ಮೋಸ, ನಂಬಿಕೆ ದ್ರೋಹ, ಮಾನಸಿಕ-ದೈಹಿಕ ಕಿರುಕುಳ, ಸಿಲ್ಕ್ ಸ್ಮಿತಾ ನೇಣಿಗೆ ಕೊರಳೊಡ್ಡಿದ್ದು ಯಾಕೆ ?
ಸಿಲ್ಕ್ ಸ್ಮಿತಾ.. ಅಂದಕಾಲತ್ತಿಲ್ ಪಡ್ಡೆ ಹುಡುಗರಿಂದ ಹಿಡಿದು ಹಣ್ಣು, ಹಣ್ಣು ಮುದುಕರ ಹೃದಯಕ್ಕೆ ಕಿಚ್ಚು ಹಚ್ಚಿದ್ದ ಮಾದಕ ನಟಿ. ತೆರೆಯ ಮೇಲೆ ಸೆಕ್ಸಿ ಗ್ಲ್ಯಾಮರ್ ಇಮೇಜಿನಿಂದ ಕಂಗೊಳಿಸಿದ್ದ ಸಿಲ್ಕ್ ಸ್ಮಿತಾ, ಆತ್ಮಹತ್ಯೆ ಮಾಡಿಕೊಂಡು 28 ವರ್ಷಗಳಾಗಿವೆ. ಆದರೂ ಇವತ್ತು ಕೂಡ ಸಿಲ್ಕ್ ಸ್ಮಿತಾ ಬದುಕು ಅನೇಕರ ಪಾಲಿಗೆ ಅಧ್ಯಯನದ ವಸ್ತು.
ಸಿಲ್ಕ್ ಸ್ಮಿತಾ ಸಾವಿನ ಸುತ್ತ ಮುತ್ತ ಇವತ್ತು ಅನೇಕರಲ್ಲಿ ಕುತೂಹಲ ಇದೆ. ಡರ್ಟಿ ಪಿಕ್ಚರ್ ಮೂಲಕ ಈ ಕುತೂಹಲ ತಣಿಸುವ ಪ್ರಯತ್ನವನ್ನೂ ಹಿಂದಿ ಉದ್ಯಮ ಮಾಡಿದೆ. ಆದರೂ.. ಸಿಲ್ಕ್ ಸ್ಮಿತಾ ವೈಯಕ್ತಿಕ ಬದುಕು ಹೇಗಿತ್ತು? ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದೇಕೆ ? ಕಲಾವಿದೆಯಾಗಿ ಚಿತ್ರರಂಗದಲ್ಲಿ ಆಕೆಗಿದ್ದ ಸ್ಥಾನಮಾನವೇನು..? ಹೀಗೆ ಹತ್ತು ಹಲವು ನಿಖರವಾದ ಉತ್ತರ ಇರದ ಪ್ರಶ್ನೆಗಳು ಅನೇಕರ ತಲೆಯಲ್ಲಿ ಆಗಾಗ ಗಿರಕಿ ಹೊಡೆಯುತ್ತಾನೇ ಇರುತ್ತವೆ. ಒಂದಲ್ಲಾ ಒಂದು ಕಾರಣಕ್ಕೆ ಸಿಲ್ಕ್ ಸ್ಮಿತಾ ಅವರನ್ನ ನೆನಪು ಮಾಡಿಕೊಳ್ತಾನೇ ಇರ್ತಾರೆ.

ನಿಮಗೆ ಗೊತ್ತಿರಲಿ.. ಸಿಲ್ಕ್ ಸ್ಮಿತಾ ಓದಿದ್ದು ಕೇವಲ 3ನೇ ತರಗತಿಯವರೆಗೆ ಮಾತ್ರ. ತೆಲುಗು ಹೊರತು ಪಡಿಸಿ ಸಿಲ್ಕ್‌ಗೆ ಬೇರೆ ಯಾವ ಭಾಷೆಯೂ ಬರುತ್ತಿರಲಿಲ್ಲ. ಹಣವನ್ನಾಗಲಿ.. ಯಶಸ್ಸನ್ನಾಗಲಿ.. ಹೇಗೆ ಕಾಪಾಡಬೇಕೆಂದು ಸಿಲ್ಕ್ ಸ್ಮಿತಾಗೆ ಗೊತ್ತಿರಲಿಲ್ಲ. ಇದನ್ನೇ ಕೆಲವರು ಬಂಡವಾಳವನ್ನಾಗಿಸಿಕೊಂಡಿದ್ದರು. ಹಣದ ವಿಚಾರದಲ್ಲಿ ಮೋಸವನ್ನೂ ಮಾಡುತ್ತಿದ್ದರು ಎಂದು ಹಿಂದೆ ಅನೇಕರು ಹೇಳಿದ್ದಾರೆ ಕೂಡ.
ಕೇವಲ ಹಣದ ವಿಚಾರದಲ್ಲಿ ಮಾತ್ರ ಅಲ್ಲ ಮಾನಸಿಕವಾಗಿ ಮತ್ತು ದೈಹಿಕವಾಗಿ ಅನೇಕರು ಸಿಲ್ಕ್ ಸ್ಮಿತಾ ಅವರಿಗೆ ಹಿಂಸೆಯನ್ನು ಕೂಡ ನೀಡಿದ್ದರು. 'ಪ್ರೊಡ್ಯೂಸರ್ ಗಳು ಸಂಜೆ ಎಲ್ಲರನ್ನ ಕಳುಹಿಸಿ ಸಿಲ್ಕ್ ಸ್ಮಿತಾ ಅವರನ್ನ ಮಾತ್ರ ಉಳಿಸಿಕೊಳ್ಳುತ್ತಿದ್ದರು. ಕಾಟೇಜ್ ನಲ್ಲಿ ಕೂರಿಸಿಕೊಂಡು, ಸ್ನಾಕ್ಸ್ ತಿನ್ನೋಣ ಅಂತ ಹೇಳಿ ಎರಡು ಪೆಗ್ ಹಾಕಿಸುತ್ತಿದ್ದರು. ಆ ನಂತರ ನಡೆಯಬೇಕಾಗಿದ್ದು ನಡೆಯುತ್ತಿತ್ತು. ನಿರ್ಮಾಪಕರು ಮಾತ್ರವಲ್ಲ, ವಿತರಕರು, ಫೈನಾನ್ಶಿಯರ್ಸ್ ಗಳು ಕೂಡ ಆಕೆಗೆ ಹಿಂಸೆ ನೀಡಿದ್ದರು ಎಂದು ಸಿಲ್ಕ್ ಸ್ಮಿತಾ ಬಗ್ಗೆ ಅವರ ಜೊತೆ ಒಡನಾಟ ಹೊಂದಿದ್ದ ರಾಮಾರಾವ್ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು.

ಹೀಗೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದ ಸಿಲ್ಕ್ ಸ್ಮಿತಾ ಬಳಿ ದುಡ್ಡು ಇದ್ದರೂ ಕೂಡ ಮನಃಶಾಂತಿ ಇಲ್ಲದಂತಾಗಿತ್ತು. ದಿನದಿಂದ ದಿನಕ್ಕೆ ಮಾನಸಿಕವಾಗಿ ಕುಗ್ಗಲು ಶುರುಮಾಡಿದರು. ಇದೆಲ್ಲದರ ನಡುವೆ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ್ಲೇ ಸಿಲ್ಕ್ ಸ್ಮಿತಾಗೆ ಏಕಾಏಕಿ ಅವಕಾಶ ಬರ ಎದುರಾಯಿತು. ಹೀಗಾಗಿ ತಾವೇ ಖುದ್ದು ಚಿತ್ರ ನಿರ್ಮಾಣಕ್ಕೆ ಸಿಲ್ಕ್ ಸ್ಮಿತಾ ಇಳಿದರು. ದುರಂತ ಅಂದರೆ ಇಲ್ಲಿಯೂ ಕೂಡ ಸಿಲ್ಮ್ ಸ್ಮಿತಾ ಗೆ ನಂಬಿಕೆ ದ್ರೋಹವಾಯಿತು. ದುಡ್ಡಿನ ಲೆಕ್ಕಾಚಾರ ಗೊತ್ತಿರದ ಸಿಲ್ಕ್ ಸ್ಮಿತಾಗೆ ಮೋಸ ಮಾಡಲಾಯ್ತು.
ಇನ್ನೂ ದುರ್ದೈವ ಅಂದರೆ ಹಾಗೂ ಹೀಗೂ ಚಿತ್ರ ಬಿಡುಗಡೆಯಾಯಿತಾದರೂ ಚಿತ್ರ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಪರಿಣಾಮ ಹಣ, ಆಸ್ತಿಯೆಲ್ಲವನ್ನೂ ಕಳೆದುಕೊಂಡ ಸಿಲ್ಕ್ ಸ್ಮಿತಾ ಸಾಲದ ಸುಳಿಯಲ್ಲಿ ಸಿಲುಕಿದರು. ಆದರೆ, ಕಣ್ಮುಚ್ಚುವ ಮುನ್ನ ಸಿಲ್ಕ್ ಸ್ಮಿತಾ ಮಾಡಿಕೊಂಡಿದ್ದ ಎಲ್ಲ ಸಾಲವನ್ನು ತೀರಿಸಿದ್ದರು. ಸಿಲ್ಕ್ ನಿರ್ಮಾಣ ಮಾಡಿದ್ದ ಚಿತ್ರಕ್ಕೆ ಫೈನಾನ್ಸ್ ಮಾಡಿದ್ದ ಕಾಕಿನಾಡ ಶ್ಯಾಮಲಾ ಅವರು ಈ ಹಿಂದೆ ಸಂದರ್ಶನದಲ್ಲಿ ಈ ಮಾತು ಹೇಳಿದ್ದರು.

ವ್ಯೆಯಕ್ತಿಕ ಬದುಕು, ಪ್ರೀತಿ, ವ್ಯಾಪಾರ ವ್ಯವಹಾರ ಹೀಗೆ ಎಲ್ಲದರಲ್ಲಿ ಕೇವಲ ಮೋಸಕ್ಕೊಳಗಾದ ಸಿಲ್ಕ್ ಸ್ಮಿತಾ, ತಮ್ಮ 35ನೇ ವಯಸ್ಸಿನಲ್ಲಿ ನೇಣಿಗೆ ಕೊರಳೊಡ್ಡಿದರು. ಅವರ ಮೃತ ದೇಹ 1996ರ ಸೆಪ್ಟೆಂಬರ್ 23ರಂದು ಚೆನ್ನೈನಲ್ಲಿದ್ದ ಹೋಟೆಲ್‌ನಲ್ಲಿ ಪತ್ತೆ ಆಗಿತ್ತು. ವಿಪರ್ಯಾಸ ಅಂದರೆ ಸಿಲ್ಮ್ ಸ್ಮಿತಾ ಬದುಕಿದ್ದಾಗ ಅವರನ್ನು ಬಳಿಸಿಕೊಂಡ ಈ ಚಿತ್ರರಂಗದ ಬಹುತೇಕರು ಸಿಲ್ಕ್ ಸತ್ತು ಮಲಗಿದಾಗ ಆಕೆಯನ್ನು ನೋಡಲು ಕೂಡ ಬರಲಿಲ್ಲ. ಸಿಲ್ಕ್ ಸ್ಮಿತಾ ಅವರಿಗೆ ಸ್ನೇಹಿತರಾಗಿದ್ದ ಬಹುಭಾಷಾ ನಟ ಅರ್ಜುನ್ ಸರ್ಜಾ ಮಾತ್ರ ಸಿಲ್ಕ್ ಸ್ಮಿತಾ ಅವರ ಅಂತಿಮ ದರ್ಶನವನ್ನು ಪಡೆದಿದ್ದರು.
ಹೀಗೆ 80ರ ಕಾಲದ ಯುವಕರ ಎದೆಮೇಲೆ ತಯ್ಯಾತಕ್ಕ ಅಂಥಾ ಮಾದಕವಾಗಿ ಕುಣಿದು, ಕನಸಿಗೂ ಬಂದು ಅವರ ನಿದ್ದೆಗೆಡಿಸಿದ್ದ ಸಿಲ್ಕ್ ಸ್ಮಿತಾ ಅವರಿಗೆ ಅದ್ಯಾವ ಪುಣ್ಯಾತ್ಮ ಅದ್ಯಾವ ಘಳಿಗೆಯಲ್ಲಿ ಸಿಲ್ಕ್ ಎಂದು ನಾಮಕರಣ ಮಾಡಿದನೋ ! ರೇಶ್ಮೆಗೂಡಿನಂತಹ ಸಿಲ್ಕ್ ಸುಮಾರು ಹದಿನೈದು ವರ್ಷಗಳ ಚಿತ್ರ ಜೀವನದುದ್ದಕ್ಕೂ ಸಿಲ್ಕ್‌ನ್ನು ಎಳೆ ಎಳೆಯಾಗಿ ಬಿಡಿಸಿಕೊಂಡೇ ಬೆಳೆದಳು. ಗೂಡಿನೊಳಗಿನ ಹುಳು ಸತ್ತಿರುವಂತೆ ಅವರ ಆದರ್ಶಗಳು ಎಂದೋ ಸತ್ತು ಹೋಗಿತ್ತು. ಆದರೆ ಆಸೆಗಳು ದಿನದಿನಕ್ಕೂ ಜೀವಂತವಾಗಿದ್ದವು. ಇಂಥಾ ಸಿಲ್ಕ್ ಸ್ಮಿತಾ ಅಗಲಿ 28 ವರ್ಷವಾದರೂ ಇವತ್ತು ಕೂಡ ಚರ್ಚೆಗೀಡಾಗ್ತಾನೇ ಇದ್ದಾರೆ ಅಂದರೆ ಸಿಲ್ಕ್ ಸ್ಮಿತಾ ಹೆಸರಿಗೆ ಇರುವ ಸಮ್ಮೋಹಕ ವ್ಯಕ್ತಿತ್ವ ಎಂಥಾದ್ದಿರಬೇಕು ನೀವೆ ಊಹಿಸಿ


Click it and Unblock the Notifications











