ 'ಆಪ್ತರಕ್ಷಕ' ಸಿನಿಮಾ ನಿರ್ಮಾಣವಾಗಿತ್ತು.

ಸತತ ಸೋಲುಗಳಿಂದ ಕಂಗೆಟ್ಟಿದ್ದ ನಿರ್ಮಾಪಕ ದ್ವಾರಕೀಶ್ 'ಆಪ್ತಮಿತ್ರ' ಚಿತ್ರ ಮಾಡಿ ಸೋಲಿನ ಸುಳಿಯಿಂದ ಹೊರಬಂದಿದ್ದರು. ವಿಷ್ಣು-ದ್ವಾರ್ಕಿ ಸ್ನೇಹಿತರಾಗಿ ಇದ್ದಿದ್ದು ಬಳಿಕ ದೂರಾಗಿದ್ದು ಗೊತ್ತೇಯಿದೆ. ಆದರೆ ಇಬ್ಬರೂ ಪದೇ ಪದೆ ಜಗಳ ಆಡುತ್ತಿದ್ದದ್ದು ಮತ್ತೆ ಒಂದಾಗುತ್ತಿದ್ದದ್ದು ನಡೆಯುತ್ತಲೇ ಇತ್ತು. 'ರಾಯರು ಬಂದರು ಮಾವನ ಮನೆಗೆ' ಸಿನಿಮಾ ಬಂದ 11 ವರ್ಷಗಳ ಬಳಿಕ 'ಆಪ್ತಮಿತ್ರ' ಚಿತ್ರಕ್ಕಾಗಿ ಮತ್ತೆ ಇಬ್ಬರೂ ಜೊತೆಯಾಗಿದ್ದರು.
ಅಷ್ಟರಲ್ಲಾಗಲೇ ದ್ವಾರಕೀಶ್ ಒಂದಷ್ಟು ಚಿತ್ರಗಳನ್ನು ನಿರ್ಮಿಸಿ ಕೈ ಸುಟ್ಟುಕೊಂಡಿದ್ದರು. ಸಾಲ ಹೆಚ್ಚಾಗಿತ್ತು. 'ಆಪ್ತಮಿತ್ರ' ಭರ್ಜರಿ ಗೆಲುವು ಅವರನ್ನು ಸಂಕಷ್ಟದಿಂದ ಪಾರು ಮಾಡಿತ್ತು. ಸಾಲದ ನಡುವೆಯೂ ಒಂದಷ್ಟು ಫೈನಾನ್ಸ್ ಪಡೆದು ಚಿತ್ರ ನಿರ್ಮಿಸಿದ್ದರು. ಸಣ್ಣ ಪಾತ್ರದಲ್ಲಿ ದ್ವಾರ್ಕಿ ನಟಿಸಿದ್ದರು. ವಿಷ್ಣು- ಸೌಂದರ್ಯ ಅಮೋಘ ಅಭಿನಯ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಿ ಗೆಲ್ಲಿಸಿದ್ದರು.

ಮುನಿಸು ಮರೆತು ದ್ವಾರಕೀಶ್ ಜೊತೆ ವಿಷ್ಣು ಚಿತ್ರ ಮಾಡಿದ್ದರು. ಸತತ ಒಂದು ವರ್ಷ ಪ್ರದರ್ಶನ ಕಂಡು ಸಿನಿಮಾ ದಾಖಲೆ ಬರೆದಿತ್ತು. ಕೋಟಿ ಕೋಟಿ ಗಳಿಕೆ ಕಂಡಿದ್ದು ಸುಳ್ಳಲ್ಲ. ಇವತ್ತಿನ ಕಾಲಕ್ಕೆ ಅದು 100 ಕೋಟಿ ಗಳಿಕೆ ಕಂಡಿದ್ದ ಸಿನಿಮಾ ಎಂದರೆ ತಪ್ಪಾಗಲ್ಲ. ಅಷ್ಟರಮಟ್ಟದಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಪ್ರೇಕ್ಷಕರನ್ನು ಸೆಳೆದಿತ್ತು.
'ಆಪ್ತಮಿತ್ರ' ಸಿನಿಮಾ ಗಳಿಕೆ ಎಷ್ಟು? ಎನ್ನುವ ಬಗ್ಗೆ ದ್ವಾರಕೀಶ್ ಪುತ್ರ ಯೋಗೀಶ್ ದ್ವಾರಕೀಶ್ ತಿಳಿಸಿದ್ದಾರೆ. 'ಸುದ್ದಿಮನೆ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ತಾವು ತಂದೆ ಜೊತೆ ಸಂಪೂರ್ಣವಾಗಿ ತೊಡಗಿಸಿಕೊಂಡು ಸಿನಿಮಾ 'ಆಪ್ತಮಿತ್ರ' ಎಂದು ಅವರು ನೆನಪಿಸಿಕೊಂಡಿದ್ದಾರೆ. ಸಿನಿಮಾ ಕಲೆಕ್ಷನ್ ಬಗ್ಗೆ ಎದುರಾದ ಪ್ರಶ್ನೆಗೂ ಉತ್ತರಿಸಿದ್ದಾರೆ.
'ಆಪ್ತಮಿತ್ರ' ಚಿತ್ರದ ಗಳಿಕೆಯಲ್ಲಿ ಅವತ್ತಿನ ಕಾಲಕ್ಕೆ ನಾವು ಮಾಡಿದ್ದ ಸಾಲ ಎಲ್ಲಾ ತೀರಿತ್ತು. ಕೊನೆಗೆ ನಮ್ಮ ಕೈಯಲ್ಲಿ 2ರಿಂದ 3 ಕೋಟಿ ರೂಪಾಯಿ ಉಳಿಯಿತು ಎಂದು ಯೋಗೀಶ್ ಹೇಳಿದ್ದಾರೆ. ಅಷ್ಟೇ, ಅವತ್ತು ಸಿನಿಮಾ ಟಿಕೆಟ್ ದರ ಕಮ್ಮಿ ಇತ್ತು. ಹೆಚ್‌ಎಸ್ಆರ್ ಲೇಔಟ್ ಮನೆಗೆ 2 ಕೋಟಿ ಆಯಿತು. 'ಆಪ್ತಮಿತ್ರ' ಚಿತ್ರದ ಪೂರ್ತಿ ಹಣ ನಮಗೆ ಬರಲಿಲ್ಲ. ಅದಕ್ಕೆ ಸಾಕಷ್ಟು ಕಾರಣ ಇದೆ. ಅದನ್ನೆಲ್ಲಾ ಈಗ ಮಾತನಾಡುವುದು ಬೇಡ ಎಂದು ಯೋಗಿ ಹೇಳಿದ್ದಾರೆ.


Click it and Unblock the Notifications











