ಮಾಂತ್ರಿಕ ಧ್ವನಿಯಿಂದ ಜಾದೂ ಮಾಡಿದ್ದ ಧೀರೇಂದ್ರ ಗೋಪಾಲ್ ಕೊನೆಯ ದಿನಗಳು ಹೇಗಿತ್ತು?
"ಶಿವನೇ ಶಂಭುಲಿಂಗ" ಎನ್ನುತ್ತಲೇ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಸಂಪಾದಿಸಿದವರು ಧೀರೇಂದ್ರ ಗೋಪಾಲ್. ಖಳನಟನಾಗಿ ಹಾಸ್ಯನಟನಾಗಿ ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿ ಧೀರೇಂದ್ರ ಗೋಪಾಲ್ ಮೋಡಿ ಮಾಡಿದವರು. ಸಿನಿಮಾ ಮಾತ್ರವಲ್ಲದೇ ರಂಗಭೂಮಿಗೂ ಇವರ ಕೊಡುಗೆ ಅಪಾರ.
ಬಣ್ಣ ಹಚ್ಚಿ ನಟಿಸಿದ್ದು ಮಾತ್ರವಲ್ಲ ತಮ್ಮ ಕಂಚಿನ ಕಂಠದಿಂದ ಸಾಕಷ್ಟು ಆಡಿಯೋ ಕ್ಯಾಸೆಟ್‌ಗಳಿಗೆ ಜೀವ ತುಂಬಿದ್ದರು. ಹಾಸ್ಯ, ರಾಜಕೀಯ ವಿಡಂಬನೆಯ ನಾಟಕಗಳ ಆಡಿಯೋ ಕ್ಯಾಸೆಟ್‌ಗಳಿಗೆ ದನಿಯಾಗಿದ್ದರು. ಧೀರೇಂದ್ರ ಗೋಪಾಲ್ ವಾಯ್ಸ್‌ನಲ್ಲಿ ಬಂದ ಇಂತಹ ಆಡಿಯೋ ಕ್ಯಾಸೆಟ್‌ಗಳು ದಶಕಗಳ ಹಿಂದೆ ಭಾರೀ ಸಂಚಲನ ಸೃಷ್ಟಿಸಿತ್ತು. ಲಕ್ಷ ಲಕ್ಷ ಕ್ಯಾಸೆಟ್‌ಗಳು ಮಾರಾಟವಾಗಿ ದಾಖಲೆ ಬರೆದಿತ್ತು.

ಗಳಿಸಿದ ಆದಾಯ ಕಮ್ಮಿ. ಅದರಲ್ಲಿ ಸಾಕಷ್ಟು ಹಣವನ್ನು ಅವಶ್ಯಕತೆ ಇದ್ದವರಿಗೆ ಕೊಟ್ಟುಬಿಡುತ್ತಿದ್ದರು. ಸ್ವಂತದೊಂದು ಮನೆ ಬಿಟ್ಟರೆ ಮತ್ಯಾವುದೇ ಆಸ್ತಿಯನ್ನು ಧೀರೇಂದ್ರ ಗೋಪಾಲ್ ಸಂಪಾದನೆ ಮಾಡಲಿಲ್ಲ. ದೇವೇಗೌಡರ ಹುಟ್ಟೂರು ಹೊಳೆನರಸೀಪುರದ ಹರದನಹಳ್ಳಿಯಲ್ಲಿ ಧೀರೇಂದ್ರ ಗೋಪಾಲ್ ಸಹ ಹುಟ್ಟಿ ಬೆಳೆದವರು. ದೇವೇಗೌಡರು ಹೈಸ್ಕೂಲ್ ಶಿಕ್ಷಕರಾಗಿದ್ದಾಗ ಅದೇ ಶಾಲೆಯಲ್ಲಿ ಕೆಲ ತಿಂಗಳ ಅವರ ವಿದ್ಯಾರ್ಥಿಯಾಗಿ ಧೀರೇಂದ್ರ ಗೋಪಾಲ್ ಇದ್ದರು.
ಶಾಲಾ ದಿನಗಳಲ್ಲೇ ನಾಟಕ, ಮಿಮಿಕ್ರಿ ಮಾಡುವ ಮೂಲಕ ಧೀರೇಂದ್ರ ಗೋಪಾಲ್ ಗಮನ ಸೆಳೆದಿದ್ದರು. ಇದನ್ನು ಗುರ್ತಿಸಿ ದೇವೇಗೌಡರು ಕೂಡ ರಂಗಭೂಮಿಯತ್ತ ಮುಖ ಮಾಡುವಂತೆ ಸಲಹೆ ನೀಡಿದ್ದರಂತೆ. ಮುಂದೆ ನಾಟಕಗಳಲ್ಲಿ ಹೆಚ್ಚು ಹೆಚ್ಚು ನಟಿಸಲು ಆರಂಭಿಸಿದ್ದರು. 'ಗೌಡರ ಗದ್ದಲ' ನಾಟಕದಲ್ಲಿ ಗೌಡನ ಪಾತ್ರವನ್ನು ನಿಭಾಯಿಸುತ್ತಿದ್ದರು. ಅವರ ನಟನೆಗೆ ಭಾರೀ ಜನಮನ್ನಣೆ ದೊರಕಿತ್ತು. ಒಮ್ಮೆ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಟಕ ನೋಡಿ ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದರು.
'ನಾಗರಹಾವು' ಚಿತ್ರದಲ್ಲಿ ರಾಮಾಚಾರಿ (ವಿಷ್ಣುವರ್ಧನ್) ಕ್ಲಾಸ್‌ಮೇಟ್ ತುಕಾರಾಂ ಪಾತ್ರದಲ್ಲಿ ಧೀರೇಂದ್ರ ಗೋಪಾಲ್ ನಟಿಸಿದ್ದರು. ಬಳಿಕ ಪುಟ್ಟಣ್ಣ ನಿರ್ದೇಶನದ 'ಪಡುವಾರಳ್ಳಿ ಪಾಂಡವರು' ಚಿತ್ರದಲ್ಲೂ ಒಂದೊಳ್ಳೆ ಅವಕಾಶ ಸಿಕ್ಕಿತ್ತು. ಮುಂದೆ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ ಕಂಚಿನ ಕಂಠ, ಗತ್ತಿನ ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು. ಮೊದಲಿಗೆ ವಿಲನ್ ಆಗಿ ಅಬ್ಬರಿಸಿದ ಅವರು ಬಳಿಕ ಹಾಸ್ಯ ಪಾತ್ರಗಳತ್ತ ಮುಖ ಮಾಡಿದರು.

ಕಾಮಿಡಿ ಟಚ್ ಇರುವ ವಿಲನ್ ಪಾತ್ರಗಳಿಂದ ಧೀರೇಂದ್ರ ಗೋಪಾಲ್ ಹೆಚ್ಚು ಗಮನ ಸೆಳೆದರು. 70, 80ರ ದಶಕದಲ್ಲಿ ಸಿನಿಮಾ, ನಾಟಕ ಎಂದು ಬಹಳ ಬ್ಯುಸಿಯಾಗಿದ್ದರು. ಸಾಲದ್ದಕ್ಕೆ ಆಡಿಯೋ ಕ್ಯಾಸೆಟ್‌ಗಳಲ್ಲಿ ಅವರ ಧ್ವನಿಗೆ ಬಹಳ ಬೇಡಿಕೆಯಿತ್ತು. 'ಕ್ಯಾಸೆಟ್ ಕಿಂಗ್' ಎಂದೇ ಅಭಿಮಾನಿಗಳು ಕರೆಯುತ್ತಿದ್ದರು. 'ಸಾಹಸಸಿಂಹ', 'ಆಹುತಿ', 'ನಂಜುಂಡಿ ಕಲ್ಯಾಣ', 'ಗಜಪತಿ ಗರ್ವಭಂಗ', 'ಅಣ್ಣಯ್ಯ', 'ಪುಟ್ನಂಜ' ಅವರು ನಟಿಸಿದ್ದ ಕೆಲ ಜನಪ್ರಿಯ ಸಿನಿಮಾಗಳು.
'ಅಂಜಲಿ ಗೀತಾಂಜಲಿ' ಧೀರೇಂದ್ರ ಗೋಪಾಲ್ ನಟಿಸಿದ ಕೊನೆಯ ಸಿನಿಮಾ. ಸಾಯುವ ಕೊನೆಯ ದಿನಗಳವರೆಗೂ ಬಹಳ ಉತ್ಸಾಹದಿಂದಲೇ ಇದ್ದರು. ಜಾಡಿಂಸ್ ಅವರನ್ನು ಭಾದಿಸಿತ್ತು. ಸಾಯುವ ಹಿಂದಿನ ದಿನ ವಾಂತಿ ಮಾಡಿಕೊಂಡಿದ್ದರಂತೆ. ಕೊಂಚ ಆಯಾಸಗೊಂಡಂತೆ ಕಂಡಿದ್ದರು. ಕೊನೆಗೆ ಹೃದಯಾಘಾತದಿಂದ ವಿಧಿವಶರಾದರು. ಡಿಸೆಂಬರ್ 25, 2000 ಇಸವಿಯಲ್ಲಿ ಕಾಲನ ಕರೆಗೆ ಓಗೊಟ್ಟು ಹೊರಟುಬಿಟ್ಟರು. ಅವರ ಸಾಧನೆಗೆ ನಿಜಕ್ಕೂ ಸಿಗಬೇಕಾದ ಗೌರವ ಸಿಗಲಿಲ್ಲ ಎನ್ನುವವರು ಇದ್ದಾರೆ.
ಇವತ್ತಿಗೂ ಮಿಮಿಕ್ರಿ ಕಲಾವಿದರು ಧೀರೇಂದ್ರ ಗೋಪಾಲ್ ಧ್ವನಿಯನ್ನು ಅನುಕರಿಸುತ್ತಾರೆ. ಅಷ್ಟರಮಟ್ಟಿಗೆ ಅವರ ವಾಯ್ಸ್ ಸದ್ದು ಮಾಡಿತ್ತು. ಅಷ್ಟರ ಮಟ್ಟಿಗೆ ಆ ಧ್ವನಿ ಬಹಳ ವಿಶೇಷ, ವಿಭಿನ್ನ. ಅವತ್ತಿನ ಕಾಲಕ್ಕೆ ಪೋಷಕ ಕಲಾವಿದರಿಗೆ ಭಾರೀ ಸಂಭಾವನೆ ಏನು ಸಿಗುತ್ತಿರಲಿಲ್ಲ. ಧೀರೇಂದ್ರ ಗೋಪಾಲ್ ಸಾಲಬಾಧೆಯಿಂದಲೂ ಸಂಕಷ್ಟ ಎದುರಿಸಿದ್ದರು. ಚಿತ್ರರಂಗದವರು ಕೂಡ ನೆರವಿಗೆ ಬರಲಿಲ್ಲ. ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ರಾಜ್ಯಪ್ರಶಸ್ತಿ ಸಿಕ್ಕಿತ್ತು. ಆಡಿಯೋ ಕ್ಯಾಸೆಟ್ ತಯಾರಿಸಿದ ಸಂಸ್ಥೆಗಳು ಲಕ್ಷ ಲಕ್ಷ ಹಣ ಗಳಿಸಿದರೂ ಧೀರೇಂದ್ರ ಗೋಪಾಲ್ ಅವರಿಗೆ ಸಂಭಾವನೆ ಬಿಟ್ಟು ಹೆಚ್ಚು ಹಣ ಸಿಗಲಿಲ್ಲ.
ಇವತ್ತಿಗೂ 'ಶಿವನೇ ಶಂಭುಲಿಂಗ' ಅಂದಾಕ್ಷಣ ಧೀರೇಂದ್ರ ಗೋಪಾಲ್ ಚಿತ್ರ ಕಣ್ಮುಂದೆ ಬರುತ್ತದೆ. ತೆರೆಮೇಲೆ ವಿಲನ್ ಆಗಿ ಅಬ್ಬರಿಸಿದರೂ ನಿಜಜೀವನದಲ್ಲಿ ಮುಗ್ಧ ಮನಸ್ಸಿನವರಾಗಿದ್ದರು. ಮಡದಿ ಮಕ್ಕಳು ಎಂದರೆ ಜೀವ ಬಿಡುತ್ತಿದ್ದರು. ಇನ್ನು ಕೆಲ ವರ್ಷ ಅವರು ಸಿನಿಮಾಗಳಲ್ಲಿ ನಟಿಸಬೇಕಿತ್ತು.


Click it and Unblock the Notifications











